Seetha Rama Serial: ಸಿಹಿಯ ಜನ್ಮವೃತ್ತಾಂತ ತಿಳಿದ ಅನಂತಲಕ್ಷ್ಮೀಯ ಆಗಮನ; ಅನಿರೀಕ್ಷಿತ ಅತಿಥಿಯನ್ನು ಕಂಡು ಸೀತಾ ತಬ್ಬಿಬ್ಬು
ಸೀತಾ ರಾಮ ಕಲ್ಯಾಣದ ಖುಷಿಯಲ್ಲಿದ್ದರೆ, ಅನಿರೀಕ್ಷಿತ ಅತಿಥಿಯ ಆಗಮನದಿಂದ ಸೀತಾಳ ಖುಷಿ ಕುಗ್ಗಿಹೋಗಿದೆ. ಡಾಕ್ಟರ್ ಅನಂತಲಕ್ಷ್ಮೀ ಆಗಮನದಿಂದ ಸೀತಾ ರಾಮ ಧಾರಾವಾಹಿ ರೋಚಕ ಟ್ವಿಸ್ಟ್‌ಗೆ ಹೊರಳಲಿದೆ. ಅಷ್ಟಕ್ಕೂ ಈ ಡಾಕ್ಟರ್‌ಗೆ ಸಿಹಿಯ ಜನ್ಮವೃತ್ತಾಂತ ಗೊತ್ತಾ?

Seetha Rama Serial: ಸೀತಾ ರಾಮ ಧಾರಾವಾಹಿಯಲ್ಲೀಗ ಸೀತಾ ಮತ್ತು ರಾಮನ ಕಲ್ಯಾಣಕ್ಕೆ ದಿನಗಣನೆ ಆರಂಭವಾಗಿದೆ. ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ, ಇದೀಗ ಮದುವೆ ಕ್ಷಣವನ್ನು ಎದುರು ನೋಡುತ್ತಿದೆ. ಸದ್ದಿಲ್ಲದೆ, ಮದುವೆ ಖರೀದಿಯಲ್ಲಿಯೂ ಬಿಜಿಯಾಗಿದೆ. ಮದುವೆಯ ಜವಳಿ ಖರೀದಿ ಮುಗಿಸಿ, ಚಿನ್ನಾಭರಣವನ್ನೂ ಖರೀದಿಸಿದೆ. ಈ ನಡುವೆ ಲಗ್ನಪತ್ರಿಕೆಯೇ ಮುದ್ರಣವಾಗಿ, ಹಂಚಿಕೆ ಕೆಲಸವೂ ನಡೆಯುತ್ತಿದೆ. ಇದೆಲ್ಲದರ ನಡುವೆ ಸೀತಾ ಮತ್ತು ರಾಮನ ನಡುವಿನ ಕ್ಯೂಟ್ ಸಂಭಾಷಣೆಯೂ ನೋಡುಗರ ಗಮನ ಸೆಳೆಯುತ್ತಿದೆ.
ತನ್ನ ಆಪ್ತರಿಗೆ ಲಗ್ನ ಪತ್ರಿಕೆ ಹಂಚುವೆ ಕೆಲಸದಲ್ಲಿಯೂ ಸೀತಾ ತೊಡಗಿಸಿಕೊಂಡಿದ್ದಾಳೆ. ಅದರಂತೆ ಆಪ್ತ ಸ್ನೇಹಿತೆ ಭೂಮಿಕಾ ಗೌತಮ್ ಮನೆಗೂ ಸೀತಾ, ಸಿಹಿ ಜತೆಗೆ ಅಚ್ಚರಿಯ ಎಂಟ್ರಿ ಕೊಟ್ಟಿದ್ದಾಳೆ. ಸೀತಾಳನ್ನು ನೋಡಿ ಅಷ್ಟೇ ಖುಷಿಯಿಂದಲೇ ಸ್ವಾಗತಿಸಿದ್ದಾಳೆ ಭೂಮಿಕಾ. ಒಂದು ಗುಡ್‌ನ್ಯೂಸ್ ಇದೆ ಎಂದ ಸೀತಾ, ಗೌತಮ್ ಆಗಮಿಸುತ್ತಿದ್ದಂತೆ, ಮದುವೆ ವಿಚಾರ ಪ್ರಸ್ತಾಪ ಮಾಡಿದ್ದಾಳೆ. ಅರೇ ಹೌದಾ ಎಂದು ಅಚ್ಚರಿಯಲ್ಲಿ ಈ ಜೋಡಿ ಸೀತಾಗೆ ಶುಭ ಕೋರಿದೆ. ಆದರೆ, ಆಪ್ತ ಸ್ನೇಹಿತೆಯರಾದ್ರೂ, ಭೂಮಿಕಾಗೆ ನಿಶ್ಚಿತಾರ್ಥ ಆದ ವಿಚಾರವೂ ಗೊತ್ತಿಲ್ಲ.
ಅನಿರೀಕ್ಷಿತ ಅತಿಥಿಯ ದರ್ಶನ
ಇತ್ತ ಇನ್ನೊಂದು ಕಡೆ ಸೀತಾ ಲಗ್ನ ಪತ್ರಿಕೆ ಕೊಡುವುದರ ಜತೆಗೆ ಹೊಸ ಗೊಂದಲಕ್ಕೂ ಸಿಲುಕಿದ್ದಾಳೆ. ಈ ವರೆಗೂ ಇರದ ಹೊಸ ಕ್ಯಾರೆಕ್ಟರ್‌ವೊಂದು ಧಾರಾವಾಹಿ ಪ್ರವೇಶಿಸಿದೆ. ಅದೇ ಡಾಕ್ಟರ್ ಅನಂತಲಕ್ಷ್ಮೀ. ಹೌದು ಹಳೆ ನೆನಪುಗಳನ್ನು ಬದಿಗೊತ್ತಿ ಸಾಗುತ್ತಿದ್ದ ಸೀತೆಗೆ ಆ ಅನಿರೀಕ್ಷಿತ ಅತಿಥಿಯ ಮುಖದರ್ಶನವಾಗಿದೆ. ಡಾಕ್ಟರ್ ಅನಂತಲಕ್ಷ್ಮೀಯನ್ನು ನೋಡುತ್ತಿದ್ದಂತೆ, ಸೀತಾ ಗಾಬರಿಯಾಗಿದ್ದಾಳೆ. ಅಷ್ಟೇ ಅಲ್ಲ ಅವರಿಂದ ಕಣ್ಮರೆಯಾಗಿದ್ದಾಳೆ. ಅನಂತಲಕ್ಷ್ಮೀ ಹೀಗೆ ಬಂದು ಹಾಗೆ ಹೋಗಿದ್ದರೆ ಏನೂ ಆಗುತ್ತಿರಲಿಲ್ಲ, ಆಕೆ ದೇಸಾಯಿ ಕುಟುಂಬಕ್ಕೂ ಆಪ್ತೆ ಎಂಬುದೇ ಸೀತಾಗೆ ಭಯಹುಟ್ಟಿಸಿದೆ!
ಅನಂತಲಕ್ಷ್ಮೀಗೂ ಸೀತಾಗೂ ಏನು ಸಂಬಂಧ?
ಈಗಾಗಲೇ ಸಿಹಿ ಹುಟ್ಟಿನ ವಿಚಾರವನ್ನು ನಿಮ್ಮ ಬಳಿ ಹೇಳಿಕೊಳ್ಳಬೇಕು ಎಂದು ಸೀತಾ ರಾಮ್ ಮುಂದೆ ಪದೇಪದೆ ಹೇಳಿಕೊಂಡಿದ್ದಾಳೆ. ಆದರೆ, ಅತ್ತ ಕಡೆಯಿಂದ ರಾಮ್ ಮಾತ್ರ ಹಳೇ ವಿಚಾರಗಳು ನನಗೆ ಬೇಡ, ನನಗೂ ಒಂದು ಪಾಸ್ಟ್ ಇದೆ ಎಂದು ಅಲ್ಲಿಗೆ ಕೈಬಿಟ್ಟಿದ್ದಾನೆ. ಆದರೆ, ಇದು ಸೀತಾ ಮನದಲ್ಲಿ ಮಾತ್ರ ಆಗಾಗ ಕೊರೆಯುತ್ತಲೇ ಇದೆ. ಇದೆಲ್ಲವ ಮರೆತು ಮದುವೆ ಖುಷಿಯಲ್ಲಿರುವ ಸೀತಾಗೆ ಅನಂತಲಕ್ಷ್ಮೀ ಎದುರಾಗಿದ್ದಾಳೆ. ಸೀತಾ ಮತ್ತು ಸಿಹಿಯ ಗುಟ್ಟು ಈ ಅನಂತಲಕ್ಷ್ಮೀಗೆ ಗೊತ್ತಿರಬಹುದೇ? ಸೀತಾಗೆ ಡೆಲಿವರಿ ಮಾಡಿದ್ದೇ ಇದೇ ಡಾಕ್ಟರ್ ಇರಬಹುದೇ? ಹೀಗೆ ಮತ್ತಷ್ಟು ರೋಚಕತೆಯ ಜತೆಗೆ ಸಾಗಲಿದೆ ಈ ಸೀರಿಯಲ್.
ಅಂಜಲಿ ರಾಮು ಲವ್ವಿ ಡವ್ವಿ
ತನ್ನನ್ನು ಜೈಲು ಸೇರಿಸಿದ ಅಶೋಕ ಮತ್ತು ರಾಮ್ ವಿರುದ್ಧ ಹೇಗಾದ್ರೂ ಮಾಡಿ ಸೇಡು ತೀರಿಸಿಕೊಳ್ಳಬೇಕೆಂದು ನಿರ್ಧರಿಸಿರುವ ಲಾಯರ್ ರುದ್ರಪ್ರತಾಪ್, ರಾಮು ಹೆಸರಿನಲ್ಲಿ ಅಶೋಕನ ತಂಗಿಯ ಹಿಂದೆ ಬಿದ್ದಿದ್ದಾನೆ. ಆಕೆಯ ಕೊರಳಿಗೆ ಮಾಂಗಲ್ಯವನ್ನೂ ಕಟ್ಟಿದ್ದಾನೆ. ಮದುವೆ ಆದರೂ ಅಣ್ಣಂದಿರ ಸಮ್ಮುಖದಲ್ಲಿಯೇ, ಅವರ ಒಪ್ಪಿಗೆ ಪಡೆದೇ ಮದುವೆ ಎಂದು ರಾಮುಗೆ ಖಡಾಖಂಡಿತವಾಗಿ ಹೇಳಿದ್ದಾಳೆ ಅಂಜಲಿ. ಈ ನಡುವೆ ನೇರವಾಗಿ ಅಂಜಲಿ ಮನೆಗೆ ಬಂದ ರಾಮು, ಈ ಶುಕ್ರವಾರ ಮದುವೆ ಎಂದೂ ಹೇಳಿ ಹೋಗಿದ್ದಾನೆ. ಇದರಿಂದ ಅಂಜಲಿಯೂ ಕೊಂಚ ಗೊಂದಲಕ್ಕೆ ಒಳಗಾಗಿದ್ದಾಳೆ.
ಸೀತಾ ರಾಮ ಸೀರಿಯಲ್ ಪಾತ್ರವರ್ಗ
ವೈಷ್ಣವಿ ಗೌಡ : ಸೀತಾ ಪಾತ್ರದಲ್ಲಿ, ನಾಯಕಿಯಾಗಿ. ಸಿಹಿಯ ಅಮ್ಮನಾಗಿ.
ಗಗನ್ ಚಿನ್ನಪ್ಪ: ಶ್ರೀರಾಮ್ ದೇಸಾಯಿ ಪಾತ್ರದಲ್ಲಿ, ನಾಯಕನಾಗಿ.
ರಿತ್ತು ಸಿಂಗ್: ಸಿಹಿಯಾಗಿ, ಸೀತಾಳ ಮಗಳಾಗಿ.
ಪೂಜಾ ಲೋಕೇಶ್: ಭಾರ್ಗವಿ ದೇಸಾಯಿ ಪಾತ್ರದಲ್ಲಿ, ಖಳನಾಯಕಿಯಾಗಿ.
ಮುಖ್ಯಮಂತ್ರಿ ಚಂದ್ರು (ಸೂರಿ): ಸೂರ್ಯಪ್ರಕಾಶ್ ದೇಸಾಯಿ ಪಾತ್ರದಲ್ಲಿ. ರಾಮ್ ತಾತಾನಾಗಿ.
ಅಶೋಕ್ ಶರ್ಮಾ: ಅಶೋಕ್ ಪಾತ್ರದಲ್ಲಿ, ರಾಮ್ ಸ್ನೇಹಿತನಾಗಿ.
ಮೇಘನಾ ಶಂಕರಪ್ಪ: ಪ್ರಿಯಾ ಪಾತ್ರದಲ್ಲಿ, ಸೀತಾ ಸ್ನೇಹಿತೆಯಾಗಿ
ವಿಕಾಸ್ ಕಾರ್‌ಗೋಡ್: ಲಾಯರ್ ರುದ್ರಪ್ರತಾಪ್, ಖಳನಾಯಕ
ಸತೀಶ್ ಚಂದ್ರ: ಚರಣ್. ಡಿ, ಮ್ಯಾನೇಜರ್
ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್, ಶ್ರೀರಾಮನ ಚಿಕ್ಕಪ್ಪ
ಜಯದೇವ್ ಮೋಹನ್: ಸತ್ಯಜೀತ್ , ಶ್ರೀರಾಮನ ಚಿಕ್ಕಪ್ಪ
