ಜೀ ಕುಟುಂಬ ಅವಾರ್ಡ್ಸ್ 2024: ಲಕ್ಷ್ಮೀ ನಿವಾಸ ಧಾರಾವಾಹಿ ವೆಂಕಿ ರಿಯಲ್ ಲೈಫ್‌ನಲ್ಲೂ ನೆಚ್ಚಿನ ಮಗ; ವೇದಿಕೆ ಮೇಲೆ ಭಾವುಕರಾದ ಶಾಸ್ತ್ರಿ ತಂದೆ
Zee Kutumba awards 2024: ಅಕ್ಟೋಬರ್ 25, 26 ಹಾಗೂ 27 ರಂದು ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮ ಜೀ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಬಾರಿ ಲಕ್ಷ್ಮೀ ನಿವಾಸ ಧಾರಾವಾಹಿ ವೆಂಕಿ ಪಾತ್ರಧಾರಿ ಶಾಸ್ತ್ರಿಗೆ ನೆಚ್ಚಿನ ಮಗ ಪ್ರಶಸ್ತಿ ದೊರೆದಿದೆ. ವೇದಿಕೆಯಲ್ಲಿ ಶಾಸ್ತ್ರಿ ಹಾಗೂ ತಂದೆ ಇಬ್ಬರೂ ಭಾವುಕರಾಗಿದ್ದಾರೆ.
Zee Kutumba awards 2024: ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿ ವತಿಯಿಂದ ಪ್ರತಿ ವರ್ಷ ನಡೆಯುವ ಅನುಬಂಧ ಅವಾರ್ಡ್ಸ್ಸ್ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಈಗ ಜೀ ಕನ್ನಡ ವಾಹಿನಿಯ ಜೀ ಕನ್ನಡ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮ ನೋಡಲು ವೀಕ್ಷಕರು ಕಾಯುತ್ತಿದ್ದಾರೆ. ಈಗಾಗಲೇ ಕಾರ್ಯಕ್ರಮದ ಚಿತ್ರೀಕರಣ ನಡೆದಿದ್ದು ಮೂರು ದಿನಗಳ ಕಾಲ ಜೀ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.
3 ದಿನಗಳ ಕಾಲ ನಡೆಯಲಿರುವ ಅದ್ದೂರಿ ಜೀ ಕುಟುಂಬ ಅವಾರ್ಡ್ಸ್
ಅಕ್ಟೋಬರ್ 25, 26 ಮತ್ತು 27 ರಂದು ಒಟ್ಟು ಮೂರು ದಿನಗಳ ಕಾಲ ಜೀ ಕನ್ನಡ ವಾಹಿನಿಯಲ್ಲಿ ಸಂಜೆ 6:30ರಿಂದ ಜೀ ಕನ್ನಡ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮ ಪ್ರಸಾರ ಆಗಲಿದೆ. ಕಾರ್ಯಕ್ರಮದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು, ಶ್ರೀರಸ್ತು ಶುಭಮಸ್ತು, ಸೀತಾರಾಮ, ಅಮೃತಧಾರೆ, ಲಕ್ಷ್ಮೀ ನಿವಾಸ ಸೇರಿದಂತೆ ವಿವಿಧ ಧಾರಾವಾಹಿ ತಂಡಗಳು ಭಾಗಿಯಾಗಿದ್ದವು. ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರತಿ ಧಾರಾವಾಹಿಗೂ ಬಹಳ ವೀಕ್ಷಕ ಬಳಗವಿದೆ. ಧಾರಾವಾಹಿಯ ಕಥೆ, ಅದರ ಪಾತ್ರಧಾರಿಗಳನ್ನಂತೂ ವೀಕ್ಷಕರು ತಮ್ಮ ಮನೆಯವರಂತೇ ಇಷ್ಟಪಡುತ್ತಿದ್ದಾರೆ. ಅದರಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶ್ರೀನಿವಾಸ್-ಲಕ್ಷ್ಮೀ ದಂಪತಿ ಮೊದಲ ಮಗ ವೆಂಕಿ ಪಾತ್ರಧಾರಿ ಎಲ್ಲರಿಗೂ ಬಹಳ ಇಷ್ಟ.
ಈ ಬಾರಿಯ ಜೀ ಕನ್ನಡ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ವೆಂಕಿ ಪಾತ್ರಕ್ಕೆ ನೆಚ್ಚಿನ ಮಗ ಪ್ರಶಸ್ತಿ ದೊರೆತಿದೆ. ವೆಂಕಿ ಲಕ್ಷ್ಮೀ ಹಾಗೂ ಶ್ರೀನಿವಾಸ್ ದಂಪತಿಯ ದತ್ತು ಪುತ್ರ. ಮಕ್ಕಳಿಲ್ಲದ ಕಾರಣಕ್ಕಾಗಿ ಶ್ರೀನಿವಾಸ್ ಹಾಗೂ ವೆಂಕಿ ಅನಾಥಾಶ್ರಮದಲ್ಲಿ ಬೆಳೆದ ವೆಂಕಿಯನ್ನು ದತ್ತು ಪಡೆಯುತ್ತಾರೆ. ವೆಂಕಿ ಮನೆಗೆ ಬಂದ ನಂತರ ಈ ದಂಪತಿಗೆ ಮಕ್ಕಳಾಗುತ್ತದೆ. ವೆಂಕಿಯನ್ನು ಕಂಡರೆ ಸಂತೋಷ್‌ಗೆ ಇಷ್ಟವಿಲ್ಲ. ಆದರೆ ಉಳಿದವರಿಗೆ ವೆಂಕಿ ಎಂದರೆ ಬಹಳ ಇಷ್ಟ. ಮಾತು ಬಾರದ ವ್ಯಕ್ತಿಯಾಗಿ ಈ ನಟನೆ ಅಭಿನಯ ನಿಜಕ್ಕೂ ಯಾರಿಗಾದರೂ ಇಷ್ಟವಾಗುತ್ತದೆ. ನಿಜವಾಗಲೂ ಮಾತು ಬಾರದ ವ್ಯಕ್ತಿಗೆ ಧಾರಾವಾಹಿಯಲ್ಲಿ ನಟಿಸಲು ಅವಕಾಶ ನೀಡಿರಬಹುದು ಎಂದುಕೊಳ್ಳುವಷ್ಟು ಅವರ ಅಭಿನಯ ನೈಜವಾಗಿದೆ. ಅಂದಹಾಗೆ ಈ ಕಲಾವಿದನ ನಿಜ ಹೆಸರು ಶಾಸ್ತ್ರಿ. ಇವರು ರಂಗಭೂಮಿ ಕಲಾವಿದ.
ನನ್ನ ಮಗ ಸೂಪರ್ ಎಂದು ಭಾವುಕರಾದ ನಟ ಶಾಸ್ತ್ರಿ ತಂದೆ
ಇದಕ್ಕೂ ಮುನ್ನ ಶಾಸ್ತ್ರಿ ದಾಸ ಪುರಂದರ, ಉಘೇ ಉಘೇ ಮಾದೇಶ್ವರ, ನಮ್ಮ ಲಚ್ಚಿ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ವೆಂಕಿ ಎಂದರೆ ವೀಕ್ಷಕರಿಗೆ ಬಹಳ ಇಷ್ಟ. ಇವರ ಸೋಷಿಯಲ್ ಮೀಡಿಯಾದಲ್ಲಿ ಕೂಡಾ ವೆಂಕಿ ಅಣ್ಣ ಎಂದೇ ಎಲ್ಲರೂ ಕಾಮೆಂಟ್ ಮಾಡಿ ಪ್ರೀತಿ ವ್ಯಕ್ತಪಡಿಸುತ್ತಾರೆ. ವೆಂಕಿ ರೀಲ್ ಲೈಫ್‌ನಲ್ಲಿ ಮಾತ್ರವಲ್ಲ ರಿಯಲ್ ಲೈಫ್‌ನಲ್ಲೂ ನೆಚ್ಚಿನ ಮಗ. ಇದಕ್ಕೆ ಸಾಕ್ಷಿ, ಜೀ ಕನ್ನಡ ಕುಟುಂಬ ಅವಾರ್ಡ್ಸ್ ವೇದಿಕೆಯಲ್ಲಿ ನಡೆದ ಭಾವುಕ ಕ್ಷಣ. ರೋರಿಂಗ್ ಸ್ಟಾರ್ ಶ್ರೀಮುರಳಿ ಶಾಸ್ತ್ರಿಗೆ ನೆಚ್ಚಿನ ಮಗ ಪ್ರಶಸ್ತಿ ನೀಡಿ ಗೌರವಿಸುತ್ತಾರೆ. ಆಗ ವೇದಿಕೆ ಮೇಲೆ ಶಾಸ್ತ್ರಿ ಅವರ ತಂದೆಯನ್ನು ಕರೆತರಲಾಗುತ್ತದೆ. ಅವರು ವೀಲ್ ಚೇರ್ ಮೇಲೆ ಬರುವುದನ್ನು ನೋಡಿ ಎಲ್ಲೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಶಾಸ್ತ್ರಿ ಧಾರಾವಾಹಿಯಲ್ಲಿ ಮಾತ್ರವಲ್ಲ, ರಿಯಲ್ ಲೈಫ್‌ನಲ್ಲೂ ಹೆತ್ತವರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಎದ್ದು ಓಡಾಡಲು ಆಗದ ತಂದೆಯನ್ನು ಶಾಸ್ತ್ರಿ ನೋಡಿಕೊಳ್ಳುತ್ತಿದ್ದಾರೆ. ಅವರ ಸೇವೆ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಶಾಸ್ತ್ರಿ, ನಾನು ಇದನ್ನು ಸೇವೆ ಎಂದುಕೊಳ್ಳುವುದಿಲ್ಲ. ಕರ್ತವ್ಯ ಎಂದುಕೊಳ್ಳುತ್ತೇನೆ ಎನ್ನುತ್ತಾರೆ. ವೇದಿಕೆ ಮೇಲೆ ಕಣ್ಣೀರಿಡುತ್ತಾರೆ. ಶಾಸ್ತ್ರಿ ತಂದೆ ಕೂಡಾ ಮಗನನ್ನು ಕಂಡು ಭಾವುಕರಾಗುತ್ತಾರೆ. ನನ್ನ ಮಗ ಸೂಪರ್ ಎಂದು ಉದ್ಘರಿಸುತ್ತಾರೆ. ತಂದೆ ಮಗನನ್ನು ನೋಡಿ ವೇದಿಕೆ ಕೆಳಗಿದ್ದವರ ಕಣ್ಣಂಚು ಒದ್ದೆಯಾಗುತ್ತದೆ. ಜೀ ವಾಹಿನಿ ಈ ಪ್ರೋಮೋ ಹಂಚಿಕೊಂಡಿದ್ದು ಇಂದು ಕಾರ್ಯಕ್ರಮ ನೋಡಲು ವೀಕ್ಷಕರು ಕಾಯುತ್ತಿದ್ದಾರೆ.
ವಿಭಾಗ