ಉಗ್ರ ದಾಳಿ ಬೆನ್ನಲ್ಲೇ ಬೆಂಗಳೂರು ಕಾನ್ಸರ್ಟ್‌ನ ಟಿಕೆಟ್‌ ಬುಕಿಂಗ್‌ ಮುಂದೂಡಿದ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್‌
ಕನ್ನಡ ಸುದ್ದಿ  /  ಮನರಂಜನೆ  /  ಉಗ್ರ ದಾಳಿ ಬೆನ್ನಲ್ಲೇ ಬೆಂಗಳೂರು ಕಾನ್ಸರ್ಟ್‌ನ ಟಿಕೆಟ್‌ ಬುಕಿಂಗ್‌ ಮುಂದೂಡಿದ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್‌

ಉಗ್ರ ದಾಳಿ ಬೆನ್ನಲ್ಲೇ ಬೆಂಗಳೂರು ಕಾನ್ಸರ್ಟ್‌ನ ಟಿಕೆಟ್‌ ಬುಕಿಂಗ್‌ ಮುಂದೂಡಿದ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್‌

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಅನಿರುದ್ಧ ರವಿಚಂದರ್ ಅವರು ತಮ್ಮ ಬೆಂಗಳೂರು ಕಾನ್ಸರ್ಟ್‌ನ ಟಿಕೆಟ್ ಮಾರಾಟವನ್ನು ಮುಂದೂಡಿದ್ದಾರೆ.

ಉಗ್ರ ದಾಳಿ ಬೆನ್ನಲ್ಲೇ ಬೆಂಗಳೂರು ಕಾನ್ಸರ್ಟ್‌ನ ಟಿಕೆಟ್‌ ಬುಕಿಂಗ್‌ ಮುಂದೂಡಿದ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್‌
ಉಗ್ರ ದಾಳಿ ಬೆನ್ನಲ್ಲೇ ಬೆಂಗಳೂರು ಕಾನ್ಸರ್ಟ್‌ನ ಟಿಕೆಟ್‌ ಬುಕಿಂಗ್‌ ಮುಂದೂಡಿದ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್‌

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ಧಾಮದಲ್ಲಿ ಏಪ್ರಿಲ್‌ 22ರಂದು ನಡೆದ ಭಯಾನಕ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 26 ಜನರು ಮೃತಪಟ್ಟಿದ್ದಾರೆ. ಇಡೀ ದೇಶವೇ ಉಗ್ರರ ಈ ಹೇಯ ಕೃತ್ಯವನ್ನು ಖಂಡಿಸಿದೆ. ಈ ನೋವಿನ ಬೆನ್ನಲ್ಲೇ ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಬೆಂಗಳೂರಿನಲ್ಲಿ ನಡೆಯಲಿರುವ ತಮ್ಮ ಕಾನ್ಸರ್ಟ್‌ನ ಟಿಕೆಟ್ ಮಾರಾಟ ಬುಕಿಂಗ್‌ ದಿನವನ್ನು ಮುಂದೂಡಿ, ದುರ್ಘಟನೆಯಲ್ಲಿ ಮೃತಪಟ್ಟವರ ಮತ್ತು ಅವರ ಕುಟುಂಬಗಳಿಗೆ ಗೌರವ ಸಲ್ಲಿಸಿದ್ದಾರೆ.

ಜೂನ್ 1 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಅವರ ಬಹುನೀಕ್ಷಿತ ಹುಕುಮ್ ವರ್ಲ್ಡ್ ಟೂರ್‌ನ ಎರಡನೇ ಪ್ರದರ್ಶನಕ್ಕೆ ಏಪ್ರಿಲ್ 24 ರಂದು ಟಿಕೆಟ್ ಬುಕಿಂಗ್ ಆರಂಭವಾಗಬೇಕಿತ್ತು. ಆದಾಗ್ಯೂ, ದೇಶದಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಟಿಕೆಟ್‌ ಮಾರಾಟವನ್ನು ಮುಂದೂಡಲಾಗಿದೆ ಎಂದು ಆಯೋಜಕರು ಘೋಷಿಸಿದ್ದಾರೆ. ಟಿಕೆಟ್ ಬುಕಿಂಗ್‌ಗೆ ಪರಿಷ್ಕೃತ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದೂ ತಿಳಿಸಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿರುವ ಅನಿರುದ್ಧ ರವಿಚಂದರ್‌, ದಾಳಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. "ಪಹಲ್ಗಾಮ್‌ನಲ್ಲಿ ನಡೆದ ದುರಂತ ನಮ್ಮೆಲ್ಲರನ್ನು ಆಘಾತಗೊಳಿಸಿದೆ. ದುರ್ಘಟನೆಯಲ್ಲಿ ಮೃತಪಟ್ಟವರು ಮತ್ತು ಅವರ ಕುಟುಂಬಗಳಿಗೆ ನಮ್ಮ ಕಡೆಯಿಂದ ಸಂತಾಪಗಳು" ಎಂದು ಅನಿರುದ್ಧ ಬರೆದಿದ್ದಾರೆ.

ಮುಂದುವರಿದು, "ಪ್ರಸ್ತುತ ದೇಶದಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇಂದು ಮಧ್ಯಾಹ್ನ 2ಗಂಟೆಗೆ ಬೆಂಗಳೂರಿನಲ್ಲಿ ಪ್ರಾರಂಭವಾಗಬೇಕಿದ್ದ ಹುಕುಮ್ ವರ್ಲ್ಡ್ ಟೂರ್ ಎರಡನೇ ಪ್ರದರ್ಶನದ ಟಿಕೆಟ್ ಮಾರಾಟವನ್ನು ಮುಂದೂಡುತ್ತಿದ್ದೇವೆ." ಎಂದಿದ್ದಾರೆ. ಅಂದಹಾಗೆ, ಅನಿರುದ್ಧ ಅವರ ಹುಕುಮ್ ವರ್ಲ್ಡ್ ಟೂರ್ ಪ್ರವಾಸವು ಭಾರತಾದ್ಯಂತ ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಯುವ ಗಾಯಕ, ಸಂಗೀತ ನಿರ್ದೇಶಕನ ಈ ನಡೆಗೆ ವ್ಯಾಪಕ ಮೆಚ್ಚುಗೆಯೂ ಕೇಳಿಬರುತ್ತಿದೆ.

ಏಪ್ರಿಲ್‌ 22ರಂದು ಪಹಲ್ಗಾಮ್‌ ಧಾಮದಲ್ಲಿ ಏನೂ ಅರಿಯದೆ ತಮ್ಮ ಕುಟುಂಬ, ಆಪ್ತರ ಜತೆಗೆ ಖುಷಿಯ ಕ್ಷಣಗಳನ್ನು ಕಳೆಯುತ್ತಿದ್ದ ಜೀವಗಳನ್ನು ಇಬ್ಬರು ಬಂದೂಕುಧಾರಿಗಳು ಸರ್ವನಾಶ ಮಾಡಿದ್ದಾರೆ. ಏಕಾಏಕಿ ಗುಂಡಿನ ಮಳೆಗೆರೆದ ಉಗ್ರರು, ಒಟ್ಟು 26 ಜೀವಗಳನ್ನು ಬಲಿ ಪಡೆದಿದ್ದಾರೆ. ಈ ದಾಳಿಯಲ್ಲಿ ಕರ್ನಾಟಕ ಮೂಲದ ಮೂವರು ಸಾವನ್ನಪ್ಪಿದ್ದಾರೆ. ಉಗ್ರರನ್ನು ಸೆದೆಬಡಿಯುವಂತೆ ದೇಶದ ಜನತೆ ಕೇಂದ್ರಕ್ಕೆ ಒತ್ತಾಯಿಸಿದೆ. ಸೇನಾ ಕಾರ್ಯಾಚರಣೆಗಳು ಚುರುಕಿನ ಕೆಲಸ ಆರಂಭಿಸಿವೆ.

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.