Ajith Car Accident: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ನಟ ಅಜಿತ್ ಕುಮಾರ್! ಮೈ ಜುಂ ಎನಿಸುವ ಅಪಘಾತದ ವಿಡಿಯೋ ಇಲ್ಲಿದೆ
Ajith Race Car Accident: ಕಾಲಿವುಡ್ ನಟ ಅಜಿತ್ ಕುಮಾರ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ದುಬೈನಲ್ಲಿ ನಡೆದ ಕಾರ್ ರೇಸ್ ಟ್ರೇನಿಂಗ್ ವೇಳೆ, ಭಾರೀ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಅಜಿತ್ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಮೈ ಜುಂ ಎನಿಸುವ ಆ ಆಕ್ಸಿಡೆಂಟ್‌ನ ವಿಡಿಯೋ ಇಲ್ಲಿದೆ.
Ajith Car Accident: ಕಾಲಿವುಡ್ ಸ್ಟಾರ್ ಹೀರೋ ಅಜಿತ್ ಕುಮಾರ್ ರೇಸಿಂಗ್ ಪ್ರೇಮಿ ಎಂಬುದು ಗೊತ್ತೇ ಇದೆ. ಬೈಕ್ ಮತ್ತು ಕಾರ್ ರೇಸಿಂಗ್ ಬಗ್ಗೆ ವಿಶೇಷ ಪ್ರೀತಿ ಹೊಂದಿರುವ ಅವರು ಇತ್ತೀಚೆಗೆ ದುಬೈನಲ್ಲಿ ನಡೆಯುತ್ತಿರುವ 'Dubai 24 Hours Race'ನಲ್ಲಿ ಭಾಗವಹಿಸಲು ತೆರಳಿದ್ದರು. ಇದೇ ರೇಸ್‌ನ ಭಾಗವಾಗಿ ನಡೆಸಿದ ಅಭ್ಯಾಸದ ವೇಳೆ ಸಂಭವಿಸಿದ ಅಪಘಾತದಲ್ಲಿ ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದಾರೆ!
ರೇಸಿಂಗ್ ಸಮಯದಲ್ಲಿ ಅವರಿದ್ದ ಕಾರು ಭಾರಿ ಅಪಘಾತಕ್ಕೆ ಒಳಗಾಯಿತು. ಆದರೆ ಅದೃಷ್ಟವಶಾತ್, ಈ ಅಪಘಾತದಲ್ಲಿ ಅಜಿತ್ ಅವರಿಗೆ ಏನೂ ಆಗಿಲ್ಲ. ಕಾರು ಅಪಘಾತವಾಗುತ್ತಿದ್ದಂತೆ, ಅದರಿಂದ ಇಳಿದು, ಹೊರಬಂದಿದ್ದಾರೆ. ಈ ವಿಡಿಯೋವನ್ನು ಅವರ ರೇಸಿಂಗ್ ತಂಡ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.
ರೇಸಿಂಗ್ ಸಮಯದಲ್ಲಿ ಇಂಥ ಅಪಘಾತಗಳು ಕಾಮನ್. ಆದರೆ, ಅಜಿತ್ ವಿಚಾರದಲ್ಲಿ ಮಾತ್ರ ಅದು ಬೇರೆಯದೇ ಸ್ವರೂಪ ಪಡೆದುಕೊಂಡಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ, ಅಜಿತ್ ಕುಮಾರ್ ಅವರ ಅಭಿಮಾನಿಗಳು ಕೊಂಚ ಆತಂಕದಲ್ಲಿದ್ದರು. ಈ ಘಟನೆ ನಡೆಯುತ್ತಿದ್ದಂತೆ, ಸ್ಥಳದಲ್ಲಿದ್ದ ಅವರ ತಂಡ, ಅಜಿತ್ ಅವರು ಸುರಕ್ಷಿತವಾಗಿದ್ದಾರೆ. ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದೆ.
180 ಕಿಮೀ ವೇಗ, ತಪ್ಪಿದ ನಿಯಂತ್ರಣ..
ಮಂಗಳವಾರ (ಜನವರಿ 7) ಅಜಿತ್ ದುಬೈನಲ್ಲಿ ರೇಸಿಂಗ್ ಸಲುವಾಗಿ ಅಭ್ಯಾಸ ಮಾಡುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಗಂಟೆಗೆ 180 ಕಿ.ಮೀ ವೇಗದಲ್ಲಿ ಚಾಲನೆ ಮಾಡುತ್ತಿದ್ದಾಗ, ರೇಸ್ ಕಾರ್ ನಿಯಂತ್ರಣ ಕಳೆದುಕೊಂಡು ಟ್ರ್ಯಾಕ್‌ನ ಎಡಬದಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ, ಕಾರ್‌ನ ಮುಂಭಾಗ ನಜ್ಜುಗುಜ್ಜಾಗಿದೆ. ಬಳಿಕ ಕಾರ್‌ನಿಂದ ಇಳಿದ ಅಜಿತ್ ಅವರನ್ನು ಇನ್ನೊಂದು ಕಾರ್‌ನಲ್ಲಿ ಕರೆದೊಯ್ಯಲಾಯಿತು.
ಅಜಿತ್ ಕುಮಾರ್ ರೇಸಿಂಗ್ ಟೀಮ್
ನಟ ಅಜಿತ್ ಬಳಿ ಅಜಿತ್ ಕುಮಾರ್ ರೇಸಿಂಗ್ ಎಂಬ ತಂಡವಿದೆ. ಈ ತಂಡವು 'Dubai 24 Hours Race'ನಲ್ಲಿ ಭಾಗವಹಿಸಲು ದುಬೈಗೆ ತೆರಳಿತ್ತು. ಈ ತಂಡದಲ್ಲಿ ಅಜಿತ್ ಅವರೊಂದಿಗೆ ಮ್ಯಾಥ್ಯೂ ಡೆಟ್ರೀ, ಫ್ಯಾಬಿಯನ್ ಡಫಿಯಕ್ಸ್ ಮತ್ತು ಕ್ಯಾಮೆರಾನ್ ಮೆಕ್ಲಿಯೋಡ್ ಇದ್ದರು. ದುಬೈನಲ್ಲಿ ಜನವರಿ 11 ಮತ್ತು 12 ರಂದು ಈ ರೇಸ್ ನಡೆಯಲಿದೆ. ಇದಕ್ಕಾಗಿಯೇ ಅಜಿತ್ ತಮ್ಮ ತಂಡದೊಂದಿಗೆ ಅಭ್ಯಾಸ ಮಾಡುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ಕಳೆದುಕೊಂಡು ಪಕ್ಕದ ರಕ್ಷಣಾ ಗೋಡೆಗೆ ಡಿಕ್ಕಿ ಹೊಡೆದಿದೆ.
ಅಜಿತ್ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ತಮ್ಮದೇ ಆದ ರೇಸಿಂಗ್ ತಂಡವನ್ನು ಪ್ರಾರಂಭಿಸಿದರು. ಅಜಿತ್ ಈ ಹಿಂದೆ ಫಾರ್ಮುಲಾ ಬಿಎಂಡಬ್ಲ್ಯು ಏಷ್ಯಾ, ಬ್ರಿಟಿಷ್ ಫಾರ್ಮುಲಾ 3 ಮತ್ತು ಎಫ್ಐಎ ಎಫ್2 ಚಾಂಪಿಯನ್ ಶಿಪ್‌ಗಳಲ್ಲಿ ಭಾಗವಹಿಸಿದ್ದರು. ಅವರ ತಂಡವು ಪ್ರಸ್ತುತ ಯುರೋಪಿನಾದ್ಯಂತ ರೇಸ್‌ಗಳಲ್ಲಿ ಭಾಗವಹಿಸುತ್ತಿದೆ. ಕಾರ್ ಮಾತ್ರವಲ್ಲದೆ, ಬೈಕ್ ರೇಸಿಂಗ್‌ನಲ್ಲೂ ಅಜಿತ್ ಮುಂದು. 90ರ ದಶಕದಲ್ಲಿಯೇ ಮೋಟಾರ್ ಸೈಕಲ್ ರೇಸಿಂಗ್ ಚಾಂಪಿಯನ್‌ಶಿಪ್‌ಗಳಲ್ಲಿ ಭಾಗವಹಿಸುತ್ತಿದ್ದರು. ಈಗ, ಇತ್ತೀಚಿನ 10 ವರ್ಷಗಳ ನಂತರ, ಅವರು ಮತ್ತೆ ರೇಸಿಂಗ್‌ಗೆ ಮರಳಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ, ಅಜಿತ್ ಶೀಘ್ರದಲ್ಲೇ ಎರಡು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಪೈಕಿ ತಮಿಳಿನ ವಿಡಾಮುಯಾರ್ಚಿ ಬಿಡುಗಡೆಗೆ ರೆಡಿಯಾಗಿದೆ, ಗುಡ್ ಬ್ಯಾಡ್ ಅಗ್ಲಿ ಸಿನಿಮಾ ಸಹ ರೆಡಿಯಾಗಿದ್ದು, ಏಪ್ರಿಲ್ 10ರಂದು ಈ ಸಿನಿಮಾ ತೆರೆಗೆ ಬರಲಿದೆ.