ಅಮ್ಮ- ಮಗಳ ಬಾಂಧವ್ಯದ ಮೇಲೆ ಸೇಡಿನ ಕಾಡ್ಗಿಚ್ಚು, ಸೋಮವಾರದಿಂದ ನಾ ನಿನ್ನ ಬಿಡಲಾರೆ ಸೀರಿಯಲ್ ಶುರು; ಹೀಗಿದೆ ಕಥೆ, ಪಾತ್ರವರ್ಗದ ವಿವರ
Naa Ninna Bidalaare: ಜೀ ಕನ್ನಡದಲ್ಲಿ ಇದೇ ಜನವರಿ 27ರಿಂದ ಹೊಸ ಧಾರಾವಾಹಿ ನಾ ನಿನ್ನ ಬಿಡಲಾರೆ ಶುರುವಾಗಲಿದೆ. ಈಗಾಗಲೇ ಪ್ರೋಮೋ ಮೂಲಕ ಗಮನ ಸೆಳೆದ ಈ ಸೀರಿಯಲ್ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ.

Naa Ninna Bidalaare Serial: ಜೀ ಕನ್ನಡ ವಾಹಿನಿ ತನ್ನ ವೀಕ್ಷಕರನ್ನು ಮನರಂಜಿಸಲು ಮತ್ತೊಂದು ಅಮೋಘ ಧಾರಾವಾಹಿಯನ್ನು ಹೊತ್ತುತರಲಿದೆ. 'ನಾ ನಿನ್ನ ಬಿಡಲಾರೆ' ಎಂಬ ಶೀರ್ಷಿಕೆಯುಳ್ಳ ಈ ಧಾರಾವಾಹಿಯು ಥ್ರಿಲ್ಲರ್, ಹಾರರ್ ಮತ್ತು ಅಮ್ಮ-ಮಗಳ ಬಾಂಧವ್ಯಕ್ಕೆ ಒತ್ತು ಕೊಟ್ಟಿರುವುದರಿಂದ ಎಲ್ಲ ವಯೋಮಿತಿಯ ಜನರನ್ನು ತನ್ನತ್ತ ಸೆಳೆಯಲಿದೆ ಎಂಬ ಸುಳಿವು ನೀಡಿದೆ. 'ನಾ ನಿನ್ನ ಬಿಡಲಾರೆ' ಧಾರಾವಾಹಿಯ ಮೊದಲ ಪ್ರೋಮೋ ಈಗಾಗಲೇ ಕರುನಾಡ ವೀಕ್ಷಕರ ಮನಗೆದ್ದಿದೆ. ಸಿನೆಮಾಟೋಗ್ರಫಿ, ನಿರ್ದೇಶನ, ತಂಡದ ನಟನೆ ಬಗ್ಗೆ ಪ್ರೇಕ್ಷಕರು ಅತಿಯಾದ ಕುತೂಹಲದಲ್ಲಿದ್ದಾರೆ.
ಕಿರುತೆರೆಗೆ ಮರಳಿದ ನೀತಾ ಅಶೋಕ್
ಇನ್ನು, ವರ್ಷಗಳ ಬಳಿಕ ವಿಕ್ರಾಂತ್ ರೋಣ ಸಿನಿಮಾ ನಟಿ ನೀತಾ ಅಶೋಕ್, ಕಿರುತರೆಗೆ ಮರಳಿ ಬರುತ್ತಿದ್ದಾರೆ. ಪಾರು ಧಾರಾವಾಹಿಯ ಶರತ್ ಪದ್ಮನಾಭ್, ನೀತಾ ಅಶೋಕ್ ಅವರಿಗೆ ಜೋಡಿಯಾಗಿ ನಟಿಸಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುವ ಚೂಟಿ ಬೇಬಿ ಮಹಿತಾ ಈ ಜೋಡಿಗೆ ಮಗಳಾಗಿ ನಟಿಸಲಿದ್ದಾಳೆ. ಹಿರಿಯ ನಟಿ ವೀಣಾ ಸುಂದರ್ ಕುಟುಂಬದ ಯಜಮಾನಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಹಲವಾರು ಧಾರಾವಾಹಿಗಳಲ್ಲಿ ನಟಿಸಿರುವ ರಿಷಿಕಾ ಈ ಧಾರಾವಾಹಿಯ ಮತ್ತೋರ್ವ ನಾಯಕ ನಟಿ.
ಖಳನಾಯಕಿಯಾಗಿ ರುಹಾನಿ ಶೆಟ್ಟಿ
ಇನ್ನು ತುಂಬ ವರ್ಷಗಳ ಬಳಿಕ ಹಿರಿಯ ನಟ, ರಂಗಭೂಮಿ ಕಲಾವಿದ ಬಾಬು ಹಿರಣ್ಣಯ್ಯ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಈ ಧಾರಾವಾಹಿಯಲ್ಲಿ ಅವರು ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ತನ್ನ ವಿಭಿನ್ನ ನಟನೆಯಿಂದ ತನ್ನದೇ ಆದ ಅಭಿಮಾನಿ ಬಳಗ ಹೊಂದಿರುವ ರುಹಾನಿ ಶೆಟ್ಟಿ ಈ ಧಾರಾವಾಹಿಯಲ್ಲಿ ಖಳನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಷ್ಟೇ ಅಲ್ಲದೇ, ಇನ್ನೂ ಅನೇಕ ಹಿರಿಯ ಮತ್ತು ದಿಗ್ಗಜ ಕಲಾವಿದರುಗಳು ಈ ಧಾರಾವಾಹಿಯ ಭಾಗವಾಗಿದ್ದಾರೆ. ಜಯದುರ್ಗ ಕ್ರಿಯೇಷನ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಈ ಧಾರಾವಾಹಿಯ ನಿರ್ದೇಶನದ ಜವಾಬ್ದಾರಿಯನ್ನು ಸತೀಶ್ ಕೃಷ್ಣ ಹೊತ್ತಿದ್ದಾರೆ.
ಸೀರಿಯಲ್ ಕಥೆ ಏನು?
ಶರತ್- ಅಂಬಿಕಾ ದಂಪತಿಗೆ ಮಗಳು ಹಿತಾನೇ ಪ್ರಪಂಚ. ಆದರೆ ಈ ಪುಟ್ಟ ಸಂಸಾರಕ್ಕೆ ಮಾಯಾ ಎಂಬ ಹೆಣ್ಣಿನ ಕೆಟ್ಟ ದೃಷ್ಟಿ ಬೀಳುತ್ತದೆ. ಶರತ್‌ನನ್ನು ತನ್ನವನನ್ನಾಗಿಸಿಕೊಳ್ಳಬೇಕೆಂಬ ದುರಾಸೆಗೆ ಬಿದ್ದ ಮಾಯಾ ಅಂಬಿಕಾಳನ್ನು ಸಾಯಿಸುತ್ತಾಳೆ. ಇತ್ತ ಮಗಳು ಹಿತ ಅಮ್ಮನಿಲ್ಲದೆ ಅನಾಥಳಾಗಿ ಅಪ್ಪನ ಮೇಲೆ ಮುನಿಸಿಕೊಂಡು ಮಾತನ್ನು ಬಿಡುತ್ತಾಳೆ. ತನ್ನ ದಾರಿಗೆ ಹಿತ ಅಡ್ಡವಾಗಿದ್ದಾಳೆ ಎಂದು ಆ ಪುಟ್ಟ ಕೂಸನ್ನು ಮುಗಿಸಲು ಮಾಯಾ ಸಂಚು ರೂಪಿಸುತ್ತಾಳೆ. ತನ್ನ ಮಗಳಿಗೆ ತೊಂದರೆ ಇದೆ ಎಂದು ಗೊತ್ತಾದ ಅಂಬಿಕಾ ಸತ್ತು ಹೋಗಿದ್ದರೂ ಮತ್ತೆ ಹೇಗೆ ಮರಳಿ ಬಂದು ಮಗಳನ್ನು ರಕ್ಷಿಸುತ್ತಾಳೆ ಎಂಬುದೇ ಇಲ್ಲಿ ಕುತೂಹಲ ಮೂಡಿಸುವ ವಿಷಯ.
ಮತ್ತೊಂದೆಡೆ ಅಕ್ಕನನ್ನು ಕಳೆದುಕೊಂಡ ತಂಗಿ ಅಕ್ಕನ ಪ್ರೀತಿಗಾಗಿ ಪರಿತಪಿಸುತ್ತಾಳೆ. ಆದರೆ ಆಕೆಗೆ ಮತ್ತೆ ಅಕ್ಕ ಸಿಗ್ತಾಳಾ ಎನ್ನುವುದು ಮತ್ತೊಂದು ಪ್ರಮುಖ ಅಂಶ. ಒಂದೆಡೆ ಅಕ್ಕನ ಕುಟುಂಬ ಅಲ್ಲೋಲ ಕಲ್ಲೋಲ ಆದರೆ ಮತ್ತೊಂದೆಡೆ ತಂಗಿ ದೇವರ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಾಳೆ. ಈ ಅಕ್ಕ-ತಂಗಿಯ ಬದುಕು ಮತ್ತೆ ಸರಿಹೊಗೋದು ಹೇಗೆ? ಅಮ್ಮ ಮಗಳನ್ನು ಕೆಟ್ಟ ಹೆಂಗಸಿನ ಮಾಯೆಯಿಂದ ಹೇಗೆ ಕಾಪಾಡಿಕೊಳ್ತಾಳೆ? ಅಪ್ಪನ ಮೇಲಿನ ಮಗಳ ಕೋಪ ಯಾವಾಗ ಕಡಿಮೆ ಆಗುತ್ತೆ? ಇವೆಲ್ಲದರ ಸುತ್ತ ನಡೆಯುವ ಕಥೆಯೇ 'ನಾ ನಿನ್ನ ಬಿಡಲಾರೆ'!
ಜನವರಿ 27ರಿಂದ
ಅಮ್ಮ ಮಗಳನ್ನು ಹೇಗೆ ಕಾಪಾಡುತ್ತಾಳೆ? ಅನಾಥ ಮಗುವಿಗೆ ಮತ್ತೆ ಅಮ್ಮನ ಮಮತೆ ಸಿಗುತ್ತಾ? ಅಪ್ಪನ ಮೇಲಿನ ಮಗಳ ಮುನಿಸು ಕಡಿಮೆ ಆಗುತ್ತಾ? ಇವೆಲ್ಲದಕ್ಕೂ ಉತ್ತರ ಸಿಗಬೇಕು ಅಂದ್ರೆ ವೀಕ್ಷಿಸಿ 'ನಾ ನಿನ್ನ ಬಿಡಲಾರೆ' ಇದೇ ಜನವರಿ 27 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30 ಕ್ಕೆ ಜೀ ಕನ್ನಡ ವಾಹಿನಿಯಲ್ಲಿ.
