Seetha Rama Serial: ಸೀತಾ ರಾಮನ ಹಣಿಯಲು ಹಿತಶತ್ರುಗಳ ತಂತ್ರ; ಸಿಹಿ ಅಪಹರಣಕ್ಕೆ ಭಾರ್ಗವಿ, ವಿಶ್ವನ ಪ್ಲಾನ್
ಸೀತಾಗೆ ದೇಸಾಯಿ ಕಂಪನಿಯಲ್ಲಿ ಹೊಸ ಪಟ್ಟ ಸಿಗ್ತಿದ್ದಂತೆ, ಭಾರ್ಗವಿ ಮತ್ತು ವಿಶ್ವ ಒಳಗೊಳಗೆ ಕುದಿಯುತ್ತಿದ್ದಾರೆ. ನಿನ್ನೆ ಮೊನ್ನೆ ಬಂದವಳಿಗೆ ಸಿಗುತ್ತಿರುವ ಗೌರವ, ಮರ್ಯಾದೆ ಮನೆ ಮಗನಾಗಿ ನನಗೆ ಸಿಗ್ತಿಲ್ಲ ಎನ್ನುತ್ತಿದ್ದರೆ, ಈ ನಡುವೆಯೇ ಸಿಹಿ ಅಪಹರಣದ ವಿಚಾರವೂ ಇವರಿಬ್ಬರ ತಲೆಗೆ ಬಂದಿದೆ.
Seetha Rama Serial: ಮದುವೆ ಆದಮೇಲೆ ಏನೂ ಅರಿಯದ ಮುಗ್ಧೆ ಸೀತಾ, ದೇಸಾಯಿ ಮನೆಯಲ್ಲಿ ಎಲ್ಲರೂ ನನ್ನನ್ನು ತುಂಬ ಚೆನ್ನಾಗಿ ನೋಡಿಕೊಳ್ತಿದ್ದಾರೆ ಅನ್ನೋ ಭಾವನೆಯಲ್ಲಿದ್ದಾರೆ. ಆದರೆ, ಅಸಲಿ ವಿಚಾರಗಳು, ಮನೆಯಲ್ಲಿನ ಕೆಲವು ಕೆಟ್ಟ ಮನಸ್ಥಿತಿಗಳ ಬಗ್ಗೆ ಆಕೆಗಿನ್ನು ಅರಿವು ಬಂದಿಲ್ಲ. ಊಸರವಳ್ಳಿಯಂತೆ ಬಣ್ಣ ಬದಲಾಯಿಸುವವರು ಎಂಬ ಸತ್ಯ ಇನ್ನೂ ತಿಳಿದಿಲ್ಲ. ಸೀತಾಗಲ್ಲದಿದ್ದರೂ, ಈಗಾಗಲೇ ಸಿಹಿ ಮೇಲೆ ಭಾರ್ಗವಿಯ ಒಂದಷ್ಟು ಪ್ರಯೋಗ ಶುರುವಾಗಿವೆ. ಹೇಗಾದರೂ ಮಾಡಿ ಮೊದಲು ಸಿಹಿಯನ್ನು ಮನೆಯಿಂದ ಕಳಿಸೋಣ, ಆಮೇಲೆ ಸೀತಾ ಅನ್ನೋ ಪ್ಲಾನ್ ಅವಳದ್ದು. ಇದೀಗ ಅವಳಿಗೆ ಪತಿ ವಿಶ್ವನಿಂದಲೂ ಸಹಕಾರ ಸಿಗುತ್ತಿದೆ.
ಸೀತಾಳ ಮೇಲೆ ಇಲ್ಲಿಯವರೆಗೂ ಕಣ್ಣಿಟ್ಟಿದ್ದು ಭಾರ್ಗವಿ ಒಬ್ಬಳೇ. ಹೇಗಾದರೂ ಮಾಡಿ ಶ್ರೀರಾಮನ ಆಸ್ತಿಯನ್ನು ಲಪಟಾಯಿಸಬೇಕು ಎಂಬುದು ಆಕೆಯ ಉದ್ದೇಶ. ಇದೀಗ ಇದೇ ಭಾರ್ಗವಿಗೆ ಸಾಥ್ ನೀಡಲು ಚಿಕ್ಕಪ್ಪನ ಎಂಟ್ರಿಯಾಗಿದೆ. ಇಲ್ಲಿಯವರೆಗೂ ಶ್ರೀರಾಮನ ಕಂಡರೆ ಚೆನ್ನಾಗಿಯೇ ಇದ್ದ ವಿಶ್ವ, ಏಕಾಏಕಿ ರಾಮನ ಕುಟುಂಬದ ವಿರುದ್ಧ ಹಲ್ಲು ಮಸಿಯುತ್ತಿದ್ದಾನೆ. ಯಾವಾಗ ಸೀತಾಳಿಗೆ ಕಂಪನಿಯಲ್ಲಿ ಹೊಸ ಜವಾಬ್ದಾರಿ ನೀಡಿದ ವಿಚಾರವನ್ನು ಮನೆಯಲ್ಲಿ ಹೇಳಿದನೋ ಅಲ್ಲಿಂದ ಭಿನ್ನಮತ ಭುಗಿಲೆದ್ದಿದೆ. ವಿಶ್ವನೊಳಗೆ ಆಕ್ರೋಶ ಕುದಿಯುತ್ತಿದೆ.
ಸೀತಾಗೆ ಸಿಕ್ಕ ಹೊಸ ಪಟ್ಟ, ವಿಶ್ವನ ಕಣ್ಣು ಕೆಂಪು
ಇತ್ತ ಸೀತಾ ಇನ್ಮೇಲೆ ನಮ್ಮ ಕಂಪನಿಯ ಬೋರ್ಡ್ ಮೆಂಬರ್ ಎಂದು ರಾಮ ಹೇಳುತ್ತಿದ್ದಂತೆ, ಭಾರ್ಗವಿ, ವಿಶ್ವ ಮತ್ತು ಸಾಧನಾ ಮುಖದಲ್ಲಿ ಆ ಸಂಭ್ರಮ, ಖುಷಿ, ಕಾಣಲಿಲ್ಲ. ಅದರಲ್ಲೂ ವಿಶ್ವಜಿತ್ ಒಳಗೊಳಗೆ ರಾಮನ ವಿರುದ್ಧ ಹಲ್ಲು ಮಸಿಯುತ್ತಿದ್ದಾನೆ. ಅಪ್ಪ ಇಲ್ಲದ ಮಗು ಸಿಹಿಗೆ ದೇಸಾಯಿ ಕುಟುಂಬದ ಸಾವಿರಾರು ಕೋಟಿ ಆಸ್ತಿ ಹೋಗ್ತಿದೆ. ನಿನ್ನ ಮಗನಿಗೆ ಏನೂ ಇಲ್ಲ. ನಿನ್ನ ಪರಿಸ್ಥಿತಿಯೂ ನಿನ್ನ ಮಗನಿಗೆ ಬರುತ್ತೆ. ಇದೆಲ್ಲ ನಿನ್ನ ವಾಣಿ ಅತ್ತಿಗೆಯಿಂದಲೇ ಆಗಿದ್ದು ಎಂದು ಆತನ ಕಿವಿ ತುಂಬಿದ್ದಾಳೆ. ನಿನ್ನೆ ಮೊನ್ನೆ ಬಂದವಳಿಗೆ ಸಿಗುತ್ತಿರುವ ಗೌರವ, ಮರ್ಯಾದೆ ಮನೆ ಮಗನಾಗಿ ನನಗೆ ಸಿಗ್ತಿಲ್ಲ ಎಂದು ಒಳಗೊಳಗೆ ಕುದಿಯುತ್ತಿದ್ದಾನೆ. ಈ ಮೂಲಕ ಶ್ರೀರಾಮನ ವಿರುದ್ಧ ಭಾರ್ಗವಿಯೊಬ್ಬಳೇ ಶತ್ರುವಾಗಿದ್ದಳು. ಇದೀಗ ಇದೇ ಭಾರ್ಗವಿ ಜತೆಗೆ ವಿಶ್ವನೂ ಸೇರಿಕೊಂಡಿದ್ದಾನೆ.
ಅಪಹರಣದ ಮಾತುಕತೆ..
ಇತ್ತ ಮನೆಯಲ್ಲಿ ಸಿಹಿಗೆ ಭಾರ್ಗವಿಯ ಪರೋಕ್ಷ ಕಾಟ ಮುಂದುವರಿದಿದೆ. ನೀನು ಅಪ್ಪ ಅಮ್ಮನ ಜತೆಗಿದ್ದರೆ ಅವರು ಖುಷಿಯಾಗಿರಲ್ಲ. ನೂನು ಬೋರ್ಡಿಂಗ್ ಸ್ಕೂಲಿಗೆ ಹೋದರೆ, ನೀನು ಅಲ್ಲಿ ಚೆನ್ನಾಗಿರ್ತೀಯಾ, ಅಪ್ಪ ಅಮ್ಮನೂ ಖುಷಿ ಖುಷಿಯಾಗಿರ್ತಾರೆ ಎಂದಿದ್ದಾಳೆ. ಭಾರ್ಗವಿಯ ಈ ಮಾತನ್ನು ಸೀರಿಯಸ್ ಆಗಿಯೇ ತೆಗೆದುಕೊಂಡ ಸಿಹಿ, ಅದೇ ಗುಂಗಿನಲ್ಲಿದ್ದಾಳೆ. ಶಾಲೆ ಮುಗಿದ ಮೇಲೆ ನೇರವಾಗಿ ತನ್ನ ಹಳೇ ವಠಾರಕ್ಕೆ ಹೋಗಿದ್ದಾಳೆ. ಇತ್ತ ಸಿಹಿ ಶಾಲೆಯಲ್ಲಿ ಇಲ್ಲ ಎಂಬ ವಿಚಾರ ಮನೆಯಲ್ಲಿದ್ದ ರಾಮ ಮತ್ತು ಸೀತಾಗೆ ಗೊತ್ತಾಗಿ ಗಾಬರಿಯಾಗಿದ್ದಾರೆ. ಮನೆಯಲ್ಲಿ ಅವಳೀಗ ಸಾಮಾನ್ಯ ವಠಾರದ ಹುಡುಗಿಯಲ್ಲ, ದೇಸಾಯಿ ಮನೆ ಮಗು, ಶ್ರೀರಾಮ್ ದೇಸಾಯಿ ಮಗಳು ಎನ್ನುತ್ತ ಕಿಡ್ನಾಪ್ ಬಗ್ಗೆ ಮಾತನಾಡುತ್ತಾಳೆ ಭಾರ್ಗವಿ.
ಸಿಹಿಯ ತಂದೆಗೆ ಹುಡುಕಾಟ..
ದಯಮಾಡಿ ಕಿಡ್ನಾಪ್ ವಿಚಾರ ಇಲ್ಲಿಗೆ ಕೈ ಬಿಡಿ ಎಂದೂ ಹೇಳುತ್ತಾನೆ ರಾಮ್. ಇದೇ ಅಪಹರಣದ ವಿಚಾರವನ್ನೇ ವಿಶ್ವನ ತಲೆಗೂ ಹಾಕುತ್ತಾಳೆ ಭಾರ್ಗವಿ. ಜತೆಗೆ ಹೇಗಾದರೂ ಮಾಡಿ ಆ ಸಿಹಿಯ ತಂದೆ ಯಾರು ಎಂಬುದನ್ನು ಪತ್ತೆ ಮಾಡು ಎಂದೂ ಸಲಹೆ ನೀಡುತ್ತಾಳೆ. ಈ ಮೂಲಕ ರಾಮನ ವಿರುದ್ಧ ವಿಶ್ವನನ್ನು ಎತ್ತಿಕಟ್ಟುವ ಕೆಲಸವನ್ನು ಶುರು ಮಾಡಿದ್ದಾಳೆ ಭಾರ್ಗವಿ. ಇನ್ನೊಂದು ಬದಿಯಲ್ಲಿ ಈಗ ಬಂದ ಸೀತಾಗೆ ದೊಡ್ಡ ದೊಡ್ಡ ಜವಾಬ್ದಾರಿಗಳೇ ಸಿಗ್ತಿವೆ ಎಂದು ಸಾಧನಾ ಸಹ ಒಳಗೊಳಗೆ ಮಾತನಾಡಿಕೊಳ್ಳುತ್ತಿದ್ದಾಳೆ. ಒಟ್ಟಾರೆ ಸುತ್ತಲೂ ಶತ್ರುಗಳಿದ್ದರೂ, ಅದ್ಯಾವುದರ ಅರಿವಿಲ್ಲದೆ, ರಾಮನ ಜತೆ ಖುಷಿಯಲ್ಲಿದ್ದಾಳೆ ಸೀತಾ.
ಸೀತಾ ರಾಮ ಧಾರಾವಾಹಿ ಪಾತ್ರವರ್ಗ
ನಿರ್ದೇಶಕ: ಮಧುಸೂಧನ್
ಗಗನ್ ಚಿನ್ನಪ್ಪ: ಶ್ರೀರಾಮ (ನಾಯಕ)
ವೈಷ್ಣವಿ ಗೌಡ: ಸೀತಾ (ನಾಯಕ)
ರೀತು ಸಿಂಗ್: ಸಿಹಿ (ಸೀತಾ ಮಗಳು)
ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)
ಭಾರ್ಗವಿ: ಪೂಜಾ ಲೋಕೇಶ್ (ಶ್ರೀರಾಮನ ಚಿಕ್ಕಮ್ಮ)
ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್ ದೇಸಾಯಿ (ಶ್ರೀರಾಮನ ತಾತ)
ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)
ವಿಕಾಸ್ ಕಾರ್‌ಗೋಡ್: ಲಾಯರ್ ರುದ್ರಪ್ರತಾಪ್
ಸತೀಶ್ ಚಂದ್ರ: ಚರಣ್. ಡಿ
ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್ (ಶ್ರೀರಾಮನ ಚಿಕ್ಕಪ್ಪ)
ಜಯದೇವ್ ಮೋಹನ್: ಸತ್ಯಜೀತ್ (ಶ್ರೀರಾಮನ ಚಿಕ್ಕಪ್ಪ)
ವಿಭಾಗ