ಕಳ್ಳರನ್ನು ಹುಡುಕಲು ಪೊಲೀಸ್ ಕಂಪ್ಲೇಂಟ್ ಕೊಡಲು ಕುಸುಮಾ ನಿರ್ಧಾರ; ತಾಂಡವ್‌ಗೆ ಪೀಕಲಾಟ
ಊರಿನವರಿಗೆಲ್ಲಾ ಉಪಚಾರ ಮಾಡಲು ನಿನಗೆ ಸಮಯವಿರುತ್ತದೆ. ಆಸ್ಪತ್ರೆಯಲ್ಲಿದ್ದ ಅಮ್ಮನನ್ನು ನೋಡಲು ನಿನಗೆ ಸಮಯ ಇರಲಿಲ್ವಾ ಎಂದು ಕೇಳುತ್ತಾಳೆ. ಹಾಗಿದ್ರೆ ಅವರೇ ಬೆಳ್ಳಿ ಸಾಮಗ್ರಿಗಳನ್ನು ಕದ್ದೊಯ್ದಿರುವುದು ಎಂದು ಸುನಂದಾ ಹೇಳುತ್ತಾಳೆ.
Bhagyalakshmi Kannada Serial: ಕುಸುಮಾ ಮನೆಯಲ್ಲಿ ಗಣೇಶ ಹಬ್ಬದ ಸಡಗರ ಮನೆ ಮಾಡಿದೆ. ಎಲ್ಲರೂ ಖುಷಿಯಿಂದ ದೇವರ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಅತ್ತೆ ಕುಸುಮಾ ಹೇಳಿಕೊಡುವಂತೆ ಭಾಗ್ಯ ಪೂಜೆ ಮಾಡುತ್ತಿದ್ದಾಳೆ. ಆದರೆ ಕುಸುಮಾಗೆ ಮಾತ್ರ ಬೆಳ್ಳಿ ಸಾಮಗ್ರಿಗಳು ಹೋಯ್ತಲ್ಲಾ ಎಂಬ ಚಿಂತೆ ಕಾಡುತ್ತಿದೆ.
ಕುಸುಮಾಗೆ ಬೆಳ್ಳಿ ಸಾಮಗ್ರಿಗಳ ಚಿಂತೆ
ಗಣಪತಿ ಮುಂದೆ ಬೆಳ್ಳಿ ದೀಪಗಳು ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ನನ್ನ ತವರು ಮನೆಯಿಂದ ಕೊಟ್ಟದ್ದು, ಎಲ್ಲಾ ಹೆಣ್ಣು ಮಕ್ಕಳಿಗೂ ತಾಯಿ ಮನೆಯಿಂದ ಕೊಟ್ಟ ಬೆಳ್ಳಿ ಸಾಮಗ್ರಿಗಳು ಬಹಳ ಅಮೂಲ್ಯವಾದದ್ದು. ಆದರೆ ಎಲ್ಲವೂ ಹೋಯ್ತು ಎಂದು ಕುಸುಮಾ ಬೇಸರ ವ್ಯಕ್ತಪಡಿಸುತ್ತಾಳೆ. ಪತಿ ಧರ್ಮರಾಜ್ ಕುಸುಮಾಳನ್ನು ಸಮಾಧಾನ ಮಾಡುತ್ತಾರೆ. ದೇವರಿಗೆ ಬೆಳ್ಳಿ ಸಾಮಗ್ರಿಗಳು ಮುಖ್ಯ ಅಲ್ಲ, ಆತನಿಗೆ ಭಕ್ತಿ ಬಹಳ ಮುಖ್ಯ ಎನ್ನುತ್ತಾರೆ.
ಎಲ್ಲರೂ ಪೂಜೆಯಲ್ಲಿ ಮಗ್ನರಾಗಿರುವಾಗ ಕುಸುಮಾ ಎದುರು ಮನೆಯಾಕೆ, ನಿನ್ನೆ ನಿಮ್ಮ ಮನೆಗೆ ನೆಂಟರು ಬಂದಿದ್ರಾ ಎಂದು ಕೇಳುತ್ತಾಳೆ. ಯಾರೂ ಬಂದಿಲ್ಲ, ನಾವು ಮನೆಯಲ್ಲೇ ಇರಲಿಲ್ಲ, ಆಸ್ಪತ್ರೆಯಲ್ಲಿದ್ದೆ ಎಂದು ಕುಸುಮಾ ಉತ್ತರಿಸುತ್ತಾಳೆ. ಅಷ್ಟಕ್ಕೆ ಸುಮ್ಮನಾಗದ ಆ ಮಹಿಳೆ ಇಲ್ಲ ಯಾರೋ ಬಂದಿದ್ರು ತಾಂಡವ್, ಅವರನ್ನು ಮಾತನಾಡಿಸುತ್ತಿದ್ದ ಎಂದಾಗ ಎಲ್ಲರಿಗೂ ಅನುಮಾನ ಶುರು ಆಗುತ್ತದೆ. ಆದರೆ ತಾಂಡವ್‌ಗೆ ಮಾತ್ರ ಭಯ ಶುರುವಾಗುತ್ತದೆ. ಶ್ರೇಷ್ಠ ಹಾಗೂ ಮನೆಯವರು ಬಂದಿದ್ದನ್ನು ಇವರು ನೋಡಿದ್ರಾ , ಏನು ಆಗಬಾರದು ಎಂದುಕೊಂಡಿದ್ದೇನೋ ಅದೇ ಆಗುತ್ತಿದೆ ಎಂದುಕೊಳ್ಳುತ್ತಾನೆ.
ನೆರೆ ಮನೆಯ ಮಹಿಳೆಯಿಂದ ತಾಂಡವ್ ಕಳ್ಳಾಟ ಬಯಲು
ತಾಂಡವ್ ಆಫೀಸರ್ಸ್ ಬಂದಿದ್ರಂತೆ, ಇಲ್ಲೇ ಮೀಟಿಂಗ್ ಮಾಡಿದ್ದಾರೆ ಎಂದು ಕುಸುಮಾ ಹೇಳುತ್ತಾಳೆ. ಇಲ್ಲ ಅವರು ಆಫೀಸರ್‌ನಂತೆ ಕಾಣುತ್ತಿರಲಿಲ್ಲ. ಗಂಡ ಹೆಂಡತಿ, ಇಬ್ಬರು ಹುಡುಗಿ ಬಂದಿದ್ದು ಎಂದು ಆ ಮಹಿಳೆ ಹೇಳಿದಾಗ ತಾಂಡವ್ ಉತ್ತರ ಹೇಳಲು ತಡಬಡಾಯಿಸುತ್ತಾನೆ. ಹೋ ಅವರಾ ಅಡ್ರೆಸ್ ಕೇಳಲು ಬಂದಿದ್ದರು ಎಂದು ತಾಂಡವ್ ಸುಳ್ಳು ಹೇಳುತ್ತಾನೆ, ತಾಂಡವ್ ನೀಡಿದ ಉತ್ತರದಿಂದ ಎಲ್ಲರಿಗೂ ಸಮಾಧಾನವಾದರೂ ನೆರೆಮನೆಯಾಕೆಯ ಮಾತುಗಳು ಅನುಮಾನ ಮೂಡಿಸುತ್ತದೆ. ಅಡ್ರೆಸ್ ಕೇಳಲು ಬಂದವರನ್ನು ಮನೆ ಒಳಗೆ ಏಕೆ ಕರೆದೊಯ್ದಿದ್ದು ಎಂದು ಕೇಳುತ್ತಾಳೆ.
ತಾಂಡವ್ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಾನೆ. ಅವರು ತಲೆ ತಿರುಗಿ ಬಿದ್ದರು, ನೀರು ಕೊಡಲು ಮನೆಗೆ ಕರೆದೊಯ್ದೆ ಎಂದಾಗ ಕುಸುಮಾ ಕೋಪಗೊಳ್ಳುತ್ತಾಳೆ. ಊರಿನವರಿಗೆಲ್ಲಾ ಉಪಚಾರ ಮಾಡಲು ನಿನಗೆ ಸಮಯವಿರುತ್ತದೆ. ಆಸ್ಪತ್ರೆಯಲ್ಲಿದ್ದ ಅಮ್ಮನನ್ನು ನೋಡಲು ನಿನಗೆ ಸಮಯ ಇರಲಿಲ್ವಾ ಎಂದು ಕೇಳುತ್ತಾಳೆ. ಹಾಗಿದ್ರೆ ಅವರೇ ಬೆಳ್ಳಿ ಸಾಮಗ್ರಿಗಳನ್ನು ಕದ್ದೊಯ್ದಿರುವುದು ಎಂದು ಸುನಂದಾ ಹೇಳುತ್ತಾಳೆ. ಆದರೆ ತಾಂಡವ್ ಅದನ್ನು ಒಪ್ಪುವುದಿಲ್ಲ, ಇಲ್ಲ ಅವರು ಕಳ್ಳರಲ್ಲ ಎಂದು ವಾದ ಮಾಡುತ್ತಾನೆ. ಅವರು ಕಳ್ಳರಲ್ಲ ಎಂದು ಹೇಗೆ ಹೇಳುತ್ತೀರಿ ಎಂದು ಭಾಗ್ಯ ಪ್ರಶ್ನಿಸುತ್ತಾಳೆ. ಕುಸುಮಾ ಕೂಡಾ ಅದೇ ಪ್ರಶ್ನೆ ಕೇಳುತ್ತಾಳೆ. ಪೋಲೀಸರಿಗೆ ದೂರು ನೀಡಿದರೆ ಕಳ್ಳರು ಯಾರೆಂದು ಪತ್ತೆಯಾಗುತ್ತಾರೆ ಎಂದು ಕುಸುಮಾ ಹೇಳಿದಾಗ ತಾಂಡವ್‌ಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತೆ ಆಗುತ್ತದೆ.
ತಾಂಡವ್ ಮನೆಗೆ ಹೊರಟು ನಿಂತ ಶ್ರೇಷ್ಠ
ಇತ್ತ ಕಾವ್ಯ ಮನೆಯಲ್ಲಿ ಗಣೇಶ ಹಬ್ಬದ ಪೂಜೆ ನಡೆಯುವ ಸಮಯದಲ್ಲಿ ರಘು ಅಲ್ಲಿಗೆ ಬರುತ್ತಾನೆ. ನೀನೇಕೆ ಇಲ್ಲಿಗೆ ಬಂದೆ ಇವರ ಮನೆಯೇನು ಧರ್ಮ ಛತ್ರಾನಾ?ಎಂದು ಶ್ರೇಷ್ಠ ಕೋಪಗೊಳ್ಳುತ್ತಾಳೆ. ಮುಂದಿನ ವಾರ ನಿಮ್ಮ ನಿಶ್ಚಿತಾರ್ಥ, ಶಾಪಿಂಗ್ ಮಾಡೋಕೆ ಆಗುತ್ತೆ ಅಂತ ನಾನೇ ಬರಲು ಹೇಳಿದ್ದು ಎಂದು ಕಾವ್ಯ ತಾಯಿ ಹೇಳುತ್ತಾರೆ. ಇದಕ್ಕೆ ಕೋಪಗೊಂಡ ಶ್ರೇಷ್ಠ ಯಾರನ್ನು ಮದುವೆ ಆಗಬೇಕೆಂದು ನಾನು ನಿರ್ಧರಿಸಬೇಕು ಎಂದು ಅಲ್ಲಿಂದ ಹೊರ ಬರುತ್ತಾಳೆ.
ಶ್ರೇಷ್ಠ ಎಲ್ಲಿ ಹೋದಳೆಂದು ಕಾವ್ಯ ಗಾಬರಿಯಿಂದ ಕಾಲ್ ಮಾಡಿದಾಗ ಆಕೆ ತಾಂಡವ್ ಮನೆಗೆ ಹೋಗುತ್ತಿದ್ಧೇನೆ ಎನ್ನುತ್ತಾಳೆ. ನನ್ನೊಂದಿಗೆ ಗಣೇಶ ಹಬ್ಬ ಆಚರಿಸು ಎಂದು ತಾಂಡವ್‌ಗೆ ಹೇಳಿದ್ದೆ ಆದರೆ ಅವನು ನನ್ನ ಮಾತು ಕೇಳುತ್ತಿಲ್ಲ, ಫೋನ್ ಕೂಡಾ ರಿಸೀವ್ ಮಾಡುತ್ತಿಲ್ಲ , ಇವತ್ತು ಶ್ರೇಷ್ಠ ಇನ್ನೊಂದು ಮುಖವನ್ನು ಅವನಿಗೆ ಪರಿಚಯ ಮಾಡಿಸುತ್ತೇನೆ ಎಂದು ಕಾಲ್ ಡಿಸ್ಕನೆಕ್ಟ್ ಮಾಡುತ್ತಾಳೆ.
ಶ್ರೇಷ್ಠ ತಾಂಡವ್ ಮನೆಗೆ ಹೋಗಿ ಹಬ್ಬ ಆಚರಿಸುತ್ತಾಳಾ? ತಾಂಡವ್ ಖುಷಿಯಿಂದ ಶ್ರೇಷ್ಠಳನ್ನು ಬರಮಾಡಿಕೊಳ್ಳುತ್ತಾನಾ? ಆತನ ನೆರೆಮನೆಯವರು ಶ್ರೇಷ್ಠಳನ್ನು ನೋಡಿ ಕಂಡುಹಿಡಿಯುತ್ತಾರಾ ಎನ್ನುವುದು ಇಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.