ವಿಮರ್ಶೆ ದೃಷ್ಟಿಯಿಂದ ಮೆಚ್ಚುಗೆ ಪಡೆದ ಕನ್ನಡದ ಚಿತ್ರವೀಗ ವರ್ಷದ ಬಳಿಕ ಒಟಿಟಿಗೆ ಎಂಟ್ರಿ.. ಆದರೆ
ಕಳೆದ ವರ್ಷದ ಮಾರ್ಚ್ 15ರಂದು ರಾಜ್ಯಾದ್ಯಂತ ಬಿಡುಗಡೆ ಆಗಿದ್ದ ಗೌರಿಶಂಕರ್ ನಾಯಕನಾಗಿ ನಟಿಸುವುದರ ಜತೆಗೆ ನಿರ್ಮಾಣವನ್ನೂ ಮಾಡಿದ್ದ ʻಕೆರೆಬೇಟೆʼ ಇದೀಗ ವರ್ಷದ ಬಳಿಕ ಒಟಿಟಿಗೆ ಆಗಮಿಸಿದೆ. ಮಲೆನಾಡ ಭಾಗದ ಕಥೆಯನ್ನೊಳಗೊಂಡ ಕೆರೆಬೇಟೆ ಸಿನಿಮಾವನ್ನು ರಾಜ್‌ಗುರು ನಿರ್ದೇಶನ ಮಾಡಿದ್ದರು.

ಒಟಿಟಿಯಲ್ಲಿ ಕನ್ನಡ ಸಿನಿಮಾಗಳ ಆಗಮನವೇ ತುಂಬ ವಿರಳ. ಸ್ಟಾರ್ ನಟರ ಸಿನಿಮಾಗಳು, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಕೆಲವೇ ಕೆಲವು ಸಿನಿಮಾಗಳು ಮಾತ್ರ ಒಟಿಟಿಗೆ ಆಗಮಿಸುತ್ತವೆ. ಅದೂ ತಿಂಗಳುಗಟ್ಟಲೆ ಕಾದ ಬಳಿಕ. ಇದೀಗ ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದು ವಿಮರ್ಶೆ ದೃಷ್ಟಿಯಿಂದಲೂ ಹೌದೌದು ಎನಿಸಿಕೊಂಡಿದ್ದ ಚಿತ್ರವೀಗ ಒಟಿಟಿಗೆ ಆಗಮಿಸಿದೆ. ಆ ಸಿನಿಮಾ ಬೇರಾವುದೂ ಅಲ್ಲ, ʻಕೆರೆಬೇಟೆʼ.
ಕಳೆದ ವರ್ಷದ ಮಾರ್ಚ್ 15ರಂದು ರಾಜ್ಯಾದ್ಯಂತ ಬಿಡುಗಡೆ ಆಗಿದ್ದ ಗೌರಿಶಂಕರ್ ನಾಯಕನಾಗಿ ನಟಿಸುವುದರ ಜತೆಗೆ ನಿರ್ಮಾಣವನ್ನೂ ಮಾಡಿದ್ದ ʻಕೆರೆಬೇಟೆʼ ಇದೀಗ ವರ್ಷದ ಬಳಿಕ ಒಟಿಟಿಗೆ ಆಗಮಿಸಿದೆ. ಮಲೆನಾಡ ಭಾಗದ ಕಥೆಯನ್ನೊಳಗೊಂಡ ಕೆರೆಬೇಟೆ ಸಿನಿಮಾವನ್ನು ರಾಜ್‌ಗುರು ನಿರ್ದೇಶನ ಮಾಡಿದ್ದರು. ಶಿವಮೊಗ್ಗ, ಚಿಕ್ಕಮಗಳೂರು ಸುತ್ತಮುತ್ತ ಶೂಟಿಂಗ್ ಮಾಡಿಕೊಂಡಿದ್ದ ಈ ಸಿನಿಮಾ, ಮಲೆನಾಡಿನ ಮೀನು ಬೇಟೆಯ ಸಂಪ್ರದಾಯವನ್ನು ಪ್ರೇಕ್ಷಕರ ಮುಂದಿಟ್ಟಿತ್ತು.
ಪಾತ್ರವರ್ಗದಲ್ಲಿ ಯಾರೆಲ್ಲ ಇದ್ದಾರೆ?
ʻಜನಮನ ಸಿನಿಮಾ ಸಂಸ್ಥೆʼ ಬ್ಯಾನರ್‌ನಲ್ಲಿ ನಾಯಕ ಗೌರಿಶಂಕರ್ ಕೆರೆಬೇಟೆ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ನಾಯಕಿಯಾಗಿ ಬಿಂದು ಗೌಡ ಕಾಣಿಸಿಕೊಂಡಿದ್ದರೆ, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಕುಮಾರ್, ಹರಿಣಿ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದರು. ಚಿತ್ರಮಂದಿರಗಳಲ್ಲಿ ಸದ್ದು ಮಾಡಿದ್ದ ಈ ಸಿನಿಮಾ ಕಳೆದ ವರ್ಷದ ನವೆಂಬರ್ 20ರಿಂದ 28ರ ವರೆಗೆ ಗೋವಾದಲ್ಲಿ ನಡೆಯ 55ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿತ್ತು. ಇದೀಗ ಇದೇ ಚಿತ್ರ ಒಟಿಟಿಗೆ ಆಗಮಿಸಿದೆ.
ಯಾವ ಒಟಿಟಿಯಲ್ಲಿ ವೀಕ್ಷಣೆ?
ಕೆರೆಬೇಟೆ ಸಿನಿಮಾ ಇದೀಗ ಅಮೆಜಾನ್ ಪ್ರೈಂ ವಿಡಿಯೋ ಒಟಿಟಿಯಲ್ಲಿ ಇಂದಿನಿಂದ (ಮೇ 2) ಸ್ಟ್ರಿಮೀಂಗ್ ಆರಂಭಿಸಿದೆ. ಚಿತ್ರಮಂದಿರಗಳಲ್ಲಿ ಕಣ್ತುಂಬಿಕೊಂಡು ಮೆಚ್ಚಿದ್ದ ಪ್ರೇಕ್ಷಕರಿಗೆ ಮತ್ತು ಯಾರ್ಯಾರು ಚಿತ್ರಮಂದಿರಗಳಲ್ಲಿ ಮಿಸ್ ಮಾಡಿಕೊಂಡಿದ್ದಾರೋ ಅವರೆಲ್ಲರೂ ಮಗದೊಮ್ಮೆ ಅಮೆಜಾನ್ ಪ್ರೈಂನಲ್ಲಿ ನಮ್ಮ ಸಿನಿಮಾವನ್ನು ವೀಕ್ಷಿಸಬಹುದು ಎಂದು ನಾಯಕ ನಟ ಗೌರಿಶಂಕರ್ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಈ ಸಿನಿಮಾ ಬಾಡಿಗೆ ಆಧಾರದ ಮೇಲೆ ವೀಕ್ಷಣೆಗೆ ಲಭ್ಯವಿದೆ.
ಕಾಲಾಪತ್ಥರ್ ಸಹ ಒಟಿಟಿಗೆ
ಕಳೆದ ವರ್ಷದ ಸೆಪ್ಟೆಂಬರ್ 12ರಂದು ತೆರೆಗೆ ಬಂದಿದ್ದ ಕಾಲಾಪತ್ಥರ್ ಸಿನಿಮಾ ಸಹ ಸುದೀರ್ಘ 180 ದಿನಗಳ ಬಳಿಕ ಒಟಿಟಿಗೆ ಆಗಮಿಸಿದೆ. ಕೆಂಡಸಂಪಿಗೆ, ಕಾಲೇಜ್ ಕುಮಾರ್ ಸಿನಿಮಾಗಳಲ್ಲಿ ನಟಿಸಿದ ವಿಕ್ಕಿ, ಕಾಲಾಪತ್ಥರ್ ಸಿನಿಮಾದಲ್ಲಿ ನಾಯಕನಾಗಿ ನಟಿಸುವುದಷ್ಟೇ ಅಲ್ಲದೆ, ನಿರ್ದೇಶಕನಾಗಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಇದೇ ಚಿತ್ರದಲ್ಲಿ ಡಾ. ರಾಜ್‌ಕುಮಾರ್ ಮೊಮ್ಮಗಳು ಧನ್ಯಾ ರಾಮಕುಮಾರ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಇನ್ನುಳಿದಂತೆ ಟಿ ಎಸ್ ನಾಗಾಭರಣ, ಅಚ್ಯುತ್ ಕುಮಾರ್, ಸಂಪತ್ ಮೈತ್ರೇಯ, ರಾಜೇಶ್ ನಟರಂಗ ಸೇರಿ ಹಲವರು ಪಾತ್ರವರ್ಗದಲ್ಲಿದ್ದರು. ಅನೂಪ್ ಸೀಳಿನ್ ಸಂಗೀತ ನಿರ್ದೇಶನದ ಈ ಸಿನಿಮಾಕ್ಕೆ ಸಂದೀಪ್ ಕುಮಾರ್ ಛಾಯಾಗ್ರಹಣವಿದೆ. ದೀಪು ಎಸ್ ಕುಮಾರ್ ಸಂಕಲನವಿದೆ. ಈ ಸಿನಿಮಾವನ್ನು ಸನ್ ನೆಕ್ಸ್ಟ್ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು.