ಬಿಗ್‌ಬಾಸ್ ಕನ್ನಡ ಸೀಸನ್ 11: ಬಿಗ್‌ಬಾಸ್ ಸೌಧದಲ್ಲಿ ಓತುಲ ಓತುಲಾ ಓಟ್ ಇಲ್ಲಿ ಒತ್ತುಲಾ ಗಾನ; ಎರಡು ಪಕ್ಷಗಳಲ್ಲಿ ಸರ್ಕಾರ ರಚಿಸೋದು ಯಾರು?
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11 ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಈ ಬಾರಿ ಇಬ್ಬರು ಸ್ಪರ್ಧಿಗಳು ನೇರ ನಾಮಿನೇಟ್ ಆಗಿದ್ದಾರೆ. ಈ ವಾರ ಬಿಗ್‌ಬಾಸ್ ಸ್ಪರ್ಧಿಗಳಿಗೆ ಹೊಸ ಟಾಸ್ಕ್ ನೀಡಿದ್ದಾರೆ. ಅದರಂತೆ ಮನೆಯಲ್ಲಿ ಪ್ರಾಮಾಣಿಕ ಸಮರ್ಥರ ನ್ಯಾಯವಾದಿ ಪಕ್ಷ ಹಾಗೂ ಧರ್ಮಪರ ಸೇನಾಪಕ್ಷ ಶುರುವಾಗಿದೆ.

ಬಿಗ್‌ಬಾಸ್ ಕನ್ನಡ ಸೀಸನ್ 11 ಮೂರು ವಾರಗಳಲ್ಲಿ ಮೂವರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಮೊದಲ ವಾರ ನಟಿ, ನೃತ್ಯಗಾರ್ತಿ ಯಮುನಾ ಶ್ರೀನಿಧಿ ಮನೆಯಿಂದ ಹೊರ ಹೋದರೆ, ಮನೆಯಲ್ಲಿ ಮಹಿಳಾ ಸ್ಪರ್ಧಿಗಳಿಗೆ ಅಸಭ್ಯ ಪದ ಬಳಕೆ ಮಾಡಿದ್ದರಿಂದ ಜಗದೀಶ್ ಹೊರಗೆ ಹೋಗಿದ್ದಾರೆ, ಜಗದೀಶ್ ಮೇಲೆ ಕೋಪಗೊಂಡು ಅವರನ್ನು ತಳ್ಳಿದ್ದಕ್ಕೆ ರಂಜಿತ್ ಕೂಡಾ ಮನೆಯಿಂದ ಹೊರ ಬಂದಿದ್ದಾರೆ.
ನೇರ ನಾಮಿನೇಟ್ ಮಾಡಿದ್ದಕ್ಕೆ ಕೋಪಗೊಂಡ ಮಾನಸಾ
ಈ ವಾರ ಕೆಲವು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಸರಿಗಮಪ ಖ್ಯಾತಿಯ ಹನುಮಂತ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ಟಾಸ್ಕ್ ಗೆದ್ದು ತ್ರಿವಿಕ್ರಮ್ ಹಾಗೂ ಐಶ್ಚರ್ಯ ಶಿಂಧೋಗಿ ಇಬ್ಬರೂ ಕ್ಯಾಪ್ಟನ್ ಪಟ್ಟ ಗಳಿಸಿದ್ದಾರೆ. ಕ್ಯಾಪ್ಟನ್‌ಗಳಿಗೆ ಇರುವ ವಿಶೇಷ ಅಧಿಕಾರದ ಮೂಲಕ ಮಾನಸಾ ಹಾಗೂ ಉಗ್ರಂ ಮಂಜು ಇಬ್ಬರೂ ನೇರವಾಗಿ ನಾಮಿನೇಟ್ ಆಗುತ್ತಾರೆ. ಆದರೆ ಮಾನಸಾ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ತನ್ನನ್ನು ನಾಮಿನೇಟ್ ಮಾಡಲು ಶಿಂಧೋಗಿ ನೀಡಿದ ಕಾರಣಕ್ಕೆ ಮಾನಸಾ ಕೋಪಗೊಂಡಿದ್ದಾರೆ. ನನ್ನ ಗುಣ ಡಿಸೈಡ್ ಮಾಡೋಕೆ ನೀನು ಯಾವೊಳು ಎಂದು ಐಶ್ವರ್ಯ ವಿರುದ್ಧ ಏಕವಚನ ಪ್ರಯೋಗ ಮಾಡುತ್ತಾರೆ. ಉಗ್ರಂ ಮಂಜು ಕೂಡಾ ತ್ರಿವಿಕ್ರಮ್ ಮೇಲೆ ಕೋಪಗೊಳ್ಳುತ್ತಾರೆ. ಇದೆಲ್ಲದರ ನಡುವೆ ಬಿಗ್‌ಬಾಸ್ ಮನೆಯ ಈಗ ರಾಜಕೀಯ ಸೌಧವಾಗಿ ಬದಲಾಗಿದೆ.
ಬಿಗ್‌ಬಾಸ್ ಸೌಧನವಾಗಿ ಪರಿವರ್ತನೆಯಾದ ದೊಡ್ಮನೆ
ವಾಹಿನಿಯು ಇಂದು ಹಂಚಿಕೊಂಡಿರುವ ಪ್ರೋಮೋದಲ್ಲಿ ಮನೆಯಲ್ಲಿ ರಾಜಕೀಯ ಗುಂಪು ಶುರುವಾಗಿದೆ. ಬಿಗ್‌ಬಾಸ್ ಸೂಚನೆಯಂತೆ ಮನೆಯಲ್ಲಿ ಎರಡು ಪಕ್ಷಗಳು ಆರಂಭವಾಗಿದೆ. ಇದು ಸ್ಪರ್ಧಿಗಳು ನೀಡಲಾಗುತ್ತಿರುವ ಹೊಸ ಟಾಸ್ಕ್ ಆಗಿದೆ. ಅದರಂತೆ ಪ್ರಾಮಾಣಿಕ ಸಮರ್ಥರ ನ್ಯಾಯವಾದಿ ಪಕ್ಷ ಹಾಗೂ ಧರ್ಮಪರ ಸೇನಾಪಕ್ಷ ಎಂಬ ಎರಡು ಪಕ್ಷಗಳು ರೂಪುಗೊಂಡಿವೆ. ಪ್ರಾಮಾಣಿಕ ಸಮರ್ಥರ ನ್ಯಾಯವಾದಿ ಪಕ್ಷದಲ್ಲಿ ಹಂಸ, ಐಶ್ವರ್ಯ ಶಿಂಧೋಗಿ, ಮೋಕ್ಷಿತಾ ಪೈ, ಗೌತಮಿ ಜಾಧವ್, ಉಗ್ರಂ ಮಂಜು, ಶಿಶಿರ್ ಶಾಸ್ತ್ರಿ, ಹನುಮಂತ ಹಾಗೂ ಧರ್ಮ ಕೀರ್ತಿ ರಾಜ್ ಇದ್ದರೆ, ಧರ್ಮಪರ ಸೇನಾಪಕ್ಷದಲ್ಲಿ ಚೈತ್ರಾ ಕುಂದಾಪುರ, ಭವ್ಯಾಗೌಡ, ಅನುಷಾ ರೈ, ಮಾನಸಾ, ತ್ರಿವಿಕ್ರಮ್, ಧನ್‌ರಾಜ್ ಆಚಾರ್ ಹಾಗೂ ಸುರೇಶ್ ಇದ್ದಾರೆ. ಈ ಎರಡೂ ಪಕ್ಷಗಳಲ್ಲಿ ಯಾವ ಪಕ್ಷ ಸರ್ಕಾರ ರಚನೆ ಮಾಡಲಿದೆ ಅನ್ನೋದು ಬುಧವಾರದ ಎಪಿಸೋಡ್‌ನಲ್ಲಿ ತಿಳಿಯಲಿದೆ.
ಮಾನಸಾ ವಿರುದ್ಧ ವೀಕ್ಷಕರ ಅಸಮಾಧಾನ
ಈ ನಡುವೆ ಸ್ಪರ್ಧಿ ಮಾನಸಾ ಬಗ್ಗೆ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮಾನಸಾ ಮನೆಯಲ್ಲಿ ಯಾರಿಗೂ ಗೌರವ ಕೊಡದೆ ಏಕವಚನದಲ್ಲಿ ಮಾತನಾಡಿಸುತ್ತಿರುವುದು ನೋಡುಗರ ಬೇಸರಕ್ಕೆ ಕಾರಣವಾಗಿದೆ. ಅಲ್ಲದೆ ಜಗದೀಶ್ ಹಾಗೂ ರಂಜಿತ್ ಇಬ್ಬರನ್ನೂ ಮನೆಯಿಂದ ನಾಮಿನೇಟ್ ಮಾಡಿದ್ದಕ್ಕೆ ಕೂಡಾ ಬಹಳಷ್ಟು ಜನರು ಬೇಸರಗೊಂಡಿದ್ದಾರೆ. ಆದಷ್ಟು ಬೇಗ ಮತ್ತೆ ಜಗದೀಶ್ ಹಾಗೂ ರಂಜಿತ್ ಇಬ್ಬರನ್ನೂ ಬಿಗ್‌ಬಾಸ್‌ಗೆ ಕರೆಸಿಕೊಳ್ಳಿ ಎಂದು ಕಾಮೆಂಟ್ ಮಾಡುವ ಮೂಲಕ ಮನವಿ ಮಾಡುತ್ತಿದ್ದಾರೆ.