Miss You Movie Review: ಸಿದ್ಧಾರ್ಥ್- ಆಶಿಕಾ ರಂಗನಾಥ್ ಜೋಡಿಯ ಮಿಸ್ ಯು ಸಿನಿಮಾ ಹೇಗಿದೆ? ಆಧುನಿಕ ಪ್ರೇಮ ಸಮಸ್ಯೆಗಳಿಗೆ ಪುರಾತನ ಮದ್ದು
Miss You Movie Review: ವ್ಯತಿರಿಕ್ತ ವ್ಯಕ್ತಿತ್ವದ ಇಬ್ಬರ ಪ್ರೀತಿ ಹೇಗಿರುತ್ತದೆ? ಎಂದು ತಿಳಿಯಲು ಸಿದ್ಧಾರ್ಥ್ ಮತ್ತು ಆಶಿಕಾ ರಂಗನಾಥ್ ನಟನೆಯ ಮಿಸ್ ಯೂ ಸಿನಿಮಾ ನೋಡಬಹುದು. ಆಧುನಿಕ ಕಾಲದ ಪ್ರೀತಿಯ ಸಮಸ್ಯೆಗೆ ಇಲ್ಲಿ ಹಳೆ ಕಾಲದ ಪರಿಹಾರವನ್ನು ಅತ್ಯಂತ ಸೊಗಸಾಗಿ ನೀಡಲಾಗಿದೆ.
Miss You Movie Review: ಮಿಸ್ ಯೂ ಎನ್ನುವುದು ತಮಿಳಿನ ರೋಮ್ಯಾಂಟಿಕ್ ಹಾಸ್ಯ ಸಿನಿಮಾ. ರಾಜಶೇಖರ್ ಎನ್ ಬರೆದು ನಿರ್ದೇಶಿಸಿದ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಸಿದ್ಧಾರ್ಥ್ ನಾರಾಯಣ್ ಮತ್ತು ಆಶಿಕಾ ರಂಗನಾಥ್ ನಟಿಸಿದ್ದಾರೆ. ಬಾಲ ಸರವಣನ್, ಲೊಲ್ಲು ಸಾಬ ಮಾರನ್ ಮತ್ತು ಕರುಣಾಕರನ್ ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. 7 ಮೈಲ್ಸ್ ಪರ್ ಸೆಕೆಂಡ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಸ್ಯಾಮ್ಯುಯೆಲ್ ಮ್ಯಾಥ್ಯೂ ನಿರ್ಮಿಸಿದ ಈ ಚಿತ್ರವು ಇಂದು ಅಂದರೆ ಡಿಸೆಂಬರ್ 13ರಂದು ಬಿಡುಗಡೆಯಾಗಿದೆ. ಈ ಸಿನಿಮಾಕ್ಕೆ ಕೆ.ಜಿ. ವೆಂಕಟೇಶ್ ಛಾಯಾಗ್ರಹಣ, ಜಿಬ್ರಾನ್ ಸಂಗೀತ ಮತ್ತು ದಿನೇಶ್ ಪೊನ್ರಾಜ್ ಸಂಕಲನವಿದೆ. ಮಿಸ್ ಯೂ ಸಿನಿಮಾವನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸಹೋದರಿ ತಾಣ ಒಟಿಟಿಪ್ಲೇಯ ಅನುಷಾ ಸುಂದರ್ ನೋಡಿ ವಿಮರ್ಶಿಸಿದ್ದಾರೆ. ಒಟಿಟಿ ಪ್ಲೇ ವಿಮರ್ಶೆಯ ಕನ್ನಡ ಭಾವಾನುವಾದ ಇಲ್ಲಿದೆ.
ಮಿಸ್ ಯೂ ಸಿನಿಮಾ ವಿಮರ್ಶೆ
ಶ್ರದ್ಧೆ ಮತ್ತು ಮಹತ್ವಾಕಾಂಕ್ಷೆಯ ಸಿನಿಮಾ ನಿರ್ಮಾಪಕ ವಾಸು (ಸಿದ್ಧಾರ್ಥ್) ಮತ್ತು ಸುಬ್ಬು (ಆಶಿಕಾ ರಂಗನಾಥ್) ನಡುವಿನ ಪ್ರೇಮಕಥೆಯಿದು. ವಾಸುವಿಗೆ ಸುಬ್ಬುವಿನ ಧ್ವನಿ, ಸ್ವತಂತ್ರ ಮನೋಭಾವ ಇಷ್ಟವಾಗುತ್ತದೆ. ಆಕೆಯನ್ನು ಪ್ರೀತಿಸುತ್ತಾನೆ. ಆದರೆ, ಆಕೆ ಪ್ರೀತಿಗೆ ಒಪ್ಪುವುದಿಲ್ಲ. ತಾನು ಹಿಂದೊಮ್ಮೆ ತಿರಸ್ಕರಿಸಿದ ಯುವತಿ ಇವಳು ಎಂಬ ಸತ್ಯ ಈತನಿಗೆ ತಿಳಿಯುತ್ತದೆ. ಆಗ ಹೇಗಿದ್ದಳು, ಈಗ ಹೇಗೆ ಆಗಿದ್ದಾಳೆ, ಈ ಬದಲಾವಣೆ ಹೇಗಾಯ್ತು? ಅವರ ಹಿಂದಿನ ಕಥೆಯೇನು? ಮುಂದೆ ಏನಾಗುತ್ತದೆ? ಎಂಬ ಕುತೂಹಲಕ್ಕೆ ಉತ್ತರ ಈ ಸಿನಿಮಾದಲ್ಲಿದೆ. ಒಂದು ಕಪ್ ಕಾಪಿ ಇವರ ನಡುವಿನ ಅಂತರವನ್ನು ತಗ್ಗಿಸುವುದೇ?
ಹೇಗಿದೆ ಈ ಸಿನಿಮಾ?
ಈ ಸಿನಿಮಾದಲ್ಲಿ ಎಂಜಾಯ್ ಮಾಡಬಹುದಾದ ಅನೇಕ ಸಂಗತಿಗಳಿವೆ. ನಾಯಕನ (ವಾಸು) ಸ್ನೇಹಿತರು ಮದುವೆಯಲ್ಲಿ ನಾಯಕಿಯನ್ನು (ಸುಬ್ಬು) ನೋಡುವಂತೆ ಮಾಡುವ ಅತ್ಯಂತ ರೂಢಿಗತ ಸನ್ನಿವೇಶವಿದೆ. ಬಳಿಕ ಇದು ಹಾಡು ಕುಣಿತದ ಸನ್ನಿವೇಶಕ್ಕೆ ಹೋಗುತ್ತದೆ. ಮಕ್ಕಳೊಂದಿಗೆ ತಮಾಷೆಯ ಮಾತು ಇರುತ್ತದೆ. ಮುಗ್ಧತೆ ಮತ್ತು ಬಾಲಿಶತನವನ್ನು ಪ್ರದರ್ಶಿಸುವ ನಾಯಕಿಯನ್ನು ನಾಯಕ ಏಕೆ ಪ್ರೀತಿಸುವುದಿಲ್ಲ? ಏಕೆ ಇವಳನ್ನು ತಿರಸ್ಕರಿಸುತ್ತಾನೆ? ಇತ್ಯಾದಿ ಪ್ರಶ್ನೆಗಳಿಗೆ ಆತನ ಸ್ನೇಹಿತರು ಉತ್ತರ ಬಯಸುತ್ತಾರೆ. ಇವಳು "ಮುದ್ದಾದ ಮತ್ತು ಹೊಸ ಮುಖವಲ್ಲ" ಎಂದು ಆಕೆಯನ್ನು ತಿರಸ್ಕರಿಸಲು ಕಾರಣ ಹೇಳುತ್ತಾನೆ. ಇಷ್ಟು ಸುಂದರವಾದ ಹುಡುಗಿಯನ್ನು ತಿರಸ್ಕರಿಸಲು ಇದು ಸೂಕ್ತ ಕಾರಣದಂತೆ ಕಾಣಿಸದು. ಇಂತಹ ಕೆಲವು ದೃಶ್ಯಗಳನ್ನು ಎಂಜಾಯ್ ಮಾಡುವಂತೆ ಚಿತ್ರೀಕರಿಸಲಾಗಿದೆ. ಮಿಸ್ ಯು ಚಿತ್ರವು ದೀಪಾವಳಿಯಂತಹ ಕೆಲವು ಚಿತ್ರಗಳಿಂದ ಸ್ಫೂರ್ತಿ ಪಡೆದಿರಬಹುದು. ಈ ಸಿನಿಮಾದಲ್ಲಿ ಕಥೆ ಹೇಳುವ ಶ್ರದ್ಧೆಯನ್ನು ಕಾಣಬಹುದು. ಆದರೆ, ಪೂರ್ಣ ಪ್ರಮಾಣದಲ್ಲಿ ಈ ಪ್ರಯತ್ನ ಯಶಸ್ಸಾದಂತೆ ಇಲ್ಲ.
ಆಧುನಿಕ ಮದುವೆಯ ನಿಜವಾದ ಸಮಸ್ಯೆಗಳನ್ನು ನೋಡುವ ಪ್ರಯತ್ನ ಈ ಸಿನಿಮಾದಲ್ಲಿ ಕಾಣಿಸುತ್ತದೆ. "ಕೆಟ್ಟ ದಾಂಪತ್ಯ ಎಂದರೆ ಹಿಂಸಾತ್ಮಕ ಮತ್ತು ಆಕ್ರಮಣಕಾರಿಯಾಗಿರಬೇಕೆಂದಿ್ಲ. ಇಬ್ಬರು ಪರಸ್ಪರ ಆರಾಮವಾಗಿ ಬದುಕಲು ಸಾಧ್ಯವಿಲ್ಲದೆ ಇರುವುದು ಕೂಡ ಕೆಟ್ಟ ದಾಂಪತ್ಯ" ಎಂದು ನಾಯಕ ಹೇಳುತ್ತಾನೆ. ಇಂತಹ ಸುಂದರ ಸನ್ನಿವೇಶವನ್ನು ಸಿನಿಮಾದ ಕೆಲವೊಂದು ದೃಶ್ಯಗಳು, ಹಾಡುಗಳು ಹಾಳು ಮಾಡಿಬಿಡುತ್ತದೆ. “ಆಂಬಳಯ್ಯಾ ಪೊರಂದದು ಮರಕನುಂ, ಪೊಂಬಲಯೆ ನೆನೆಯ ಮನಸು ಪುಟ್ಟು ಪೊಟ್ಟು ನೋರ್ಕನುಂ (ಪುರುಷನಾಗಿ ಹುಟ್ಟಿದ್ದನ್ನು ಮರೆಯಬೇಕು, ಹೆಣ್ಣಿನ ಕುರಿತು ಚಿಂತಿಸುವ ನಿನ್ನ ಹೃದಯದ ಬೀಗವನ್ನು ಒಡೆಯಬೇಕು) ಎಂಬ ಹಾಡು ಈ ಚಿತ್ರದ ನಿಷ್ಠೆ ಎಲ್ಲಿದೆ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ.
ಮಿಸ್ ಯೂ ಸಿನಿಮಾದಲ್ಲಿ ಒಂದಿಷ್ಟು ಸಮಸ್ಯೆಗಳಿವೆ. ವಾಸು ಮಹತ್ವಾಕಾಂಕ್ಷಿ ಚಿತ್ರನಿರ್ಮಾಪಕ ಎಂದು ಪರಿಚಯಿಸಲಾಗುತ್ತದೆ. ಆದರೆ, ಚಿತ್ರದಲ್ಲಿ ಆತನಲ್ಲಿ ಮಹಾತ್ವಾಕಾಂಕ್ಷೆ ಕಾಣಿಸುವುದಿಲ್ಲ. ನಾಯಕಿ ಸುಬ್ಬು ಅಡಿಟರ್ ಎಂದು ಪರಿಚಯಿಸಲಾಗುತ್ತದೆ. ಆದರೆ, ಕಥೆಯು ಕ್ರಮೇಣ ನಾಯಕಿಯ ಉದ್ಯೋಗವನ್ನು ಮರೆತುಬಿಡುತ್ತದೆ. ಆಶಿಕಾ ಮತ್ತು ಸಿದ್ಧಾರ್ಥ್ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದಾರೆ.ತು ಬಾಲ ಸರವಣನ್ ಮತ್ತು ಕರುಣಾಕರನ್ ಅವರಂತಹ ಪೋಷಕ ನಟರ ನಟನೆಯೂ ಉತ್ತಮವಾಗಿದೆ. ಎಂದಿನ ಏಕತಾನತೆಯ ನಿರೂಪಣೆಯಿಂದ ಹೊರಗುಳಿಯಲು ಚಿತ್ರ ಪ್ರಯತ್ನಿಸಿದಂತೆ ಇದೆ. ಆದರೆ, ಚಿತ್ರಕ್ಕೆ ಸ್ಥಿರತೆಯ ಕೊರತೆ ಕಾಡಿದೆ. ಆಗಾಗ ಸೂತ್ರ ಕಳೆದುಕೊಳ್ಳುತ್ತದೆ. ಬರವಣಿಗೆ ಇನ್ನಷ್ಟು ಉತ್ತಮವಾಗಿದ್ದರೆ ಈ ತೊಂದರೆ ಇರುತ್ತಿರಲಿಲ್ಲ.
ಒಂದು ಬಾರಿ ನಾವು ಒಬ್ಬರಿಗೊಬ್ಬರು ಸೂಕ್ತವಾದ ಜೋಡಿಯಲ್ಲ ಎಂದು ನಿರ್ಧರಿಸಿದ ಬಳಿಕ ಮತ್ತೆ ಇವರಿಬ್ಬರ ನಡುವೆ ಪ್ರೀತಿಯ ಕಿಡಿ ಹೇಗೆ ಮೂಡುತ್ತದೆ? ಇವರಿಬ್ಬರಿಗೆ ಮೊದಲೇ ತುಸುವಾದರೂ ಪ್ರೀತಿ ಇತ್ತೇ? ಇಂತಹ ಪ್ರಶ್ನೆಗಳಿಗೆ ಸಿನಿಮಾ ಸಮರ್ಪಕವಾಗಿ ಉತ್ತರಿಸುವುದಿಲ್ಲ. ಮಿಸ್ ಯೂ ಸಿನಿಮಾದಲ್ಲಿ ಕೆಲವೊಂದು ತಪ್ಪು ಹೆಜ್ಜೆಗಳು ಗೋಚರಿಸುತ್ತವೆ. ಆದರೆ, ಪ್ರೀತಿಯ ಚಿಲಿಪಿಲಿ ಕಥೆಯಾಗಿ ನೋಡಲು ಖುಷಿ ನೀಡುತ್ತದೆ. ಹೀಗಾಗಿ, ಸಿನಿಮಾ ನೋಡಿದಾಗ ವಿಷಾದವೇನು ಕಾಡುವುದಿಲ್ಲ.
ಮೂಲ ವಿಮರ್ಶೆ: ಒಟಿಟಿ ಪ್ಲೇ
ಕನ್ನಡಕ್ಕೆ: ಹಿಂದೂಸ್ತಾನ್ ಟೈಮ್ಸ್ ಕನ್ನಡ