ಖ್ಯಾತ ಕಿರುತೆರೆ ನಿರ್ದೇಶಕ ರಾಮ್‌ಜಿ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಪುಕಾರು! ಸೈಬರ್ ಠಾಣೆಗೆ ದೂರು ನೀಡಿದ ರಾಮಾಚಾರಿ ಡೈರೆಕ್ಟರ್
ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಸುಳ್ಳು ಸುದ್ದಿಯ ಮೂಲಕ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಕನ್ನಡ ಕಿರುತೆರೆ ನಿರ್ದೇಶಕ ಕೆ. ಎಸ್ ರಾಮ್‌ಜಿ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಕೇಸ್ ದಾಖಲಾಗಿದ್ದು, ಸುಳ್ಳು ಪೋಸ್ಟ್ ಹರಡಿದವರ ಪತ್ತೆ ಕಾರ್ಯ ಮುಂದುವರಿದಿದೆ.

Kannada Television: ಕನ್ನಡ ಕಿರುತೆರೆಯಲ್ಲಿ ತಮ್ಮ ಸೀರಿಯಲ್‌ಗಳಿಂದಲೇ ಮೋಡಿ ಮಾಡಿದ, ಹತ್ತಾರು ಸೀರಿಯಲ್ ನಿರ್ಮಾಣ, ನಿರ್ದೇಶನ ಮಾಡಿದ್ದ ಕೆ. ಎಸ್ ರಾಮ್‌ಜಿ ವಿರುದ್ಧ ಇದೀಗ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸ್ವತಃ ಆ ಆರೋಪ ಸುಳ್ಳು ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಕೇಳಿ ಬಂದ ಆರೋಪವಾದರೂ ಏನು? ಇಲ್ಲಿದೆ ವಿವರ.
ಕನ್ನಡ ಕಿರುತೆರೆಯಲ್ಲಿ ಬ್ಲಾಕ್ ಬಸ್ಟರ್ ಧಾರಾವಾಹಿಗಳ ಸರದಾರ ಎಂದೇ ಕರೆಸಿಕೊಂಡಿದ್ದಾರೆ ಕೆ. ಎಸ್ ರಾಮ್‌ಜಿ. 'ಪುಟ್ಟಗೌರಿ ಮದುವೆ', 'ನಾಗಿಣಿ 2', 'ಗೀತಾ', 'ರಾಮಾಚಾರಿ' ಸೇರಿ ಹಲವು ಸೀರಿಯಲ್‌ಗಳನ್ನು ನೀಡಿದ್ದಾರೆ ರಾಮ್‌ಜಿ. ಇದೀಗ ಇದೇ ರಾಮ್‌ಜಿ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದ ಹಿನ್ನೆಲೆಯಲ್ಲಿ, ಅಪಪ್ರಚಾರ ಮತ್ತು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ದೂರಿರುವ ಅವರು, ಬೆಂಗಳೂರಿನ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಸೋಷಿಯಲ್ ಮೀಡಿಯಾದಲ್ಲಿ ರಾಮ್‌ಜಿ ವಿರುದ್ಧ, "ಯುವತಿಯರಿಗೆ ಕೆ ಎಸ್ ರಾಮ್‌ಜಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ, ಅವಕಾಶ ಕೊಡಿಸುತ್ತೇನೆ ಎಂದು ನಂಬಿಸಿ, ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ" ಎಂಬ ಪೋಸ್ಟ್ ಹರಿದಾಡುತ್ತಿವೆ.
ಈ ಪೋಸ್ಟ್‌ಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ ಎಂಬ ಕಾಮೆಂಟ್‌ಗಳೂ ಸಂದಾಯವಾಗುತ್ತಿವೆ. ಇತ್ತ ಈ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳನ್ನು ಗಂಭೀರವಾಗಿ ಪರಿಗಣಿಸಿದ ರಾಮ್‌ಜಿ, ತಮ್ಮ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಯ ಮೂಲಕ ಮಾನಹಾನಿ ಮತ್ತು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಕೂಡಲೇ ಪೋಸ್ಟ್ ಹಂಚಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ನಮೂದಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ‘Ex posing KS Ramji’ ಎಂಬ ಖಾತೆ ತೆರೆದು, ಆ ಖಾತೆಯ ಮೂಲಕ ರಾಮ್‌ಜಿ ವಿರುದ್ಧ ಒಂದಷ್ಟು ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ. ಆ ಪೋಸ್ಟ್‌ಗಳು ಹೀಗಿವೆ.
ರಾಮ್ ಜಿ ವಿರುದ್ಧದ Insta ಪೋಸ್ಟ್‌ಗಳು
- ನಟನೆಯಲ್ಲಿ ಅವಕಾಶ ಕೊಡುತ್ತೇನೆ ಎಂದು ನಿರ್ದೇಶಕ ಕೆ. ಎಸ್ ರಾಮ್‌ಜಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ.
- ಕಾರಿನೊಳಗೆ ಸಂಭೋಗಿಸಲು ಮಧ್ಯರಾತ್ರಿಯಲ್ಲಿ ಹುಡುಗಿಯರನ್ನು ಕರೆಯುವುದು
- Boycott KS Ramji ಕನ್ನಡ ಧಾರಾವಾಹಿಗಳ ನಿರ್ದೇಶಕ ಕೆ ಎಸ್ ರಾಮ್ ಜಿ ಹುಡುಗಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ
- ಅವನು ಮತ್ತು ಅವನ ಸಹೋದ್ಯೋಗಿಗಳು ಅವಕಾಶದ ಹೆಸರಿನಲ್ಲಿ ಹುಡುಗಿಯರನ್ನು ತಪ್ಪಾಗಿ ಬಳಸಿಕೊಳ್ಳುತ್ತಿದ್ದಾರೆ.
- ನೀವು ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಲು ಬಯಸಿದರೆ ನಾನು ಕರೆದಾಗಲೆಲ್ಲ ನೀವು ಬರಬೇಕು
- ಮಧ್ಯರಾತ್ರಿಲಿ ವಿಡಿಯೋ ಕಾಲ್ ಮಾಡಿ ಹುಡುಗಿಯರ ಖಾಸಗಿ ಭಾಗಗಳನ್ನು ತೋರಿಸಲು ಹೇಳುತ್ತಿದ್ದ.
ಹೀಗೆ exposing_ks_ram_ji ಇನ್‌ಸ್ಟಾ ಖಾತೆಯಿಂದ ಒಂದಷ್ಟು ಪೋಸ್ಟ್ ಮಾಡಲಾಗಿದೆ. ಈಗ ಇದೇ ಪೋಸ್ಟ್‌ಗಳ ವಿರುದ್ಧ, ತಮ್ಮ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
