ಈ ಕಾರಣಕ್ಕೆ ಶಿವಣ್ಣ ಮತ್ತು ಪುನೀತ್ ರಾಜ್‌ಕುಮಾರ್‌ಗೆ ಧ್ರುವ ಸರ್ಜಾರನ್ನು ಹೋಲಿಕೆ ಮಾಡಿದ ಕೆಡಿ ನಿರ್ದೇಶಕ ಪ್ರೇಮ್
ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಕೆಡಿ ಸಿನಿಮಾದ ಮೊದಲ ಹಾಡು ಶಿವ ಶಿವ ಬಿಡುಗಡೆ ಆಗಿದೆ. ಮುಂದಿನ ವರ್ಷದ ಯುಗಾದಿ ಸಂದರ್ಭದಲ್ಲಿ ಈ ಸಿನಿಮಾವನ್ನು ತೆರೆ ಮೇಲೆ ತರುವುದಾಗಿಯೂ ನಿರ್ದೇಶಕ ಪ್ರೇಮ್ ಹೇಳಿದ್ದಾರೆ. ಜತೆಗೆ ಧ್ರುವ ಅವರನ್ನು ಪುನೀತ್ ರಾಜ್‌ಕುಮಾರ್ ಮತ್ತು ಶಿವಣ್ಣ ಅವರಿಗೆ ಹೋಲಿಸಿದ್ದಾರೆ.
KD The Devil Movie: ಎಲ್ಲ ಅಂದುಕೊಂಡಂತೆ ಆಗಿದ್ದರೆ ಇದೇ ಡಿಸೆಂಬರ್‌ಗೆ ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಕೆಡಿ ದಿ ಡೆವಿಲ್ ಸಿನಿಮಾ ಗ್ರ್ಯಾಂಡ್ ಆಗಿಯೇ ರಿಲೀಸ್ ಆಗಬೇಕಿತ್ತು. ಆದರೆ, ಶೂಟಿಂಗ್ ಬಾಕಿ ಇದ್ದ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದೆ. ಅಭಿಮಾನಿ ವಲಯದಲ್ಲಿ ಉತ್ಸಾಹ ಕುಗ್ಗಬಾರದು ಎಂಬ ಕಾರಣಕ್ಕೆ, ಇದೇ ಕೆಡಿ ಚಿತ್ರದ ಮೊದಲ ಹಾಡು ಶಿವ ಶಿವ.. ರಿಲೀಸ್ ಮಾಡಿದ್ದಾರೆ. ತಮ್ಮ ಸಿನಿಮಾಗಳಲ್ಲಿ ಹಾಡುಗಳೇ ಹಿಟ್ ಎಂಬುದನ್ನು ಸಾಕಷ್ಟು ಬಾರಿ ಸಾಬೀತುಪಡಿಸಿದ್ದಾರೆ ನಿರ್ದೇಶಕ ಜೋಗಿ ಪ್ರೇಮ್. ಈಗ ಅದು ಮತ್ತೆ ಪ್ರೂವ್ ಆಗಿದೆ. ಈ ಹಾಡಿನ ಬಿಡುಗಡೆ ನೆಪದಲ್ಲಿಯೇ ಸಿನಿಮಾ ಬಗ್ಗೆಯೂ ಇಡೀ ತಂಡ ಮಾತನಾಡಿದೆ.
ಏಕ್ ಲವ್ ಯಾ ನಂತರ ಜೋಗಿ ಪ್ರೇಮ್ ನಿರ್ದೇಶನ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ಕೆಡಿ. ಈ ಚಿತ್ರವನ್ನು ದಕ್ಷಿಣ ಭಾರತದ ಹೆಸರಾಂತ ನಿರ್ಮಾಣ ಸಂಸ್ಥೆ ಕೆ.ವಿ.ಎನ್. ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಕೆಡಿ ಮಾತಿನ ಭಾಗದ ಚಿತ್ರೀಕರಣ ಮುಗಿದು, 2 ಹಾಡುಗಳ ಶೂಟಿಂಗ್ ಮಾತ್ರವೇ ಬಾಕಿ ಇದೆ. ಮಂಗಳವಾರ ಈ ಚಿತ್ರದ ಮೊದಲ ಹಾಡು, ಜನಪದ ಶೈಲಿಯ ಶಿವ ಶಿವ ಲಿರಿಕಲ್ ವಿಡಿಯೋ ಬಿಡುಗಡೆ ಸಮಾರಂಭ ಒರಾಯನ್ ಮಾಲ್‌ನಲ್ಲಿ ನೆರವೇರಿತು. ಈ ಹಾಡಿಗೆ ಪ್ರೇಮ್ ಹಾಗೂ ಕೈಲಾಶ್ ಖೇರ್ ದನಿಯಾಗಿದ್ದು, ಉಳಿದಂತೆ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿಯೂ ಈ ಹಾಡು ಹೊರಬಂದಿದೆ.
ಧ್ರುವ ಮತ್ತು ಕೆಡಿ ಬಗ್ಗೆ ಪ್ರೇಮ್ ಹೇಳೋದೇನು?
ಹೊಸ ವರ್ಷಕ್ಕೆ ನಮ್ಮ ಚಿತ್ರದ ಮೊದಲ ಹಾಡಾಗಿ ಶಿವ ಶಿವ ಬಂದಿದೆ. ಕೆಡಿ ಅಂದ್ರೆ ಕಾಳಿದಾಸ, 70ರ ದಶಕದಲ್ಲಿದ್ದ ಜನಪ್ರಿಯ ಜನಪದ ಹಾಡಿನ ಸಾಲನ್ನಿಟ್ಟುಕೊಂಡು ಮಾಡಿದ ಸಾಂಗ್ ಇದು. ಈ ಹಾಡನ್ನು 5 ಭಾಷೆಯಲ್ಲೂ ಬಿಡುಗಡೆ ಮಾಡಿದ್ದೇವೆ. ಹಿಂದಿ ಸಾಂಗನ್ನು ಅಜಯ್ ದೇವಗನ್, ತೆಲುಗು ಸಾಂಗನ್ನು ಹರೀಶ್ ಶಂಕರ್ ಹಾಗೂ ತಮಿಳು ಸಾಂಗನ್ನು ಲೋಕೇಶ್ ಕನಕರಾಜು ರಿಲೀಸ್ ಮಾಡಿದ್ದಾರೆ. ಪೂರ್ತಿ ಹಾಡನ್ನು ಇನ್ನೂ ಬಿಟ್ಟಿಲ್ಲ, ಫುಲ್ ಸಾಂಗ್ ಬೇರೆಯದೇ ಲೆವೆಲ್‌ನಲ್ಲಿದೆ. 1970ರ ಕಾಲಮಾನವನ್ನು ತೋರಿಸೋದು ಅಷ್ಟು ಸುಲಭವಲ್ಲ. ಆಗ ಬೆಂಗಳೂರು ಹೇಗಿತ್ತು ಅಂತ ಮೋಹನ್ ಬಿ.ಕೆರೆ ಅವರು ಅದ್ಭುತ ಸೆಟ್ ಹಾಕಿದ್ದರು. ಚಿತ್ರದಲ್ಲಿ ಒಟ್ಟು 6 ಹಾಡುಗಳಿರಲಿವೆ ಎಂದರು.
ಶಿವಣ್ಣ, ಅಪ್ಪುಗೆ ಹೋಲಿಕೆ
ಧ್ರುವ ನನ್ನ ಬ್ರದರ್ ಇದ್ದಹಾಗೆ, ಕಾಳಿದಾಸ ಎಷ್ಟು ಇನ್ನೋಸೆಂಟೋ, ಅಷ್ಟೇ ರಾ ಆಗಿರುತ್ತಾನೆ. ಆ ಪಾತ್ರವನ್ನು ಧ್ರುವ ರಿಯಲಿಸ್ಟಿಕ್ ಆಗಿ ಮಾಡಿದ್ದಾರೆ. ಈತನನ್ನು ಶಿವಣ್ಣ , ಅಪ್ಪು ಸರ್‌ಗೆ ಹೋಲಿಸುತ್ತೇನೆ, ಏಕೆಂದರೆ ಅಷ್ಟು ಎನರ್ಜಿ ಈತನಲ್ಲಿದೆ. ಚಲಿಸುವ ಕಾರ್ ಮೇಲೆ ನಿಂತು ಡ್ಯಾನ್ಸ್ ಮಾಡಿದ್ದಾನೆ. ನನ್ನ ಸಿನಿಮಾದ ಫಸ್ಟ್ ಹೀರೋನೇ ಮ್ಯೂಸಿಕ್. ನನ್ನ ಕಾಟವನ್ನು ತಡೆದುಕೊಂಡು ಅರ್ಜುನ್ ಜನ್ಯ ಅದ್ಭುತವಾದ ಮ್ಯೂಸಿಕ್ ಮಾಡಿಕೊಟ್ಟಿದ್ದಾರೆ. ಕೆವಿಎನ್ ಸಂಸ್ಥೆ ನನಗೆ ಈವರೆಗೂ ಯಾವುದಕ್ಕೂ ಕೊರತೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಮುಂಬೈನಲ್ಲಿ ಚಿತ್ರದ ಟೀಸರ್ ರಿಲೀಸ್ ಮಾಡುವ ಪ್ಲಾನ್ ಕೂಡ ಇದೆ ಎಂದು ಚಿತ್ರದ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಿದರು.
ಧ್ರುವ ಸರ್ಜಾ ಹೀಗಂದ್ರು..
ಈ ಹಾಡು ಬರಲು ಮುಖ್ಯ ಕಾರಣ ಪ್ರೇಮ್. ಮತ್ತು ಅರ್ಜುನ್ ಜನ್ಯ ಅವರು ಕಂಪೋಜ್ ಮಾಡಿರುವ ಸ್ಟೈಲ್ ತುಂಬಾ ಚೆನ್ನಾಗಿತ್ತು. ಜನ್ಯ ಅವರ ಜತೆ ಫಸ್ಟ್ ಟೈಮ್ ನಾನು ವರ್ಕ್ ಮಾಡಿರೋದು. ನಿರ್ಮಾಪಕ ವೆಂಕಟ್ ಅವರು ಫೋಕ್ ಸಾಂಗ್ ಬೇಕು ಎಂದು ಹೇಳಿದ್ದರು. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಅದ್ದೂರಿ, ಬಹದ್ದೂರ್ ಚಿತ್ರಗಳ ನಂತರ ಮತ್ತೊಂದು ಮುಗ್ದತೆ ಕ್ಯಾರಿ ಆಗಿರೋ ಪಾತ್ರ ನನ್ನದು ಎಂದು ಹೇಳಿದರು ಧ್ರುವ ಸರ್ಜಾ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮಾತನಾಡಿ ಕೆ.ಡಿ. ಚಿತ್ರದ ಮ್ಯೂಸಿಕ್ ಗೆ ಹಾಕಿದ ಹಣದಲ್ಲಿ ಒಂದು ದೊಡ್ಡ ಸಿನಿಮಾನೇ ಮಾಡಬಹುದಿತ್ತು. ಪ್ರೇಮ್ ಅನುಮತಿ ಇಲ್ಲದೆ ಒಂದು ಹುಲ್ಲು ಕಡ್ಡಿನೂ ಅಲ್ಲಾಡೋದಿಲ್ಲ. ಆಕ್ಟಿಂಗ್, ಮ್ಯೂಸಿಕ್ ಅಲ್ಲದೆ ಟ್ರ್ಯಾಕ್ ಸಿಂಗರ್ ಕೂಡ ಅವರೇ ಆಗಿರುತ್ತಾರೆ. ಕೀ ಬೋರ್ಡ್ ಒಂದನ್ನು ನಮಗೆ ಬಿಡುತ್ತಾರೆ. ಅವರೆಂದೂ ಮೊಬೈಲ್ ನಲ್ಲಿ ಸಾಂಗ್ ಕಳಿಸಲ್ಲ ಅವರೇ ಬರ್ತಾರೆ, ಪೆನ್ನಲ್ಲಿ ಲಿರಿಕ್ ಬರೀತಾರೆ. ಕರೋನಾ ಸಮಯದಲ್ಲಿ ನಮ್ಮಣ್ಣನ್ನ ಕಳೆದುಕೊಂಡೆ, ಆದರೆ ಪ್ರೇಮ್ ಆ ಜಾಗವನ್ನು ತುಂಬಿದ್ದಾರೆ. ಯೂರೋಪ್ ನಲ್ಲಿ 264 ಪೀಸ್ ಆರ್ಕೆಸ್ಟ್ರಾ ಮಾಡಿಸಿದ್ದಾರೆ ಎಂದು ಮ್ಯೂಸಿಕ್ ಬಗ್ಗೆ ಸಾಕಷ್ಟು ವಿವರಗಳನ್ನು ನೀಡಿದರು ಜನ್ಯ.
ಯುಗಾದಿಗೆ ಸಿನಿಮಾ ರಿಲೀಸ್
ಕನ್ನಡ, ತೆಲುಗು ತಮಿಳು ಹಿಂದಿ ಹಾಗೂ ಮಲಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ಕೆಡಿ ಚಿತ್ರ ಮುಂದಿನ ವರ್ಷದ ಯುಗಾದಿ ವೇಳೆಗೆ ತೆರೆಕಾಣಲಿದೆ. 1970- 75ರ ಕಾಲಘಟ್ಟದಲ್ಲಿ ನಡೆದ ನೈಜಘಟನೆ ಆಧರಿತ ಗ್ಯಾಂಗ್‌ಸ್ಟರ್ ಕಥೆ ಈ ಚಿತ್ರಲ್ಲಿದೆ. ಚಿತ್ರಕ್ಕಾಗಿಯೇ 20 ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ಬಹು ಕೋಟಿ ವೆಚ್ಚದಲ್ಲಿ ಅದ್ದೂರಿ ಸೆಟ್‌ಹಾಕಲಾಗಿತ್ತು. ಆರು ಕಲರ್ ಫುಲ್ ಹಾಡುಗಳಿಗೆ ಆರು ಜನ ಕೊರಿಯಾಗ್ರಾಫರ್‌ಗಳು ಕೆಲಸ ಮಾಡುತ್ತಿದ್ದಾರೆ. ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ನೋರಾ ಫತೇಹಿ ಸೇರಿದಂತೆ ಬಾಲಿವುಡ್‌ನ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್, ನಟ ರಮೇಶ್ ಅರವಿಂದ್ ಸಹ ಪಾತ್ರವರ್ಗದಲ್ಲಿದ್ದಾರೆ.