ಕನ್ನಡ ಸುದ್ದಿ  /  Entertainment  /  Karnataka Bandh Actor Prakash Raj Apologises Tamil Actor Siddarth Behalf Kannadigas Netizens Reaction Cauvery Water Pcp

ಕಾವೇರಿ ಹೋರಾಟ, ಕನ್ನಡಿಗರ ಪರವಾಗಿ ತಮಿಳು ನಟ ಸಿದ್ಧಾರ್ಥ್‌ರ ಕ್ಷಮೆ ಕೇಳಿದ ಬಹುಭಾಷಾ ನಟ ಪ್ರಕಾಶ್‌ ರಾಜ್‌; ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ

Karnataka Bandh: ಕಾವೇರಿ ನೀರು ಹಂಚಿಕೆ ಕುರಿತಂತೆ ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ತಮಿಳು ನಟ ಸಿದ್ಧಾರ್ಥ್‌ಗೆ ನಿನ್ನೆ ಕನ್ನಡ ಹೋರಾಟಗಾರರ ಪ್ರತಿಭಟನೆಯ ಕಾವು ತಾಗಿದೆ. ಕನ್ನಡಿಗರ ಪರವಾಗಿ ನಟ ಸಿದ್ಧಾರ್ಥ್‌ ಕ್ಷಮೆಯನ್ನು ನಟ ಪ್ರಕಾಶ್‌ರಾಜ್‌ ಕೇಳಿದ್ದಾರೆ. ಜಸ್ಟ್‌ ಆಸ್ಕಿಂಗ್‌ ಟ್ವೀಟ್‌ಗೆ ಕೆಲವರು ಗರಂ ಆಗಿದ್ದಾರೆ.

ಕನ್ನಡಿಗರ ಪರವಾಗಿ ತಮಿಳು ನಟ ಸಿದ್ಧಾರ್ಥ್‌ರ ಕ್ಷಮೆ ಕೇಳಿದ ನಟ ಪ್ರಕಾಶ್‌ ರಾಜ್‌
ಕನ್ನಡಿಗರ ಪರವಾಗಿ ತಮಿಳು ನಟ ಸಿದ್ಧಾರ್ಥ್‌ರ ಕ್ಷಮೆ ಕೇಳಿದ ನಟ ಪ್ರಕಾಶ್‌ ರಾಜ್‌

ಬೆಂಗಳೂರು: ತಮಿಳು ನಟ ಸಿದ್ಧಾರ್ಥ್‌ ಅವರು ನಿನ್ನೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲಿ ಕನ್ನಡ ಪರ ಹೋರಾಟಗಾರರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ತಮಿಳಿನ ಚಿತ್ತ/ ಕನ್ನಡದಲ್ಲಿ ಚಿಕ್ಕು ಸಿನಿಮಾ ಪ್ರಚಾರಕ್ಕಾಗಿ ಇವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ನಡೆಸದಂತೆ ಹೋರಾಟಗಾರರು ತಡೆದಿದ್ದಾರೆ. ಇದರಿಂದ ನಟ ಸಿದ್ಧಾರ್ಥ್‌ ತಮ್ಮ ಪತ್ರಿಕಾಗೋಷ್ಠಿಯನ್ನು ಅರ್ಧದಲ್ಲಿ ನಿಲ್ಲಿಸಿ ಎದ್ದು ಹೋಗಿದ್ದಾರೆ. ಈ ಘಟನೆಗೆ ಸಂಬಂಧಪಟ್ಟಂತೆ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆಗಾಗಿ ತಮಿಳು ನಟ ಸಿದ್ಧಾರ್ಥ್‌ ಅವರ ಕ್ಷಮೆಯನ್ನೂ ಪ್ರಕಾಶ್‌ ರಾಜ್‌ ಕೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನಟ ಸಿದ್ಧಾರ್ಥ್‌ ಕ್ಷಮೆ ಕೇಳಿದ ಪ್ರಕಾಶ್‌ ರಾಜ್‌

"ದಶಕಗಳಷ್ಟು ಹಳೆಯದಾದ ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲವಾಗಿರುವ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅದರ ಮುಖಂಡರನ್ನು ಪ್ರಶ್ನಿಸುವ ಬದಲು.. ಕೇಂದ್ರದ ಮಧ್ಯಸ್ಥಿಕೆಗೆ ಒತ್ತಡ ಹೇರದ ಅನುಪಯುಕ್ತ ಸಂಸದರನ್ನು ಪ್ರಶ್ನಿಸುವ ಬದಲು.. ಈ ರೀತಿ ಜನಸಾಮಾನ್ಯರಿಗೆ ಮತ್ತು ಕಲಾವಿದರಿಗೆ ತೊಂದರೆ ನೀಡುವುದನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡಿಗನಾಗಿ .. ಕನ್ನಡಿಗರ ಪರವಾಗಿ ಕ್ಷಮಿಸಿ ಸಿದ್ಧಾರ್ಥ್‌" ಎಂದು ನಟ ಪ್ರಕಾಶ್‌ ರಾಜ್‌ ಟ್ವೀಟ್‌ ಮಾಡಿದ್ದಾರೆ.

ಚಿಕ್ಕು ಪ್ರಚಾರಕ್ಕೆ ಆಗಮಿಸಿದ್ರು ಸಿದ್ಧಾರ್ಥ್‌

ಈಗಾಗಲೇ ತಮಿಳಿನ ಚಿತ್ತಾ ಸಿನಿಮಾವು ಕನ್ನಡದಲ್ಲಿ ಚಿಕ್ಕು ಹೆಸರಿನಲ್ಲಿ ಬಿಡುಗಡೆಯಾಗಿದೆ. ನಿನ್ನೆ ಬಿಡುಗಡೆಯಾದ ಈ ಚಿತ್ರದ ಕುರಿತು ಪ್ರಚಾರಕ್ಕಾಗಿ ಬೆಂಗಳೂರಿಗೆ ನಟ ಸಿದ್ಧಾರ್ಥ್‌ ಆಗಮಿಸಿದ್ದರು. "ಕಾವೇರಿ ನೀರಿನ ಸಮಸ್ಯೆ ಕುರಿತು ನಾವು ಹೋರಾಟ ಮಾಡುತ್ತಿದ್ದೇವೆ. ಕಾವೇರಿ ನೀರು ತಮಿಳುನಾಡಿಗೆ ಹೋಗ್ತಿದೆ. ಇಲ್ಲಿ ತಮಿಳು ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಇದೆಲ್ಲ ಬೇಕಾ, ಬೇರೆ ದಿನ ಮಾಡೋಕ್ಕೆ ಆಗೋದಿಲ್ಲ" ಎಂದು ಕನ್ನಡ ಪರ ಹೋರಾಟಗಾರರು ಪತ್ರಿಕಾಗೋಷ್ಠಿ ತಡೆದು ಪ್ರಶ್ನಿಸಿದರು. ಹೋರಾಟಗಾರರ ತಡೆಯಿಂದ ತಮಿಳು ನಟ ಸಿದ್ಧಾರ್ಥ್‌ ಪ್ರೆಸ್‌ಮೀಟ್‌ ಅನ್ನು ಅರ್ಧದಲ್ಲಿಯೇ ನಿಲ್ಲಿಸಬೇಕಾಯಿತು.

ಪ್ರಕಾಶ್‌ ರಾಜ್‌ ಟ್ವೀಟ್‌ಗೆ ಪ್ರತಿಕ್ರಿಯೆ

ನಟ ಸಿದ್ಧಾರ್ಥ್‌ ಬಳಿ ಕ್ಷಮೆ ಕೇಳಿ "ಪ್ರಶ್ನಿಸಬೇಕಾಗಿರುವುದು ಇವರನ್ನಲ್ಲ" ಎಂದು ಟ್ವೀಟ್‌ ಮಾಡಿರುವ ಪ್ರಕಾಶ್‌ ರಾಜ್‌ ಪೋಸ್ಟ್‌ಗೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. "ಇವರು ಈ ಸಮಸ್ಯೆ ಕುರಿತು ಸರಕಾರವನ್ನು ಪ್ರಶ್ನಿಸಬೇಕು. ಕಲಾವಿದರನ್ನಲ್ಲ" ಎಂದು ಟ್ವಿಟ್ಟರ್‌ ಬಳಕೆದಾರರೊಬ್ಬರು ಬರೆದಿದ್ದಾರೆ. "ಜನರು ಕಲಾವಿದರನ್ನು ಟಾರ್ಗೆಟ್‌ ಮಾಡುತ್ತಾರೆ. ಇದರಿಂದ ಸುಲಭವಾಗಿ ಪ್ರಚಾರ ದೊರಕುತ್ತದೆ. ರಾಜಕಾರಣಿಗಳು ಮಾತ್ರ ಈ ವಿಷಯಕ್ಕೆ ಏನಾದರೂ ಮಾಡಬಹುದು ಎಂದು ಅವರಿಗೆ ಗೊತ್ತು. ಆದರೆ, ಇವರು ರಾಜಕಾರಣಿಗಳನ್ನು ಪ್ರಶ್ನಿಸದೆ ಕಲಾವಿದರಿಗೆ ತೊಂದರೆ ಮಾಡುತ್ತಾರೆ" ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

"ಭಾರತದಲ್ಲಿ ಮತ ಚಲಾಯಿಸಿದ ಬಳಿಕ ಮತ್ತೊಂದು ಚುನಾವಣೆ ಆರಂಭವಾಗುವವರೆಗೆ ರಾಜಕಾರಣಿಗಳನ್ನು ಪ್ರಶ್ನಿಸಲಾಗದಂತಹ ಸ್ಥಿತಿಯಿದೆ" ಎಂದು ಇನ್ನೊಬ್ಬರು ಟ್ವಿಟ್ಟರ್‌ ಬಳಕೆದಾರರು ಕಾಮೆಂಟ್‌ ಮಾಡಿದ್ದಾರೆ. "ಈ ಘಟನೆ ನಡೆದಾಗ ಸಿದ್ಧಾರ್ಥ್‌ ತುಂಬಾ ಉತ್ತಮವಾಗಿ ನಡೆದುಕೊಂಡಿದ್ದಾರೆ. ಹೋರಾಟಗಾರರ ಜತೆ ಯಾವುದೇ ವಾದಕ್ಕೆ ಇಳಿಯದೆ ಚೀಪ್‌ ಪ್ರಚಾರದಿಂದ ದೂರ ಉಳಿದಿದ್ದಾರೆ" ಎಂದು ಟ್ವಿಟ್ಟರ್‌ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. "ನಿಮ್ಮ ಮಾತಿನಲ್ಲಿ ಸರಿಯಾದ ಅರ್ಥವಿದೆ ಸರ್ ರಾಜಕೀಯ ಪಕ್ಷಗಳೇ ಇದಕ್ಕೆ ನೇರ ಹೊಣೆ ನಾನು 15 ವರ್ಷಗಳಿಂದ ನೋಡುತ್ತಾ ಇದ್ದೀನಿ ಮೂರೂ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದು ಹೋಗಿವೆ ಯಾರೊಬ್ಬರಿಂದಲೂ ಪರಿಹಾರ ಸಿಕ್ಕಿಲ್ಲ ಎಂದ ಮೇಲೆ ಎಲ್ಲಾ ರಾಜಕೀಯ ಪಕ್ಷಗಳು ಫೈಲ್ ಆಗಿವೆ ಎಂದೇ ಅರ್ಥ ಕೇಂದ್ರ ಸರ್ಕಾರವು ಯಾವುದೇ ರೀತಿಯ ಸಲಹೆ ಕೊಟ್ಟಿಲ್ಲ" ಎಂದು ಮತ್ತೊಬ್ಬರು ಎಕ್ಸ್‌ನಲ್ಲಿ ಕಾಮೆಂಟ್‌ ಮಾಡಿದ್ದಾರೆ.

ಪ್ರಕಾಶ್‌ ರಾಜ್‌ ಟ್ವೀಟ್‌ಗೆ ವಿರೋಧ

ಎಕ್ಸ್‌ನಲ್ಲಿ ಕೆಲವರು ಪ್ರಕಾಶ್‌ ರಾಜ್‌ ಟ್ವೀಟ್‌ಗೆ ಕೆಂಡಕಾರಿದ್ದಾರೆ. "ಪ್ರಕಾಶ್‌ ರಾಜ್‌ ಅವರೇ ನೀವು ಕನ್ನಡಿಗರ ಜವಾಬ್ದಾರಿ ತೆಗೆದುಕೊಳ್ಳಬೇಡಿ. ನೀವು ನಾಲಾಯಕ್‌ ಸಿಎಂ ಮತ್ತು ಅವರ ಬಗ್ಗೆ ಮಾತನಾಡಿ. ಅವರಿಗೂ ಏನೂ ಜವಾಬ್ದಾರಿ ಇಲ್ಲವೇ" ಎಂದು ಎಕ್ಸ್‌ ಬಳಕೆದಾರರೊಬ್ಬರು ಪ್ರಕಾಶ್‌ ರಾಜ್‌ರನ್ನು ಪ್ರಶ್ನಿಸಿದ್ದಾರೆ. "ಇವನ ನಿಲುವು ಕನ್ನಡದ ಅನ್ನ ತಿಂದು, ಬೇರೆ ರಾಜ್ಯಕ್ಕೆ ಸಹಾಯ ಮಾಡೋದು. ಮಹಾನ್ ಕಲಾಕಾರ, ಊಸರವಳ್ಳಿ" "ಕಲಾವಿದ ಕಲಾವಿದರಾಗಿ ಇದ್ದರೆ ಒಳ್ಳೆಯದು.... ಬೇರೆ ವಿಚಾರದಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ..." "ಸ್ವಲ್ಪ ತಿದ್ದಿಕೋ ಕಲಬೆರಕೆ ಕನ್ನಡಿಗನ ಕ್ಷಮಾಪಣೆ ಅಂತಾ ಹಾಕು" "ನಿಮಗೆ ಕೇವಲ ಪ್ರಧಾನಿ ಸಂಸದರು ಮಾತ್ರ ಕಾಣ್ತಾರೆ, ಕರ್ನಾಟಕದ ಸಿಎಂ ಎಂಎಲ್‌ಎಗಳು ಕಾಣಿಸೋದಿಲ್ವ" ಪ್ರಕಾಶ್ ರಾಜ್ ಅವ್ರೆ ಒಟ್ನಲ್ಲಿ ತಮಿಳ್ ನಟನ ಜೊತೆ ನಿಲ್ಲೊ ಸಲುವಾಗಿ ಆದ್ರು #ಕಾವೇರಿನಮ್ಮದು ಅಂತಾ ಟ್ವಿಟ್ ಮಾಡಿದ್ರಲ್ಲ! ಫೈನಲಿ" ಹೀಗೆ ಪ್ರಕಾಶ್‌ ರಾಜ್‌ ಟ್ವೀಟ್‌ಗೆ ಪ್ರತಿರೋಧದ ಹಲವು ಕಾಮೆಂಟ್‌ಗಳು ಬಂದಿವೆ.

ಸಂಬಂಧಿತ ಲೇಖನ

ಮನರಂಜನೆ, ಬಿಗ್‌ಬಾಸ್ ಕನ್ನಡ 10 ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, ಹಿಂದೂಸ್ತಾನ್ ಟೈಮ್ಸ್ ಕನ್ನಡ ,ನೋಡಿ.