Ayyana Mane OTT: ಕನ್ನಡದ ಒರಿಜಿನಲ್ ವೆಬ್ ಸರಣಿ 'ಅಯ್ಯನ ಮನೆ' ನೋಡಲು ರೆಡಿಯಾಗಿ; ರಮೇಶ್ ಇಂದಿರಾ ನಿರ್ದೇಶನದ ಕ್ರೈಮ್ ಥ್ರಿಲ್ಲರ್
Ayyana Mane OTT release date: ತೆಲುಗು, ತಮಿಳು, ಹಿಂದಿಗೆ ಹೋಲಿಸಿದರೆ ಕನ್ನಡದಲ್ಲಿ ವೆಬ್‌ಸರಣಿ ಬರುವುದು ಅಪರೂಪ. ಇದೀಗ ರಮೇಶ್ ಇಂದಿರಾ ನಿರ್ದೇಶನದ ಕನ್ನಡ ಮಿನಿ ವೆಬ್ ಸರಣಿ ಅಯ್ಯನ ಮನೆ ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

Ayyana Mane OTT release date: ಅಯ್ಯನ ಮನೆ ಎಂಬ ಹೊಸ ಒರಿಜಿನಲ್ ಕನ್ನಡ ವೆಬ್ ಸರಣಿ ಬಿಡುಗಡೆಯಾಗಲು ಸಜ್ಜಾಗಿದೆ. ಈ ವೆಬ್ ಸರಣಿಯು ಜೀ5 ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಅಂದಹಾಗೆ, ಕನ್ನಡದಲ್ಲಿ ವೆಬ್‌ಸರಣಿಗಳು ಬಿಡುಗಡೆಯಾಗುವುದು ತೀರಾ ಅಪರೂಪ. ತಮಿಳು, ತೆಲುಗು, ಮಲಯಾಳಂನಲ್ಲಿ ಆಗಾಗ ಹೊಸ ಒರಿಜಿನಲ್ ವೆಬ್‌ಸರಣಿಗಳು ಬಿಡುಗಡೆಯಾಗುತ್ತವೆ. ಹಿಂದಿ ಭಾಷೆಯಲ್ಲಿಯಂತೂ ಹತ್ತು ಹಲವು ವೆಬ್ ಸರಣಿಗಳು ಬಿಡುಗಡೆಯಾಗುತ್ತಿವೆ. ಕನ್ನಡಿಗರು ಇಂತಹ ವೆಬ್‌ಸರಣಿಗಳ ಕನ್ನಡ ಅವತರಣಿಕೆಗಳನ್ನು ಅಥವಾ ಬೇರೆ ಭಾಷೆಯಲ್ಲಿ ವೆಬ್‌ಸರಣಿಗಳನ್ನು ನೋಡುತ್ತಾ ತೃಪ್ತರಾಗುತ್ತಿದ್ದರು. ಕನ್ನಡದಲ್ಲಿಯೂ ವೆಬ್ ಸರಣಿಗಳು ಬಿಡುಗಡೆಯಾಗಿದ್ದರೆ ಚೆನ್ನಾಗಿತ್ತು ಎಂದುಕೊಂಡಿದ್ದರು. ಇದೀಗ ರಮೇಶ್ ಇಂದಿರಾ ನಿರ್ದೇಶನದ ಮಿನಿ ವೆಬ್‌ಸರಣಿ ಒಟಿಟಿಯಲ್ಲಿ ಬಿಡುಗಡೆಯಾಗಲು ರೆಡಿಯಾಗಿದೆ.
ಅಯ್ಯನ ಮನೆ ವೆಬ್ ಸರಣಿ ಬಿಡುಗಡೆ ಯಾವಾಗ?
ಜೀ 5 ಒಟಿಟಿಯಲ್ಲಿ ಇದೇ ಏಪ್ರಿಲ್ 25ರಿಂದ ಅಯ್ಯನ ಮನೆ ಎಂಬ ಮಿನಿ ವೆಬ್‌ಸರಣಿ ರಿಲೀಸ್ ಆಗಲಿದೆ. ಇದು ಕೇವಲ ಏಳು ಎಪಿಸೋಡ್‌ಗಳನ್ನು ಹೊಂದಿರಲಿದೆ. ಈ ವೆಬ್‌ಸರಣಿಗೆ ಶ್ರುತಿ ನಾಯ್ಡು ಬಂಡವಾಳ ಹೂಡಿದ್ದಾರೆ. ಈ ವೆಬ್‌ಸರಣಿಯಲ್ಲಿ ಖುಷಿ ರವಿ, ಅಕ್ಷಯ್ ನಾಯಕ್, ಮಾನಸಿ ಸುಧೀರ್ ಮುಂತಾದವರು ನಟಿಸಿದ್ದಾರೆ. ಇದು ಕ್ರೈಮ್ ಥ್ರಿಲ್ಲರ್ ಜಾನರ್‌ನ ವೆಬ್‌ಸರಣಿಯಾಗಿದೆ. ಭಯ, ನಂಬಿಕೆ, ವಿಧಿ ನಡುವಿನ ಘರ್ಷಣೆಯ ಕಥೆಯನ್ನು ಇದು ಹೊಂದಿರಲಿದೆ.
ಅಯ್ಯನ ಮನೆ ಹೆಸರಿನ 7 ಭಾಗಗಳ ಅಪರಾಧ ನಾಟಕವನ್ನು ಶೃತಿ ನಾಯ್ಡು ನಿರ್ಮಿಸಿದ್ದಾರೆ. ಇವರು ಬ್ರಹ್ಮಗಂಟು, ಯಾರೇ ನೀ ಮೋಹಿನಿ, ಸಂಘರ್ಷ ಮತ್ತು ಇನ್ನೂ ಅನೇಕ ಟಿವಿ ಧಾರಾವಾಹಿಗಳನ್ನು ನಿರ್ಮಿಸಿ ಖ್ಯಾತಿ ಪಡೆದಿದ್ದಾರೆ. ಅಯ್ಯನ ಮನೆ ಕಾರ್ಯಕ್ರಮದ ಎಲ್ಲಾ 7 ಸಂಚಿಕೆಗಳು Zee5 ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಒಟಿಟಿ ಪ್ಲೇ ಪ್ರೀಮಿಯಂನಲ್ಲಿಯೂ ಈ ವೆಬ್ ಸರಣಿಗಳನ್ನು ನೋಡಬಹುದು.
ಅಯ್ಯನ ಮನೆ ವೆಬ್‌ಸರಣಿ ಕಥೆಯೇನು?
ಇದು ಚಿಕ್ಕಮಂಗಳೂರಿನ ಅಯ್ಯನ ಮನೆ ಕುಟುಂಬದಲ್ಲಿ ನಡೆಯುವ ಕಾಲ್ಪನಿಕ ಕಥೆಯಾಗಿದೆ. ಇದರಲ್ಲಿ ಹಾರರ್ ಅಂಶಗಳು ಸಾಕಷ್ಟು ಇವೆ. ಹಳೆಯ ಕಟ್ಟಡ, ಯಾವುದೇ ಮಹಿಳೆ ಬದುಕಿ ಉಳಿಯದ ಸ್ಥಳ, ನಿಗೂಢ ಸಾವುಗಳ ಸುತ್ತ ಈ ಸರಣಿ ಸುತ್ತುತ್ತದೆ. ಈ ಸಿನಿಮಾದಲ್ಲಿ ಜಾಜಿ ಎಂಬವಳ ಕಥೆ ಇದೆ. ಈಕೆ ಮದುವೆಯಾದ ಮನೆಯಲ್ಲಿ ಮೂವರು ಸೊಸೆಯರು ನಿಗೂಢವಾಗಿ ಮೃತಪಟ್ಟಿದ್ದಾರೆ. ಇವರ ಸಾವಿನ ರಹಸ್ಯ ತಿಳಿಯಲು ಈಕೆ ಮುಂದಾಗುತ್ತಾರೆ. ಈಕೆಗೆ ಈ ಸತ್ಯ ತಿಳಿಯಲು ಸಮಯ ತೀರ ಕಡಿಮೆ ಇದೆ. ಏಕೆಂದರೆ, ಆಕೆಗೂ ಸಾವು ಬರಬಹುದು. ಸಾವಿಗೆ ದೇವತೆ ಕಾರಣವೇ? ಅಥವಾ ಈ ಸಾವುಗಳ ಹಿಂದೆ ಬೇರೆ ಏನಾದರೂ ಕಾರಣವಿದೆಯೇ? ತಿಳಿಯಲು ವೆಬ್‌ಸರಣಿ ನೋಡಬಹುದು.
ಕನ್ನಡದಲ್ಲಿ ಒರಿಜಿನಲ್ ವೆಬ್ ಸರಣಿ ಬಂದು ಸಾಕಷ್ಟು ಸಮಯವಿದೆ. ನಿವೇದಿತಾ ಶಿವರಾಜ್‌ಕುಮಾರ್ ಮತ್ತು ಆರ್‌ಜೆ ಪ್ರದೀಪ ನಿರ್ಮಿಸಿದ ಹನಿಮೂನ್, ಬೈ ಮಿಸ್ಟೇಕ್, ಹೇಟ್ ಯು ರೋಮಿಯೋ ಮುಂತಾದ ಕೆಲವು ವೆಬ್‌ಸರಣಿಗಳು ರಿಲೀಸ್ ಆಗಿವೆ. ಕ್ಯಾಬ್ರೆಯಂತಹ ವೆಬ್‌ಸರಣಿಗಳು ಸೂಕ್ತ ಒಟಿಟಿಗಳು ದೊರಕದೆ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿವೆ.
