ಒಟಿಟಿಗೂ ಮುನ್ನ ಕಿರುತೆರೆಗೆ ಎಂಟ್ರಿಕೊಟ್ಟ ಮ್ಯಾಕ್ಸ್; ಜೀ ಕನ್ನಡದಲ್ಲಿ ಈ ದಿನದಂದು ಕಿಚ್ಚನ ಮ್ಯಾಕ್ಸಿಮಮ್ ಮನರಂಜನೆ
ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಒಟಿಟಿಗೂ ಮುನ್ನವೇ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಜೀ ಕನ್ನಡ ವಾಹಿನಿಯಲ್ಲಿ ಮುಂದಿನ ವಾರ ಈ ಚಿತ್ರವನ್ನು ವೀಕ್ಷಣೆ ಮಾಡಬಹುದು. ಇಲ್ಲಿದೆ ವಿವರ.

Max World Television Premiere: ಡಿಸೆಂಬರ್ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ, ಸದ್ದು ಮಾಡಿತ್ತು ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಮ್ಯಾಕ್ಸ್ ಸಿನಿಮಾ. ಕಾರ್ತಿಕೇಯನ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ, ಕನ್ನಡ ಮಾತ್ರವಲ್ಲದೆ, ತೆಲುಗು ತಮಿಳಿನಲ್ಲಿಯೂ ಬಿಡುಗಡೆ ಆಗಿತ್ತು. ವಿಮರ್ಶೆ ದೃಷ್ಟಿಯಿಂದ ಮೆಚ್ಚುಗೆ ಪಡೆದಿದ್ದ ಮ್ಯಾಕ್ಸ್, ಕಿಚ್ಚನ ಅಭಿಮಾನಿಗಳಿಗೂ ಮ್ಯಾಕ್ಸಿಮಮ್ ಇಷ್ಟವಾಗಿತ್ತು. ಹೀಗಿರುವಾಗಲೇ ಇದೇ ಸಿನಿಮಾ ಇದೀಗ ಒಟಿಟಿಗೂ ಮುನ್ನವೇ ಕಿರುತೆರೆಯಲ್ಲಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗಲಿದೆ.
ತಮಿಳಿನ ನಿರ್ಮಾಪಕ ಕಲೈಪುಲಿ ಎಸ್ ದಾನು ನಿರ್ಮಾಣದಲ್ಲಿ ಮೂಡಿಬಂದ ಮ್ಯಾಕ್ಸ್ ಸಿನಿಮಾ, ಕಲೆಕ್ಷನ್ ವಿಚಾರದಲ್ಲಿಯೂ ಮೋಡಿ ಮಾಡಿತ್ತು. ಸ್ಯಾಕ್ನಿಲ್ ತಾಣದ ಮಾಹಿತಿ ಪ್ರಕಾರ 45.95 ಕೋಟಿ ರೂ. ಕಲೆಕ್ಷನ್ ಮಾಡಿದ್ದು ಒಂದೆಡೆಯಾದರೆ, ಡಿಜಿಟಲ್ ಹಕ್ಕುಗಳು ಮತ್ತು ಸ್ಯಾಟಲೈಟ್ ಹಕ್ಕುಗಳಿಂದಲೂ ಈ ಸಿನಿಮಾಕ್ಕೆ ಒಳ್ಳೆಯ ಮೊತ್ತ ಹರಿದುಬಂದಿದೆ. ಇದೀಗ, ಚಿತ್ರಮಂದಿರಗಳಲ್ಲಿನ ಓಟ ಮುಗಿಸಿರುವ ಮ್ಯಾಕ್ಸ್, ಕಿರುತೆರೆಯ ಮೂಲಕ ಮನೆಗಳಿಗೆ ಎಂಟ್ರಿ ನೀಡಲಿದ್ದಾನೆ.
ಸಹಜವಾಗಿ ಒಂದು ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ, ಅಲ್ಲಿಂದ ಡಿಜಿಟಲ್ ವೇದಿಕೆ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತದೆ. ಆದರೆ, ಮ್ಯಾಕ್ಸ್ ಸಿನಿಮಾ ವಿಚಾರದಲ್ಲಿ ಅದ್ಯಾಕೋ ಕೊಂಚ ಭಿನ್ನವಾಗಿದೆ. ಅಂದರೆ, ಮ್ಯಾಕ್ಸ್ ಸಿನಿಮಾ ಒಟಿಟಿಗೂ ಮುನ್ನವೇ ಕಿರುತೆರೆಯಲ್ಲಿ ಅಬ್ಬರಿಸಲಿದೆ. ಹಾಗಾದರೆ ಯಾವ ವಾಹಿನಿಯಲ್ಲಿ ಮ್ಯಾಕ್ಸ್ ಸಿನಿಮಾ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗಲಿದೆ? ಎಷ್ಟೊತ್ತಿಗೆ ಈ ಸಿನಿಮಾ ಪ್ರಸಾರವಾಗಲಿದೆ ಎಂಬಿತ್ಯಾದಿ ವಿವರ ಇಲ್ಲಿದೆ.
ಜೀ ಕನ್ನಡದಲ್ಲಿ ಮ್ಯಾಕ್ಸ್
ಮ್ಯಾಕ್ಸ್ ಸಿನಿಮಾದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳನ್ನು ಜೀ ಸಂಸ್ಥೆ ಪಡೆದುಕೊಂಡಿದೆ. ವಿಶೇಷ ಏನೆಂದರೆ, ಕಿರುತೆರೆಯಲ್ಲಿ ಪ್ರಸಾರ ಕಂಡ ಬಳಿಕ ಜೀ5 ಒಟಿಟಿಗೆ ಆಗಮಿಸಲಿದೆ ಎನ್ನಲಾಗುತ್ತಿದೆ. ಇದೀಗ ಕಿರುತೆರೆಯ ಪ್ರಸಾರ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದೆ ಜೀ ಕನ್ನಡ. "ಯುದ್ಧ ಹುಟ್ಟಾಕೋರನ್ನ ಕಂಡ್ರೆ ಆಗಲ್ಲ, ಯುದ್ಧಕ್ಕೆ ಹೆದರಿ ಓಡೋರನ್ನ ಕಂಡ್ರಂತೂ ಇವನಿಗೆ ಆಗೋದೇ ಇಲ್ಲ..! ಕಿಚ್ಚ ಸುದೀಪ್ ಅಭಿನಯದ Maximum ಮನರಂಜನೆಯ 'Max' | ಫೆಬ್ರವರಿ 15ರಂದು ರಾತ್ರಿ 7:30ಕ್ಕೆ" ಎಂದು ಜೀ ಕನ್ನಡ ಪೋಸ್ಟ್ ಹಂಚಿಕೊಂಡಿದೆ.
ಮ್ಯಾಕ್ಸ್ ಯಾವ ಒಟಿಟಿಯಲ್ಲಿ?
ಮ್ಯಾಕ್ಸ್ ಸಿನಿಮಾ ಯಾವ ಒಟಿಟಿಯಲ್ಲಿ, ಯಾವಾಗಿನಿಂದ ಸ್ಟ್ರೀಮಿಂಗ್ ಆರಂಭಿಸಲಿದೆ? ಈ ಪ್ರಶ್ನೆಗೆ ಈ ವರೆಗೂ ಅಧಿಕೃತ ಘೋಷಣೆ ಆಗಿಲ್ಲ. ಇದರಾಚೆಗೆ ಈ ಸಿನಿಮಾದ ಸ್ಯಾಟಲೈಟ್ ಹಕ್ಕುಗಳನ್ನು ಜೀ ಕನ್ನಡ ಪಡೆದುಕೊಂಡಿದೆ. ಅದೇ ರೀತಿ ಒಟಿಟಿಯ ಡಿಜಿಟಲ್ ಹಕ್ಕುಗಳನ್ನೂ ಜೀ5 ಖರೀದಿಸಿದೆ ಎಂದೇ ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಮ್ಯಾಕ್ಸ್ ಸಿನಿಮಾ ಜೀ5 ಒಟಿಟಿಯಲ್ಲಿ ಫೆ. 22ರಿಂದ ಪ್ರಸಾರವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಒಟಿಟಿ ಬಿಡುಗಡೆ ಸುದ್ದಿ ಇನ್ನಷ್ಟೇ ಅಧಿಕೃತವಾಗಬೇಕಿದೆ.

ವಿಭಾಗ