ಇಂದಿನಿಂದ ಜೀ ಎಂಟರ್‌ಟೈನರ್ಸ್ ಆರಂಭ; ಅಕುಲ್ ಬಾಲಾಜಿ ನಿರೂಪಣೆಯೊಂದಿಗೆ ವೀಕ್ಷಕರನ್ನು ರಂಜಿಸಲು ಸಜ್ಜಾದ ಧಾರಾವಾಹಿ ತಂಡಗಳು
ನವೆಂಬರ್ 2 ರಿಂದ ಜೀ ಕನ್ನಡ ವಾಹಿನಿಯಲ್ಲಿ ಜೀ ಎಂಟರ್‌ಟೈನರ್ಸ್ ಎಂಬ ಹೊಸ ರಿಯಾಲಿಟಿ ಶೋ ಆರಂಭವಾಗುತ್ತಿದೆ. ಪ್ರತಿ ಶನಿವಾರ , ಭಾನುವಾರ 9 ರಿಂದ 10.30ವರೆಗೆ ಸುಮಾರು ಒಂದೂವರೆ ಗಂಟೆಗಳ ಕಾಲ ವಿವಿಧ ಧಾರಾವಾಹಿ ತಂಡಗಳು ವೀಕ್ಷಕರನ್ನು ರಂಜಿಸಲು ಬರುತ್ತಿವೆ.
ಜೀ ವಾಹಿನಿ ಆರಂಭವಾದಾಗಿನಿಂದ ರಿಯಾಲಿಟಿ ಶೋ, ಧಾರಾವಾಹಿಗಳ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುತ್ತಾ ಬರುತ್ತಿದೆ. ಪುಟ್ಟಕ್ಕನ ಮಕ್ಕಳು, ಲಕ್ಷ್ಮೀ ನಿವಾಸ, ಅಮೃತಧಾರೆ, ಶ್ರೀರಸ್ತು ಶುಭಮಸ್ತು, ಸೀತಾರಾಮ ಸೇರಿದಂತೆ ಅನೇಕ ಧಾರಾವಾಹಿಗಳು ವೀಕ್ಷಕರನ್ನು ರಂಜಿಸುತ್ತಿದೆ. ಕಾಮಿಡಿ ಕಿಲಾಡಿಗಳು, ಸರಿಗಮಪದಂಥ ರಿಯಾಲಿಟಿ ಶೋಗಳೂ ನಡೆಯುತ್ತಿದೆ. ಇದೀಗ ಜೀ ಕುಟುಂಬಕ್ಕೆ ಹೊಸ ರಿಯಾಲಿಟಿ ಶೋ ಸೇರ್ಪಡೆಯಾಗಿದೆ.
ಪ್ರತಿ ಶನಿವಾರ-ಭಾನುವಾರ ಪ್ರಸಾರವಾಗಲಿರುವ ಕಾರ್ಯಕ್ರಮ
ಜೀ ಕನ್ನಡದಲ್ಲಿ ಇಂದಿನಿಂದ (ನವೆಂಬರ್ 2) ಜೀ ಎಂಟರ್‌ಟೈನರ್ಸ್ ಎಂಬ ಹೊಸ ಶೋ ಆರಂಭವಾಗುತ್ತಿದೆ. ಕಳೆದ ಕೆಲವು ದಿನಗಳಿಂದ ವಾಹಿನಿಯು ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರೋಮೋ ಹಂಚಿಕೊಳ್ಳುತ್ತಾ ಬಂದಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ಗೆ ಕಾಂಪಿಟೇಶನ್ ಕೊಡಲು ಈ ಹೊಸ ರಿಯಾಲಿಟಿ ಶೋ ಆರಂಭವಾಗುತ್ತಿದೆ ಎನ್ನಲಾಗುತ್ತಿದೆ. ಕಾರ್ಯಕ್ರಮದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ತಂಡದ ಸದಸ್ಯರು ಭಾಗವಹಿಸುತ್ತಿದ್ದಾರೆ. ರಾತ್ರಿ 9 ರಿಂದ 10.30ವರೆಗೆ ಸುಮಾರು ಒಂದೂವರೆ ಗಂಟೆಗಳ ಕಾಲ ಧಾರಾವಾಹಿ ಕಲಾವಿದರು ವೀಕ್ಷಕರನ್ನು ರಂಜಿಸಲಿದ್ದಾರೆ. ಇಂದಿನಿಂದ ಈ ಶೋ ಆರಂಭವಾಗುತ್ತಿದ್ದು ಪ್ರತಿ ಶನಿವಾರ ಹಾಗೂ ಭಾನುವಾರ ಕಾರ್ಯಕ್ರಮ ಪ್ರಸಾರವಾಗಲಿದೆ.
ಅಕುಲ್ ಬಾಲಾಜಿ ನಿರೂಪಣೆಯಲ್ಲಿ ಆರಂಭವಾಗುತ್ತಿರುವ ಶೋ
ಅಕುಲ್ ಬಾಲಾಜಿ, ಜೀ ಎಂಟರ್‌ಟೈನರ್ಸ್ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿ ಸಿದ್ದೇಗೌಡ್ರು ಖ್ಯಾತಿಯ ಧನಂಜಯ್ ಕೂಡಾ ಭಾಗವಹಿಸುತ್ತಿದ್ದಾರೆ. ವಾಹಿನಿ ಧನಂಜಯ್ ಮಾತನಾಡಿರುವ ಪ್ರೋಮೋವೊಂದನ್ನು ಹಂಚಿಕೊಂಡಿದೆ. ಇಷ್ಟು ದಿನಗಳ ಕಾಲ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದೇಗೌಡನನ್ನಾಗಿ ನನ್ನ ನೋಡಿ, ನಾನು ಅತ್ತರೆ ನೀವೂ ಅತ್ತಿದ್ದೀರಿ, ನಾನು ನಕ್ಕರೆ ನೀವೂ ನಕ್ಕಿದ್ದೀರ. ನನ್ನ ಎಲ್ಲಾ ಭಾವನೆಗಳನ್ನು ನೀವೂ ಅನುಭವಿಸುವಂತೆ ಮಾಡಿದ್ದೇನೆ. ಆದರೆ ಈ ಅಖಾಡದಲ್ಲಿ ನೀವು ನನ್ನನ್ನು ಡಿಜೆ ಆಗಿ ನೋಡಲು ಹೊರಟಿದ್ದೀರಿ. ಅದು ಚಿಕ್ಕ ಆಟವೇ ಇರಲಿ ದೊಡ್ಡ ಟಾಸ್ಕೇ ಆಗಿರಲಿ ನಿಮ್ಮನ್ನು ಮನರಂಜಿಸದೆ ಹೋಗುವ ಮಾತೇ ಇಲ್ಲ, ಆದ್ದರಿಂದ ಮಿಸ್ ಮಾಡದೆ ಜೀ ಎಂಟರ್‌ಟೈನರ್ಸ್ ನೋಡಿ ಎಂದು ಧನಂಜಯ್ ಹೇಳಿದ್ದಾರೆ.
ವೀಕ್ಷಕರಿಗೆ ಬಹುಮಾನ ಗೆಲ್ಲುವ ಅವಕಾಶ
ಮತೊಂದು ಪ್ರೋಮೋದಲ್ಲಿ ಅಕುಲ್ ಬಾಲಾಜಿ ಗಲಾಟೆ ಅಳಿಯಂದ್ರು ಚಿತ್ರದ ತಿಲ್ಲಾನ ತಿಲ್ಲಾನ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿರುವ ಅಕುಲ್ ಬಾಲಾಜಿ, ನಿಮ್ಮ ಮೆಚ್ಚಿನ ಧಾರಾವಾಹಿ ತಂಡ ನಿಮ್ಮೆಲ್ಲರಿಗೂ ಮನರಂಜನೆ ನೀಡಲು ಬರುತ್ತಿದ್ದಾರೆ. ನೀವೂ ಅವರೊಂದಿಗೆ ಆಟ ಆಡಿ ಬಹುಮಾನಗಳನ್ನು ಗೆಲ್ಲಬಹುದು ಎಂದು ಮಾಹಿತಿ ನೀಡಿದ್ದಾರೆ. ಹೊಸ ಶೋ ನೋಡಲು ವೀಕ್ಷಕರು ಕಾಯುತ್ತಿದ್ದಾರೆ. ಈ ಕಾರ್ಯಕ್ರಮ ಜನರಿಗೆ ಯಾವ ರೀತಿ ಮನರಂಜನೆ ನೀಡಲಿದೆ ಕಾದು ನೋಡಬೇಕು.