Seetha Rama: ಎರಡು ಮುಳ್ಳಿನ ವಾಚು, ರಾಮನ ಹೃದಯ ಚುಚ್ಚಿದೆ; ಹಳೇ ಹುಡುಗಿ ನೆನಪು ಮರುಕಳಿಸಿದೆ
ವಾಚ್ ವಿಚಾರದಲ್ಲಿ ರಾಮನ ಹಳೇ ವಿಚಾರಗಳೂ ಹೊರಬಿದ್ದಿವೆ. ರಾಮ ಇನ್ನೂ ತನ್ನ ಹುಡುಗಿಯನ್ನು ಮರೆತಿಲ್ಲ ಎಂಬ ಸತ್ಯ ಬಯಲಾಗಿದೆ. ಭಾರ್ಗವಿ ಹೆಣೆದ ಹೊಸ ಸಂಚಿಗೆ ಸಿಲುಕಿದ್ದಾನಾ ಶ್ರೀರಾಮ?
Seetha Rama: Serial 48th Episode: ಸೀತಾಳ ಮನೆಯಲ್ಲಿ ಗಣೇಶ ಹಬ್ಬ ಜೋರಾಗಿದೆ. ವಠಾರದ ಪುಟಾಣಿಗಳೆಲ್ಲ ಒಂದೆಡೆ ಸೇರಿ, ಮನೆ ಮನೆಗೆ ತೆರಳಿ ವಂತಿಗೆ ಕಲೆಕ್ಟ್ ಮಾಡುತ್ತಿದ್ದಾರೆ. ತಾತನಿಂದಲೇ ಮೊದಲು ನೂರು ರೂಪಾಯಿ ಪುಟಾಣಿಗಳ ಹುಂಡಿಗೆ ಬಿದ್ದಿದೆ. ಖುಷಿಯಲ್ಲಿಯೇ ಮಕ್ಕಳ ಹಬ್ಬ ಜೋರಾಗಿ ನಡೆಯುತ್ತಿದೆ. ಇತ್ತ ರಾಮ್ ಮನೆಯಲ್ಲಿ ವಾಚ್ ಕಾಣಿಸದಿದ್ದಕ್ಕೆ ದೊಡ್ಡ ರಾದ್ಧಾಂತವೇ ನಡೆಯುತ್ತಿದೆ.
ರಾಮನ ವಾಚ್ ಬಚ್ಚಿಟ್ಟುಕೊಂಡಿರುವ ಭಾರ್ಗವಿ, ರಾಮನ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದ್ದಾಳೆ. ಸ್ನಾನ ಮುಗಿಸಿ ಬಂದ ಬಳಿಕ ವಾಚ್ ಕಾಣದಿದ್ದಕ್ಕೆ, ರಾಮ್ ಗರಂ ಆಗಿದ್ದಾನೆ. ಮನೆಯವರನ್ನೆಲ್ಲ ಒಂದೆಡೆ ಸೇರಿಸಿ ವಾಚ್ ನೋಡಿದ್ದೀರಾ? ಎಂದು ಕೇಳಿದ್ದಾನೆ. ಯಾರಿಂದಲೂ ನೋಡಿಲ್ಲ ಎಂಬ ಉತ್ತರ ಬಂದಿದೆ. ಬೇರೆ ವಾಚ್ ಇದೆ ಕೊಡ್ತಿನಿ ಬಾರೋ ಎಂದಿದ್ದಕ್ಕೆ ಚಿಕ್ಕಪ್ಪ ವಿಶ್ವಜಿತ್ ಮಾತನ್ನೂ ಧಿಕ್ಕರಿಸಿದ್ದಾನೆ ರಾಮ್.
ಬೇಸರದಿಂದ ಕೋಣೆ ಸೇರಿದ ರಾಮನನ್ನು ರಮಿಸಲೆಂದು ಹೋದ ಚಿಕ್ಕಿ, ರಾಮನ ಸ್ಥಿತಿ ಕಂಡು ಒಳಗೊಳಗೆ ಖುಷಿ ಪಡುತ್ತಿದ್ದಾಳೆ. ಇದೇ ವೇಳೆ ಆ ವಾಚ್ನ ಹಿಂದೊಂದು ಕಥೆ ಇದೆ ಎಂಬುದು ರಾಮನ ಬಾಯಿಂದ ರಿವೀಲ್ ಆಗಿದೆ. ನಾನು ಮತ್ತೆ ಮತ್ತೆ ಬದುಕುತ್ತಿರುವುದೇ ಆ ವಾಚ್ನಿಂದ ಎಂದಿದ್ದಾನೆ. ಉಳಿದಿರುವುದು ಆ ವಾಚ್ನ ನೆನಪುಗಳಷ್ಟೇ ಎಂದು ಭಾರ್ಗವಿ ಮುಂದೆ ಹೇಳಿಕೊಂಡಿದ್ದಾನೆ ರಾಮ.
ಪ್ರೀತಿಸಿದ ಹುಡುಗಿ ಕೊಟ್ಟ ಗಿಫ್ಟ್ ಅನ್ನೋ ಕಾರಣಕ್ಕೆ ಇನ್ನೂ ಅದರ ಮೇಲೆ ಅಷ್ಟೊಂದು ಪ್ರೀತಿ ಇಟ್ಟುಕೊಂಡಿದ್ದೀಯಾ ಎಂದು ಭಾರ್ಗವಿ ಪ್ರಶ್ನಿಸಿದ್ದಾಳೆ. ಇರು ನಾನೇ ಹುಡುಕಿ ಕೊಡ್ತಿನಿ ಅಂತ ಹೇಳಿ, ರಾಮ್ ಕಣ್ತಪ್ಪಿಸಿ, ತಾನೇ ತನ್ನ ಕೈಗೆ ಕಟ್ಟಿಕೊಂಡಿದ್ದ ವಾಚ್ಅನ್ನು ಬಿಚ್ಚಿಟ್ಟು, ಇಲ್ಲೇ ಇದೆ ನೋಡು ಅಪ್ಪು ಎಂದು ಹುಡುಕಿ ಕೊಡುವ ನಾಟಕ ಮಾಡಿದ್ದಾಳೆ. ಅಶೋಕನ ದಿಢೀರ್ ಎಂಟ್ರಿ ಆಗ್ತಿದ್ದಂತೆ, ವರಸೆ ಬದಲಿಸಿ, ಇಬ್ಬರನ್ನೂ ಗಣೇಶ ತರಲು ಕಳಿಸಿದ್ದಾಳೆ ಭಾರ್ಗವಿ.
ಮತ್ತೊಂದು ಮಗ್ಗಲಲ್ಲಿ, ಮ್ಯಾನೇಜರ್ ಚರಣ್ಗೆ ಫೋನ್ ಮಾಡಿರುವ ಭಾರ್ಗವಿ, ಇನೋಸೆಂಟ್ ಇರೋರ ಕಡೆಗೆ ಫೈಲ್ ಕೊಟ್ಟು ಮನೆಗೆ ಕಳಿಸಿ, ಎಂದು ಆರ್ಡರ್ ಮಾಡಿದ್ದಾಳೆ. ಅಶೋಕ ಮತ್ತು ರಾಮ್ ಬರುವುದರೊಳಗೆ ಸೂರ್ಯ ಪ್ರಕಾಶ್ ಬಳಿಯಲ್ಲಿ ಫೈಲ್ಗಳಿಗೆ ಸಹಿ ಮಾಡಿಸಿಕೊಳ್ಳುವ ಸಂಚು ನಡೆಸಿದ್ದಾಳೆ ಭಾರ್ಗವಿ.
ರಾಮನ ಮೇಲೆ ಅಶೋಕ ಕೊಂಚ ಬೇಸರಿಸಿಕೊಂಡಿದ್ದಾನೆ. ವಾಚ್ ಸಲುವಾಗಿ ನಡೆದ ಪ್ರಹಸನ ಕಂಡು ರಾಮ್ ಮೇಲೆ ಗರಂ ಆಗಿದ್ದಾನೆ. ಒಬ್ಬ ದೇವದಾಸನಿಗೆ ಫ್ರೆಂಡ್ ಆಗಿರೋದು ಎಷ್ಟು ಕಷ್ಟ ಅನ್ನೋದು ದೇವ್ರಾಣೆಗೆ ನಿನಗೂ ಅರ್ಥ ಆಗಲ್ಲ ಮಗ ಎಂದಿದ್ದಾನೆ. ರಾಮ್ ಬದಲಾಗಿದ್ದಾನೆ ಎಂದುಕೊಂಡಿದ್ದ ಅಶೋಕಗೆ ಮತ್ತೆ ನಿರಾಸೆ ಭಾವ ಮೂಡಿದೆ. ಹಳೇ ಹುಡುಗಿ ನೆನಪಲ್ಲಿ ರಾಮ ಇನ್ನೂ ಕೊರಗುತ್ತಿದ್ದಾನೆ ಎನ್ನೋ ವಿಚಾರವನ್ನು ಎರಡು ಮುಳ್ಳಿನ ವಾಚ್ ಬಯಲು ಮಾಡಿದೆ. ಪ್ರೀತಿ ಹುಟ್ಟುವುದು ಒಂದೇ ಸಲ ಎಂದು ಅಶೋಕನಿಗೇ ಪಾಠ ಮಾಡಿದ್ದಾನೆ ರಾಮ. ಈ ಮೂಲಕ ರಾಮ ಇನ್ನೂ ಹಳೇ ಹುಡುಗಿಯ ಗುಂಗಿನಲ್ಲಿದ್ದಾನೆ ಎಂಬ ಅಂಶ ಬೆಳಕಿದೆ ಬಂದಿದೆ.