ಕೆಡಿ-ದಿ ಡೆವಿಲ್ ಚಿತ್ರದ ಮೊದಲ ಹಾಡು ಡಿ 24ರಂದು ಬಿಡುಗಡೆ; ಈ ಸಾಂಗ್ನಲ್ಲಿ 1000 ಮಂದಿ ಹೆಜ್ಜೆ ಹಾಕಿದ್ದಾರಂತೆ!
KD-The Devil: ಜೋಗಿ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಕೆಡಿ -ದಿ ಡೆವಿಲ್ ಚಿತ್ರದ ಮೊದಲ ಹಾಡು ಡಿಸೆಂಬರ್ 24 ರಂದು ಬಿಡುಗಡೆಯಾಗಲಿದೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಅಭಿನಯದ ‘ಕೆಡಿ – ದಿ ಡೆವಿಲ್’ (KD-The Devil) ಚಿತ್ರವು ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ, ಚಿತ್ರದ ಚಿತ್ರೀಕರಣ ಮುಗಿಯದ ಕಾರಣ, ಅನಿರ್ಧಿಷ್ಟಾವಧಿ ಮುಂದಕ್ಕೆ ಹೋಗಿದೆ. ಚಿತ್ರವು ಮುಂದಿನ ವರ್ಷ ಬಿಡುಗಡೆಯಾಗಲಿದ್ದು, ಅದಕ್ಕೂ ಮೊದಲು ಚಿತ್ರದ ಮೊದಲ ಹಾಡಾದ ‘ಶಿವ ಶಿವ’, ಕ್ರಿಸ್ಮಸ್ಗೂ ಮುನ್ನ ಡಿಸೆಂಬರ್ 24ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‍ನಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
‘ಕೆಡಿ – ದಿ ಡೆವಿಲ್’ ಚಿತ್ರದ ಕುರಿತು ಮಾತನಾಡುವ ಪ್ರೇಮ್, ‘ಮುಂಚೆ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡುವ ಯೋಚನೆ ಇತ್ತು. ಆದರೆ, ಕೆಲಸ ಬಾಕಿ ಇರುವ ಕಾರಣ ಬಿಡುಗಡೆ ಸಾಧ್ಯವಿಲ್ಲ. 2 ಹಾಡುಗಳ ಚಿತ್ರೀಕರಣ ಇನ್ನೂ ಬಾಕಿ ಇದೆ. ಮೊನ್ನೆಯಿಂದ ಡಬ್ಬಿಂಗ್ ಕೆಲಸ ಶುರುವಾಗಿದೆ. ಮುಂದಿನ ತಿಂಗಳೊಳಗೆ ಕನ್ನಡದ ಡಬ್ಬಿಂಗ್ ಮುಗಿದರೆ, ಬೇರೆ ಭಾಷೆಗಳಿಗೆ ಡಬ್ ಮಾಡಲಾಗುತ್ತದೆ. ಚಿತ್ರದಲ್ಲಿ 6 ಹಾಡುಗಳಿದ್ದು, ಎಲ್ಲವೂ ರೆಡಿ ಇದೆ. ಈ ಚಿತ್ರದ ಹಾಡುಗಳು ಇಡೀ ದೇಶಕ್ಕೇ ದೊಡ್ಡ ಆಲ್ಬಂ. ಈ ವಿಷಯವನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಮೊದಲ ಬಾರಿಗೆ 260 ಜನ ಆರ್ಕೆಸ್ಟ್ರಾದಲ್ಲಿ ಭಾಗವಹಿಸಿದ್ದಾರೆ. ಯೂರೋಪ್, ಮುಂಬೈ, ಚೆನ್ನೈ ಮುಂತಾದ ಕಡೆ ಚಿತ್ರದ ಸಂಗೀತದ ಕೆಲಸಗಳಾಗಿವೆ’ ಎಂದು ಹೇಳಿದ್ದಾರೆ.
1000ಕ್ಕೂ ಅಧಿಕ ಡ್ಯಾನ್ಸರ್ಗಳು ಹೆಜ್ಜೆ
ಮೊದಲ ಹಾಡು ಬಿಡುಗಡೆ ಕುರಿತು ಮಾತನಾಡುವ ಪ್ರೇಮ್, ‘ಚಿತ್ರದ ಮೊದಲ ಹಾಡು ‘ಶಿವ ಶಿವ …’, ಡಿ. 24ಕ್ಕೆ ಬಿಡಗುಡೆಯಾಗಲಿದೆ. ಅದೊಂದು ಜಾನಪದ ಶೈಲಿಯ ಹಾಡು. ಈ ಹಾಡು ಮಕ್ಕಳಿಗೆ ಬಹಳ ಇಷ್ಟವಾಗುತ್ತದೆ. ತೆರೆಯ ಮೇಲೆ ನೋಡುವುದಕ್ಕೆ ಬಹಳ ಖುಷಿಯಾಗುತ್ತದೆ. ಹಾಡು ನೋಡಿದವರು ಅದ್ಭುತ ಎನ್ನುತ್ತಿದ್ದಾರೆ. ಹಾಡಿನಲ್ಲಿ ಸುಮಾರು 1000ಕ್ಕೂ ಹೆಚ್ಚು ಡ್ಯಾನ್ಸರ್ಗಳು ಹೆಜ್ಜೆ ಹಾಕಿದ್ದಾರೆ. ಹಾಡು ನೋಡಿದವರೆಲ್ಲಾ ಸಲ್ಮಾನ್ ಖಾನ್, ಶಾರೂಖ್ ಖಾನ್ ಶೈಲಿಯ ಹಾಡಿದ್ದ ಹಾಗಿದೆ ಎನ್ನುತ್ತಿದ್ದಾರೆ. ಅವರೊಬ್ಬರೇ ಅಲ್ಲ, ನಾವು ಸಹ ಈ ತರಹದ ಹಾಡು ಮಾಡುವ ಶಕ್ತಿ ಇದೆ. ಬರೀ ಇದೊಂದೇ ಹಾಡಷ್ಟೇ ಅಲ್ಲ, ಎಲ್ಲಾ ಹಾಡುಗಳೂ ಗ್ರಾಂಡ್ ಆಗಿ ಮೂಡಿಬರುತ್ತಿವೆ. ಎಲ್ಲಾ ಹಾಡುಗಳನ್ನು ಆಯಾ ಭಾಷೆಯ ಜನಪ್ರಿಯ ಗಾಯಕ-ಗಾಯಕಿಯರಿಂದ ಹಾಡಿಸಿದ್ದೇವೆ. ಹಾಗಾಗಿ, ಸ್ವಲ್ಪ ತಡವಾಗಿದೆ’ ಎಂದಿದ್ದಾರೆ.
‘ಕೆಡಿ – ದಿ ಡೆವಿಲ್’ ಚಿತ್ರದಲ್ಲಿದೆ ಬಹುದೊಡ್ಡ ತಾರಾಗಣ
‘ಕೆಡಿ – ದಿ ಡೆವಿಲ್’ ಚಿತ್ರಕ್ಕೆ ಪ್ರೇಮ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‍ನಡಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಮತ್ತು ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ. ಈ ಚಿತ್ರದಲ್ಲಿ ಒಟ್ಟು 6 ಹಾಡುಗಳಿವೆ ಎಂದು ವರದಿಯಾಗಿದೆ. ಚಿತ್ರದ ಆಡಿಯೋ ಹಕ್ಕುಗಳು ಈ ವರ್ಷದ ಮೇ ತಿಂಗಳಲ್ಲಿ ದಾಖಲೆಯ ಬೆಲೆಗೆ ಮಾರಾಟವಾಗಿವೆ. ಕೆಡಿ - ದಿ ಡೆವಿಲ್ 1970ರ ಬೆಂಗಳೂರಿನಲ್ಲಿ ನಡೆದ ಭೂಗತ ಕಥೆಯಾಗಿದೆ. ಅಂದಹಾಗೆ, ಚಿತ್ರದ ಹೆಚ್ಚಿನ ಭಾಗವನ್ನು ವಿಶೇಷವಾಗಿ ರಚಿಸಲಾದ ಸೆಟ್‌ಗಳಲ್ಲಿ ಚಿತ್ರೀಕರಿಸಲಾಗಿದೆ.
ವರದಿ: ಚೇತನ್ ನಾಡಿಗೇರ್