ರವಿ ಮೋಹನ್ ವಿವಾಹ ವಿಚ್ಛೇದನ: ತಿಂಗಳಿಗೆ 40 ಲಕ್ಷ ರೂ ಜೀವನಾಂಶ ಕೇಳಿದ್ರ ಆರತಿ ರವಿ
ತಮಿಳು ನಟ ರವಿ ಮೋಹನ್ ಮತ್ತು ಅವರ ಪತ್ನಿ ಆರತಿ ರವಿ ಕಳೆದ ವಾರ ಸಾಮಾಜಿಕ ಮಾಧ್ಯಮದಲ್ಲಿ ಜಗಳವಾಡಿದ್ದರು. ಇವರಿಬ್ಬರ ವಿವಾಹ ವಿಚ್ಛೇದನ ಪ್ರಕರಣ ಕೋರ್ಟ್‌ನಲ್ಲಿದೆ. ಇದೆ ಸಮಯದಲ್ಲಿ ನಟಿ ಪ್ರತಿತಿಂಗಳು ಮೇಂಟೆನ್ಸ್ ವೆಚ್ಚ 40 ಲಕ್ಷ ರೂಪಾಯಿ ಕೇಳಿದ್ದಾರೆ ಎಂದು ವರದಿಯಾಗಿದೆ.

ಕಳೆದ ವಾರ ತಮಿಳು ನಟ ರವಿ ಮೋಹನ್ ಮತ್ತು ಅವರ ಪರಿತ್ಯಕ್ತ ಪತ್ನಿ ಆರತಿ ರವಿ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ಜಗಳ ನಡೆದಿತ್ತು. ಕಳೆದ ಆರು ತಿಂಗಳಿನಿಂದ ನಾಲ್ಕು ಗೋಡೆಯ ನಡುವೆ ಇದ್ದ ವಿಚಾರಗಳನ್ನು ಇವರು ಬಹಿರಂಗಗೊಳಿಸಿದ್ದರು. ಈ ಮೂಲಕ ಸಾರ್ವಜನಿಕವಾಗಿ ವದಂತಿಗೆ ಆಹಾರವಾಗಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಇವರಿಬ್ಬರ ಡಿವೋರ್ಸ್ ಪ್ರಕ್ರಿಯೆ ಆರಂಭವಾಗಿತ್ತು. ಚೆನ್ನೈನ ಕುಟುಂಬ ಕಲ್ಯಾಣ ನ್ಯಾಯಾಲಯದಲ್ಲಿ ಡಿವೋರ್ಸ್ ಕುರಿತು ವಿಚಾರಣೆ ನಡೆಯುತ್ತಿದೆ.
ತಿಂಗಳಿಗೆ 40 ಲಕ್ಷ ರೂ ಜೀವನಾಂಶ
ಚೆನ್ನೈನ 3ನೇ ಹೆಚ್ಚುವರಿ ಕುಟುಂಬ ಕಲ್ಯಾಣ ನ್ಯಾಯಾಲಯದ ಮುಂದೆ ವಿಚ್ಛೇದನ ಪ್ರಕ್ರಿಯೆಗಾಗಿ ಎರಡೂ ಕಡೆಯವರು ಈ ವಾರ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ನಮ್ಮ ನಡುವೆ ಸಮನ್ವಯ ಸಾಧ್ಯವಿಲ್ಲ, ಡಿವೋರ್ಸ್ ಬೇಕು ಎಂದು ಇಬ್ಬರು ಸ್ಪಷ್ಟವಾಗಿ ತಿಳಿಸಿದ್ದಾರೆ. ಡಿವೋರ್ಸ್ ಬಳಿಕ ಆರ್ಥಿಕ ಸಹಾಯದ ಅಗತ್ಯವಿರುವುದರಿಂದ ಪ್ರತಿತಿಂಗಳಿಗೆ 40 ಲಕ್ಷ ರೂಪಾಯಿ ಜೀವನಾಂಶ ಬೇಕು ಎಂದು ಆರತಿ ರವಿ ಅರ್ಜಿ ಸಲ್ಲಿಸಿದ್ದಾರೆ ಎಂದು ನ್ಯೂಸ್18 ವರದಿ ಮಾಡಿದೆ. ನ್ಯಾಯಾಧೀಶರು ವಿಚಾರಣೆಯನ್ನು ಜೂನ್ 12ಕ್ಕೆ ಮುಂದೂಡಿದ್ದಾರೆ.
ರವಿ ಮೋಹನ್-ಆರತಿ ರವಿ ಕೌಟುಂಬಿಕ ಕಲಹ
ರವಿ ಮತ್ತು ಆರತಿ ಮದುವೆಯಾಗಿ 15 ವರ್ಷಗಳಾಗಿವೆ. 2024ರಲ್ಲಿ ಇವರಿಬ್ಬರು ದೂರವಾಗುವ ನಿರ್ಧಾರ ತೆಗೆದುಕೊಂಡರು. ಪರಸ್ಪರ ಹೊಂದಾಣಿಕೆಯಾಗುತ್ತಿಲ್ಲ ಮತ್ತು ಭಿನ್ನಾಭಿಪ್ರಾಯಗಳು ಇರುವ ಕಾರಣ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಇದೇ ಸಮಯದಲ್ಲಿ ಗಾಯಕಿ ಕೆನೀಶಾ ಫ್ರಾನ್ಸಿಸ್ ಅವರೊಂದಿಗಿನ ರವಿ ಅವರ ಸ್ನೇಹ ಸುದ್ದಿಯಲ್ಲಿದೆ. ವಿವಾಹ ವಿಚ್ಛೇದನಕ್ಕೆ ಇದೇ ಕಾರಣವಾಗಿರಬಹುದು ಎಂದು ವದಂತಿಯೂ ಇದೆ. ಕಳೆದ ವಾರ ಚೆನ್ನೈನಲ್ಲಿ ನಡೆದ ನಿರ್ಮಾಪಕಿ ಮತ್ತು ಉದ್ಯಮಿ ಡಾ. ಇಶಾರಿ ಕೆ ಗಣೇಶ್ ಅವರ ಮಗಳ ವಿವಾಹದಲ್ಲಿ ಇವರಿಬ್ಬರು ಜತೆಯಾಗಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ವಿವಾದ ಭುಗಿಲೆದ್ದಿತು.
'ಮೂರನೇ ವ್ಯಕ್ತಿ' ತಮ್ಮ ಸಂಬಂಧಕ್ಕೆ ಪ್ರವೇಶಿಸಿದ್ದರಿಂದ ರವಿ ವಿಚ್ಛೇದನ ಬಯಸಿದ್ದರು ಎಂದು ಆರತಿ ಮೋಹನ್ ಇನ್‌ಸ್ಟಾಗ್ರಾಂನಲ್ಲಿ ಮೇ 20ರಂದು ಪೋಸ್ಟ್ ಮಾಡಿದ್ದರು. ಆದರೆ, ಇವರು ಕೆನೀಶಾ ಹೆಸರನ್ನು ಹೇಳಿರಲಿಲ್ಲ. ಹಣ, ಅಧಿಕಾರ, ಹಸ್ತಕ್ಷೇಪ ಅಥವಾ ನಿಯಂತ್ರಣ ನನ್ನ ಬದುಕನ್ನು ಹಾಳು ಮಾಡಿಲ್ಲ. ಆದರೆ, ನನ್ನ ಜೀವನದ ಬೆಳಕನ್ನು ಮೂರನೇ ವ್ಯಕ್ತಿ ಹಾಳು ಮಾಡಿದ್ದಾರೆ ಎಂದು ಬರೆದಿದ್ದರು.
ರವಿ ಮೋಹನ್ ಅವರ ಮೂಲ ಹೆಸರು ಜೈರಾಮ್ ರವಿ. ಇವರು ತಮಿಳು ಸಿನಿಮಾದಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಇವರು ಸಿನಿಮಾ ಸಂಪಾದಕ ಎ ಮೋಹನ್ ಅವರ ಮಗ. ಜಯಮ್ ಸಿನಿಮಾದಲ್ಲಿ ನಾಯಕ ಪಾತ್ರದಲ್ಲಿ ಮೊದಲು ನಟಿಸಿದ್ದರು. ಇದಾದ ಬಳಿಕ 2025ರವರೆಗೂ ಅನೇಕ ಸಿನಿಮಾಗಳಲ್ಲಿ ಲೀಡ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ನಟನೆಗೆ ಪ್ರವೇಶಿಸುವ ಮುನ್ನ ಕಮಲ್ ಹಾಸನ್ ಅಭಿನಯದ ಆಳವಂದನ್ (2001) ಚಿತ್ರದಲ್ಲಿ ರವಿ ಸುರೇಶ್ ಕೃಷ್ಣ ಅವರಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಆರತಿ ರವಿ ಅವರು ಸೋಷಿಯಲ್ ಮೀಡಿಯಾದಲ್ಲಿ ಇನ್‌ಫ್ಲೂಯೆನ್ಸರ್ ಆಗಿ, ಉದ್ಯಮಿಯಾಗಿ ಜನಪ್ರಿಯತೆ ಪಡೆದಿದ್ದಾರೆ.