ಕ್ಯಾಬ್ ಡ್ರೈವರ್ ಜೊತೆ ಕಿರುತೆರೆ ನಟಿ ಪದ್ಮಿನಿ ಕಿರಿಕ್; ಸೋಷಿಯಲ್ ಮೀಡಿಯಾದಲ್ಲಿ ಖಂಡನೆ
ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಕುಲ್ ಬಾಲಾಜಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಪುನರ್ ವಿವಾಹ' ಧಾರಾವಾಹಿಯಲ್ಲಿ ಪದ್ಮಿನಿ ನಟಿಸುತ್ತಿದ್ದಾರೆ.
ಜನರಿಗೆ ಮಾದರಿಯಾಗಿರಬೇಕಾದ ಸೆಲೆಬ್ರಿಟಿಗಳ ಅನೇಕ ಬಾರಿ ಜನ ಸಾಮಾನ್ಯರೊಂದಿಗೆ ಕಿರಿಕ್ ಮಾಡಿಕೊಂಡಿರುವ ಉದಾಹರಣೆಗಳನ್ನು ನೋಡಿದ್ದೇವೆ. ಇದೀಗ ಕಿರುತೆರೆ ನಟಿ ಪದ್ಮಿನಿ ಕೂಡಾ ಬೆಂಗಳೂರಿನ ಕ್ಯಾಬ್ ಚಾಲಕರೊಬ್ಬರ ಬಳಿ ಕ್ಷುಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದು ಕ್ಯಾಬ್ ಚಾಲಕ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.
ಕಿರುತೆರೆ ನಟಿ ಪದ್ಮಿನಿ
ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಕುಲ್ ಬಾಲಾಜಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಪುನರ್ ವಿವಾಹ' ಧಾರಾವಾಹಿಯಲ್ಲಿ ಪದ್ಮಿನಿ ನಟಿಸುತ್ತಿದ್ದಾರೆ. ''ಶುಕ್ರವಾರ ನನಗೆ ಮಧ್ಯಾಹ್ನದವರೆಗೂ ಬಾಡಿಗೆ ಸಿಗಲಿಲ್ಲ. 2.30 ರ ನಂತರ ನಂತರ ಈ ಮೇಡಂ ಮಲ್ಲೇಶ್ವರಂ ಮಾರ್ಗೋಸಾ ರಸ್ತೆಯಿಂದ ಬನಶಂಕರಿಗೆ ಹೋಗಲು ಕ್ಯಾಬ್ ಬುಕ್ ಮಾಡಿದರು. ಕ್ಯಾಬ್ ಹತ್ತುವಾಗಲೇ ಏಕಿಷ್ಟು ದುಡ್ಡು? 65 ರೂಪಾಯಿ ಕ್ಯಾನ್ಸಲೇಷನ್ ಫೀಸ್ ಹಿಡಿದಿದ್ದಾರೆ ಎಂದು ಕೇಳಿದರು. ಇದು ನಾನು ತೆಗೆದುಕೊಳ್ಳುತ್ತಿಲ್ಲ, ಆಪ್ನವರು ಫಿಕ್ಸ್ ಮಾಡಿರುವುದು ಎಂದು ಹೇಳಿದೆ. ಪಾದರಾಯನ ಪುರದ ಪೈಪ್ಲೈನ್ ಕಡೆಗೆ ಮ್ಯಾಪ್ ತೋರಿಸುತ್ತಿದ್ದ ಕಡೆಗೆ ಡ್ರೈವ್ ಮಾಡುತ್ತಿದ್ದೆ. ಈ ರಸ್ತೆಯಲ್ಲಿ ಏಕೆ ಹೋಗುತ್ತಿದ್ದೀರಿ? ಎಂದು ಕೇಳಿದರು. ಮ್ಯಾಪ್ ತೋರಿಸುವ ಕಡೆಗೆ ಹೋಗುತ್ತಿದ್ದೇನೆ ಎಂದಾಗ ಮೇಡಂ ಸುಮ್ಮನಾದರು.''
ಹಣ ಕೊಡದೆ ಕ್ಯಾಬ್ ಚಾಲಕನೊಂದಿಗೆ ಕಿರಿಕ್
''ಸ್ವಲ್ಪ ಹೊತ್ತಿನ ಬಳಿಕ ನನಗೆ ಬಹಳ ತಡವಾಗುತ್ತಿದೆ ಎಂದರು. ಇಲ್ಲಿ ಟ್ರಾಫಿಕ್ ಇದೆ ಮೇಡಂ ನಿಧಾನವಾಗಿ ಹೋಗಬೇಕು ಎಂದೆ. ಮುಂದೆ ಒಂದು ಗಾಡಿ ಬಂದಿದ್ದರಿಂದ ಬ್ರೇಕ್ ಹಾಕಿದೆ. ಆಗಲೂ , ಏನು ಈ ರೀತಿ ಬ್ರೇಕ್ ಹಾಕುತ್ತೀರಿ ಎಂದು ರೇಗಾಡಿದರು. ಈ ರೀತಿ ಡ್ರೈವ್ ಮಾಡಿದರೆ ನನಗೆ ಲೇಟ್ ಆಗುತ್ತೆ ಎಂದು ನನ್ನ ಕ್ಯಾಬ್ ಇಳಿದು, 437 ರೂಪಾಯಿ ದುಡ್ಡೂ ಕೊಡದೆ ಆಟೋ ಹತ್ತಿದರು. ನಾನು ದುಡ್ಡು ಕೇಳಿದರೂ ಆಕೆ ಕೊಡಲಿಲ್ಲ. ನಾನು ಯಾವುದಕ್ಕೂ ಇರಲಿ ಎಂದು ವಿಡಿಯೋ ಮಾಡಿಕೊಂಡೆ. ಈಗ ಆಪ್ನವರು ನನ್ನನ್ನು ಆಫ್ಲೈನ್ ಮಾಡಿದ್ದಾರೆ. ಮೊದಲೇ ಬಾಡಿಗೆ ಇಲ್ಲ, ಅಂತದ್ದರಲ್ಲಿ ಈ ರೀತಿ ಮಾಡಿದರೆ ನಮಗೆ ಬಹಳ ಕಷ್ಟವಾಗುತ್ತದೆ'' ಎಂದು ಕ್ಯಾಬ್ ಚಾಲಕ ಸೆಲ್ಫಿ ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಖಂಡನೆ
ಕ್ಯಾಬ್ ಚಾಲಕ ರೆಕಾರ್ಡ್ ಮಾಡಿರುವ ವಿಡಿಯೋದಲ್ಲಿ ನಟಿ ಪದ್ಮಿನಿ, ''ನಾನು ರೀಚ್ ಆಗಬೇಕಿದ್ದ ಸ್ಥಳಕ್ಕೆ ನೀವು ಡ್ರಾಪ್ ಮಾಡಿಲ್ಲ ಆದ್ದರಿಂದ ಹಣ ಕೊಡುವುದಿಲ್ಲ'' ಎಂದು ಅರಚಾಡುತ್ತಲೇ ಆಟೋದಿಂದ ಕೂಡಾ ಇಳಿದು ನಡೆದುಕೊಂಡು ಹೋಗಿದ್ದಾರೆ. ಹಣ ಕೊಡದೆ ಹೋಗಿರುವುದೂ ಅಲ್ಲದೆ ಕ್ಯಾಬ್ ಚಾಲಕನ ವಿರುದ್ದ ಊಬರ್ಗೆ ದೂರು ನೀಡಿದ್ದು, ಸಂಸ್ಥೆ, ಕ್ಯಾಬ್ ಚಾಲಕನನ್ನು ತಾತ್ಕಾಲಿವಾಗಿ ಕೆಲಸದಿಂದ ನಿರ್ಬಂಧಿಸಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ನಟಿಯ ವರ್ತನೆಗೆ ನೆಟಿಜನ್ಸ್ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.