ಕಿಚ್ಚನ ಮ್ಯಾಕ್ಸ್ vs ಉಪ್ಪಿಯ ಯುಐ! 2024ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಕನ್ನಡದ ಸಿನಿಮಾ ಯಾವುದು?
ಸ್ಯಾಂಡಲ್‌ವುಡ್‌ನಲ್ಲಿ 2024ರ ವರ್ಷಾಂತ್ಯಕ್ಕೆ ದೊಡ್ಡ ಸಿನಿಮಾಗಳು ಬಿಡುಗಡೆ ಆಗಿ, ಪ್ರೇಕ್ಷಕನನ್ನು ಮನರಂಜಿಸಿದವು. ಉಪ್ಪಿಯೂ ಯುಐ ಮತ್ತು ಕಿಚ್ಚ ಸುದೀಪ್ ಅವರ ಮ್ಯಾಕ್ಸ್ ಸಿನಿಮಾ ಗಳಿಕೆ ವಿಚಾರದಲ್ಲಿಯೂ ಮುಂದಡಿ ಇರಿಸಿದವು. ಹಾಗಾದರೆ, 2024ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಕನ್ನಡ ಸಿನಿಮಾ ಯಾವುದು? ಇಲ್ಲಿದೆ ವಿವರ.
Max vs UI Box office Collection: ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರವು ಕಳೆದ ಬುಧವಾರ ಬಿಡುಗಡೆಯಾಗಿ ಒಂದು ವಾರ ಯಶಸ್ವಿ ಪ್ರದರ್ಶನವನ್ನು ಕಂಡಿದೆ. ಚಿತ್ರವು ಒಂದು ವಾರದಲ್ಲಿ 32.35 ಕೋಟಿ ರೂ. ಗಳಿಕೆ ಮಾಡಿದೆ ಎಂದು ಬಾಕ್ಸ್ ಆಫೀಸ್ ಟ್ರಾಕರ್ ಸ್ಯಾಕ್ನಿಲ್ ಡಾಟ್‍ಕಾಮ್ ವರದಿ ಮಾಡಿದೆ. ಚಿತ್ರವು ಮೊದಲ ವಾರದಲ್ಲಿ 32.35 ಕೋಟಿ ರೂ. ಗಳಿಕೆ ಮಾಡುವ ಮೂಲಕ ಕಳೆದ ವರ್ಷ ಕನ್ನಡ ಚಿತ್ರರಂಗದಲ್ಲಿ ಮೊದಲ ವಾರ ಅತೀ ಹೆಚ್ಚು ಗಳಿಕೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲ, ಕಳೆದ ವರ್ಷ ಕನ್ನಡ ಚಿತ್ರರಂಗದಲ್ಲೇ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ.
2024, ಕನ್ನಡ ಚಿತ್ರರಂಗದ ಪಾಲಿಗೆ ಅಷ್ಟೇನೂ ಲಾಭದಾಯಕ ಆಗಿರಲಿಲ್ಲ. ಬಿಡುಗಡೆಯಾದ 220 ಚಿತ್ರಗಳ ಪೈಕಿ ನಷ್ಟ ಕಂಡ ಚಿತ್ರಗಳೇ ಹೆಚ್ಚು ಬೆರಳಣಿಕೆಯಷ್ಟು ಚಿತ್ರಗಳು ಒಳ್ಳೆಯ ಗಳಿಕೆ ಮಾಡಿದವಾದರೂ, ದೊಡ್ಡ ಲಾಭವನ್ನೇನೂ ಮಾಡಲಿಲ್ಲ ಎಂಬುದು ಸತ್ಯ. ಹಾಗೆ ನೋಡಿದರೆ, ವರ್ಷದ ಮೊದಲಾರ್ಧ ಗಳಿಕೆಯೂ ಇಲ್ಲ, ಲಾಭವೂ ಇಲ್ಲ ಎನ್ನುವಂತಿತ್ತು.
ವರ್ಷದ ದ್ವಿತೀಯಾರ್ಧ ಕಮಾಲ್
ಇದ್ದುದರಲ್ಲೇ ವರ್ಷದ ದ್ವಿತೀಯಾರ್ಧದಲ್ಲಿ ಒಂದಿಷ್ಟು ಚಿತ್ರಗಳು ಗಳಿಕೆ ಮಾಡಿ, ಚಿತ್ರರಂಗದ ಮಾನ ಉಳಿಸಿದವು. ‘ದುನಿಯಾ’ ವಿಜಯ್ ಅಭಿನಯದ ‘ಭೀಮ’ ಚಿತ್ರವು 19.55 ಕೋಟಿ ರೂ. ಗಳಿಕೆ ಮಾಡಿದರೆ, ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರವು 19 ಕೋಟಿಯವರೆಗೂ ಗಳಿಕೆ ಮಾಡಿದೆ. ಶ್ರೀಮುರಳಿ ಅಭಿನಯದ ಚಿತ್ರವು ಒಟ್ಟಾರೆ 20.55 ಕೋಟಿ ರೂ. ಗಳಿಕೆ ಮಾಡಿದರೆ, ಶಿವರಾಜಕುಮಾರ್ ಅಭಿನಯದ ‘ಭೈರತಿ ರಣಗಲ್’ ಚಿತ್ರವು 18 ಕೋಟಿ ರೂ. ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಇನ್ನು, ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ‘UI’ ಮೊದಲ ವಾರ 26.3 ಕೋಟಿ ರೂ. ಗಳಿಕೆ ಮಾಡಿ, ಇದೀಗ 30ರ ಆಸುಪಾಸಿನಲ್ಲಿದೆಯಂತೆ.
ಲಾಭದತ್ತ ಮುಖ ಮಾಡಿದ ಮ್ಯಾಕ್ಸ್
ಈಗ ‘ಮ್ಯಾಕ್ಸ್’ ಚಿತ್ರವು ಮೊದಲ ವಾರ 32 ಕೋಟಿ ರೂ. ಗಳಿಕೆ ಮಾಡುವ ಮೂಲಕ ಕಳೆದ ವರ್ಷದ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಈ ಚಿತ್ರದಿಂದ ನಿರ್ಮಾಪಕರಿಗೆ ಮೊದಲ ವಾರ 16 ಕೋಟಿ ರೂ.ವರೆಗೂ ಶೇರ್ ಬಂದಂತಾಗುತ್ತದೆ. ಚಿತ್ರಕ್ಕೆ 30ರಿಂದ 40 ಕೋಟಿ ರೂ.ವರೆಗೂ ಖರ್ಚಾಗಿದೆ ಎಂದು ಹೇಳಲಾಗುತ್ತಿದೆ. ಚಿತ್ರದ ಸ್ಯಾಟಲೈಟ್ ಹಕ್ಕುಗಳು ಜೀ ಕನ್ನಡಕ್ಕೆ ಮಾರಾಟವಾಗಿದ್ದು, ಅದು ಮತ್ತು ಚಿತ್ರಮಂದಿರದ ಗಳಿಕೆಯಿಂದ ಬಂಡವಾಳದ ಬಹುತೇಕ ವಾಪಸ್ಸಾಗಿದೆ ಎಂಬ ಮಾತಿದೆ. ಇನ್ನು ಡಿಜಿಟಲ್ ಹಕ್ಕುಗಳು ಒಳ್ಳೆಯ ದರಕ್ಕೆ ಮಾರಾಟವಾದರೆ, ಚಿತ್ರದ ನಿರ್ಮಾಪಕರು ಒಂದಿಷ್ಟು ಲಾಭ ನೋಡಿದಂತಾಗುತ್ತದೆ ಎಂಬುದು ಸದ್ಯದ ಲೆಕ್ಕಾಚಾರ.
ಈ ವಿಚಾರದಲ್ಲಿ ಯುಐ ವಿಶೇಷ
ಇನ್ನು, ‘UI’ ಒಟ್ಟಾರೆ ನಷ್ಟದಲ್ಲಿದ್ದರೂ, ಹೊಸದೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವರ್ಷ ‘ಮ್ಯಾಕ್ಸ್’ ಸೇರಿದಂತೆ ಯಾವೊಂದು ಚಿತ್ರವೂ ಬೇರೆ ಭಾಷೆಗಳಿಗೆ ಡಬ್ ಆಗಿ, ಒಳ್ಳೆಯ ಗಳಿಕೆ ಕಾಣಲಿಲ್ಲ. ಇದ್ದುದರಲ್ಲ ‘UI’ ಚಿತ್ರದ ತೆಲುಗು ಅವತರಣಿಕೆಯು ಆಂಧ್ರ ಮತ್ತು ತೆಲಂಗಾಣದಲ್ಲಿ ಒಳ್ಳೆಯ ಪ್ರದರ್ಶನ ಕಂಡಿದೆ ಎಂದು ಹೇಳಲಾಗುತ್ತಿದೆ. ಚಿತ್ರವು ನಾಲ್ಕು ಕೋಟಿ ರೂ.ಗಳಷ್ಟು ಗಳಿಕೆ ಮಾಡಿದ್ದು, ಈ ವರ್ಷ ಕನ್ನಡ ಚಿತ್ರವೊಂದು ಡಬ್ ಆಗಿ ಬೇರೆ ಭಾಷೆಗಳಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಹೆಗ್ಗಳಿಕೆಗೆ ‘UI’ ಪಾತ್ರವಾಗಿದೆ.
(ವರದಿ: ಚೇತನ್ ನಾಡಿಗೇರ್)
-------
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope