ವರ್ಷಾಂತ್ಯಕ್ಕೆ ಕಿಚ್ಚು ಹಚ್ಚಲಿದೆ ವಿಜಯ್ ಸೇತುಪತಿಯ ವಿಡುದಲೈ ಪಾರ್ಟ್ 2 ಸಿನಿಮಾ; ಉಪ್ಪಿಯ UI ಚಿತ್ರದ ಜತೆ ಕ್ಲ್ಯಾಷ್
Viduthalai Part 2: ತಮಿಳಿನ ಸೂಕ್ಷ್ಮ ಸಂವೇದಿ ನಿರ್ದೇಶಕರಲ್ಲಿ ಒಬ್ಬರು ಎನಿಸಿಕೊಂಡಿರುವ ವೆಟ್ರಿಮಾರನ್ ಮತ್ತು ವಿಜಯ್ ಸೇತುಪತಿ ಜೋಡಿ ವಿಡುದಲೈ ಪಾರ್ಟ್ 2 ಸಿನಿಮಾದೊಂದಿಗೆ ಆಗಮಿಸುತ್ತಿದ್ದಾರೆ. ಡಿಸೆಂಬರ್‌ನಲ್ಲಿ ಈ ಸಿನಿಮಾ ತೆರೆಗೆ ಬರಲಿದ್ದು, ಟ್ರೇಲರ್ ಸಹ ಕುತೂಹಲ ಮೂಡಿಸಿದೆ.

Viduthalai Part 2: ವಿಜಯ್ ಸೇತುಪತಿ ನಾಯಕನಾಗಿ ನಟಿಸಿದ್ದ ಮಹಾರಾಜ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಇದೇ ವರ್ಷದ ಜೂನ್ 14ರಂದು ತೆರೆಕಂಡಿದ್ದ ಈ ಸಿನಿಮಾ, ಕೇವಲ 20 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ, ಬರೋಬ್ಬರಿ ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಸೂಪರ್ ಹಿಟ್ ಪಟ್ಟ ಪಡೆದುಕೊಂಡಿತ್ತು. ಈಗ ಈ ಮಹಾರಾಜ ಸಿನಿಮಾ ಯಶಸ್ಸಿನ ಬಳಿಕ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಜತೆಗೆ ವಿಜಯ್ ಸೇತುಪತಿ ಆಗಮಿಸುತ್ತಿದ್ದಾರೆ. ಅದುವೇ ವಿಡುದಲೈ ಪಾರ್ಟ್ 2.
ತಮಿಳಿನ ಸೂಕ್ಷ್ಮ ಸಂವೇದಿ ನಿರ್ದೇಶಕರಲ್ಲಿ ಒಬ್ಬರು ಎನಿಸಿಕೊಂಡಿರುವ ವೆಟ್ರಿಮಾರನ್ ವಿಡುದಲೈ ಪಾರ್ಟ್ 2 ಸಿನಿಮಾದೊಂದಿಗೆ ಆಗಮಿಸುತ್ತಿದ್ದಾರೆ. ಕಳೆದ ವರ್ಷದ ಮಾರ್ಚ್‌ನಲ್ಲಿ ವಿಡುದಲೈ ಚಿತ್ರದ ಮೊದಲ ಭಾಗ ಬಿಡುಗಡೆ ಆಗಿತ್ತು. ವಿಮರ್ಶೆ ಮತ್ತು ಗಳಿಕೆ ವಿಚಾರದಲ್ಲಿಯೂ ಈ ಸಿನಿಮಾ ಯಶಸ್ಸು ಕಂಡಿತ್ತು. ವೆಟ್ರಿ ಮತ್ತು ಸೇತುಪತಿ ಕಾಂಬಿನೇಷನ್ ಈ ಸಿನಿಮಾ ಖ್ಯಾತ ಬರಹಗಾರ ಜಯಮೋಹನ್ ಅವರ ಕಾದಂಬರಿ ಆಧರಿತ ಕಥೆಯಾಗಿತ್ತು.
ಕುತೂಹಲ ಮೂಡಿಸಿದ ಟ್ರೇಲರ್
ಎರಡನೇ ಭಾಗದ ಕಥೆ ಹೇಗಿರಬಹುದು ಎಂಬ ಕಿರು ಮುನ್ನೋಟದೊಂದಿಗೆ ಮೊದಲ ಭಾಗ ಮುಕ್ತಾಯಗೊಂಡಿತ್ತು. ಅದರಂತೆ, ಇದೀಗ ಇದೇ ವಿಡುದಲೈ ಪಾರ್ಟ್ 2 ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಮೊದಲ ಭಾಗದಲ್ಲಿ, ಪೆರುಮಾಳ್ ವಾಥಿಯಾರ್ ಪಾತ್ರದಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಂಡರು. ಅದೇ ಪೆರುಮಾಳ್‌ನನ್ನು ಬಂಧಿಸುವುದರೊಂದಿಗೆ ಮೊದಲ ಭಾಗ ಮುಗಿದಿತ್ತು. ಈಗ ಎರಡನೇ ಭಾಗದಲ್ಲಿ ಅದೇ ಪೆರುಮಾಳ್, ಪೊಲೀಸರಿಂದ ತಪ್ಪಿಸಿಕೊಂಡಿದ್ದಾರೋ ಇಲ್ಲವೋ ಎಂಬುದನ್ನು ತೋರಿಸುತ್ತದೆ.
ಅಸುರನ್ ರೀತಿಯ ಸಾಹಸ ದೃಶ್ಯಗಳು..
ಮೊದಲ ಭಾಗದಂತೆಯೇ, ವಿಡುದಲೈ ಪಾರ್ಟ್ 2 ಚಿತ್ರ ಸಹ ಆಕ್ಷನ್ ಮತ್ತು ಥ್ರಿಲ್ಲರ್ ಶೈಲಿಯಲ್ಲಿ ಹೆಣೆಯಲಾಗಿದೆ. ಚಿತ್ರದ ಟ್ರೇಲರ್‌ನ ಆರಂಭದಲ್ಲಿ "ಹಿಂಸೆ ನಮ್ಮ ಭಾಷೆಯಲ್ಲ, ಆದರೆ ನಮಗೆ ಆ ಭಾಷೆಯನ್ನೂ ಮಾತನಾಡಲು ಬರುತ್ತೆ ಎಂಬ ಗೂಡಾರ್ಥದ ಡೈಲಾಗ್‌ಗಳೂ ಇವೆ. ವೆಟ್ರಿಯ ಈ ಹಿಂದಿನ ಅಸುರನ್ ಸಿನಿಮಾದಲ್ಲಿ ಮೈನವಿರೇಳಿಸುವ ಸಾಹಸ ದೃಶ್ಯಗಳಿದ್ದವು. ಇದೀಗ ವಿಡುದಲೈ ಚಿತ್ರದಲ್ಲಿಯೂ ಅಬ್ಬರದ ಸಾಹಸ ದೃಶ್ಯಗಳಿವೆ.
ಡಿಸೆಂಬರ್ 20ರಂದು ರಿಲೀಸ್
ಮೊದಲ ಭಾಗ ಸಿನಿಮಾದಲ್ಲಿ ನಟ ಸೂರಿ, ಭವಾನಿಶ್ರೀ, ಗೌತಮ್ ಮೆನನ್, ರಾಜೀವ್ ಮೆನನ್, ಚೇತನ್, ಮುನ್ನಾರ್ ರಮೇಶ್ ಸೇರಿದಂತೆ ಹಲವರು ನಟಿಸಿದ್ದಾರೆ. ಮೊದಲ ಭಾಗದಲ್ಲಿ ಸೂರಿ ಕಥೆಯ ನಾಯಕನಾಗಿ ಇಡೀ ಸಿನಿಮಾವನ್ನು ಹೊತ್ತು ಸಾಗಿದ್ದರು. ಇದೀಗ ಕಥೆ ಪೂರ್ತಿ ವಿಜಯ್ ಸೇತುಪತಿ ಹೆಗಲಿಗೆ ಜಾರಿದೆ. ಎರಡನೇ ಭಾಗದಲ್ಲಿ, ಇಡೀ ಸಿನಿಮಾ ಸೇತುಪತಿಯ ಪಾತ್ರದ ಸುತ್ತ ಕೇಂದ್ರೀಕೃತವಾಗಿದೆ. ಜತೆಗೆ ಮಂಜು ವಾರಿಯರ್ ಸಹ ಎದುರಾಗಿದ್ದಾರೆ. ಕುತೂಹಲದ ಗುಚ್ಛದಂತಿರುವ ಈ ಸಿನಿಮಾ, ಡಿಸೆಂಬರ್ 20 ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ. ಇತ್ತ ಅದೇ ದಿನ ಕನ್ನಡದಲ್ಲಿ ಉಪೇಂದ್ರ ಅವರ UI ಸಿನಿಮಾ ಸಹ ತೆರೆಗೆ ಬರಲಿದೆ.
Viduthalai Part 2 Official Trailer Vetri Maaran Vijay Sethupathi
