ಕನ್ನಡ ಸುದ್ದಿ  /  ಮನರಂಜನೆ  /  ಆ ಹೀರೋಗಳ ಜತೆ ನಟಿಸಿ ಸಾಕಷ್ಟು ಅನುಭವಿಸಿದ್ದೇನೆ, ಇನ್ಮುಂದೆ ಆ ತಪ್ಪು ಮಾಡಲ್ಲ!; ವಿಜಯ್‌ ಸೇತುಪತಿ ಮಹತ್ವದ ನಿರ್ಧಾರ Ht Interview

ಆ ಹೀರೋಗಳ ಜತೆ ನಟಿಸಿ ಸಾಕಷ್ಟು ಅನುಭವಿಸಿದ್ದೇನೆ, ಇನ್ಮುಂದೆ ಆ ತಪ್ಪು ಮಾಡಲ್ಲ!; ವಿಜಯ್‌ ಸೇತುಪತಿ ಮಹತ್ವದ ನಿರ್ಧಾರ HT INTERVIEW

ಕಾಲಿವುಡ್‌ ಸ್ಟಾರ್‌ ವಿಜಯ್‌ ಸೇತುಪತಿ ನಾಯಕನಾಗಿ ನಟಿಸಿರುವ ಮಹಾರಾಜ ಸಿನಿಮಾ ಮುಂದಿನ ವಾರ (ಜೂನ್‌ 14) ಬಿಡುಗಡೆ ಆಗಲಿದೆ. ಈ ಸಿನಿಮಾ ಪ್ರಚಾರದ ನಿಮಿತ್ತ ಹಿಂದೂಸ್ತಾನ್‌ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಸ್ಟಾರ್‌ ಹೀರೋಗಳ ಸಿನಿಮಾದಲ್ಲಿ ಇನ್ಮೇಲೆ ನಟಿಸುವುದಿಲ್ಲ ಎಂಬ ಮಹತ್ವದ ನಿರ್ಧಾದ ಬಗ್ಗೆ ಮಾತನಾಡಿದ್ದಾರೆ.

ಆ ಹೀರೋಗಳ ಜತೆ ನಟಿಸಿ ಸಾಕಷ್ಟು ಅನುಭವಿಸಿದ್ದೇನೆ, ಇನ್ಮುಂದೆ ಆ ತಪ್ಪು ಮಾಡಲ್ಲ!; ವಿಜಯ್‌ ಸೇತುಪತಿ ಮಹತ್ವದ ನಿರ್ಧಾರ HT INTERVIEW
ಆ ಹೀರೋಗಳ ಜತೆ ನಟಿಸಿ ಸಾಕಷ್ಟು ಅನುಭವಿಸಿದ್ದೇನೆ, ಇನ್ಮುಂದೆ ಆ ತಪ್ಪು ಮಾಡಲ್ಲ!; ವಿಜಯ್‌ ಸೇತುಪತಿ ಮಹತ್ವದ ನಿರ್ಧಾರ HT INTERVIEW

Vijay Sethupathi Interview: ಕಾಲಿವುಡ್‌ನ ಸ್ಟಾರ್‌ ನಟ ವಿಜಯ್‌ ಸೇತುಪತಿ ತಮ್ಮ ನಟನೆಯ ಮೂಲಕವೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ನಾಯಕನಾಗಿ ನಟಿಸುವುದರ ಜತೆಗೆ ಖಡಕ್‌ ಖಳನಾಗಿಯೂ ಮಿಂಚಿ ಒಂದೇ ಭಾಷೆಗೆ ಸೀಮಿತವಾಗದೆ, ಪ್ಯಾನ್‌ ಇಂಡಿಯಾ ಮಟ್ಟದಲ್ಲೂ ಸದ್ದು ಮಾಡಿ ಸುದ್ದಿಯಾಗಿದ್ದಾರೆ ಈ ತಮಿಳು ನಟ. ಇದೀಗ ತಮ್ಮ ಸಿನಿಮಾ ವೃತ್ತಿಜೀವನದ ಮಹತ್ವದ ಘಟ್ಟಕ್ಕೆ ಬಂದಿದ್ದಾರೆ ಮಕ್ಕಳ್‌ ಸೇಲ್ವನ್.‌ ಅಂದರೆ, ವಿಜಯ್‌ ಸೇತುಪತಿ ನಟನೆಯ 50ನೇ ಸಿನಿಮಾ ಮಹಾರಾಜ ಬಿಡುಗಡೆಯ ಸನಿಹದಲ್ಲಿದೆ. ಇದೇ ಜೂನ್‌ 14ರಂದು ಈ ಚಿತ್ರ ರಿಲೀಸ್‌ ಆಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಕಾಲಿವುಡ್‌ ಮಾತ್ರವಲ್ಲದೆ ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲೂ ವಿಜಯ್‌ ಸೇತುಪತಿ ಹೆಸರು ಮಾಡಿದ್ದಾರೆ. ಜವಾನ್‌ ಸಿನಿಮಾ ಮೂಲಕ ದೊಡ್ಡ ಮಟ್ಟದ ಯಶಸ್ಸು ಪಡೆದಿದ್ದ ಸೇತುಪತಿ, ಅದಕ್ಕೂ ಮೊದಲು ಫರ್ಜಿ ವೆಬ್‌ ಸಿರೀಸ್‌ ಮೂಲಕವೂ ನೋಡುಗರ ಗಮನ ಸೆಳೆದಿದ್ದರು. ಇತ್ತೀಚಿನ ಮೇರಿ ಕ್ರಿಸ್‌ಮಸ್‌ ಸಿನಿಮಾದಲ್ಲೂ ಕತ್ರಿನಾ ಕೈಫ್‌ ಜತೆಗೆ ನಟಿಸಿದ್ದರು. ಹೀಗೆ ಎಲ್ಲ ಸಿನಿಮಾರಂಗದಲ್ಲೂ ಸಕ್ರಿಯರಾಗಿರುವ ವಿಜಯ್‌, ಇದೀಗ ಮಹಾರಾಜ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ ವಿಜಯ್‌. ಇನ್ನು ಮುಂದೆ ಸ್ಟಾರ್ ಹೀರೋಗಳ ಜೊತೆ ಕೆಲಸ ಮಾಡುವುದಿಲ್ಲ. ವಿಲನ್ ಪಾತ್ರಗಳಿಂದ ದೂರ ಉಳಿಯುತ್ತೇನೆ ಎಂದಿದ್ದಾರೆ.

ಸ್ಟಾರ್‌ ನಟರ ಸಿನಿಮಾಗಳಿಂದ ದೂರ ದೂರ

ಮಹಾರಾಜ ಸಿನಿಮಾ ಬಿಡುಗಡೆಯ ನಿಮಿತ್ತ Hindustan Times ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿದ್ದ ವಿಜಯ್‌ ಸೇತುಪತಿಗೆ, ತಮಿಳು ಚಿತ್ರರಂಗದ ಯಾವ ಸ್ಟಾರ್‌ ಜತೆಗೆ ಕೆಲಸ ಮಾಡಲು ಬಯಸುತ್ತೀರಾ ಎಂಬ ಪ್ರಶ್ನೆ ಎದುರಾಗಿದೆ. ಅದಕ್ಕೆ ಉತ್ತರಿಸಿದ ಅವರು, "ನಾನು ಅಂತಹ ಚಿತ್ರಗಳಿಂದ ಬೇಸತ್ತಿದ್ದೇನೆ. ಏಕೆಂದರೆ ನನಗೆ ಈವರೆಗೂ ಒಂದಷ್ಟು ಕೆಟ್ಟ ಅನುಭವಗಳಾಗಿವೆ. ಮತ್ತೊಬ್ಬ ಸ್ಟಾರ್ ಹೀರೋ ಜತೆ ಸಿನಿಮಾ ಒಪ್ಪಿಕೊಂಡಾಗ ನಿಮಗೆ ಯಾವ ರೀತಿಯ ಪಾತ್ರ ಸಿಗಲಿದೆ ಎಂಬುದು ಮೊದಲೇ ಗೊತ್ತಾಗುತ್ತದೆ. ಆದರೆ ಆ ಪಾತ್ರದಲ್ಲಿ ಎಷ್ಟೇ ಚೆನ್ನಾಗಿ ನಟಿಸಿದರೂ, ಕೊನೆಗೆ ಬಯಸಿದ ಹೆಸರು ಸಿಗುವುದಿಲ್ಲ.

ಅಲ್ಲದೇ ಆ ಸ್ಟಾರ್‌ನಂತೆ ಸಿನಿಮಾಗಾಗಿ ಅಷ್ಟೇ ಕಷ್ಟಪಟ್ಟರೂ, ಆ ಶ್ರಮವನ್ನು ಯಾರೂ ಗುರುತಿಸುವುದಿಲ್ಲ. ಹಾಗಾಗಿ ಸ್ಟಾರ್‌ ಸಿನಿಮಾಗಳಲ್ಲಿ ನಟಿಸಲ್ಲ. ಮೆರ್ರಿ ಕ್ರಿಸ್‌ಮಸ್‌ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ನಾನು ಈ ವಿಚಾರ ಹೇಳಿದ್ದೆ. ಇನ್ನು ಮುಂದೆ ವಿಲನ್ ಪಾತ್ರಗಳು ಮತ್ತು ಅತಿಥಿ ಪಾತ್ರಗಳಲ್ಲಿ ನಟಿಸಲು ನಾನು ಬಯಸುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಇಂತಹ ಹಲವು ಪಾತ್ರಗಳನ್ನು ನಾನು ತಿರಸ್ಕರಿಸಿದ್ದೇನೆ" ಎಂದಿದ್ದಾರೆ ವಿಜಯ್‌ ಸೇತುಪತಿ.

ಅಜನೀಶ್‌ ಲೋಕನಾಥ್ ಸಂಗೀತ ನೀಡಿರುವ ಚಿತ್ರ

ಮಂಕಿ ಟಾಯ್ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿಥಿಲನ್ ಸಾಮಿನಾಥನ್ ಮಹಾರಾಜ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಕ್ಷೌರಿಕನಾಗಿ ವಿಜಯ್‌ ಸೇತುಪತಿ ನಟಿಸಿದ್ದಾರೆ. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಮನೋಜ್ಞ ಅಭಿನಯದ ಮೂಲಕವೇ ಗಮನ ಸೆಳೆದಿದ್ದಾರೆ ವಿಜಯ್. ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಸಹ ಈ ಚಿತ್ರದಲ್ಲಿ ಖಳನಾಗಿದ್ದಾರೆ. ಸುಧನ್ ಸುಂದರಂ ಮತ್ತು ಜಗದೀಶ್ ಪಳನಿಸ್ವಾಮಿ ಈ ಚಿತ್ರದ ನಿರ್ಮಾಪಕರು. ದಿನೇಶ್ ಪುರುಷೋತ್ತಮನ್ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ. ಕನ್ನಡದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಟ್ರೇಲರ್‌ನಲ್ಲಿರುವ ಸಂಗೀತವೇ ಭಯ ಹುಟ್ಟಿಸುವಂತಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಗಾಂಧಿ ಟಾಕ್ಸ್‌ ಎಂಬ ಸೈಲೆಂಟ್‌ ಚಿತ್ರದ ಶೂಟಿಂಗ್‌ ಮುಗಿಸಿರುವ ವಿಜಯ್‌ ಸೇತುಪತಿ, ವಿಡುತಲೈ ಪಾರ್ಟ್‌ 2 ಚಿತ್ರದ ಚಿತ್ರೀಕರಣದಲ್ಲೂ ಭಾಗವಹಿಸಿದ್ದಾರೆ. ಇತ್ತೀಚೆಗಷ್ಟೇ ಏಸ್‌ ಹೆಸರಿನ ಸಿನಿಮಾ ಘೋಷಣೆ ಮಾಡಿದ್ದಾರೆ. ಇದೀಗ ಮಹಾರಾಜ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ. ಇದನ್ನು ಹೊರತುಪಡಿಸಿ ಬೇರಾವ ಸಿನಿಮಾಗಳೂ ಸೇತುಪತಿ ಬತ್ತಳಿಕೆಯಲ್ಲಿಲ್ಲ.

ಟಿ20 ವರ್ಲ್ಡ್‌ಕಪ್ 2024