ದೇವಸ್ಥಾನದಲ್ಲಿ ಕುಸುಮಾಳಿಂದ ಶ್ರೇಷ್ಠಾಗೆ ರಸ್ತೆಯಲ್ಲಿ ಸುನಂದಾಳಿಂದ ತಾಂಡವ್‌ಗೆ ಕಪಾಳ ಮೋಕ್ಷ
ಕನ್ನಡ ಸುದ್ದಿ  /  ಮನರಂಜನೆ  /  ದೇವಸ್ಥಾನದಲ್ಲಿ ಕುಸುಮಾಳಿಂದ ಶ್ರೇಷ್ಠಾಗೆ ರಸ್ತೆಯಲ್ಲಿ ಸುನಂದಾಳಿಂದ ತಾಂಡವ್‌ಗೆ ಕಪಾಳ ಮೋಕ್ಷ

ದೇವಸ್ಥಾನದಲ್ಲಿ ಕುಸುಮಾಳಿಂದ ಶ್ರೇಷ್ಠಾಗೆ ರಸ್ತೆಯಲ್ಲಿ ಸುನಂದಾಳಿಂದ ತಾಂಡವ್‌ಗೆ ಕಪಾಳ ಮೋಕ್ಷ

ನಿನ್ನನ್ನು ನಾನು ದೇವರಂತೆ ನೋಡುತ್ತಿದ್ದೆ. ನನ್ನ ಮಗಳು ಕೂಡಾ ನಿನಗೆ ದೇವರ ಸ್ಥಾನ ಕೊಟ್ಟಿದ್ದಳು. ಆದರೆ ಮನೆಯಲ್ಲಿ ಚಿನ್ನದಂಥ ಹೆಂಡತಿ ಇರುವಾಗ ನೀನು ಬೇರೆ ಹುಡುಗಿಯ ಜೊತೆ ಸಂಬಂಧ ಇರಿಸಿಕೊಂಡಿದ್ದೀಯ ಎಂದು ಸುನಂದಾ, ತಾಂಡವ್‌ ಕೆನ್ನೆಗೆ ಬಾರಿಸುತ್ತಾಳೆ. ಆಕೆ ಮಾತನ್ನು ಕೇಳಿ ತಾಂಡವ್‌ ಶಾಕ್‌ ಆಗುತ್ತಾನೆ.

ಭಾಗ್ಯಲಕ್ಷ್ಮಿ ಧಾರಾವಾಹಿ 258ನೇ ಎಪಿಸೋಡ್‌
ಭಾಗ್ಯಲಕ್ಷ್ಮಿ ಧಾರಾವಾಹಿ 258ನೇ ಎಪಿಸೋಡ್‌ (PC: Colors Kannada Facebook page)

Bhagyalaskhmi Kannada Serial: ಭಾಗ್ಯಲಕ್ಷ್ಮಿ ಧಾರಾವಾಹಿಯ ಇತ್ತೀಚಿನ ಎಪಿಸೋಡ್‌ಗಳಂತೂ ಬಹಳ ಕುತೂಹಲದಿಂದ ಕೂಡಿದೆ. ಮುಂದೇನು ಆಗಬಹುದು ಎಂದು ಪ್ರತಿಯೊಂದು ದೃಶ್ಯಕ್ಕೂ ವೀಕ್ಷಕರು ಎದುರು ನೋಡುವಂತಾಗಿದೆ. ಆದಷ್ಟು ಬೇಗ ತಾಂಡವ್‌ ವಕ್ರ ಬುದ್ಧಿ ಎಲ್ಲರಿಗೂ ತಿಳಿದು ಅವರ ಸಂಸಾರ ಸರಿ ಆಗಲಿ ಎಂದು ವೀಕ್ಷಕರು ಆಸೆ ಪಡುತ್ತಿದ್ದಾರೆ.

ಗುರುವಾರದ ಎಪಿಸೋಡನ್ನು ಕೂಡಾ ವೀಕ್ಷಕರು ಬಹಳ ಇಷ್ಟಪಟ್ಟಿದ್ದಾರೆ. ಒಂದೆಡೆ ಸುನಂದಾ ಅಳಿಯ ತಾಂಡವ್‌ಗೆ ಕಪಾಳಮೋಕ್ಷ ಮಾಡಿದರೆ ಮತ್ತೊಂದೆಡೆ ಕುಸುಮಾ, ಶ್ರೇಷ್ಠ ಕೆನ್ನೆಗೆ ಬಾರಿಸುತ್ತಾಳೆ. ಅಮ್ಮನಿಗೆ ಆರೋಗ್ಯ ಸರಿ ಇಲ್ಲ ಎಂದು ತಿಳಿದ ತಾಂಡವ್‌ ಒಂದು ಕ್ಷಣವೂ ಅಲ್ಲಿ ನಿಲ್ಲದೆ ಕಾರು ಹತ್ತಿ ದೇವಸ್ಥಾನದಿಂದ ಹೊರಡುತ್ತಾನೆ. ಭಾಗ್ಯಳಿಗೆ ಕರೆ ಮಾಡಿ ಅಮ್ಮನನ್ನು ನೋಡಿಕೊಳ್ಳುವ ರೀತಿ ಇದೇನಾ ಎಂದು ಕೇಳುತ್ತಾನೆ. ಆದರೆ ತಲೆ ತಿರುಗಿ ಬಿದ್ದದ್ದು ನನ್ನ ಅಮ್ಮ ಅಲ್ಲ ಸುನಂದಾ ಎಂದು ತಿಳಿದಾಗ ಸಮಾಧಾನವಾಗುತ್ತಾನೆ.

ತಾಂಡವ್‌ ಕೆನ್ನೆಗೆ ಬಾರಿಸಿದ ಸುನಂದಾ

ತನ್ಮಯ್‌ ಕಾಲ್‌ ಮಾಡಿದ್ದು ಒಳ್ಳೆಯದಾಯ್ತು, ಈ ನೆಪದಿಂದ ಆದರೂ ನಾನು ಒಂದು ಕಷ್ಟದಿಂದ ತಪ್ಪಿಸಿಕೊಂಡೆ. ಇಲ್ಲವಾದರೆ ತಾಂಬೂಲ ಬದಲಿಸಿಕೊಳ್ಳಬೇಕಿತ್ತು. ಅಪ್ಪ ಅಮ್ಮ ನಿಜಕ್ಕೂ ನನ್ನನ್ನು ಕ್ಷಮಿಸಿ, ನಿಮ್ಮ ಸ್ಥಾನದಲ್ಲೇ ಯಾರ್ಯಾರನ್ನೋ ಕರೆ ತಂದು ಅಪ್ಪ ಅಮ್ಮ ಎನ್ನಬೇಕಾಯ್ತು. ನನಗೂ ಇದರ ಬಗ್ಗೆ ಬೇಸರ ಇದೆ ಎಂದು ತನ್ನಷ್ಟಕ್ಕೆ ತಾನು ಮಾತನಾಡುತ್ತಾ ಕಾರಿನಲ್ಲಿ ಬರುವಾಗ ಸುನಂದಾ ಎದುರಾಗುತ್ತಾಳೆ. ಇದ್ದಕ್ಕಿದ್ದಂತೆ ಸುನಂದಾ ಕಾರಿಗೆ ಎದುರಾಗಿದ್ದನ್ನು ನೋಡಿ ತಾಂಡವ್‌ ಗಾಬರಿ ಆಗುತ್ತಾನೆ. ಅತ್ತೆ ನೀವೇನು ಇಲ್ಲಿ ಎಂದು ಕೇಳುತ್ತಾನೆ. ತಾಂಡವ್‌ನನ್ನು ನೋಡುತ್ತಲೇ ಸುನಂದಾಗೆ ಮತ್ತಷ್ಟು ಕೋಪ ಏರುತ್ತದೆ. ಯಾರೋ ನಿನ್ನ ಅತ್ತೆ? ನಿನ್ನನ್ನು ನಾನು ದೇವರಂತೆ ನೋಡುತ್ತಿದ್ದೆ. ನನ್ನ ಮಗಳು ಕೂಡಾ ನಿನಗೆ ದೇವರ ಸ್ಥಾನ ಕೊಟ್ಟಿದ್ದಳು. ಆದರೆ ಮನೆಯಲ್ಲಿ ಚಿನ್ನದಂಥ ಹೆಂಡತಿ ಇರುವಾಗ ನೀನು ಬೇರೆ ಹುಡುಗಿಯ ಜೊತೆ ಸಂಬಂಧ ಇರಿಸಿಕೊಂಡಿದ್ದೀಯ ಎಂದು ಕೆನ್ನೆಗೆ ಬಾರಿಸುತ್ತಾಳೆ. ಆಕೆ ಮಾತನ್ನು ಕೇಳಿ ತಾಂಡವ್‌ ಶಾಕ್‌ ಆಗುತ್ತಾನೆ.

ಇತ್ತ ತಾಂಡವ್‌ ದೇವಸ್ಥಾನದಿಂದ ಹೋಗಿದ್ದು, ಮಹೇಶ್‌ ಹಾಗೂ ಸುಂದರಿಯ ವರ್ತನೆ ನೋಡಿ ಶ್ರೇಷ್ಠ ತಂದೆ ತಾಯಿ ಗಾಬರಿ ಆಗುತ್ತಾರೆ. ನನ್ನ ಮಗ ಮನೆ ಕೆಲಸದವರನ್ನು ಅಮ್ಮ ಎಂದು ಕರೆಯುತ್ತಾನೆ. ಆಕೆ ಮಗನಿಗೆ ಕೈ ತುತ್ತು ಕೊಟ್ಟು ಬೆಳೆಸಿದ್ದಾಳೆ, ಆಕೆಗೆ ಆರೋಗ್ಯ ಸರಿ ಇಲ್ಲ ಅದಕ್ಕೆ ಇಲ್ಲಿಂದ ಹೋದ ಎಂದು ಮಹೇಶ ಹಾಗೂ ಸುಂದರಿ ಕಥೆ ಕಟ್ಟುತ್ತಾರೆ. ಇಬ್ಬರ ಪ್ರತಿಯೊಂದು ಮಾತಿಗೂ ಕುಸುಮಾ, ಧರ್ಮರಾಜ್‌ ಹಾಗೂ ಶ್ರೇಷ್ಠ ತಂದೆ ತಾಯಿ ಅನುಮಾನ ವ್ಯಕ್ತಪಡಿಸುತ್ತಾರೆ.

ಶ್ರೇಷ್ಠಗೆ ಕುಸುಮಾ ಕಪಾಳಮೋಕ್ಷ

ಯೋಚನೆ ಮಾಡಿ ನಿರ್ಧಾರ ಮಾಡಿ, ಇಂಥ ಹುಡುಗನಿಗೆ ನಿಮ್ಮ ಮಗಳನ್ನು ಕೊಟ್ಟು ಮದುವೆ ಮಾಡಬೇಡಿ ಎಂದು ಕುಸುಮಾ ಹೇಳಿದಾಗ, ನಾನು ಮದುವೆ ಆದರೆ ಆತನನ್ನೇ ಇಲ್ಲವಾದರೆ ಸಾಯುತ್ತೇನೆ ಎಂದು ಶ್ರೇಷ್ಠ ಹೇಳುತ್ತಾಳೆ. ಆಕೆ ಮಾತನ್ನು ಕೇಳಿದ ಕುಸುಮಾ ಆಕೆ ಕೆನ್ನೆಗೆ ಬಾರಿಸುತ್ತಾಳೆ, ಹೆತ್ತ ತಂದೆ ತಾಯಿಗಿಂತ ಆತನೇ ನಿನಗೆ ಹೆಚ್ಚಾದನಾ? ಎಂದು ಕೇಳುತ್ತಾಳೆ. ಸರಿ, ಶ್ರೇಷ್ಠ ಆಸೆಯಂತೆ ಆ ಹುಡುಗನಿಗೆ ಕೊಟ್ಟು ಮದುವೆ ಮಾಡಿ, ಆದರೆ ತಡ ಏಕೆ ಮುಂದಿನ ವಾರವೇ ಮಾಡಿ, ನಾಳೆಯೇ ಹುಡುಗನ ಮನೆಗೆ ಹೋಗಿ ಅಕ್ಕ ಪಕ್ಕದವರನ್ನು ವಿಚಾರಿಸಿ ಎಂದು ಕುಸುಮಾ ಹೇಳುತ್ತಾಳೆ, ಈ ಐಡಿಯಾ ಶ್ರೇಷ್ಠ ತಂದೆ ತಾಯಿಗೆ ಸರಿ ಎನಿಸಿದರೂ ಮಹೇಶ, ಸುಂದರಿ, ಶ್ರೇಷ್ಠ ಮೂವರೂ ಗಾಬರಿ ಆಗುತ್ತಾರೆ.

ಕುಸುಮಾ ಐಡಿಯಾದಂತೆ ಶ್ರೇಷ್ಠ ತಂದೆ ತಾಯಿ ಮಹೇಶನ ಮನೆಗೆ ಹೋಗುತ್ತಾರಾ? ಅವರ ಬಂಡವಾಳ ಬಯಲಿಗೆ ಬರುವುದಾ? ಇದಕ್ಕೆ ತಾಂಡವ್‌ ಯಾವ ರೀತಿ ಪ್ರತಿಕ್ರಿಯಿಸುತ್ತಾನೆ ಅನ್ನೋದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

Whats_app_banner