KCC Cricket 3: ಕೆಸಿಸಿ ಕ್ರಿಕೆಟ್ ಪಂದ್ಯಾವಳಿ.. ತಂಡಗಳು, ಮೊದಲ ದಿನದ ಆಟದ ಬಗ್ಗೆ ಇಲ್ಲಿದೆ ಮಾಹಿತಿ
ಫೆಬ್ರವರಿ 24 ರಂದು ಸಿಎಂ ಬೊಮ್ಮಾಯಿ ಕೆಸಿಸಿ ಪಂದ್ಯವನ್ನು ಉದ್ಘಾಟಿಸಿ ಎಲ್ಲಾ ತಂಡಕ್ಕೂ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಎಲ್ಲಾ ಕೆಸಿಸಿ ಆಟಗಾರರು, 80 ಅಡಿ ಉದ್ದ ಹಾಗೂ 120 ಅಡಿ ಅಗಲದ ಕನ್ನಡದ ಧ್ವಜವನ್ನು ಅನಾವರಣಗೊಳಿಸಿದ್ದು ವಿಶೇಷವಾಗಿತ್ತು.
ಸ್ಯಾಂಡಲ್‌ವುಡ್ ನಟರು ಒಂದೆಡೆ ಸಿಸಿಎಲ್ ಪಂದ್ಯಗಳಲ್ಲಿ ಬ್ಯುಸಿ ಇದ್ದರೆ ಶುಕ್ರವಾರ ಹಾಗೂ ಶನಿವಾರ ಕೆಸಿಸಿ ಮೂರನೇ ಸೀಸನ್ ಪಂದ್ಯಾವಳಿಗಳಲ್ಲಿ ಭಾಗಿಯಾಗಿದ್ದಾರೆ. ಫೆಬ್ರವರಿ 11, 12 ರಂದು ಮೈಸೂರಿನಲ್ಲಿ ನಡೆಯಬೇಕಿದ್ದ ಪಂದ್ಯಗಳು ಫೆಬ್ರವರಿ 24 ಹಾಗೂ 25 ಎರಡು ದಿನಗಳ ಕಾಲ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
ತಂಡದ ಹೆಸರು ಹಾಗೂ ಕ್ಯಾಪ್ಟನ್‌ಗಳು
ಒಡೆಯರ್ ಚಾರ್ಜರ್ಸ್ - ಶಿವರಾಜ್‌ಕುಮಾರ್
ಹೊಯ್ಸಳ ಈಗಲ್ಸ್ - ಸುದೀಪ್
ವಿಜಯನಗರ ಪೇಟ್ರಿಯಾಟ್ಸ್ - ಉಪೇಂದ್ರ
ಗಂಗಾ ವಾರಿಯರ್ಸ್ - ಧನಂಜಯ್
ಕಂದಂಬ ಲಯನ್ಸ್ - ಗಣೇಶ್
ರಾಷ್ಟ್ರಕೂಟ ಪ್ಯಾಂಥರ್ಸ್ - ಧ್ರುವ ಸರ್ಜಾ
ಇವಿಷ್ಟೂ ಕನ್ನಡ ಚಲನಚಿತ್ರ ಕಪ್ ಪಂದ್ಯದಲ್ಲಿ ಭಾಗವಹಿಸುತ್ತಿರುವ ತಂಡಗಳು ಹಾಗೂ ಕ್ಯಾಪ್ಟನ್‌ಗಳ ಮಾಹಿತಿ.
ಪಂದ್ಯವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಫೆಬ್ರವರಿ 24 ರಂದು ಸಿಎಂ ಬೊಮ್ಮಾಯಿ ಕೆಸಿಸಿ ಪಂದ್ಯವನ್ನು ಉದ್ಘಾಟಿಸಿ ಎಲ್ಲಾ ತಂಡಕ್ಕೂ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಎಲ್ಲಾ ಕೆಸಿಸಿ ಆಟಗಾರರು, 80 ಅಡಿ ಉದ್ದ ಹಾಗೂ 120 ಅಡಿ ಅಗಲದ ಕನ್ನಡದ ಧ್ವಜವನ್ನು ಅನಾವರಣಗೊಳಿಸಿದ್ದು ವಿಶೇಷವಾಗಿತ್ತು. ಈಗಾಗಲೇ ಕಿಚ್ಚನ ಸಾರಥ್ಯದಲ್ಲಿ ಎರಡು ಸೀಸನ್‌ಗಳು ಯಶಸ್ವಿಯಾಗಿದ್ದು ಈಗ ಮೂರನೇ ಸೀಸನ್ ನಡೆಯುತ್ತಿದೆ.
ಈ ಪಂದ್ಯಗಳಲ್ಲಿ ಕನ್ನಡ ಸಿನಿಮಾ ಸ್ಟಾರ್‌ಗಳು ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ತಾರೆಗಳು ಒಂದಾಗಿ ಆಡುತ್ತಿರುವುದು ಮತ್ತೊಂದು ವಿಶೇಷ. ಕ್ರಿಸ್ ಗೇಲ್, ಸುರೇಶ್ ರೈನಾ, ಬ್ರಿಯಾನ್ ಲಾರಾ, ಹರ್ಷೆಲ್ ಗಿಬ್ಸ್ , ಸುಬ್ರಮಣಿಯಂ ಬದ್ರಿನಾಥ್, ಮತ್ತು ತಿಲಕರತ್ನೆ ದಿಲ್ಶಾನ್ ಈ ಪಂದ್ಯ ಆಡಲಿದ್ದು ಒಂದೊಂದು ತಂಡದಲ್ಲಿ ಒಬ್ಬೊಬ್ಬರು ಸಿನಿಮಾ ತಾರೆಯರಿಗೆ ಸಾಥ್ ನೀಡುತ್ತಿದ್ದಾರೆ. ಎಲ್ಲಾ ತಂಡಗಳು 10 ಓವರ್‌ಗಳಿಗೆ ಈ ಪಂದ್ಯಗಳನ್ನು ಆಡಲಿವೆ.
ಮೊದಲ ದಿನದ ಪಂದ್ಯಗಳು
ಫೆಬ್ರವರಿ 24, ಶುಕ್ರವಾರ ಮೂರು ಪಂದ್ಯಗಳು ನಡೆದಿವೆ. ಮೊದಲ ಪಂದ್ಯದಲ್ಲಿ ನಟ ಧನಂಜಯ್ ಸಾರಥ್ಯದ ಗಂಗಾ ವಾರಿಯರ್ಸ್ ಹಾಗೂ ಸುದೀಪ್ ಸಾರಥ್ಯದ ಹೊಯ್ಸಳ ಈಗಲ್ಸ್, ಎರಡನೇ ಪಂದ್ಯದಲ್ಲಿ ಮತ್ತೆ ಸುದೀಪ್ ಅವರ ಹೊಯ್ಸಳ ಈಗಲ್ಸ್ ಹಾಗೂ ಶಿವರಾಜ್ ಕುಮಾರ್ ಮುನ್ನಡೆಸುತ್ತಿರುವ ಒಡೆಯರ್ ಚಾರ್ಜರ್ಸ್ , ಮೂರನೇ ಪಂದ್ಯದಲ್ಲಿ ಧ್ರುವ ಸರ್ಜಾ ಮುನ್ನಡೆಸುತ್ತಿರುವ ರಾಷ್ಟ್ರಕೂಟ ಪ್ಯಾಂಥರ್ಸ್ ಮತ್ತು ಕದಂಬ ಲಯನ್ಸ್ ಭಾಗಿಯಾಗಿದ್ದವು.
ಮೊದಲ ಪಂದ್ಯದಲ್ಲಿ ಧನಂಜಯ್ ಅವರ ಗಂಗಾ ವಾರಿಯರ್ಸ್ , ಎರಡನೇ ಪಂದ್ಯದಲ್ಲಿ ಸುದೀಪ್ ಅವರ ಹೊಯ್ಸಳ ಈಗಲ್ಸ್ ಹಾಗೂ ಮೂರನೇ ಪಂದ್ಯದಲ್ಲಿ ಗಣೇಶ್ ಕ್ಯಾಪ್ಟನ್ ಆಗಿರುವ ಕದಂಬ ಲಯನ್ಸ್ ಗೆಲುವು ಸಾಧಿಸಿದೆ. ನಿನ್ನೆ ಹಾಗೂ ಇಂದು ಪಂದ್ಯ ನೋಡಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಹಾಗೂ ಸಿನಿಪ್ರಿಯರು ಜಮಾಯಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಈ ಬಾರಿಯ ಕೆಸಿಸಿ ಕಪ್ ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕು.
ವಿಭಾಗ