ಒಂದೇ ಶೋನಲ್ಲಿ ಸುದೀಪ್, ದರ್ಶನ್, ಯಶ್! ಫ್ಯಾನ್ಸ್‌ಗೆ ಥ್ರಿಲ್ ನೀಡಿದ ಜೀ ಕನ್ನಡದ ಹೊಸ ಪ್ರೋಮೋ; ಆದ್ರೆ, ಅಸಲಿಯತ್ತು ಮಾತ್ರ ಬೇರೆ
ಬೆಳ್ಳಿತೆರೆ ಮೇಲೆ ಅಬ್ಬರಿಸುವ ಕನ್ನಡದ ಮೂವರು ಸ್ಟಾರ್ ನಟರು, ಒಂದೇ ಶೋನಲ್ಲಿ ಕಾಣಿಸಿಕೊಂಡರೇ ಹೇಗಿರಬಹುದು? ಅದಕ್ಕೀಗ ಉತ್ತರ ಸಿಕ್ಕಿದೆ. ಜೀ ಕನ್ನಡ ಅಂಥದ್ದೊಂದು ಸಾಹಸಕ್ಕೆ ಇಳಿದಿದೆ. ಸುದೀಪ್, ದರ್ಶನ್, ಯಶ್ ಅವರನ್ನು ಒಂದೇ ವೇದಿಕೆಗೆ ಕರೆತರುವ ಪ್ರಯತ್ನ ಮಾಡುತ್ತಿದೆ. ಆದರೆ, ಇಲ್ಲೊಂದು ಬಿಗ್ ಟ್ವಿಸ್ಟ್ ಇದೆ.
Zee Kannada New Show Promo: ಕನ್ನಡ ಕಿರುತೆರೆಯಲ್ಲಿ ಜೀ ಕನ್ನಡ ಸದ್ಯ ನಂಬರ್ ಒನ್ ಸ್ಥಾನದಲ್ಲಿದೆ. ಸಾಲು ಸಾಲು ರಿಯಾಲಿಟಿ ಶೋಗಳು, ಹೊಚ್ಚ ಹೊಸ ಧಾರಾವಾಹಿಗಳನ್ನು ತನ್ನ ವೀಕ್ಷಕರಿಗೆ ನೀಡುತ್ತಲೇ ಬಂದಿದೆ. ಈ ಮೂಲಕ ನಾಡಿನ ಮನೆ ಮಂದಿಯನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಅದರಲ್ಲೂ ವಾರಾಂತ್ಯದ ಶೋಗಳ ಮೂಲಕ ಗಮನ ಸೆಳೆದರುವ ಜೀ ಕನ್ನಡ, ಇನ್ನೇನು ಇಂದಿನಿಂದ (ಮಾ. 30) ಮಹಾನಟಿ ಅನ್ನೋ ಹೊಸ ರಿಯಾಲಿಟಿ ಶೋವನ್ನೂ ನಾಡಿನ ಜನರ ಮುಂದಿಡುತ್ತಿದೆ. ಅದರ ಪ್ರೋಮೋ ಝಲಕ್ ನಡುವೆಯೇ ಈಗ ಕಿರುತೆರೆಯ ಅತಿ ದೊಡ್ಡ ಶೋವೊಂದಕ್ಕೂ ಜೀ ಕನ್ನಡ ಕೈ ಹಾಕಿದೆ.
ಸ್ಯಾಂಡಲ್‌ವುಡ್ ಕಲಾವಿದರಿಗೂ ಕಿರುತೆರೆಗೂ ಅಪಾರ ನಂಟು. ಸಿನಿಮಾ ಜತೆಜತೆಗೆ ಕಿರುತೆರಯಲ್ಲೂ ಒಂದಿಲ್ಲೊಂದು ಶೋ ನಡೆಸಿಕೊಡುತ್ತಿರುತ್ತಾರೆ ಸಿನಿಮಾ ನಟರು. ಅದರಲ್ಲೂ ಕೆಲವು ಹಿರಿಯ ಕಲಾವಿದರನ್ನು ಸಿನಿಮಾಗಿಂತ ಹೆಚ್ಚಾಗಿ ಕಿರುತೆರೆಯಲ್ಲಿಯೇ ಆಸ್ವಾದಿಸುವುದು ಹೆಚ್ಚು. ಇನ್ನು ಕೆಲವರು ಕಿರುತೆರೆಯಲ್ಲಿ ಯಾವ ಶೋಗಳನ್ನೂ ಮಾಡದೇ, ದೂರ ಉಳಿದವರೂ ಇದ್ದಾರೆ. ಆದರೆ, ಒಂದೇ ಶೋನಲ್ಲಿ ಘಟಾನುಘಟಿಗಳನ್ನು ಕರೆತಂದರೆ ಹೇಗಿರಬೇಡ? ಅಂಥ ಕೆಲಸಕ್ಕೆ ಕೈ ಹಾಕಿದೆ ಜೀ ಕನ್ನಡ. ಒಬ್ಬರಲ್ಲ ಇಬ್ಬರಲ್ಲ ಚಂದನವನ ಮೂವರು ಸೂಪರ್‌ಸ್ಟಾರ್‌ಗಳನ್ನು ಒಂದೇ ಶೋ ಅಡಿಯಲ್ಲಿ ತರುತ್ತಿದೆ.
ಒಂದೇ ಶೋನಲ್ಲಿ ಘಟಾನುಘಟಿಗಳು!?
ಹೌದು ಆ ಮೂವರು ಸ್ಟಾರ್‌ಗಳು ಬೇರಾರು ಅಲ್ಲ, ಸುದೀಪ್, ದರ್ಶನ್ ಮತ್ತು ಯಶ್! ಜೀ ಕನ್ನಡದಿಂದ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಶೀಘ್ರದಲ್ಲಿ ಎಂಬ ಪ್ರೋಮೋ ಝಲಕ್ ಹೊರಬೀಳುತ್ತಿದ್ದಂತೆ, ಅವರ ಪ್ಯಾನ್ಸ್ ವಲಯದಲ್ಲಿ ಅಚ್ಚರಿಯ ಜತೆಗೆ ನಿರೀಕ್ಷೆಯೂ ಮುಗಿಲು ಮುಟ್ಟಿದೆ. ಏಕೆಂದರೆ, ಈ ವರೆಗೂ ಇಂಥ ಒಂದು ಪ್ರಯತ್ನ ಕನ್ನಡ ಕಿರುತೆರೆಯಲ್ಲಿ ಘಟಿಸಿಲ್ಲ. ಹಾಗಾಗಿ ವೀಕ್ಷಕರ ವಲಯದಿಂದ ಹೆಚ್ಚು ಮೈಲೇಜ್ ಪಡೆದುಕೊಂಡಿದೆ ಜೀ ಕನ್ನಡದ ಹೊಸ ಪ್ರೋಮೋ. ಏನಿದು ಶೋ? ಹೇಗಿರಲಿದೆ? ಎಂಬಿತ್ಯಾದಿ ಮಾಹಿತಿ ಇನ್ನಷ್ಟೇ ರಿವೀಲ್ ಆಗಬೇಕಿದೆ.
ಈ ವರೆಗೂ ಕಿಚ್ಚ ಸುದೀಪ್ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ವರ್ಷಕ್ಕೆ ಒಂದಷ್ಟು ದಿನ ಕಿರುತೆರೆಯಲ್ಲಿ ಕಾಣಿಸಿಕೊಂಡು ಮೋಡಿ ಮಾಡುತ್ತಾರೆ. ಕಳೆದ 10 ವರ್ಷಗಳಿಂದ ಅದು ಮುಂದುವರಿಯುತ್ತಲೇ ಬಂದಿದೆ. ಆದರೆ, ನಟ ದರ್ಶನ್ ಮಾತ್ರ ಈವರೆಗೂ ಕಿರುತೆರೆಯ ಯಾವ ಶೋಗಳಲ್ಲಿ ಕಾಣಿಸಿಕೊಂಡಿಲ್ಲ. ಅದೇ ಕಿರುತೆರೆಯ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಬಂದು ಹೋದ ಉದಾಹರಣೆಗಳು ಮಾತ್ರ ಇವೇ ಹೊರತು, ಶೋನ ಮುನ್ನಡೆಸುವ ನಿರೂಪಕರಾಗಿಯೋ, ತೀರ್ಪುಗಾರರಾಗಿಯೋ ದರ್ಶನ್ ಕಾಣಿಸಿಕೊಂಡಿಲ್ಲ.
ಕುತೂಹಲ ಸೃಷ್ಟಿಸಿದ ಫ್ರೋಮೋ
ಇತ್ತ ನಟ ಯಶ್ ಸಹ ಇತ್ತೀಚಿನ ದಿನಗಳಲ್ಲಿ ಸಿನಿಮಾ ಮತ್ತು ಕುಟುಂಬ ಈ ಎರಡಕ್ಕೇ ಹೆಚ್ಚಿನ ಸಮಯವನ್ನು ನೀಡುತ್ತಿದ್ದಾರೆ. ಅದರಾಚೆಗೆ ಬೇರೆ ಆಕ್ಟಿವಿಟಿಯಲ್ಲಿ ಅವರ ಇನ್‌ವಾಲ್ವ್‌ಮೆಂಟ್ ತುಂಬ ಕಡಿಮೆ. ಸಾರ್ವಜನಿಕವಾಗಿಯೂ ಯಶ್ ಕಾಣಿಸುವುದು ಅಪರೂಪ. ಸದ್ಯ ಟಾಕ್ಸಿಕ್ ಚಿತ್ರದ ಶೂಟಿಂಗ್ ಕೆಲಸಗಳಲ್ಲಿ ಯಶ್ ಬಿಜಿಯಾಗಿದ್ದಾರೆ. ಹೀಗೆ ಸದಾ ಬಿಜಿಯಾಗಿಯೇ ಇರುವ ಸುದೀಪ್, ದರ್ಶನ್ ಮತ್ತು ಯಶ್ ಅವರನ್ನು ಒಂದೇ ಶೋನಲ್ಲಿ ಕರೆತರುತ್ತಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಏಪ್ರಿಲ್ ಪೂಲ್ ಮಾಡೋ ಸಾಧ್ಯತೆ!?
ಇನ್ನೇನು ಏಪ್ರಿಲ್ ಬಂದೇ ಬಿಡ್ತು. ಹಾಗಾಗಿ ತನ್ನ ವೀಕ್ಷಕರಿಗೆ ಪೂಲ್ ಮಾಡುವ ಉದ್ದೇಶದಿಂದಲೂ ಈ ಶೋನ ಕಿರು ಝಲಕ್ ಅನ್ನು ಜೀ ಕನ್ನಡ ರಿಲೀಸ್ ಮಾಡಿರಬಹುದು ಎಂದೂ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಕಾಮೆಂಟ್ ಮಾಡುತ್ತಿದ್ದಾರೆ. "ಇದು ಅಸಾಧ್ಯ, ಆದ್ರೆ ಇದನ್ನು ಸಾಧ್ಯವಾಗಿಸಿದರೆ, ಆ ಶ್ರೇಯಸ್ಸು ಜೀ ಕನ್ನಡಕ್ಕೆ ಸಲ್ಲಲಿದೆ" ಎಂದು ಇನ್ನು ಕೆಲವರು ಕಾಮೆಂಟ್ ಮೂಲಕ ಉತ್ತರಿಸುತ್ತಿದ್ದಾರೆ. ಅದೆಷ್ಟೋ ಅಭಿಮಾನಿಗಳ ಕನಸಿದು ಎಂದೂ ಹೇಳುತ್ತಿದ್ದಾರೆ. "ಏನು ಸುದೀಪ್ ಮತ್ತೆ ದರ್ಶನ್ ಒಂದೇ ಶೋನಲ್ಲಿ ಇರ್ತಾರಾ? ನಂಬೋಕೆ ಆಗ್ತಿಲ್ಲ" ಎಂದೂ ಅಚ್ಚರಿ ಹೊರಹಾಕಿದ್ದಾರೆ ಫ್ಯಾನ್ಸ್. ಈ ಕೌತುಕಕ್ಕೆ ಇನ್ನೇನು ಏಪ್ರಿಲ್ 1ಕ್ಕೆ ಉತ್ತರ ಸಿಗಲಿದೆ.