Kannada Serial TRP: ಹೊಸ ಸೀರಿಯಲ್ ಅಣ್ಣಯ್ಯನಿಂದಾಗಿ ನಂಬರ್ 1 ಪಟ್ಟ ಕಳೆದುಕೊಂಡು ಪಾತಾಳಕ್ಕೆ ಕುಸಿದ ಪುಟ್ಟಕ್ಕನ ಮಕ್ಕಳು!
ಕಿರುತೆರೆಯ ಟಿಆರ್‌ಪಿಯಲ್ಲಿ ಸದಾ ಅಗ್ರಸ್ಥಾನದಲ್ಲಿಯೇ ಇರುತ್ತಿದ್ದ ಪುಟ್ಟಕ್ಕನ ಮಕ್ಕಳು ಸೀರಿಯಲ್, ಇತ್ತೀಚಿನ ಒಂದಷ್ಟು ಬದಲಾವಣೆಗಳಿಂದ ಪಾತಾಳಕ್ಕೆ ಕುಸಿದಿದೆ. ಹಾಗಾದರೆ ಈ ವಾರ ಪುಟ್ಟಕ್ಕನಿಗೆ ಸಿಕ್ಕ ಟಿಆರ್‌ಪಿ ಎಷ್ಟು, ನಂಬರ್ 1 ಸ್ಥಾನದಲ್ಲಿರುವ ಸೀರಿಯಲ್ ಯಾವುದು, ಹೊಸ ಸೀರಿಯಲ್ ಅಣ್ಣಯ್ಯನಿಗೆ ವೀಕ್ಷಕರ ಪ್ರತಿಕ್ರಿಯೆ ಹೇಗಿತ್ತು? ಇಲ್ಲಿದೆ ವಿವರ.
Kannada Serial TRP: ಕನ್ನಡ ಕಿರುತೆರೆಯಲ್ಲಿ ನಿತ್ಯ ಏನಿಲ್ಲ ಅಂದರೂ 50 ಸೀರಿಯಲ್‌ಗಳು ಪ್ರಸಾರ ಕಾಣುತ್ತವೆ. ಅದರಲ್ಲಿ ಪ್ರೇಕ್ಷಕರನ್ನು ಸೆಳೆದು, ಹಿಡಿದು ಕೂರಿಸುವ ಸೀರಿಯಲ್‌ಗಳು ಹತ್ತೋ ಇಪತ್ತೋ ಇರಬಹುದು. ಆದರೆ, ವಾರದ ಟಿಆರ್‌ಪಿ ಅಂಕಿ ಅಂಶ ಹೊರಬಿದ್ದರೆ, ಸೀರಿಯಲ್‌ಗಳ ಟಿಆರ್‌ಪಿ ಜಾತಕವೇ ಹೊರಬೀಳುತ್ತದೆ. ಗ್ರಾಮೀಣ ಭಾಗದಲ್ಲಿ ಯಾರು ಮೊದಲು, ಅರ್ಬನ್ ಏರಿಯಾದಲ್ಲಿ ಯಾರು ನಂಬರ್ 1 ಹೀಗೆ ಎಲ್ಲ ಲೆಕ್ಕವೂ ಸಿಕ್ಕಿ ಬಿಡುತ್ತದೆ. ಹೀಗಿರುವಾಗ ಕಳೆದ ಎರಡೂವರೆ ವರ್ಷದಿಂದ ಮೊದಲ ಸ್ಥಾನದಲ್ಲಿಯೇ ಗಟ್ಟಿಯಾಗಿ ನಿಲ್ಲುತ್ತಿದ್ದ ಪುಟ್ಟಕ್ಕನ ಮಕ್ಕಳು ಸೀರಿಯಲ್ ಇದೀಗ ನೆಲಕಚ್ಚಿದೆ. ಅದಕ್ಕೆ ಕಾರಣ; ಸ್ಲಾಟ್ ಬದಲಾವಣೆ!
ಹೌದು, ಈ ಮೊದಲು ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದ ವರೆಗೆ ಪ್ರತಿ ರಾತ್ರಿ 7:30ಕ್ಕೆ ಪ್ರಸಾರ ಕಾಣುತ್ತಿದ್ದ ಪುಟ್ಟಕ್ಕನ ಮಕ್ಕಳು ಸೀರಿಯಲ್, ಕಳೆದ ಒಂದು ವಾರದಿಂದ ಬದಲಿ ಸಮಯಕ್ಕೆ ಪ್ರಸಾರ ಕಾಣುತ್ತಿದೆ. ಹೊಸ ಸೀರಿಯಲ್ ಅಣ್ಣಯ್ಯನಿಗಾಗಿ ತನ್ನ 7;30ರ ಸ್ಲಾಟ್ ಬಿಟ್ಟುಕೊಟ್ಟು, ಒಂದು ಗಂಟೆ ಹಿಂದೆ ಹೋಗಿದೆ. ಅಂದರೆ 6;30ಕ್ಕೆ ಪ್ರಸಾರವಾಗುತ್ತಿದೆ. ಈ ಒಂದು ಬದಲಾವಣೆಯಿಂದ ಇಲ್ಲಿವರೆಗೂ ಸದಾ ಮೊದಲ ಸ್ಥಾನದಲ್ಲಿಯೇ, ಯಾರೂ ಟಚ್ ಮಾಡದ ರೀತಿಯಲ್ಲಿ ಒಳ್ಳೆಯ ಟಿಆರ್‌ಪಿ ಪಡೆದುಕೊಳ್ಳುತ್ತಿದ್ದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಇದೀಗ ಪಾತಾಳಕ್ಕೆ ಕುಸಿದಿದೆ. ಇದಕ್ಕೆ ನೇರ ಕಾರಣ ಅಣ್ಣಯ್ಯ ಸೀರಿಯಲ್ ಎನ್ನುತ್ತಿದ್ದಾರೆ ವೀಕ್ಷಕರು.
ಅಣ್ಣಯ್ಯ ಸೀರಿಯಲ್‌ಗೆ ಸಿಕ್ಕ ಟಿಆರ್‌ಪಿ ಎಷ್ಟು?
ಬಹು ನಿರೀಕ್ಷೆಗಳೊಂದಿಗೆ ಪ್ರಸಾರ ಕಂಡ ಹೊಸ ಸೀರಿಯಲ್ ಅಣ್ಣಯ್ಯ, ಅದೇ ನಿರೀಕ್ಷೆಗಳ ಹಾದಿಯಲ್ಲಿಯೇ ಮೊದಲ ವಾರ ಒಳ್ಳೆಯ ಟಿಆರ್‌ಪಿಯನ್ನೇ ಪಡೆದುಕೊಂಡಿದೆ. ಹಾಗಂತ ಮೊದಲ ಸ್ಥಾನದಲ್ಲಿಲ್ಲ. ಬದಲಿಗೆ 7.0 ಟಿಆರ್‌ಪಿಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಹಾಗಾದರೆ ಮೊದಲ ಸ್ಥಾನ ಪಡೆದ ಸೀರಿಯಲ್ ಯಾವುದು? ಈ ಮೊದಲು ಪುಟ್ಟಕ್ಕನ ಮಕ್ಕಳು ಸೀರಿಯಲ್‌ಗೆ ಕೆಲವು ಸಲ ಟಕ್ಕರ್ ಕೊಟ್ಟಿದ್ದ ಲಕ್ಷ್ಮೀ ನಿವಾಸ ಸೀರಿಯಲ್, ಇದೀಗ ಮೊದಲ ಸ್ಥಾನಕ್ಕೆ ಜಿಗಿದಿದೆ. 7.3 ಟಿಆರ್‌ಪಿಯೊಂದಿಗೆ ಅಗ್ರಸ್ಥಾನಕ್ಕೇರಿದೆ. ಹಾಗಾದರೆ ಪುಟ್ಟಕ್ಕ ಎಲ್ಲಿದ್ದಾಳೆ?
ಇನ್ನುಳಿದ ಸೀರಿಯಲ್‌ಗಳ ಟಿಆರ್‌ಪಿ ಲೆಕ್ಕಾಚಾರ ಹೇಗಿದೆ?
ಟಿಆರ್‌ಪಿ ಲಿಸ್ಟ್‌ನಲ್ಲಿ ಟಾಪ್ 10ರಲ್ಲಿ ಯಾವೆಲ್ಲ ಸೀರಿಯಲ್‌ಗಳಿವೆ ಎಂಬುದನ್ನು ನೋಡುವುದಾದರೆ, ಮೊದಲ ಸ್ಥಾನದಲ್ಲಿ ಲಕ್ಷ್ಮೀ ನಿವಾಸ, ಎರಡನೇ ಸ್ಥಾನದಲ್ಲಿ ಅಣ್ಣಯ್ಯ ಮತ್ತು 6.9 ಟಿಆರ್‌ಪಿ ಪಡೆದ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಮೂರನೇ ಸ್ಥಾನದಲ್ಲಿದೆ. ಇನ್ನು ಕಲರ್ಸ್ ಕನ್ನಡದ ರಾಮಾಚಾರಿ ಧಾರಾವಾಹಿ 6.4 ಟಿಆರ್‌ಪಿ ಪಡೆದು ನಾಲ್ಕನೇ ಸ್ಥಾನದಲ್ಲಿದ್ದರೆ, ಲಕ್ಷ್ಮೀ ಬಾರಮ್ಮ ಧಾರಾವಾಹಿ 6.3 ನಂಬರ್ ಪಡೆದು ಐದನೇ ಸ್ಥಾನದಲ್ಲಿದೆ. ವೈಷ್ಣವಿ ಗೌಡ ಮತ್ತು ಗಗನ್ ಚಿನ್ನಪ್ಪ ಜೋಡಿಯ ಸೀತಾ ರಾಮ ಧಾರಾವಾಹಿ 6.2 ಟಿಆರ್‌ಪಿ ಪಡೆದು ಆರನೇ ಸ್ಥಾನದಲ್ಲಿದೆ. ಛಾಯಾ ಸಿಂಗ್ ಮತ್ತು ರಾಜೇಶ್ ನಟರಂಗ ನಟನೆಯ ಅಮೃತಧಾರೆ ಸೀರಿಯಲ್ 6.0 ಟಿಆರ್‌ಪಿ ಪಡೆದು ಏಳನೇ ಸ್ಥಾನದಲ್ಲಿದೆ. ಹಾಗಾದರೆ ಪುಟ್ಟಕ್ಕನ ಮಕ್ಕಳಿಗೆ ಸಿಕ್ಕ ಟಿಆರ್‌ಪಿ ಎಷ್ಟು?
ಪಾತಾಳಕ್ಕೆ ಕುಸಿದ ಪುಟ್ಟಕ್ಕನ ಮಕ್ಕಳು ಸೀರಿಯಲ್
ಪುಟ್ಟಕ್ಕನ ಮಕ್ಕಳು ಸೀರಿಯಲ್ ಟಿಆರ್‌ಪಿಯಲ್ಲಿ ಹೇಗಿದ್ದರೂ ಟಾಪ್ ಇದೆ, ಪ್ರಸಾರ ಸಮಯ ಬದಲಿಸಿದರೆ ಸಮಸ್ಯೆ ಬಾರದು ಎಂದು ಲೆಕ್ಕ ಹಾಕಿದ್ದ ಜೀ ಕನ್ನಡ ವಾಹಿನಿಯ ಲೆಕ್ಕಾಚಾರ ಇದೀಗ ತಲೆ ಕೆಳಗಾದಂತಾಗಿದೆ. ಸೋಷಿಯಲ್ ಮೀಡಿಯಾದಲ್ಲಿಯೂ ಈ ಸ್ಲಾಟ್ ಬದಲಾವಣೆಯ ಸಮಸ್ಯೆಯಿಂದ ಸೀರಿಯಲ್ ಟಿಆರ್‌ಪಿ ಕುಸಿಯಲಿದೆ ಎಂದೇ ವೀಕ್ಷಕರು ಅಂದಾಜಿಸಿದ್ದರು. ಇದೀಗ ಆ ಊಹೆ ಸರಿಯಾಗಿದೆ. ಮೊದಲ ಸ್ಥಾನದಲ್ಲಿದ್ದ ಪುಟ್ಟಕ್ಕನ ಮಕ್ಕಳು ಇದೀಗ 5.2 ಟಿಆರ್‌ಪಿ ಪಡೆಯುವ ಮೂಲಕ ಎಂಟನೇ ಸ್ಥಾನದಲ್ಲಿದೆ. ಇದರ ನಂತರ ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮೀ, ಕರಿಮಣಿ ಧಾರಾವಾಹಿಗಳಿವೆ.
ವಿಭಾಗ