Amaran Movie: ಅಮರನ್ ಚಿತ್ರದ ಸಂಗೀತ ನಿರ್ದೇಕರಿಗೆ ಗಿಫ್ಟ್ ನೀಡಿದ ಶಿವ ಕಾರ್ತಿಕೇಯನ್... ಫಾರ್ಮುಲಾ-1 ಬ್ರಾಂಡ್
ಇತ್ತೀಚೆಗೆ ಬಿಡುಗಡೆಗೊಂಡ ಅಮರನ್ ಸಿನಿಮಾದಲ್ಲಿ ಸಂಗೀತವೂ ಪ್ರೇಕ್ಷಕರನ್ನು ಸೆಳೆದ ಪ್ರಮುಖ ಅಂಶವಾಗಿದೆ. ಯುವ ಸಂಗೀತ ನಿರ್ದೇಶಕ ಜಿ.ವಿ.ಪ್ರಕಾಶ್ ಕುಮಾರ್ ತಮ್ಮ ಸಂಗೀತದಿಂದ ಅಮರನ್ ಸಿನಿಮಾವನ್ನು ನೆಕ್ಸ್ಟ್ ಲೆವೆಲ್‌ಗೆ ಕೊಂಡೊಯ್ದಿದ್ದಾರೆ.
ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಮೇಜರ್ ಮುಕುಂದ್ ವರದರಾಜನ್ ಜೀವನಚರಿತ್ರೆ ಆಧರಿಸಿದ ಅಮರನ್ ಸಿನಿಮಾವು ದೀಪಾವಳಿಯಂದು ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ಈ ಅಮರನ್ ಸಿನಿಮಾ ಇನ್ನೂ ಒಂದು ವಾರ ಥಿಯೇಟರ್‌ನಲ್ಲಿ ತನ್ನ ಹವಾ ಮುಂದುವರೆಸುವ ಸಾಧ್ಯತೆ ಇದೆ. ಶಿವ ಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ನಟಿಸಿರುವ ಈ ಚಿತ್ರ ಅಕ್ಟೋಬರ್ 31 ರಂದು ಬಿಡುಗಡೆಯಾಗಿ 200 ಕೋಟಿ ರೂಪಾಯಿ ಕ್ಲಬ್‌ನತ್ತ ಸಾಗುತ್ತಿದೆ. ಅಮರನ್ ಸಿನಿಮಾ ನೋಡಿದವರ ಬಾಯ್ಮಾತಿನ ಪ್ರಚಾರದಿಂದಲೇ ಈ ಸಿನಿಮಾ ನೋಡಲು ಥಿಯೇಟರ್‌ನತ್ತ ಹೆಚ್ಚಿನ ಜನರು ಸಾಗುತ್ತಿದ್ದಾರೆ.
ಅಮರನ್ ಸಿನಿಮಾಕ್ಕೆ ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿನ ಆಕ್ಷನ್ ದೃಶ್ಯಗಳಿಗೆ ಹಾಗೂ ಎಮೋಷನ್ ಸೀನ್‌ಗಳಿಗೆ ಸಂಗೀತ ಇನ್ನಷ್ಟು ಬಲ ತುಂಬಿದೆ. ಕ್ಲೈಮ್ಯಾಕ್ಸ್‌ನಲ್ಲಿನ ಭಾವನಾತ್ಮಕ ದೃಶ್ಯಗಳು ಪ್ರೇಕ್ಷಕರ ಹೃದಯ ತಟ್ಟುವಂತೆ ಮಾಡುವಲ್ಲಿ ಹಿನ್ನೆಲೆ ಸಂಗೀತ ಪ್ರಮುಖ ಪಾತ್ರವಹಿಸಿದೆ.
ಸಿನಿಮಾ ನೋಡಿದವರು ಸಿನಿಮಾ ಚೆನ್ನಾಗಿದೆ ಎನ್ನುವುದರ ಜತೆಗೆ ಸಂಗೀತ, ಹಿನ್ನೆಲೆ ಸಂಗೀತಕ್ಕೂ ಅದ್ಭುತ ಎಂದಿದ್ದಾರೆ. ಈ ಖುಷಿಯಲ್ಲಿ ಅಮರನ್ ಹೀರೋ ಶಿವ ಕಾರ್ತಿಕೇಯನ್ ಅವರು ಜಿವಿ ಪ್ರಕಾಶ್ ಕುಮಾರ್‌ಗೆ ದುಬಾರಿ ಗಿಫ್ಟ್ ಕೊಟ್ಟಿದ್ದಾರೆ. ಈ ವಿಚಾರವನ್ನು ಜಿವಿ ಪ್ರಕಾಶ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ.
ದುಬಾರಿ ವಾಚ್ ಉಡುಗೊರೆ
ಜಿವಿ ಪ್ರಕಾಶ್ ಕುಮಾರ್ ಅವರು ಶಿವ ಕಾರ್ತಿಕೇಯನ್ ಅವರಿಂದ ಉಡುಗೊರೆಯಾಗಿ ಹ್ಯೂಯರ್ ಮೆನ್ಸ್ ಫಾರ್ಮುಲಾ-1 ಬ್ರ್ಯಾಂಡ್ ಸ್ಟೇನ್‌ಲೆಸ್ ಸ್ಟೀಲ್ ಸ್ಟೈಲಿಶ್ ವಾಚ್ ಉಡುಗೊರೆಯಾಗಿ ಪಡೆದಿದ್ದಾರೆ. ಈ ವಾಚ್‌ನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಾಚ್ ದರ ಸುಮಾರು 3 ಲಕ್ಷ ರೂಪಾಯಿ ಆಸುಪಾಸಿನಲ್ಲಿದೆ.
ಅಮರನ್ ಚಿತ್ರವು ದಿವಂಗತ ಮೇಜರ್ ಮುಕುಂದ್ ವರದರಾಜನ್ ಅವರ ಜೀವನಚರಿತ್ರೆಯಾಗಿದೆ. ಹಿರಿಯ ನಟ ಕಮಲ್ ಹಾಸನ್ ತಮ್ಮ ರಾಜ್ ಕಮಲ್ ಬ್ಯಾನರ್ ಅಡಿಯಲ್ಲಿ ಸೋನಿ ಪಿಕ್ಚರ್ಸ್ ಜೊತೆ ಜಂಟಿಯಾಗಿ ಚಿತ್ರವನ್ನು ನಿರ್ಮಿಸಿದ್ದಾರೆ. ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಅಮರನ್ ಸಿನಿಮಾ ದೊಡ್ಡಮಟ್ಟದಲ್ಲಿ ಯಶಸ್ಸು ಪಡೆದಿದೆ. ಕನ್ನಡ ಮತ್ತು ಮಲಯಾಳಂನಲ್ಲಿ ಈ ಸಿನಿಮಾ ನಿರೀಕ್ಷಿಸಿದಷ್ಟು ಸಿಗಲಿಲ್ಲ. ಸಾಯಿ ಪಲ್ಲವಿ ನಟಿಸಿದ್ದರೂ ಈ ಚಿತ್ರ ಮಲಯಾಳಂನಲ್ಲಿ ಕಡಿಮೆ ಕಲೆಕ್ಷನ್ ಮಾಡಿದೆ.
ಅಮರನ್ ಸಿನಿಮಾ ಒಟಿಟಿಗೆ ಯಾವಾಗ?
ನವೆಂಬರ್ ಅಂತ್ಯದಲ್ಲಿ ಅಮರನ್ ಚಿತ್ರ ಒಟಿಟಿಗೆ ಬರಲಿದೆ ಎಂಬ ವರದಿಗಳಿವೆ. ನೆಟ್‌ಫ್ಲಿಕ್ಸ್ ಈ ಚಿತ್ರದ ಒಟಿಟಿ ಹಕ್ಕುಗಳನ್ನು ಭಾರಿ ಬೆಲೆಗೆ ಖರೀದಿಸಿದೆಯಂತೆ. ಆದರೆ, ಸದ್ಯಕ್ಕೆ ಥಿಯೇಟರ್‌ಗಳಲ್ಲಿ ದೊಡ್ಡ ಚಿತ್ರಗಳಿಲ್ಲದ ಕಾರಣ ಅಮರನ್ ಇನ್ನೂ ಕೆಲವು ದಿನ ಮುಂದುವರೆಯುವ ಸೂಚನೆಗಳಿವೆ. ಹೀಗಾಗಿ ಅಮರನ್ ಬಿಡುಗಡೆ ನಿರೀಕ್ಷೆಗಿಂತ ಒಂದು ವಾರ ತಡವಾದರೂ ಆಶ್ಚರ್ಯವಿಲ್ಲ.