Rajinikanth: ಮೊಮ್ಮಗನನ್ನು ಸ್ಕೂಲ್‌ಗೆ ಬಿಟ್ಟು ಬಂದ ರಜನಿಕಾಂತ್; ಶಾಲೆಯಲ್ಲಿ ಕಣ್ಣರಳಿಸಿ ತಲೈವಾನ ಕಣ್ತುಂಬಿಕೊಂಡ್ರು ಪುಟಾಣಿ ಮಕ್ಕಳು
ಸೌಂದರ್ಯ ರಜನಿಕಾಂತ್ ಮಗನಿಗೆ ಇಂದು ಸ್ಕೂಲ್‌ಗೆ ಹೋಗಲು ಇಷ್ಟವೇ ಇರಲಿಲ್ಲ. ಆದರೆ, ತಾತಾ ರಜನಿಕಾಂತ್ ಸುಮ್ಮನಿರಬೇಕಲ್ವ. ಮೊಮ್ಮಗನನ್ನು ಪುಸಲಾಯಿಸಿ ಶಾಲೆಗೆ ಕರೆದೊಯ್ದರು. ಈ ಸಂದರ್ಭದಲ್ಲಿ ಶಾಲೆಯ ಮಕ್ಕಳು ರಜನಿಕಾಂತ್‌ನನ್ನು ನೋಡಿ ಕಣ್ಣರಳಿಸಿದರು.

ಬೆಂಗಳೂರು: ಹೊರಗೆ ಜಿಟಿಜಿಟಿ ಮಳೆ. ಮನೆಯೊಳಗೆ ಬೆಚ್ಚಗೆ ಮಕ್ಕಳಿಗೆ ಇರುವಾಸೆ. ಸೌಂದರ್ಯ ರಜನಿಕಾಂತ್ ಮಗನೂ ಇಂದು ಸ್ಕೂಲ್‌ಗೆ ಹೋಗಲು ಸುತಾರಂ ಒಪ್ಪಲಿಲ್ಲ. ಇವನನ್ನು ಹೇಗಪ್ಪ ಸ್ಕೂಲ್‌ಗೆ ಕಳುಹಿಸುವುದು ಎಂದು ಸೌಂದರ್ಯಳಿಗೆ ಟೆನ್ಷನ್ ಆಗಿದೆ. ಆ ಸಮಯದಲ್ಲಿ ತಂದೆ ರಜನಿಕಾಂತ್ ಹೆಲ್ಪ್‌ಗೆ ಬಂದಿದ್ದಾರೆ. ತನ್ನ ಮೊಮ್ಮಗನ ಜತೆ ಸ್ಕೂಲ್‌ಗೆ ಹೋಗಿ ಬಿಟ್ಟುಬಂದಿದ್ದಾರೆ. ಈ ಕುರಿತು ಸೌಂದರ್ಯ ರಜನಿಕಾಂತ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ನನ್ನ ಮಗ ಶಾಲೆಗೆ ಹೋಗಲು ಒಪ್ಪದೆ ಇದ್ದಾಗ, ಇಂದಿನ ನನ್ನ ದಿನವನ್ನು ತಂದೆ ಹೇಗೆ ಉಳಿಸಿದ್ರು ಎಂದು ಅವರು ಬರೆದು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ತಂದೆ ರಜನಿಕಾಂತ್ ಮತ್ತು ಮೊಮ್ಮಗನ ಫೋಟೋಗಳನ್ನು ಸೌಂದರ್ಯ ರಜನಿಕಾಂತ್ ಹಂಚಿಕೊಂಡಿದ್ದಾರೆ. "ನನ್ನ ಮಗ ಶಾಲೆಗೆ ಹೋಗೋಲ್ಲ ಅಂದಾಗ ಆತನ ತಾತಾ ಸ್ಕೂಲ್‌ಗೆ ಕರೆದುಕೊಂಡು ಹೋದ್ರು" ಎಂದು ಅವರು ಬರೆದುಕೊಂಡಿದ್ದಾರೆ.
"ಇಂದು ಬೆಳಗ್ಗೆ ನನ್ನ ಮಗ ಶಾಲೆಗೆ ಹೋಗಲು ರೆಡಿ ಇರಲಿಲ್ಲ. ಸೂಪರ್‌ಹೀರೋ ತಾತಾ ತಾನೇ ತನ್ನ ಮೊಮ್ಮಗನನ್ನು ಶಾಲೆಗೆ ಕರೆದುಕೊಂಡು ಹೋದ್ರು. ನನ್ನ ಮೊಮ್ಮಗನ ಪ್ರೀತಿಯ ಅಜ್ಜ. ಅಜ್ಜನೇ ಆತನಿಗೆ ರೋಲ್ ಮಾಡೆಲ್" ಎಂದು ಅವರು ಪೋಸ್ಟ್ ಮಾಡಿದ್ದಾರೆ. ತಾತಾ ಮತ್ತು ಮೊಮ್ಮಗ ಶಾಲೆಗೆ ಹೋದ ಫೋಟೋವನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಶಾಲಾ ಕೊಠಡಿಯೊಳಗೆ ಮೊಮ್ಮಗನನ್ನು ರಜನಿಕಾಂತ್ ಬಿಡುವ ಚಿತ್ರಣವಿದೆ. ಆ ಸಮಯದಲ್ಲಿ ಅಲ್ಲಿದ್ದ ಇತರೆ ಮಕ್ಕಳ ಕಣ್ಣಲ್ಲಿ ತಲೈವಾನ ಕಂಡ ಹಿಗ್ಗು ಕಾಣಿಸಿಕೊಂಡಿದೆ.
ಅಭಿಮಾನಿಗಳ ಪ್ರತಿಕ್ರಿಯೆ ಹೀಗಿತ್ತು
ಮೊಮ್ಮಗನನ್ನು ಶಾಲೆಗೆ ಬಿಟ್ಟ ರಜನಿಕಾಂತ್ ಕುರಿತು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಒಂದು ಫೋಟೋದಲ್ಲಿ ಅಜ್ಜ ತನ್ನ ಮೊಮ್ಮಗನೊಂದಿಗೆ ಶಾಲೆಗೆ ಹೋಗುವ ಕಥೆಯಿದೆ. ಇನ್ನೊಂದು ಫೋಟೋದಲ್ಲಿ ಮಕ್ಕಳಿಗೆ ರಜನಿಕಾಂತ್‌ರನ್ನು ಕಂಡ ಖುಷಿಯಿದೆ ಎಂದು ಅಭಿಮಾನಿಗಳು ಇನ್‌ಸ್ಟಾಗ್ರಾಂನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. "ನೋಡಿ ರಜನಿಕಾಂತ್‌ನನ್ನು ನೋಡಿರುವ ಆ ಹೆಣ್ಣು ಮಗು ಎಷ್ಟು ಥ್ರಿಲ್ಲಾಗಿದೆ" ಎಂದೆಲ್ಲ ಪ್ರತಿಕ್ರಿಯೆ ನೀಡಿದ್ದಾರೆ.
ಒಟ್ಟಾರೆ ಕರ್ನಾಟಕದಲ್ಲಿ ಮಳೆ ಸುರಿಯುತ್ತಿದೆ. ತಮಿಳುನಾಡಿನಲ್ಲೂ ಮಳೆರಾಯನ ಆಗಮನವಾಗಿದೆ. ಈ ಮಳೆಯಲ್ಲಿ, ಚಳಿಯಲ್ಲಿ ಬೆಳಗ್ಗೆ ಎದ್ದು ಮಕ್ಕಳನ್ನು ರೆಡಿ ಮಾಡುವುದು ತುಸು ಕಷ್ಟದ ಕೆಲಸವೇ. ಮಕ್ಕಳು ಈ ಚಳಿಗೆ ಬೆಚ್ಚಗೆ ನಿದ್ದೆ ಮಾಡಲು ಬಯಸುತ್ತಾವೆ. ಕಣ್ಣಲ್ಲಿ ನಿದ್ದೆ ಸುರಿಸುತ್ತಿರುವ ಮಕ್ಕಳಿಗೆ ತುಸು ತಿಂಡಿ ತಿನ್ನಿಸಿ ಯೂನಿಫಾರ್ಮ್ ಹಾಕಿ ಶಾಲೆಗೆ ಕಳುಹಿಸುವುದು ಸವಾಲಿನ ಸಂಗತಿಯೂ ಹೌದು. ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಹಿರಿಯರಿದ್ದರೆ ಮೊಮ್ಮಕ್ಕಳಿಗೆ ಖುಷಿಯೋ ಖುಷಿ.
ರಜನಿಕಾಂತ್ ಮುಂಬರುವ ಸಿನಿಮಾಗಳು
ರಜನಿಕಾಂತ್ ಅವರನ್ನು ಶೀಘ್ರದಲ್ಲಿ ಟಿಜೆ ಜ್ಞಾನವೇಲು ನಿರ್ದೇಶನದ ವೆಟ್ಟೈಯನ್ ಸಿನಿಮಾದಲ್ಲಿ ನೋಡಬಹುದು. ಈ ಸಿನಿಮಾ ಈ ವರ್ಷ ಅಕ್ಟೋಬರ್‌ನಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್ ಮತ್ತು ಮಂಜು ವಾರಿಯರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದರೊಂದಿಗೆ ಲೋಕೇಶ್ ಕನಕರಾಜು ನಿರ್ದೇಶನದ ಕೂಲಿ ಸಿನಿಮಾದಲ್ಲಿ ನಟಿಸಲಿದ್ದಾರೆ.
