Ajith Kumar Father Died: ತಮಿಳು ನಟ ಅಜಿತ್ ಕುಮಾರ್ ತಂದೆ ಪಿ. ಸುಬ್ರಮಣ್ಯಂ ನಿಧನ
ತಮಿಳು ನಟ ತಲಾ ಅಜಿತ್ ಕುಮಾರ್ ಅವರ ತಂದೆ ಪಿ. ಸುಬ್ರಮಣ್ಯಂ ನಿಧನರಾಗಿದ್ದಾರೆ.
Ajith Kumar Father Died: ಕಾಲಿವುಡ್‌ನ ಖ್ಯಾತ ನಟ ಅಜಿತ್‌ಕುಮಾರ್ ಅವರ ತಂದೆ ಪಿ. ಸುಬ್ರಮಣ್ಯಂ (86) ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಚೆನ್ನೈನ ಮನೆಯಲ್ಲಿ ಶುಕ್ರವಾರ ನಿಧನರಾದರು. ಬೆಳಗ್ಗೆ 9.30ರ ಸುಮಾರಿಗೆ ಕುಟುಂಬದ ಸಮ್ಮುಖದಲ್ಲಿ ಬೆಸೆಂಟ್ ನಗರದ ಚಿತಾಗಾರದಲ್ಲಿ ಅಂತ್ಯಕ್ರಿಯೆಯೂ ನೆರವೇರಿದೆ.
ನಟ ಅಜಿತ್ ಕುಮಾರ್ ಅವರ ತಂದೆ ಪಿ.ಸುಬ್ರಮಣ್ಯಂ ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಪಾರ್ಶ್ವವಾಯುವಿಗೂ ತುತ್ತಾಗಿದ್ದರು. ನಿರಂತರ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪತ್ನಿ ಮೋಹಿನಿ ಜತೆಗೆ ಬೆಸೆಂಟ್ ನಗರದ ಮನೆಯಲ್ಲಿ ಸುಬ್ರಮಣ್ಯಂ ವಾಸವಿದ್ದರು. 2020ರ ಸುಮಾರಿಗೆ ಇವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಅದಾದ ಬಳಿಕ ಪಾರ್ಶ್ವವಾಯು ಆವರಿಸಿತ್ತು. ಅಂದಿನಿಂದಲೇ ಪುತ್ರ ಅಜಿತ್ ಕುಮಾರ್ ತಂದೆಗೆ ವಿಶೇಷ ಚಿಕಿತ್ಸೆ ಕೊಡಿಸುತ್ತಿದ್ದರು.
ಸುಬ್ರಮಣ್ಯಂ ಅವರ ನಿಧನಕ್ಕೆ ತಮಿಳುನಾಡು ಕ್ರೀಡಾ ಸಚಿವ ಉದಯ ನಿಧಿ ಸ್ಟಾಲಿನ್ ಸಂತಾಪ ಸೂಚಿಸಿದ್ದು, ಕಂಬನಿ ಮಿಡಿದಿದ್ದಾರೆ. ಪಾರ್ಥಿವ ಶರೀರದ ದರ್ಶನ ಪಡೆದು ಪುಷ್ಪನಮನ ಸಲ್ಲಿಸಿದ್ದಾರೆ. ಇತ್ತ ತಮಿಳು ಚಿತ್ರರಂಗದ ನಟ, ನಟಿಯರೂ ಸಂತಾಪ ಸೂಚಿಸಿದ್ದಾರೆ. ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಅಜಿತ್ ಮತ್ತವರ ತಂದೆಯ ಫೋಟೋಗಳನ್ನು ಹಂಚಿಕೊಂಡು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.