‘ತಮಿಳು ನಟ ವಿಜಯ್ ಸೇತುಪತಿ ವಿಲನ್ ಆಗೋಕಷ್ಟೇ ಲಾಯಕ್ಕು, ನಾಯಕ ನಟನಾಗಿ ಆತ ಸೋತಿದ್ದೇ ಹೆಚ್ಚು!’
ಮಹಾರಾಜ ಸಿನಿಮಾ ಚೆನ್ನಾಗಿದೆ ಎಂದು ವಿಜಯ್ ಸೇತುಪತಿ ಟ್ರ್ಯಾಕ್ ರೆಕಾರ್ಡ್ ಬಗ್ಗೆ ಗಂಧಗಾಳಿ ಗೊತ್ತಿಲ್ಲದ ಜನರೆಲ್ಲರನ್ನೂ ಗಟ್ಟಿಯಾಗಿ ಕಟ್ಟಿಹಾಕಿ ಈತನ ಸಂಗ ತಮಿಳನ್ ಹಾಗೂ ಡಿಎಸ್‌ಪಿ ಎಂಬ ಎರಡು ಸಿನಿಮಾಗಳನ್ನು ತೋರಿಸಬೇಕು - ಅಶೋಕ ಎಂ ಭದ್ರಾವತಿ ಬರಹ.

Vijay Sethupathi: ಕಾಲಿವುಡ್ ನಟ, ಮಕ್ಕಳ್ ಸೇಲ್ವನ್ ವಿಜಯ್ ಸೇತುಪತಿಗೆ ಮಹಾರಾಜನ ಮೂಲಕ ಗೆಲುವು ಪ್ರಾಪ್ತವಾಗಿದೆ. ಅವರ ಸಿನಿಮಾ ವೃತ್ತಿ ಜೀವನದ 50ನೇ ಸಿನಿಮಾ ಎಂಬ ವಿಶೇಷಣದೊಂದಿಗೆ ಬಿಡುಗಡೆಯಾದ ಈ ಮಹಾರಾಜ, ವಿಜಯ್‌ಗೆ ದೊಡ್ಡ ಹಿಟ್ ತಂದುಕೊಟ್ಟಿದೆ. ದಶಕಗಳಿಂದ ಕಮರ್ಷಿಯಲ್ ಹಿಟ್ ಸಿನಿಮಾ ದಕ್ಕಿಸಿಕೊಳ್ಳುವಲ್ಲಿ ಸೋತಿದ್ದ ಇದೇ ನಟನೀಗ, ಆ ಹಸಿವನ್ನು ನೀಗಿಸಿಕೊಂಡಿದ್ದಾರೆ. ಮಹಾರಾಜ ಸಿನಿಮಾಕ್ಕೆ ಬಾಯಿ ಮಾತಿನ ಪ್ರತಿಕ್ರಿಯೆ ಸಿಕ್ಕು, ಹೈಪ್ ಗಿಟ್ಟಿಸಿಕೊಂಡಿತ್ತು. ಚಿತ್ರಮಂದಿರದ ಬಳಿಕ ಒಟಿಟಿಯಲ್ಲಿಯೂ ಅದೇ ಓಟವನ್ನು ಮುಂದುವರಿಸಿದೆ ಈ ಸಿನಿಮಾ.
ಆದರೆ, ಇದೇ ವಿಜಯ್ ಸೇತುಪತಿ ಅವರ ಈ ಹಿಂದಿನ ಒಂದಷ್ಟು ಸಿನಿಮಾಗಳನ್ನು ಇಣುಕಿ ನೋಡಿದರೆ ಅಲ್ಲಿ ಗೆಲುವಿಗಿಂತ ಸೋಲು ಕಂಡಿದ್ದೇ ಹೆಚ್ಚು. ಈ ಬಗ್ಗೆ ಅಶೋಕ್ ಎಂ ಭದ್ರಾವತಿ ತಮ್ಮ ಅನಿಸಿಕೆ ಅಭಿಪ್ರಾಯವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಹೀಗಿದೆ ಅವರ ಬರಹ.
ಅತೀ ಕೆಟ್ಟ ಸಿನಿಮಾಗಳಿಂದಲೇ ಸೇತುಪತಿ ಹೆಸರುವಾಸಿ..
"ವಿಜಯ್ ಸೇತುಪತಿ.. ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಭಾಗಶಃ ಈತನಷ್ಟು ಕೆಟ್ಟ ಸಿನಿಮಾಗಳನ್ನು ನೀಡಿದವರು ಮತ್ತೊಬ್ಬ ನಟ ಇಲ್ಲ. ಸೂದು ಕವ್ವುಂ ಎಂಬ ಸಿನಿಮಾದ ಮೂಲಕ ಪಡೆದ ಒಳ್ಳೆಯ ಹೆಸರನ್ನೇ ಹೈಜಾಕ್ ಮಾಡಿಕೊಂಡ ಈತ ತನ್ನ ಮಾರ್ಕೆಟ್ ಮುಗಿಯುವುದರ ಒಳಗಾಗಿ ಒಳ್ಳೆ ದುಡ್ಡು ಮಾಡಿಕೊಳ್ಳಬೇಕು ಎಂದು ನಿರ್ಧರಿಸಿ, ಮಾಡಬಾರದ ಅತೀ ಕೆಟ್ಟ ಸಿನಿಮಾಗಳನ್ನೆಲ್ಲಾ ಮಾಡಿದ. ಈತ ಮಾಡಿದ ಎಲ್ಲಾ ಸಿನಿಮಾಗಳೂ ಕೇವಲ ದುಡ್ಡಿಗಾಗಿ ಮಾತ್ರ ಎಂಬುದು ಸ್ಪಷ್ಟ!"
"ಸೀತಾ ಕಾತಿ, ತುಘಲಕ್ ದರ್ಬಾರ್, ಲಾಬಮ್, ಸಿಂದೂಬಾದ್ ಸಂಗ ತಮಿಳನ್ ಚಿತ್ರಗಳೆಲ್ಲಾ ಅದೆಷ್ಟು ಕೆಟ್ಟ ಚಿತ್ರಗಳೆಂದರೆ ಅದಕ್ಕಿಂತ ಕೆಟ್ಟ ಚಿತ್ರಗಳನ್ನು ಈ ಜಗತ್ತಲ್ಲೇ ಯಾರೂ ಮಾಡಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗಿನ ವಾಕರಿಕೆ ತರಿಸಬಲ್ಲ ಚಿತ್ರಗಳು. ಇನ್ನೂ ತೀರಾ ಇತ್ತೀಚೆಗೆ ಡಿಎಸ್‌ಪಿ ಎಂಬ ಒಂದು ಚಿತ್ರ ಬಂದಿತಲ್ಲ, ಯಪ್ಪಾ ಅಂತಹ ಚಿತ್ರವನ್ನೂ ಈ ವ್ಯಕ್ತಿ ದುಡ್ಡಿಗಾಗಿ ಮಾಡಿಬಿಟ್ಟನಲ್ಲ ಎಂದು ವಿಜಯ್ ಸೇತುಪತಿ ಬಗ್ಗೆಯೇ ವಾಕರಿಕೆ ಹುಟ್ಟಿತ್ತು"
"ಇತ್ತೀಚಿನ ದಿನಗಳಲ್ಲಂತೂ ಎಲ್ಲಾ ಭಾಷೆಯ ಸಿನಿಮಾ ಇಂಡಸ್ಟ್ರಿ ಹೀರೋಗಳು ಸಿನಿಮಾ ಒಂದಕ್ಕೆ ಎರಡು ಮೂರು ವರ್ಷ ಸಮಯ ತೆಗೆದುಕೊಂಡು ಅಭಿಮಾನಿಗಳಿಗೆ- ಪ್ರೇಕ್ಷಕರಿಗೆ ಕ್ವಾಲಿಟಿ ಸಿನಿಮಾ ನೀಡಲು ಪ್ರಯತ್ನಿಸುತ್ತಿದ್ದಾರೆ. ಕೆಜಿಎಫ್ ಬಂದ ಮೇಲಂತೂ ಜನ ಸಿನಿಮಾ ಕ್ವಾಲಿಟಿ ಇಲ್ಲ ಅಂದ್ರೆ ಯಾವ ಸಿನಿಮಾವನ್ನೂ ನೋಡಲ್ಲ ಎಂಬಂತಹ ಸ್ಥಿತಿ ಎದುರಾಗಿದೆ. ಬಾಹುಬಲಿಯಂತಹ ಹಿಟ್ ಕೊಟ್ಟ ಪ್ರಭಾಸ್ ನ ಸಲಾರ್ ಸಿನಿಮಾವನ್ನೇ ಜನ ಒಪ್ಪಿಲ್ಲ ಅಂದ್ರೆ ಜನರ ನಿರೀಕ್ಷೆಯೂ ಸಾಕಷ್ಟು ಮೇಲ್ದರ್ಜೆ ಏರಿದೆ ಎಂಬುದು ಸ್ಪಷ್ಟ. ಹಿಂದಿಯಿಂದ ಇರಾನ್ ವರೆಗೆ ಎಲ್ಲಾ ಭಾಷೆಯ ವೆಬ್ ಸೀರಿಸ್ ನೋಡಿ ಸಿನಿಮಾ ಬಗ್ಗೆ ಸಾಕಷ್ಟು ಕಲಿತಿರುವ ಜನ ನಟ- ನಿರ್ದೇಶಕ ಸೇರಿ ಸಿನಿಮಾ ಮಂದಿ ಸಣ್ಣ ತಪ್ಪು ಮಾಡಿದರೂ ಥಟ್ ಅಂತ ಗುರುತಿಸುವ ಮಟ್ಟಕ್ಕೆ ಅವರ ಸಿನಿಮಾ ಜ್ಞಾನವೂ ವೃದ್ಧಿಸಿದೆ"
"ಹೀಗಾಗಿ ಎಲ್ಲಾ ದೊಡ್ಡ ಹೀರೋಗಳೂ ಟೈಂ ತಗಂಡು ಒಳ್ಳೆ ಸಿನಿಮಾ ಮಾಡ್ತಾ ಇದ್ರೆ, ಇದೇ ಸಂದರ್ಭದಲ್ಲಿ ವಿಜಯ್ ಸೇತುಪತಿ 2013 ರಿಂದ 2024 ರ ಈ 11 ವರ್ಷದ ಅಲ್ಪಾವಧಿಯಲ್ಲಿ 50 ಸಿನಿಮಾ ಮಾಡಿದ್ದಾರೆ. ಕೆಲವು ವರ್ಷಗಳಲ್ಲಂತೂ ಆತ ಎಂಟು ಹತ್ತು ಸಿನಿಮಾ ಮಾಡಿದ್ದಾರೆ. ಎಂದರೆ, ಆತ ಸಿನಿಮಾ ಪ್ರೇಕ್ಷಕರ ಅಭಿರುಚಿಯ ಬಗ್ಗೆ ಅದೆಂತಹ ತಾತ್ಸಾರ ಹೊಂದಿರಬೇಕು? ಹೇ ನಾ ಎಂತಾ ಸಿನಿಮಾ ಕೊಟ್ಟರೂ ಜನ ನೋಡ್ತಾರೆ ಬಿಡು ಎಂದು ಸಿನಿ ಪ್ರೇಕ್ಷರನ್ನು ಆತ Taken For Granted ಎಂಬ ರೀತಿ ನೋಡುತ್ತಿರುವುದು ತಿಳಿಯುತ್ತಿದೆ"
"ಇನ್ನೂ ವಿಜಯ್ ಸೇತುಪತಿ ನಟನೆಯ ಬಗ್ಗೆ ಮಾತನಾಡುವುದಾದರೆ, ಆತ ಒಳ್ಳೆಯ ನಟ, ಅತ್ಯುತ್ತಮ ನಟ ಎಂಬುದು ಎಲ್ಲರ ಅಂಬೋಣ. ಆದ್ರೆ ಈತ ಎಲ್ಲಾ ಚಿತ್ರದಲ್ಲೂ ಒಂದೇ ರೀತಿಯ ನಟನೆಯನ್ನಷ್ಟೇ ಮಾಡುವ avarage ನಟನೇ ಹೊರತು, ಆ ರೇಂಜಿಗೆ ನಟಿಸುವ Versetile Actor ಅಂತೂ ಅಲ್ಲವೇ ಅಲ್ಲ. ಈತನನ್ನು ಒಳ್ಳೆಯ ನಟ ಎನ್ನುವವರು ಅದೇ ತಮಿಳು ಇಂಡಸ್ಟ್ರಿಯ ಕಮಲ್ ಹಾಸನ್ ಎದುರು ಈತನ ನಟನೆಯನ್ನಿಟ್ಟು ನೀವೇ ತಾಳೆ ಮಾಡಿಕೊಳ್ಳಿ. ನಸು ನಕ್ಕು ಸುಮ್ಮನಾಗಿ..!"
"ಇನ್ನೂ ಈತ ಹೆಸರು ಮಾಡಿದ್ದೆಲ್ಲ, ನೆಗೆಟಿವ್ ರೋಲ್ ಮತ್ತು ಸೈಡ್ ರೋಲ್‌ಗಳಲ್ಲೇ. ತಾನೇ ಹೀರೋ ಆಗಿ ಈತ ಒಂದು ಹಿಟ್ ನೀಡಿ ದಶಕಗಳಾಗಿತ್ತು. ತಮಿಳುನಾಡಿನಲ್ಲೇ ಒಂದು ಮಾತಿದೆ ಅದೇನೆಂದರೆ "ಸಿನಿಮಾದಲ್ಲಿ ವಿಜಯ್ ಸೇತುಪತಿ ಇದ್ದರೆ ಸಿನಿಮಾ ಹಿಟ್, ಆದ್ರೆ ವಿಜಯ್ ಸೇತುಪತಿ ಸಿನಿಮಾ ಓಡಲ್ಲ, ಕಾಸು ಗಿಟ್ಟಿಸಲ್ಲ" ಅಂತ. ಆದ್ರೂ ಮಹಾರಾಜ ಎಂಬ ಸಿನಿಮಾ ಬರ್ತಾ ಇದ್ದಂತೆ ಜನ ಈತನ ಹಳೆಯ ಕೆಟ್ಟ ಟ್ರ್ಯಾಕ್ ರೆಕಾರ್ಡ್ ಅನ್ನು ಮರೆತು ಅದ್ಭುತ ನಟ ಉಘೇ ಉಘೇ ಎನ್ನುತ್ತಿರುವುದು ಮಾತ್ರ ಸೋಜಿಗ"
"ನಟನೆ ಒಂದು ಕಡೆ ಇರಲಿ. ಈತನಿಗೆ ಒಳ್ಳೆಯ ಸಿನಿಮಾಗಳನ್ನೂ ಆಯ್ಕೆ ಮಾಡಿಕೊಳ್ಳಲು ಬರಲ್ಲ. ಇದಕ್ಕೆ ಮೇಲೆ ಉಲ್ಲೇಖಿಸಿರುವ ಚಿತ್ರಗಳೇ ಸಾಕ್ಷಿ. ತನ್ನ 25ನೇ ಚಿತ್ರವಾಗಿ ಈತ ಸೀತಾಕಾತಿ ಎಂಬ ಡಬ್ಬಾತಿ ಡಬ್ಬ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಎಂದರೆ ಈತನ ಸಿನಿಮಾ ಕಥೆ ಆಯ್ಕೆ ಬಗೆಗಿನ ನಾಲೆಡ್ಜ್ ಅತಿದೊಡ್ಡ ಪ್ರಶ್ನಾರ್ಥಕ ವಿಚಾರ. ಆದರೆ, ಇಂತಹ ವ್ಯಕ್ತಿ ತನ್ನ 50ನೇ ಚಿತ್ರವಾಗಿ ಮಹಾರಾಜ್ ಸಿನಿಮಾವನ್ನ ಓಕೆ ಮಾಡಿದ್ದೇ ಆತನ ಅದೃಷ್ಟ ಇರಬೇಕು ಅಥವಾ ಕಣ್ತಪ್ಪಿರಬೇಕು"
"ಇನ್ನೂ ಮಹಾರಾಜ ಕೂಡ ಸಾಧಾರಣ ಚಿತ್ರವೇ ವಿನಃ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೊಗಳಿ ಅಟ್ಟಕ್ಕೇರಿಸುವಂತಹ ಚಿತ್ರ ಏನಲ್ಲ. ಏಕೆಂದರೆ ತಂದೆ ಮಗಳ ಸಂಬಂಧ, ಅಪ್ರಾಪ್ತ ವಯಸ್ಕ ಹೆಣ್ಣು ಮಗು- ಲೈಂಗಿಕ ದೌರ್ಜನ್ಯದ ಬಗೆಗೆ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳು ಬಂದಿದೆ. ಹಾಗೆ ನೋಡಿದರೆ ಈ ಕಥೆಯೂ ಹೊಸದೇನಲ್ಲ. ಆದರೆ, ಚಿತ್ರಕಥೆ ಹಾಗೂ ನಿರೂಪಣಾ ಶೈಲಿ ಇಡೀ ಚಿತ್ರವನ್ನು ಹಿಡಿದಿಟ್ಟಿದೆ ಅಷ್ಟೆ"
"ಒಟ್ಟಾರೆ ನಂದು ಒಂದೇ ಆಸೆ, ಮಹಾರಾಜ ಸಿನಿಮಾ ಚೆನ್ನಾಗಿದೆ ಎಂದು ವಿಜಯ್ ಸೇತುಪತಿ ಟ್ರ್ಯಾಕ್ ರೆಕಾರ್ಡ್ ಬಗ್ಗೆ ಗಂಧಗಾಳಿ ಗೊತ್ತಿಲ್ಲದ ಜನರೆಲ್ಲರನ್ನೂ ಗಟ್ಟಿಯಾಗಿ ಕಟ್ಟಿಹಾಕಿ ಈತನ ಸಂಗ ತಮಿಳನ್ ಹಾಗೂ ಡಿಎಸ್‌ಪಿ ಎಂಬ ಎರಡು ಸಿನಿಮಾಗಳನ್ನು ತೋರಿಸಬೇಕು ಎಂಬುದು ನನ್ನ ಕೋರಿಕೆ"
(ಗಮನಕ್ಕೆ: ಈ ಮೇಲಿನ ಬರಹ, ಲೇಖಕರ ವೈಯಕ್ತಿಕ ಅಭಿಪ್ರಾಯವೇ ಹೊರತು, ಇದಕ್ಕೂ ಹಿಂದೂಸ್ತಾನ್ ಟೈಮ್ಸ್ ಕನ್ನಡಕ್ಕೂ ಯಾವುದೇ ಸಂಬಂಧವಿಲ್ಲ)