ಜೀ ಕುಟುಂಬ ಅವಾರ್ಡ್ಸ್: ಗಂಡ ನನ್ನ ಮಗುವಿಗೆ ಎರಡನೇ ತಾಯಿ, ವರ್ಕಿಂಗ್ ವುಮೆನ್ಸ್ ಕಷ್ಟ ಬಿಚ್ಚಿಟ್ಟ ನೆಚ್ಚಿನ ಸೊಸೆ ಲಕ್ಷ್ಮೀ ನಿವಾಸದ ವೀಣಾ
Zee Kutumba awards 2024: ಅಕ್ಟೋಬರ್ 25, 26 ಹಾಗೂ 27 ರಂದು ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮ ಜೀ ವಾಹಿನಿಯಲ್ಲಿ ಪ್ರಸಾರವಾಗಲಿದೆ. ನಿನ್ನೆ (ಅಕ್ಟೋಬರ್ 25) ಮೊದಲ ಎಪಿಸೋಡ್ ಪ್ರಸಾರವಾಗಿದ್ದು, ಲಕ್ಷ್ಮೀ ನಿವಾಸ ಧಾರಾವಾಹಿಯ ವೀಣಾ ನೆಚ್ಚಿನ ಸೊಸೆ ಅವಾರ್ಡ್ ಪಡೆದಿದ್ದಾರೆ. ಈ ವೇಳೆ ಅವರು ವರ್ಕಿಂಗ್ ವುಮೆನ್ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ.
Zee Kutumba awards 2024: ಪ್ರತಿ ವರ್ಷದಂತೆ ಈ ಬಾರಿಯೂ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವಿವಿಧ ಧಾರಾವಾಹಿ ಹಾಗೂ ಕಾರ್ಯಕ್ರಮಗಳಿಗೆ ಜೀವ ತುಂಬುತ್ತಿರುವ ನಟ–ನಟಿಯರು ವಿವಿಧ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಅಕ್ಟೋಬರ್ 25ರಿಂದ ಜೀ ಕುಟುಂಬ ಅವಾರ್ಡ್ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ನಿನ್ನೆಯ ಎಪಿಸೋಡ್‌ನಲ್ಲಿ ನೆಚ್ಚಿನ ಅಮ್ಮ, ನೆಚ್ಚಿನ ಸೊಸೆ, ನೆಚ್ಚಿನ ಮಾವ, ನೆಚ್ಚಿನ ಮಗ ಮುಂತಾದ ಪ್ರಶಸ್ತಿಗಳನ್ನು ನೀಡಲಾಗಿದೆ. ಈ ವರ್ಷ ಜೀ ಕನ್ನಡ ನೆಚ್ಚಿನ ಸೊಸೆ ಅವಾರ್ಡ್ ಪಡೆದವರು ಲಕ್ಷ್ಮೀ ನಿವಾಸ ಧಾರಾವಾಹಿ ವೀಣಾ. ಕಳೆದ ಒಂದಿಷ್ಟು ವರ್ಷಗಳಿಂದ ಕಿರುತೆರೆಯಲ್ಲಿರುವ ವೀಣಾ ಪಾತ್ರಧಾರಿಯ ನಿಜವಾದ ಹೆಸರು ಲಕ್ಷ್ಮೀ ಹೆಗಡೆ. ಇವರು ಜೀ ಕನ್ನಡ ಅವಾರ್ಡ್ ವೇದಿಕೆಯಲ್ಲಿ ವರ್ಕಿಂಗ್ ವುಮೆನ್‌ಗಳ ಸಂಕಷ್ಟವನ್ನು ಬಿಚ್ಚಿಟ್ಟಿದ್ದಾರೆ, ಮಾತ್ರವಲ್ಲ ತನ್ನ ಗಂಡ ನನ್ನ ತಾಯಿಗೆ ಎರಡನೇ ಮಗು ಎಂದಿದ್ದಾರೆ. ಅವರ ಮಾತುಗಳನ್ನು ಇಲ್ಲಿದೆ ನೋಡಿ.
ಲಕ್ಷ್ಮೀ ನಿವಾಸ ವೀಣಾ ಮಾತು
‘ನನ್ನ ಮೊದಲ ಧನ್ಯವಾದ ನಿರ್ಮಾಪಕರಿಗೆ, ಇಂತಹ ಪಾತ್ರ ಸೃಷ್ಟಿಸಿದ ಬರಹಗಾರಿಗೆ ಧನ್ಯವಾದ. ನಮ್ಮ ತಂಡದ ಎಲ್ಲಾ ತಂತಜ್ಞರಿಗೆ ಧನ್ಯವಾದ. ಈ ಹೊತ್ತಿನಲ್ಲಿ ಅತಿ ಮುಖ್ಯವಾಗಿ ಧನ್ಯವಾದ ಹೇಳಬೇಕಾಗಿರುವುದು ನನ್ನ ಗಂಡನಿಗೆ. ಎಲ್ಲರೂ ಗಂಡನಿಗೆ ಧನ್ಯವಾದ ಹೇಳುತ್ತಾರೆ. ಇದನ್ನು ಒಂದು ಫಾರ್ಮಾಲಿಟಿ ಅಂದುಕೊಂಡಿರುತ್ತಾರೆ. ಅದರಲ್ಲೂ ವರ್ಕಿಂಗ್ ವುಮೆನ್ ಅದರಲ್ಲೂ ಸಿನಿಮಾ, ಕಿರುತೆರೆಯಲ್ಲಿ ಕೆಲಸ ಮಾಡುವವರಿಗೆ ಯಾವುದೇ ಸಮಯದ ಚೌಕಟ್ಟು ಇರುವುದಿಲ್ಲ. ಎಷ್ಟು ಗಂಟೆಗೋ ಹೋಗಿ ಎಷ್ಟು ಗಂಟೆಗೊ ಬರುತ್ತೇವೆ, ಯಾವು ಯಾವುದೋ ಶೆಡ್ಯೂಲ್ ಇರುತ್ತೆ. ಅಂತಹ ಸಂದರ್ಭದಲ್ಲಿ ತಾಯಿಯ ರೀತಿ ನನ್ನ ಮಗುವನ್ನು ನೋಡಿಕೊಂಡು ಮನೆ ನಡೆಸಿಕೊಂಡು ಅವರ ಉದ್ಯೋಗವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ, ನಾನು ನನ್ನ ಗಂಡ ಹಾಗೂ ಮಗಳಿಗೆ ಧನ್ಯವಾದ ಹೇಳುತ್ತೇನೆ‘ ಎಂದು ಮನ ತುಂಬಿ ಮಾತನಾಡಿದ್ದಾರೆ.
ಲಕ್ಷ್ಮೀ ನಿವಾಸದಲ್ಲಿ ತುಂಬು ಕುಟುಂಬದ ಹಿರಿ ಸೊಸೆಯಾಗಿರುವ ವೀಣಾ ನಿಜಕ್ಕೂ ಎಲ್ಲರೂ ಮೆಚ್ಚುವ ಸೊಸೆ. ಇವರ ಪಾತ್ರ ಹಾಗೂ ಅಭಿನಯಕ್ಕೆ ಜನರು ಫಿದಾ ಆಗಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಕಾಮೆಂಟ್‌ಗಳ ಮೂಲಕ ತಿಳಿದುಕೊಳ್ಳಬಹುದು. ಸೊಸೆಯಾದರೂ ಅತ್ತೆ, ಮಾವನನ್ನು ಮಗಳಂತೆ ನೋಡಿಕೊಂಡು ಇಡೀ ಮನೆಯನ್ನು ಸಂಭಾಳಿಸಿಕೊಂಡು ಹೋಗುವ ವೀಣಾ ಪಾತ್ರ ಜನರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಿದೆ ಎಂದರೆ ಜನರು ಇದ್ದರೆ ಅಂತಹ ಸೊಸೆ ಇರಬೇಕು ಎಂದು ಮನ ತುಂಬಿ ಹೇಳುತ್ತಿದ್ದಾರೆ.