Kannada Television: ಇಂದಿನಿಂದ ಕನ್ನಡ ಕಿರುತೆರೆಯಲ್ಲಿ ಒಂದಷ್ಟು ಅಚ್ಚರಿಯ ಬದಲಾವಣೆಗಳು; ಸೀತಾ ರಾಮ ಸೀರಿಯಲ್‌ಗೆ ಅಗ್ನಿಪರೀಕ್ಷೆ
ಕನ್ನಡ ಸುದ್ದಿ  /  ಮನರಂಜನೆ  /  Kannada Television: ಇಂದಿನಿಂದ ಕನ್ನಡ ಕಿರುತೆರೆಯಲ್ಲಿ ಒಂದಷ್ಟು ಅಚ್ಚರಿಯ ಬದಲಾವಣೆಗಳು; ಸೀತಾ ರಾಮ ಸೀರಿಯಲ್‌ಗೆ ಅಗ್ನಿಪರೀಕ್ಷೆ

Kannada Television: ಇಂದಿನಿಂದ ಕನ್ನಡ ಕಿರುತೆರೆಯಲ್ಲಿ ಒಂದಷ್ಟು ಅಚ್ಚರಿಯ ಬದಲಾವಣೆಗಳು; ಸೀತಾ ರಾಮ ಸೀರಿಯಲ್‌ಗೆ ಅಗ್ನಿಪರೀಕ್ಷೆ

Kannada Television: ಕನ್ನಡ ಕಿರುತೆರೆ ಇಂದಿನಿಂದ ಹೊಸ ಹೊರಳಿನತ್ತ ಸಾಗಲಿದೆ. ಬಿಗ್‌ ಬಾಸ್‌ ಬಳಿಕ ಕಲರ್ಸ್‌ ಕನ್ನಡದಲ್ಲಿ ಎರಡು ಹೊಸ ಸೀರಿಯಲ್‌ಗಳು ಪ್ರಸಾರ ಆಗಲಿವೆ. ಇತ್ತ ಜೀ ಕನ್ನಡದಲ್ಲಿ ನಾ ನಿನ್ನ ಬಿಡಲಾರೆ ಸೀರಿಯಲ್‌ ಶುರುವಾಗಲಿದೆ. ಇನ್ನೂ ಹಲವು ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ.

ಇಂದಿನಿಂದ ಕನ್ನಡ ಕಿರುತೆರೆಯಲ್ಲಿ ಒಂದಷ್ಟು ಅಚ್ಚರಿಯ ಬದಲಾವಣೆಗಳು!
ಇಂದಿನಿಂದ ಕನ್ನಡ ಕಿರುತೆರೆಯಲ್ಲಿ ಒಂದಷ್ಟು ಅಚ್ಚರಿಯ ಬದಲಾವಣೆಗಳು! (Zee Kannada\ Colors Kannada\ Star Suvarna)

Kannada Television: ಜನವರಿ 27.. ಇಂದು ಕನ್ನಡ ಕಿರುತೆರೆಯಲ್ಲಿ ಒಂದಷ್ಟು ಬದಲಾವಣೆಗಳು ಘಟಿಸಲಿವೆ. ಕಲರ್ಸ್‌ ಕನ್ನಡದಲ್ಲಿ ವಧು ಮತ್ತು ಯಜಮಾನ ಹೆಸರಿನ ಎರಡು ಹೊಸ ಧಾರಾವಾಹಿಗಳು ಇಂದಿನಿಂದ ಪ್ರಸಾರ ಆರಂಭಿಸಿದರೆ, ಇತ್ತ ಜೀ ಕನ್ನಡದಲ್ಲಿ ನಾ ನಿನ್ನ ಬಿಡಲಾರೆ ಸೀರಿಯಲ್‌ ಇಂದಿನಿಂದಲೇ ಶುಭಾರಂಭ ಕಾಣಲಿದೆ. ಈ ಸೀರಿಯಲ್‌ ಆಗಮನದ ಬೆನ್ನಲ್ಲೇ ತನ್ನ ಸ್ಲಾಟ್‌ ಬಿಟ್ಟು ಕೊಟ್ಟಿರುವ ಸೀತಾ ರಾಮ ಸೀರಿಯಲ್‌ ಸಂಜೆ 5:30ರಿಂದ ಪ್ರಸಾರವಾಗಲಿದೆ. ಈ ಮೂಲಕ ಹೊಸ ಅಗ್ನಿ ಪರೀಕ್ಷೆ ಈ ಸೀರಿಯಲ್‌ ಹೊರಳಿದೆ. ಸ್ಟಾರ್‌ ಸುವರ್ಣದಲ್ಲಿ ಅವನು ಮತ್ತೆ ಶ್ರಾವಣಿ ಸೀರಿಯಲ್‌ನಲ್ಲಿ ಸಂಘರ್ಷದ ಕಥೆಗೆ ವೀಕ್ಷಕರಿಗೆ ಸಿಗಲಿದೆ.

ಕಲರ್ಸ್‌ ಕನ್ನಡದಲ್ಲಿ ವಧು ಸೀರಿಯಲ್‌

ಸಂಬಂಧಗಳನ್ನು ಪ್ರೀತಿಸೋ, ಅಷ್ಟೇ ಗೌರವಿಸುವ 'ವಧು' ಒಬ್ಬ ಅವಿವಾಹಿತೆ, ವೃತ್ತಿಯಲ್ಲಿ ಡಿವೋರ್ಸ್ ಲಾಯರ್. ಮನುಷ್ಯ ಸಂಬಂಧಗಳ ಬಗ್ಗೆ ಅವಳಿಗಿರುವ ಗೌರವವೇ ಅವಳನ್ನು ತನ್ನ ವೃತ್ತಿಯಲ್ಲಿ ಹಿಂದುಳಿಯುವಂತೆ ಮಾಡಿದೆ ಅಂದ್ರೂ ತಪ್ಪಾಗಲ್ಲ! ಗಂಡ ಹೆಂಡ್ತಿ ನಡುವೆ ಬಿರುಕು ಮೂಡಿ ಡಿವೋರ್ಸ್ ಕೇಳಿ ಬಂದ ಜೋಡಿಗಳ ನಡುವೆ ಸಾಮರಸ್ಯ ಮೂಡಿಸಿ ಅವ್ರನ್ನ ಒಂದು ಮಾಡುವುದರಲ್ಲೇ ಅವಳಿಗೆ ಆಸಕ್ತಿ. ಇಂತಿಪ್ಪ ಹೊಸ ಕಥೆ ಇಂದಿನಿಂದ (ಜ 27) ಕಲರ್ಸ್‌ ಕನ್ನಡದಲ್ಲಿ ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ.

ಕಲರ್ಸ್‌ ಕನ್ನಡದಲ್ಲಿ ಯಜಮಾನ ಧಾರಾವಾಹಿ

ಚೂರೂ ಸ್ವಾರ್ಥವಿಲ್ಲದ ಸರಳ ವ್ಯಕ್ತಿ ರಘುಗೆ ತನ್ನ ಕುಟುಂಬದ ಪ್ರೀತಿ ಗಳಿಸುವ ಮಹದಾಸೆ. ಝಾನ್ಸಿ ಹಾಗಲ್ಲ. ತಾತನ ಮಡಿಲಲ್ಲಿ ಬೆಳೆದ ಈಕೆ ಗಂಡಸರನ್ನು ದ್ವೇಷಿಸುವ ಹಠಮಾರಿ ಹುಡುಗಿ. ವಿಧಿ ಇವರಿಬ್ಬರನ್ನೂ ಒಂದು ಮದುವೆಯ ರೂಪದಲ್ಲಿ ಹತ್ತಿರ ತರುತ್ತದೆ. ತನ್ನ ಕಷ್ಟದಲ್ಲಿರುವ ಕುಟುಂಬದ ಒಳಿತಿಗೆ ಈ ಮದುವೆ ದಾರಿಯಾದೀತೆಂದು ಬಗೆಯುವ ರಘು ಮದುವೆಗೆ ಒಪ್ಪುತ್ತಾನೆ. ಮದುವೆಯ ನಂತರ ಅನೇಕ ಅನೂಹ್ಯ ತಿರುವುಗಳು ಬಂದು ಕತೆಯನ್ನು ಮತ್ತೆಲ್ಲಿಗೋ ಸೆಳೆದೊಯ್ಯುತ್ತವೆ. ರಘು ಮತ್ತು ಝಾನ್ಸಿ ತಮ್ಮ ವ್ಯಕ್ತಿತ್ವದಲ್ಲಿರುವ ಭಿನ್ನತೆಯನ್ನು ಎದುರಿಸಬೇಕಾಗುತ್ತದೆ. ಅನುಕೂಲಕ್ಕೆಂದು ಆರಂಭವಾದ ಅವರಿಬ್ಬರ ಸಂಬಂಧ ಈಗ ಗಾಢವಾಗುತ್ತಾ ಬೆಳೆದರೂ ಯಾವುದೇ ಕ್ಷಣದಲ್ಲೂ ಒಡೆದುಹೋಗುವ ಭಯವನ್ನೂ ಹುಟ್ಟಿಸುತ್ತದೆ. ಹೀಗೆ ಸಾಗುವ ಈ ಸೀರಿಯಲ್‌ ಇಂದಿನಿಂದ (ಜ 27) ಕಲರ್ಸ್‌ ಕನ್ನಡದಲ್ಲಿ ರಾತ್ರಿ 10ಗಂಟೆಗೆ ಪ್ರಸಾರವಾಗಲಿದೆ.

ಸ್ಟಾರ್‌ ಸುವರ್ಣದಲ್ಲಿ ಅವನು ಮತ್ತೆ ಶ್ರಾವಣಿ

ಸ್ಟಾರ್ ಸುವರ್ಣ ವಾಹಿನಿಯ 'ಅವನು ಮತ್ತೆ ಶ್ರಾವಣಿ' ಸೀರಿಯಲ್‌ ಈಗಾಗಲೇ 400 ಕ್ಕೂ ಹೆಚ್ಚು ಯಶಸ್ವಿ ಸಂಚಿಕೆಗಳೊಂದಿಗೆ ಮುನ್ನುಗ್ಗುತ್ತಿದೆ. ಈಗ ಈ ಧಾರಾವಾಹಿಯಲ್ಲಿ ಇನ್ಮುಂದೆ ಒಂದು ಭಯಾನಕ ಸೇಡಿನ ಸಂಘರ್ಷದ ತಿರುವು ಬರಲಿದೆ. ಎರಡಕ್ಷರದ ಪ್ರೀತಿಗೆ ಮನಸೋತು ಅಭಿ- ಶ್ರಾವಣಿಯ ಬಾಳಲ್ಲಿ ಎರಡನೇ ಅವಕಾಶ ಸಿಕ್ಕೇ ಬಿಡ್ತು ಅನ್ನುವಷ್ಟರಲ್ಲಿ, ಇದೀಗ ಕುತಂತ್ರಿ ಸಂಯುಕ್ತಾಳ ಸಂಚಿಗೆ ಶ್ರಾವಣಿಯ ಜೀವ ಅಪಾಯದಲ್ಲಿದೆ. ಕಥೆಯಲ್ಲಿ ಅಧೀರ ಎಂಬ ಆತ್ಮದ ಆಗಮನವಾಗಲಿದ್ದು, ಸಂಯುಕ್ತಾಳಿಗೆ ಅಧೀರನ ಶಕ್ತಿ ವರದಂತೆ ಸಿಕ್ಕಾಗಿದೆ. ಈ ಅಧೀರ ಯಾರು? ಸಂಯುಕ್ತಾಳಿಗೂ ಅಧೀರನಿಗೂ ಇರೋ ಸಂಬಂಧವೇನು? ಸಂಯುಕ್ತಾಳ ನಿಜರೂಪವನ್ನು ಹೊರತರುವಲ್ಲಿ ಶ್ರಾವಣಿ ಯಶಸ್ವಿಯಾಗ್ತಾಳಾ? ಅತ್ತೆ ತಾಯಿಯ ಎರಡನೇ ರೂಪ ಎಂಬ ಭ್ರಮೆಯಲ್ಲಿರೋ ಅಭಿಮನ್ಯುವಿಗೆ ಸತ್ಯದ ಅರಿವಾಗುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಂದಿನಿಂದ ರಾತ್ರಿ 10ಗಂಟೆಗೆ ಸ್ಟಾರ್‌ ಸುವರ್ಣದಲ್ಲಿ ಸಿಗಲಿದೆ.

ಜೀ ಕನ್ನಡದಲ್ಲಿ ನಾ ನಿನ್ನ ಬಿಡಲಾರೆ ಶುರು

ಶರತ್-ಅಂಬಿಕಾ ದಂಪತಿಗೆ ಮಗಳು ಹಿತಾನೇ ಪ್ರಪಂಚ. ಆದರೆ ಈ ಪುಟ್ಟ ಸಂಸಾರಕ್ಕೆ ಮಾಯಾ ಎಂಬ ಹೆಣ್ಣಿನ ಕೆಟ್ಟ ದೃಷ್ಟಿ ಬೀಳುತ್ತದೆ. ಶರತ್ ನನ್ನು ತನ್ನವನನ್ನಾಗಿಸಿಕೊಳ್ಳಬೇಕೆಂಬ ದುರಾಸೆಗೆ ಬಿದ್ದ ಮಾಯಾ ಅಂಬಿಕಾಳನ್ನು ಸಾಯಿಸುತ್ತಾಳೆ. ಇತ್ತ ಮಗಳು ಹಿತ ಅಮ್ಮನಿಲ್ಲದೆ ಅನಾಥಳಾಗಿ ಅಪ್ಪನ ಮೇಲೆ ಮುನಿಸಿಕೊಂಡು ಮಾತನ್ನು ಬಿಡುತ್ತಾಳೆ. ತನ್ನ ದಾರಿಗೆ ಹಿತ ಅಡ್ಡವಾಗಿದ್ದಾಳೆ ಎಂದು ಆ ಪುಟ್ಟ ಕೂಸನ್ನು ಮುಗಿಸಲು ಮಾಯಾ ಸಂಚು ರೂಪಿಸುತ್ತಾಳೆ. ತನ್ನ ಮಗಳಿಗೆ ತೊಂದರೆ ಇದೆ ಎಂದು ಗೊತ್ತಾದ ಅಂಬಿಕಾ ಸತ್ತು ಹೋಗಿದ್ದರೂ ಮತ್ತೆ ಹೇಗೆ ಮರಳಿ ಬಂದು ಮಗಳನ್ನು ರಕ್ಷಿಸುತ್ತಾಳೆ ಎಂಬುದೇ ಇಲ್ಲಿ ಕುತೂಹಲ ಮೂಡಿಸುವ ವಿಷಯ. ಹಾರರ್‌ ಶೈಲಿಯ ಈ ಸೀರಿಯಲ್‌ ಜೀ ಕನ್ನಡದಲ್ಲಿ ಇಂದಿನಿಂದ ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ.

ಬದಲಾದ ಸಮಯದಲ್ಲಿ ಸೀತಾ ರಾಮ

ಜೀ ಕನ್ನಡದಲ್ಲಿ ಇದೀಗ ಹೊಸ ಧಾರಾವಾಹಿ ನಾ ನಿನ್ನ ಬಿಡಲಾರೆ ಇಂದಿನಿಂದ (ಜನವರಿ 27ರಿಂದ) ಆರಂಭವಾಗಲಿದೆ. ಕರುಳಬಳ್ಳಿಯ ಕಾಪಾಡಲು ಹೋರಾಡೋ ಅಮ್ಮನ ‘ಆತ್ಮ’ಕತೆಯೇ ಈ ನಾ ನಿನ್ನ ಬಿಡಲಾರೆ ಧಾರಾವಾಹಿ. ಈಗಾಗಲೇ ಪ್ರೋಮೋಗಳ ಮೂಲಕವೇ ವೀಕ್ಷಕರ ಎದೆಬಡಿತ ಹೆಚ್ಚಿಸಿರುವ ಈ ಸೀರಿಯಲ್‌ ಇಂದಿನಿಂದ (ಜ.27) 9:30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ. ಇತ್ತ ಯಾರೂ ಊಹಿಸದ ಸ್ಲಾಟ್‌ಗೆ ಸೀತಾ ರಾಮ ಸೀರಿಯಲ್‌ ಜಿಗಿದಿದೆ. ಇಂದಿನಿಂದ ಸಂಜೆ 5:30ಕ್ಕೆ ಸೀತಾ ರಾಮ ಪ್ರಸಾರ ಕಾಣಲಿದೆ. ಈ ಮೂಲಕ ಅಗ್ನಿಪರೀಕ್ಷೆಗೆ ಸಿದ್ಧವಾಗಲಿದೆ.

Whats_app_banner