ಬಿಗ್‌ಬಾಸ್ ಕನ್ನಡ 11: ಕ್ಯಾಪ್ಟನ್ ರೂಮ್ ಗೋಡೆ, ಮಂಚ ನಿಮ್ಮ ಬಗ್ಗೆ ಬೇಸರ ಮಾಡಿಕೊಂಡಿವೆ; ಹನುಮಂತನ ಜೊತೆ ಬಿಗ್‌ಬಾಸ್ ಫನ್ನಿ ಮಾತುಕತೆ
Bigg Boss Kannada 11: ಬಿಗ್‌ಬಾಸ್ ಕನ್ನಡ 11 ಗುರುವಾರದ ಎಪಿಸೋಡ್‌ನಲ್ಲಿ ಬಿಗ್‌ಬಾಸ್, ಹನುಮಂತು ಜೊತೆ ಫನ್ನಿಯಾಗಿ ಮಾತನಾಡುತ್ತಾರೆ. ನೀವು ಕ್ಯಾಪ್ಟನ್ ರೂಮ್ ಬಳಸದಿದ್ದಕ್ಕೆ ಸ್ವತಃ ಕ್ಯಾಪ್ಟನ್ ರೂಮ್ ಗೋಡೆ, ಮಂಚ ನಿಮ್ಮ ಬಗ್ಗೆ ಬೇಸರ ಮಾಡಿಕೊಂಡಿವೆ ಎಂದು ಜೋಕ್ ಮಾಡುತ್ತಾರೆ. ಈ ಮಾತುಕತೆ ನೋಡುಗರಿಗೆ ಬಹಳ ಖುಷಿ ನೀಡಿದೆ.
Bigg Boss Kannada 11: ಬಿಗ್‌ಬಾಸ್ ಕನ್ನಡ 11 ಐದನೇ ವಾರ ಮುಗಿಯತ್ತಾ ಬಂದಿದೆ. ಮನೆಯಲ್ಲಿ ಸ್ಪರ್ಧಿಗಳ ನಡುವಿನ ಅಂತರ ಸ್ನೇಹ ಎರಡೂ ಹೆಚ್ಚಾಗಿದೆ. ಟಾಸ್ಕ್‌ನಲ್ಲಿ ಗೆದ್ದರೆ ಮಾತ್ರ ಇಲ್ಲಿ ಮುಂದುವರೆಯಲು ಸಾಧ್ಯ ಎಂದು ಸ್ಪರ್ಧಿಗಳು ನಾನಾ ನೀನಾ ಎನ್ನುವಂತೆ ಸ್ಪರ್ಧೆಗೆ ಇಳಿಯುತ್ತಾರೆ. ಆದರೆ ಆ ಭರದಲ್ಲಿ ತಮ್ಮ ಕಾಳಜಿ ಮಾಡುವುದನ್ನು ಮರೆಯುತ್ತಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸಾದ ಗೋಲ್ಡ್ ಸುರೇಶ್
ಟಾಸ್ಕ್ ಸಮಯದಲ್ಲಿ ಪ್ರತಿ ಸ್ಪರ್ಧಿಗಳು ಮೈಯೆಲ್ಲಾ ಕಣ್ಣಾಗಿರಬೇಕು, ಇಲ್ಲವಾದರೆ ಗಂಭೀರ ಪೆಟ್ಟು ಸಂಭವಿಸುವ ಸಾಧ್ಯತೆ ಇರುತ್ತದೆ. ಇದೀಗ ಗೋಲ್ಡ್ ಸುರೇಶ್ ಟಾಸ್ಕ್ ಸಮಯದಲ್ಲಿ ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿ ಮತ್ತೆ ವಾಪಸಾಗಿದ್ದಾರೆ. ಗುರುವಾರದ ಟಾಸ್ಕ್‌ನಲ್ಲಿ ಭಾಗವಹಿಸಿದ್ದಾರೆ. ಸಾಮಾನ್ಯವಾಗಿ ಬಿಗ್‌ಬಾಸ್ ಸ್ಪರ್ಧಿಗಳ ಜೊತೆ ಖಡಕ್ ಆಗಿ ಮಾತನಾಡುತ್ತಾರೆ. ಆದರೆ ಗುರುವಾರದ ಎಪಿಸೋಡ್‌ನಲ್ಲಿ ಬಿಗ್‌ಬಾಸ್ ಹನುಮಂತು ಜೊತೆ ಫನ್ನಿಯಾಗಿ ಮಾತನಾಡಿದ್ದಾರೆ. ಟಾಸ್ಕ್ ಮುಗಿಸಿ ಎಲ್ಲರೂ ಮನೆಯೊಳಗೆ ಬಂದಾಗ ಬಿಗ್‌ಬಾಸ್, ಹನುಮಂತುವನ್ನು ಉದ್ದೇಶಿಸಿ ಇಂದಿಗೆ ನಿಮ್ಮ ಕ್ಯಾಪ್ಟನ್ಸಿ ಅವಧಿ ಇಲ್ಲಿಗೆ ಮುಕ್ತಾಯವಾಗಿದೆ, ಎನ್ನುತ್ತಾರೆ. ತಡಿರಿ ಸರ್ ಒಂದು ಫೋಟೋ ತೆಗೆಸಿಕೊಳ್ತೀನಿ ಎಂದು ಹನುಮಂತ ಹೇಳುತ್ತಾರೆ.
ಕ್ಯಾಮರಾಮ್ಯಾನ್ ರೆಡಿ ಇದ್ದಾರೆ ಪೋಸ್ ಕೊಡಿ ಎಂದ ಬಿಗ್‌ಬಾಸ್
ತಮ್ಮ ಕ್ಯಾಪ್ಟನ್ಸಿ ಫೋಟೋ ಕೆಳಗೆ ನಿಲ್ಲುವ ಹನುಮಂತ ಹೀಗೆ ಒಂದು ಫೋಟೋ ತೆಗೆಯಿರಿ, ಇರಿ ಇರಿ ಕ್ರಾಪ್ ಸರಿ ಮಾಡಿಕೊಳ್ಳುತ್ತೇನೆ ಎನ್ನುತ್ತಾರೆ. ಕ್ಯಾಮರಾಮ್ಯಾನ್ ರೆಡಿ ಇದ್ದಾರೆ ನೀವು ಪೋಸ್ ಕೊಡಿ ಎಂದು ಬಿಗ್ ಬಾಸ್ ಹೇಳುತ್ತಾರೆ. ಇದನ್ನು ಕೇಳಿ ಎಲ್ಲರೂ ಅರಚುತ್ತಾರೆ. ಫೋಟೋ ತೆಗೆದ ನಂತರ ಧನ್ಯವಾದಗಳು ಬಿಗ್ ಬಾಸ್ ಇದನ್ನು ನಮ್ಮ ಊರಿಗೆ ಕಳಿಸಿಕೊಡಿ ಎಂದು ಹನುಮಂತ ಹೇಳುತ್ತಾರೆ. ನೀವು ತೆಗೆದುಕೊಂಡ ನಿರ್ಧಾರಗಳಲ್ಲಿ ಮೊದಲ ದಿನ ಒಂದು ಗಂಭೀರವಾದ ನಿರ್ಧಾರ ತೆಗೆದುಕೊಂಡಿದ್ದೀರಿ, ಕ್ಯಾಪ್ಟನ್ ಬೆಡ್‌ರೂಮ್‌ನಲ್ಲಿ ನಿಮ್ಮ ಲುಂಗಿ ಇಟ್ಟಿದ್ದೀರಿ, ಅದು ಅಲ್ಲಿ ಈಗಲೂ ಇದೆಯೇ ಎಂದು ಕೇಳುತ್ತಾರೆ. ಕ್ಯಾಪ್ಟನ್ ರೂಮಿಗೆ ಸ್ವಲ್ಪ ಮರ್ಯಾದೆ ಕೊಡಬೇಕೆಂಬ ಕಾರಣಕ್ಕೆ ಅದನ್ನು ತೆಗೆದು ಬೇರೆ ಕಡೆ ಇಟ್ಟಿದ್ದೇನೆ ಎಂದು ಹನುಮಂತು ಉತ್ತರಿಸುತ್ತಾರೆ.
ಹನುಮಂತು ಜೊತೆ ಬಿಗ್‌ಬಾಸ್ ಫನ್ನಿ ಮಾತುಕತೆ
ನಿಮ್ಮ ಲುಂಗಿಯನ್ನು ಮುಂದಿನ ಕ್ಯಾಪ್ಟನ್‌ಗೆ ಎಲ್ಲಿ ಉಡುಗೊರೆಯಾಗಿ ಕೊಡುವಿರೋ ಅಂದುಕೊಂಡಿದ್ದೆ, ಕ್ಯಾಪ್ಟನ್ ಆಗಿ ಒಂದು ದಿನವೂ ಆ ದೊಡ್ಡ ಮಂಚದ ಸುಖ ವೈಭೋಗವನ್ನು ನೀವು ಅನುಭವಿಸಲಿಲ್ಲ ಎಂದು ಸ್ವತ: ಕ್ಯಾಪ್ಟನ್ ರೂಮ್ ಗೋಡೆಗಳು, ಆ ಮಂಚ ಎಲ್ಲವೂ ಬೇಸರ ಮಾಡಿಕೊಂಡಿದೆ. ನಿಮ್ಮ ಕ್ಯಾಪ್ಟನ್ಸಿ ಮುಗಿದಿದೆ. ಆದರೂ ಇಂದು ರಾತ್ರಿ ಆ ರೂಮ್ ತೆಗೆದಿರುತ್ತೆ, ಇಂದಾದರೂ ಆ ರೂಮ್ ಬಳಸಿ, ನಿಮಗೆ ತುಂಬಾ ಭಯ ಆದರೆ ಜೊತೆಗೆ ಹುಲಿ ಕರೆದುಕೊಂಡು ಹೋಗಿ ಎನ್ನುತ್ತಾರೆ, ಇದಕ್ಕೆ ಧನ್ಯವಾದ ಹೇಳುವ ಹನುಮಂತ ಆಗ್ಗಾಗ್ಗೆ ಹೀಗೆ ಮಾತನಾಡಿ ಖುಷಿಯಾಗುತ್ತೆ ಎನ್ನುತ್ತಾರೆ, ಹೆಂಗಿತ್ತು ಜೋಕ್ ಎಂದು ಬಿಗ್ ಬಾಸ್ ಕೇಳುತ್ತಾರೆ. ಬಿಗ್‌ಬಾಸ್ ಕೂಡಾ ಜೋಕ್ ಮಾಡ್ತಾರಾ ಅಂತ ಸ್ಪರ್ಧಿಗಳು ನಗುತ್ತಾರೆ. ಒಟ್ಟಿನಲ್ಲಿ ಗುರುವಾರದ ಬಿಗ್‌ಬಾಸ್ ಶೋನಲ್ಲಿ ಹನುಮಂತ ಹಾಗೂ ಬಿಗ್‌ಬಾಸ್ ಸಂಭಾಷಣೆ ನೋಡುಗರಿಗೆ ಬಹಳ ಖುಷಿ ನೀಡಿದೆ.