ರಗಡ್ ಆಗಿದೆ ʻರೆಟ್ರೋʼ ಚಿತ್ರದ ಟ್ರೇಲರ್; ವಿಭಿನ್ನ ಅವತಾರಗಳಲ್ಲಿ ತಮಿಳು ನಟ ಸೂರ್ಯ ಮತ್ತೆ ಪ್ರತ್ಯಕ್ಷ
ತಮಿಳು ಸೂಪರ್ ಸ್ಟಾರ್ ಸೂರ್ಯ ಅಭಿನಯದ 'ರೆಟ್ರೋ' ಚಿತ್ರದ ಟ್ರೇಲರ್ ಶುಕ್ರವಾರ ಬಿಡುಗಡೆಯಾಗಿದೆ. 2 ನಿಮಿಷ 42 ಸೆಕೆಂಡ್‌ಗಳ ಈ ಟ್ರೇಲರ್‌ನಲ್ಲಿ ಆ್ಯಕ್ಷನ್ ದೃಶ್ಯಗಳೇ ಹೈಲೈಟ್. ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ತಮಿಳು ನಟ ಸೂರ್ಯ ಇದೀಗ ರಗಡ್ ಅವತಾರದಲ್ಲಿ ರೆಟ್ರೋ ಸಿನಿಮಾ ಮೂಲಕ ಎಂಟ್ರಿಕೊಟ್ಟಿದ್ದಾರೆ. ಖಡಕ್ ಎನಿಸುವ ಟ್ರೇಲರ್ ಇಂದು (ಏ. 18) ಬಿಡುಗಡೆ ಆಗಿದ್ದು, ಮೇ 1ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಕಾರ್ತಿಕ್ ಸುಬ್ಬರಾಜು ನಿರ್ದೇಶನದ ಈ ಸಿನಿಮಾ ಮೂಲ ತಮಿಳಿನ ಜತೆಗೆ ತೆಲುಗು ಮತ್ತು ಹಿಂದಿ ಭಾಷೆಗಳಿಗೆ ಡಬ್ ಆಗಿ ತೆರೆಗೆ ಬರಲಿದೆ. ಅದರಂತೆ ಈ ಮೂರು ಭಾಷೆಗಳ ಟ್ರೇಲರ್ ಇದೀಗ ಬಿಡುಗಡೆ ಆಗಿದೆ.
ಚೆನ್ನೈನಲ್ಲಿ ನಡೆದ ಗ್ರ್ಯಾಂಡ್ ಇವೆಂಟ್‌ನಲ್ಲಿ ರೆಟ್ರೋ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಟ್ರೇಲರ್‌ನಲ್ಲಿ ಹಲವು ಲುಕ್‌ಗಳಲ್ಲಿ ಸೂರ್ಯ ಕಂಡಿದ್ದಾರೆ. ಕಾರ್ತಿಕ್ ಸುಬ್ಬರಾಜ್ ಶೈಲಿಯಲ್ಲಿ ಟ್ರೇಲರ್‌ನಲ್ಲಿ ವೇಗವಿದೆ. ಪವರ್ ಫುಲ್ ಆ್ಯಕ್ಷನ್ ದೃಶ್ಯಗಳು ಮೈನವಿರೇಳಿಸುವಂತಿವೆ. ಒಟ್ಟಾರೆ ಸೂರ್ಯ ಮತ್ತು ಕಾರ್ತಿಕ್ ಸುಬ್ಬರಾಜ್ ಕಾಂಬಿನೇಷನ್‌ನ ಮೊದಲ ಸಿನಿಮಾ ಎಂಬ ಕಾರಣಕ್ಕೂ ʻರೆಟ್ರೋʼ ಸಿನಿಮಾ ಕುತೂಹಲ ಮೂಡಿಸಿದೆ.
ಪೂಜಾ ಹೆಗ್ಡೆಗೆ ಡಿಗ್ಲಾಮ್ ಲುಕ್
ರೆಟ್ರೋ ಚಿತ್ರದಲ್ಲಿ ಸೂರ್ಯಗೆ ಜೋಡಿಯಾಗಿ ನಟಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಅವರಿಗಿಲ್ಲಿ ಡಿಗ್ಲಾಮ್ ಲುಕ್. ಶೀರ್ಷಿಕೆ ಹೇಳುವಂತೆ, ಇಡೀ ಸಿನಿಮಾ 80 ಮತ್ತು 90ರ ದಶಕದ ಅವಧಿಯಲ್ಲಿ ಮೂಡಿಬಂದಿದೆ. 2 ನಿಮಿಷ 40 ಸೆಕೆಂಡ್‌ನ ಟ್ರೇಲರ್‌ನಲ್ಲಿ ಬಹುತಾರಾಗಣವೇ ಕಂಡಿದೆ. ಹತ್ತಾರು ಕಲಾವಿದರು ಬಂದು ಹೋಗುತ್ತಾರೆ. ಕಾಮಿಡಿ ರೀತಿಯಲ್ಲಿ ಸಾಗುವ ಸಿನಿಮಾದಲ್ಲಿ ಸಾಹಸ ದೃಶ್ಯಗಳೂ ಹೈಲೈಟ್. ಪ್ರೀತಿ ಪ್ರೇಮಕ್ಕೂ ಇಲ್ಲಿ ನಿರ್ದೇಶಕರು ಜಾಗ ಕಲ್ಪಿಸಿಕೊಟ್ಟಿದ್ದಾರೆ.
ಮೇ 1ರಂದು ತೆರೆಗೆ
ಈ ಚಿತ್ರವನ್ನು 2ಡಿ ಎಂಟರ್‌ಟೈನ್‌ಮೆಂಟ್ ಮತ್ತು ಸ್ಟೋನ್ ಬೆಂಚ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಸೂರ್ಯ ಮತ್ತು ಪೂಜಾ ಹೆಗ್ಡೆ ಜೊತೆಗೆ ಜೋಜು ಜಾರ್ಜ್, ಜಯರಾಮ್, ನಾಜರ್, ಪ್ರಕಾಶ್ ರಾಜ್, ಕರುಣಾಕರಣ್ ಸೇರಿ ಇನ್ನೂ ಹಲವರು ನಟಿಸಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ, ಶ್ರೇಯಸ್ ಕೃಷ್ಣ ಛಾಯಾಗ್ರಹಣ, ಶಫಿಕ್ ಮಹಮ್ಮದ್ ಅಲಿ ಸಂಕಲನ ಚಿತ್ರಕ್ಕಿದೆ. ಈ ಚಿತ್ರ ಮೇ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.