ರೂಪವೇ ಶಾಪವಾದವಳ ಸುತ್ತ ಸುತ್ತಿಕೊಂಡ ಕೌಟುಂಬಿಕ ಕಥೆ ದೃಷ್ಟಿಬೊಟ್ಟು; ಹೊಸ ಧಾರಾವಾಹಿಯಲ್ಲಿ ರೌಡಿ ದತ್ತನಾಗಿ ವಿಜಯ್‌ ಸೂರ್ಯ ರಗಡ್‌ ಎಂಟ್ರಿ
ಕನ್ನಡ ಸುದ್ದಿ  /  ಮನರಂಜನೆ  /  ರೂಪವೇ ಶಾಪವಾದವಳ ಸುತ್ತ ಸುತ್ತಿಕೊಂಡ ಕೌಟುಂಬಿಕ ಕಥೆ ದೃಷ್ಟಿಬೊಟ್ಟು; ಹೊಸ ಧಾರಾವಾಹಿಯಲ್ಲಿ ರೌಡಿ ದತ್ತನಾಗಿ ವಿಜಯ್‌ ಸೂರ್ಯ ರಗಡ್‌ ಎಂಟ್ರಿ

ರೂಪವೇ ಶಾಪವಾದವಳ ಸುತ್ತ ಸುತ್ತಿಕೊಂಡ ಕೌಟುಂಬಿಕ ಕಥೆ ದೃಷ್ಟಿಬೊಟ್ಟು; ಹೊಸ ಧಾರಾವಾಹಿಯಲ್ಲಿ ರೌಡಿ ದತ್ತನಾಗಿ ವಿಜಯ್‌ ಸೂರ್ಯ ರಗಡ್‌ ಎಂಟ್ರಿ

ಕಲರ್ಸ್‌ ಕನ್ನಡವಾಹಿನಿಯಲ್ಲಿ ಸೆಪ್ಟೆಂಬರ್‌ 9ರಿಂದ ಹೊಸ ಧಾರಾವಾಹಿ ಶುರುವಾಗಲಿದೆ ಅದೇ ದೃಷ್ಟಿಬೊಟ್ಟು. ಈ ಸೀರಿಯಲ್‌ ಮೂಲಕ ಕಲರ್ಸ್‌ಗೆ ಮರಳಿದ್ದಾರೆ ನಟ ವಿಜಯ ಸೂರ್ಯ. ಇತ್ತೀಚೆಗಷ್ಟೇ ಸ್ಟಾರ್‌ ಸುವರ್ಣದಲ್ಲಿ ಇವರ ನಮ್ಮ ಲಚ್ಚಿ ಸೀರಿಯಲ್‌ ಮುಕ್ತಾಯವಾಗಿತ್ತು.

ದೃಷ್ಟಿಬೊಟ್ಟು ಸೀರಿಯಲ್‌ ದೃಶ್ಯ
ದೃಷ್ಟಿಬೊಟ್ಟು ಸೀರಿಯಲ್‌ ದೃಶ್ಯ (Image\ Colors Kannada)

Drishtibottu Kannada serial: ಸ್ಟಾರ್‌ ಸುವರ್ಣದಲ್ಲಿ ಕೆಲ ತಿಂಗಳ ಹಿಂದಷ್ಟೇ ಮುಕ್ತಾಯವಾದ ನಮ್ಮ ಲಚ್ಚಿ ಸೀರಿಯಲ್‌ನಲ್ಲಿ ನಟ ವಿಜಯ್‌ ಸೂರ್ಯ ಮುಖ್ಯಭೂಮಿಕೆಯಲ್ಲಿದ್ದರು. ಆ ಧಾರಾವಾಹಿ ಬಳಿಕ ಅವರ ಮುಂದಿನ ಸೀರಿಯಲ್‌ ಯಾವುದು ಎಂಬ ಸುಳಿವು ಸಿಕ್ಕಿರಲಿಲ್ಲ. ಇದೀಗ ಹೊಸ ಸೀರಿಯಲ್‌ ಜತೆಗೆ ಅವರ ಆಗಮನವಾಗುತ್ತಿದೆ. ದೃಷ್ಟಿಬೊಟ್ಟು ಸೀರಿಯಲ್‌ ಮೂಲಕ ಕಲರ್ಸ್‌ ಕನ್ನಡಕ್ಕೆ ಆಗಮಿಸಿದ್ದಾರೆ ವಿಜಯ್ ಸೂರ್ಯ.‌ ಬರೀ ಇವರಷ್ಟೇ ಅಲ್ಲ ಸ್ಯಾಂಡಲ್‌ವುಡ್‌ ಕಂಡ ಹಿರಿಯ ನಟಿ ಅಂಬಿಕಾ ಕೂಡ ಈ ಸೀರಿಯಲ್‌ ಮೂಲಕ ಮತ್ತೆ ಕನ್ನಡಕ್ಕೆ ಮರಳಿದ್ದಾರೆ.

2012ರಲ್ಲಿ ಸ್ಟಾರ್‌ ಸುವರ್ಣದಲ್ಲಿ ಪ್ರೀತಿಯಿಂದ ಸೀರಿಯಲ್‌ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿಕೊಟ್ಟಿದ್ದ ನಟಿ ಅಂಬಿಕಾ, ಅದಾದ ಮೇಲೆ ಸುದೀರ್ಘ 12 ವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ಆಗಮಿಸಿದ್ದಾರೆ. ದೃಷ್ಟಿಬೊಟ್ಟು ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಹಾಗಾದರೆ ಏನಿದು ಸೀರಿಯಲ್‌ ರೂಪವೇ ಶಾಪವಾದ ಹುಡುಗಿಯೊಬ್ಬಳ ಕಥೆಯೇ ದೃಷ್ಟಿಬೊಟ್ಟು. ವಿಜಯ್ ಸೂರ್ಯ ನಾಯಕನಾಗಿ ಕಾಣಿಸಿಕೊಂಡರೆ, ಅವರಿಗೆ ಜೋಡಿಯಾಗಿ ಅರ್ಪಿತಾ ಮೋಹಿತೆ ಎಂಬ ಹೊಸ ನಟಿ ಕಾಣಿಸಿಕೊಳ್ಳಲಿದ್ದಾರೆ.

ಏನಿದು ದೃಷ್ಟಿಬೊಟ್ಟಿನ ಕಥೆ

ಎರಡು ವಿಭಿನ್ನ ಕೌಟುಂಬಿಕ ಹಿನ್ನೆಲೆಗಳಿಂದ ಬಂದ ದೃಷ್ಟಿ ಎಂಬ ಹುಡುಗಿ ಹಾಗೂ ದತ್ತ ಶ್ರೀರಾಮ್ ಪಾಟೀಲ್ ಎಂಬ ಹುಡುಗನ ಬದುಕುಗಳು ಸಂಧಿಸಿದಾಗ ನಡೆಯುವ ಕುತೂಹಲಕರ ಕಥಾನಕವನ್ನು ‘ದೃಷ್ಟಿಬೊಟ್ಟು’ ಎಳೆಎಳೆಯಾಗಿ ಅನಾವರಣಗೊಳಿಸುತ್ತಾ ಹೋಗುತ್ತದೆ. ದೃಷ್ಟಿಯ ಪಾಲಿಗೆ ರೂಪ ಅನ್ನುವುದೇ ಶಾಪ. ತನ್ನ ರೂಪವನ್ನೇ ಬದಲಾಯಿಸಿಕೊಂಡು ಬದುಕುತ್ತಿರುವ ಅವಳಿಗೆ ತನ್ನ ಸೋದರಿಯನ್ನು ಮರಳಿ ಮನೆಗೆ ಕರೆತಂದು ಕುಟುಂಬವನ್ನು ಒಂದು ಮಾಡಬೇಕೆಂಬ ಗುರಿ.

ಮೊದಲು ಮೆಕಾನಿಕ್ ಆಗಿ ಈಗ ರೌಡಿಯಾಗಿರುವ ಕಥಾನಾಯಕ ದತ್ತ, ಸುಂದರವಾಗಿರುವ ಹೆಣ್ಣುಗಳನ್ನ ಕಂಡರೆ ಉರಿದು ಬೀಳುತ್ತಾನೆ. ದುರುಳ ಪೊಲೀಸನೊಬ್ಬನ ಕೈಗೆ ಸಿಕ್ಕ ದೃಷ್ಟಿ ಅವನ ಕಿರುಕುಳಕ್ಕೆ ಸಿಕ್ಕು ಒದ್ದಾಡುತ್ತಿರುವಾಗ ದತ್ತನ ಪ್ರವೇಶವಾಗುತ್ತದೆ. ಆಮೇಲೆ ಕತೆ ಹಲವು ಊಹಿಸಲಾಗದ ತಿರುವುಗಳನ್ನು ತೆಗೆದುಕೊಳ‌್ಳುತ್ತಾ ಮುಂದೆ ಸಾಗುತ್ತದೆ. ದೃಷ್ಟಿಗೆ ತನ್ನ ಸೋದರಿ ಸಿಕ್ಕಳೆ? ವಿಧಿ ದತ್ತ ಮತ್ತು ದೃಷ್ಟಿಯನ್ನು ಒಂದು ಮಾಡುವುದೇ? ದತ್ತನನ್ನು ಅವನ ದುಷ್ಟ ಸೋದರಿಯರಿಂದ ದೃಷ್ಟಿ ಕಾಪಾಡಬಲ್ಲಳೆ? ಹೀಗೆ ಸಾಗಲಿದೆ ಕಥೆ.

ಪ್ರಸಾರ ಯಾವಾಗಿನಿಂದ?

ಈ ಧಾರಾವಾಹಿಯ ಇನ್ನುಳಿದ ತಾರಾಗಣದಲ್ಲಿ ದೀಪಶ್ರೀ, ರಾಘು ಶಿವಮೊಗ್ಗ, ಅಶೋಕ್ ಹೆಗ್ಡೆ ಸೇರಿದಂತೆ ಅನೇಕ ಕಿರಿ ಹಿರಿ ನಟ ನಟಿಯರು ನಟಿಸುತ್ತಿದ್ದಾರೆ. ಈ ಸೀರಿಯಲ್‌ ಬಗ್ಗೆ ವಾಹಿನಿಯ ಮುಖ್ಯಸ್ಥ ಪ್ರಶಾಂತ್‌ ನಾಯಕ್‌ ಪ್ರತಿಕ್ರಿಯಿಸಿದ್ದಾರೆ. ಈ ಧಾರಾವಾಹಿಯ ಪ್ರತಿಯೊಂದು ಪಾತ್ರವೂ ವೀಕ್ಷಕರ ಮನಗೆಲ್ಲುವಂತಿದೆ. ಅತ್ಯಾಧುನಿಕ ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಣ ಮಾಡಿರುವುದು ‘ದೃಷ್ಟಿ ಬೊಟ್ಟು’ ಧಾರಾವಾಹಿಯ ಮತ್ತೊಂದು ಹೆಗ್ಗಳಿಕೆ ಎಂದಿದ್ದಾರೆ. ಈ ಧಾರಾವಾಹಿ ಇದೇ ಸೆಪ್ಟೆಂಬರ್ 9ರಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿ ಸಂಜೆ 6:30ಕ್ಕೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಲಿದೆ. ಜಿಯೊ ಸಿನಿಮಾ ಅಪ್ಲಿಕೇಷನಲ್ಲಿಯೂ ‘ದೃಷ್ಟಿಬೊಟ್ಟು’ ಧಾರಾವಾಹಿ ವೀಕ್ಷಿಸಬಹುದು.

Whats_app_banner