Puttakkana Makkalu: ಸತ್ತ ಸ್ನೇಹಾ ಮೇಲೆ ಭ್ರಷ್ಟಾಚಾರ ಆರೋಪ; ಪುಟ್ಟಕ್ಕನ ಜತೆ ಧರಣಿಗೆ ಕೂತ ‘ಪುಟ್ನಂಜ’ ಕ್ರೇಜಿಸ್ಟಾರ್ ರವಿಚಂದ್ರನ್?
Puttakkana Makkalu Serial: ಪುಟ್ಟಕ್ಕನ ಮಕ್ಕಳು ಧಾರಾವಾಹಿ ಹೊಸ ಹೊರಳಿಗೆ ವಾಲಿದೆ. ಸತ್ತ ಸ್ನೇಹಾಳ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಇದೆಲ್ಲ ಸುಳ್ಳೆಂದು ಕುಟುಂಬದವರು ಪ್ರತಿಭಟನೆಗೆ ಮುಂದಾಗಿದ್ದಾರೆ. ಇದೇ ಧರಣಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಸಹ ಕೈ ಜೋಡಿಸಿದ್ದಾರೆ.

Puttakkana Makkalu Serial: ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ, ಒಂದು ಕಾಲದ ನಂಬರ್ 1 ಧಾರಾವಾಹಿ ಎಂದರೆ ಅದು ಪುಟ್ಟಕ್ಕನ ಮಕ್ಕಳು. ಟಿಆರ್‌ಪಿಯಲ್ಲಿ ವರ್ಷಗಟ್ಟಲೇ ಅಗ್ರಸ್ಥಾನದಲ್ಲಿ ಕೂತು, ಇಡೀ ಕರುನಾಡ ಮನೆ ಮನ ಗೆದ್ದಿದ್ದು ಈ ಸೀರಿಯಲ್. ಹಿರಿಯ ನಟಿ ಉಮಾಶ್ರೀ , ಮಂಜು ಭಾಷಿಣಿ ಸೇರಿ ಹತ್ತು ಹಲವು ಕಲಾವಿದರು ನಟಿಸುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ, ಕಿರುತೆರೆ ಲೋಕದಲ್ಲಿ ಒಂದಷ್ಟು ಹೊಸ ಹೊಸ ದಾಖಲೆಗಳನ್ನೂ ಬರೆದಿದೆ. ಇಂತಿಪ್ಪ ಸೀರಿಯಲ್‌ನಲ್ಲೀಗ, ಸ್ಟಾರ್ ನಾಯಕನ ಆಗಮನವಾಗಿದೆ!
ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಅಮ್ಮನ ಕನಸನ್ನು ನನಸು ಮಾಡಿದ್ದಳು ಮಗಳು ಸ್ನೇಹಾ. ಕಷ್ಟಗಳನ್ನು ಎದುರಿಸಿ ಐಎಎಸ್ ಪರೀಕ್ಷೆ ಬರೆದು ಡಿಸಿ ಆಗಿದ್ದಳು ಸ್ನೇಹಾ. ಸ್ನೇಹಾಳ ಈ ಸಾಧನೆಗೆ ಮನೆ ಮಂದಿ ಮಾತ್ರವಲ್ಲ ಊರವರೂ ಮೆಚ್ಚಿ ಕುಣಿದಾಡಿದ್ದರು. ಅಧಿಕಾರ ಸಿಕ್ಕ ಕೆಲವೇ ದಿನಗಳಲ್ಲಿ ಸ್ನೇಹಾ ಭೀಕರ ಅಪಘಾತದಲ್ಲಿ ಸಾವನ್ನಪ್ಪುತ್ತಾಳೆ. ಆ ಸಾವಿನ ಸುದ್ದಿ ಪುಟ್ಟಕ್ಕನ ಜತೆಗೆ ಇಡೀ ಗ್ರಾಮಕ್ಕೂ ಬರಸಿಡಿಲು ಬಡಿದಂತಾಗುತ್ತದೆ. ಕಣ್ಣೀರಿನಲ್ಲಿಯೇ ಮಗಳಿಗೆ ಶಾಶ್ವತ ವಿದಾಯ ಹೇಳುತ್ತಾಳೆ ಪುಟ್ಟಕ್ಕ.
ಸ್ನೇಹಾ ವಿರುದ್ಧ ಭ್ರಷ್ಟಾಚಾರ ಆರೋಪ
ಹೀಗೆ ಸ್ನೇಹಾ ಪಾತ್ರ ಕಣ್ಮುಚ್ಚುತ್ತಿದ್ದಂತೆ, ಕಿರುತೆರೆ ವೀಕ್ಷಕರಿಗೂ ಈ ಸಾವಿನ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ನಿರ್ದೇಶಕರ ನಡೆಯ ಬಗ್ಗೆಯೂ ವಿರೋಧ ವ್ಯಕ್ತಪಡಿಸಿದ್ದರು. ಇನ್ಮೇಲೆ ಸೀರಿಯಲ್ ನೋಡಲ್ಲ ಎಂದೇ ಕಾಮೆಂಟ್ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಇದೇ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಹೊಸ ಟ್ವಿಸ್ಟ್ ಎದುರಾಗಿದೆ. ಸತ್ತ ಸ್ನೇಹಾ ಮೇಲೆಯೇ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಧಿಕ್ಕಾರಗಳು ಮೊಳಗುತ್ತಿವೆ. ಸ್ನೇಹಾಳ ಪ್ರತಿಕೃತಿ ಧಹ ಮಾಡಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಸ್ನೇಹಾ ಲಂಚ ಪಡೆದಿದ್ದಾಳೆ ಎಂಬ ಆರೋಪ ಜೋರಾಗುತ್ತಿದ್ದಂತೆ, ಸಾವಿನ ಬಳಿಕ ನೀಡಲಾದ ರಾಷ್ಟ್ರ ಧ್ವಜವನ್ನೂ ಪೊಲೀಸರು ಮರಳಿ ಪಡೆದಿದ್ದಾರೆ.
ಪುಟ್ಮಲ್ಲಿಗೆ ಸಾಥ್ ನೀಡಿದ ಪುಟ್ನಂಜ
ಹೀಗೆ ಸಾಗುತ್ತಿರುವ ಕಥೆಯಲ್ಲಿ, ಇದೀಗ ಮತ್ತೊಂದು ರೋಚಕ ಟ್ವಿಸ್ಟ್ ಎದುರಾಗಿದೆ. ಸ್ನೇಹಾ ಒಳ್ಳೆಯವಳು, ಆಕೆ ಯಾವ ಭ್ರಷ್ಟಾಚಾರ ಮಾಡಿಲ್ಲ ಎಂದು ಆಕೆಯ ಕುಟುಂಬ ಧರಣಿ ನಡೆಸುತ್ತಿದೆ. ಪುಟ್ಟಕ್ಕನ ಕುಟುಂಬದ ಜತೆಗೆ "ಬೇಕೇ ಬೇಕು ನ್ಯಾಯ ಬೇಕು" ಅನ್ನೋ ಬೋರ್ಡ್ ಹಿಡಿದು ಊರ ಜನರೂ ಧರಣಿಗೆ ಕೂತಿದ್ದಾರೆ. ಈ ಧರಣಿಗೆ ಇದೀಗ ದೊಡ್ಡ ನಾಯಕನ ಆಗಮನವಾಗಿದೆ. ಅಂದರೆ, ಪುಟ್ಟಕ್ಕನ ಹೋರಾಟಕ್ಕೆ ಕಿಚ್ಚು ಹಚ್ಚುವ ಸಲುವಾಗಿ, ಸರ್ಕಾರದ ಕಣ್ಣು ತೆರೆಸುವ ಸಲುವಾಗಿ ಕ್ರೇಜಿಸ್ಟಾರ್ ರವಿಚಂದ್ರನ್, ಪುಟ್ಟಕ್ಕನ ಜತೆ ಕೈ ಜೋಡಿಸಿದ್ದಾರೆ.
ಜೀ ಕನ್ನಡ ವಾಹಿನಿ ತನ್ನ ಸೋಷಿಯಲ್ ಮೀಡಿಯಾ ಪುಟದಲ್ಲಿ ಪುಟ್ಟಕ್ಕನ ಹೋರಾಟದ ಫೋಟೋವೊಂದನ್ನು ಶೇರ್ ಮಾಡಿದೆ. ಪುಟ್ಟಕ್ಕನ ಹೋರಾಟಕ್ಕೆ ಕೈಜೋಡಿಸಿದ ನಾಯಕ ಯಾರು Guess ಮಾಡಿ! ಎಂದಿದೆ. ಹೀಗೆ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ, ತರಹೇವಾರಿ ಉತ್ತರಗಳು ಹರಿದುಬಂದಿವೆ. ಆ ಪೈಕಿ ಬಹುತೇಕರು ಅವರು ಬೇರಾರು ಅಲ್ಲ ಕ್ರೇಜಿಸ್ಟಾರ್ ರವಿಚಂದ್ರನ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯ ಸುಬ್ಬು ಇರಬಹುದು ಎಂದೂ ಗೆಸ್ ಮಾಡಿದ್ದಾರೆ. ಇನ್ನೇನು ಮುಂದಿನ ಸಂಚಿಕೆಯಲ್ಲಿ ಇದೆಲ್ಲದಕ್ಕೂ ಉತ್ತರ ಸಿಗಲಿದೆ.
ಟಿಆರ್‌ಪಿಯಲ್ಲಿ ಕುಸಿದ ಪುಟ್ಟಕ್ಕ
ಪುಟ್ಟಕ್ಕನ ಮಕ್ಕಳು ಸೀರಿಯಲ್ ಈಗ ಮೊದಲಿನಂತೆ ಬರುತ್ತಿಲ್ಲ ಎಂಬುದು ವೀಕ್ಷಕರ ವಾದ. ನೋಡುಗ ವರ್ಗವನ್ನೂ ಕಡಿಮೆ ಮಾಡಿಕೊಂಡಿದೆ. ಅದಕ್ಕೆ ಸಾಕ್ಷ್ಯ ಎಂಬಂತೆ, ವಾರದ ಟಿಆರ್‌ಪಿಯಲ್ಲಿ ದಿನದಿಂದ ದಿನಕ್ಕೆ ಕುಸಿತ ಕಾಣುತ್ತಿದೆ. 5ನೇ ವಾರದ ಟಿಆರ್‌ಪಿಯಲ್ಲಿ ಕೇವಲ 4.7 ಟಿಆರ್‌ಪಿ ಪಡೆದಿದೆ ಈ ಸೀರಿಯಲ್. ಶತಾಯ ಗತಾಯ ಈ ಧಾರಾವಾಹಿಯನ್ನು ಮತ್ತೆ ಹಳೇ ಲಯಕ್ಕೆ ತರಬೇಕು ಎಂಬ ಕಾರಣಕ್ಕೆ, ಅತಿಥಿ ಪಾತ್ರಗಳಲ್ಲಿ ಸ್ಟಾರ್ ನಟರನ್ನು ಕರೆತರುತ್ತಿರಬಹುದೇ ಎಂಬ ಪ್ರಶ್ನೆಯೂ ವೀಕ್ಷಕ ವಲಯದಲ್ಲಿದೆ.

ವಿಭಾಗ