Raayan Movie: ನಾ ಬೀದಿಯಲ್ಲೇ ಇರಬೇಕಾ? ದುಬಾರಿ ಏರಿಯಾದಲ್ಲಿ ಮನೆ ಖರೀದಿಸಬಾರದೇ? ಟ್ರೋಲಾಯ್ತು ನಟ ಧನುಷ್ ಮಾತು
ಈ ವಾರ ಧನುಷ್ ನಟನೆಯ ರಾಯನ್ ಸಿನಿಮಾ ಬಿಡುಗಡೆಯಾಗಲಿದೆ. ಚೆನ್ನೈನಲ್ಲಿ ರಾಯನ್ ಸಿನಿಮಾದ ಆಡಿಯೋ ಬಿಡುಗಡೆ ಮಾಡಿದೆ. ಈ ಸಂದರ್ಭದಲ್ಲಿ ಧನುಷ್ ಮಾತನಾಡಿದ ಮಾತೊಂದು ಇಂಟರ್‌ನೆಟ್‌ನಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಬೆಂಗಳೂರು: ಈ ವಾರ ಧನುಷ್ ನಟನೆಯ ರಾಯನ್ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾದ ಆಡಿಯೋ ಲಾಂಚ್‌ನಲ್ಲಿ ಧನುಷ್ ಆಡಿದ ಮಾತು ನೆಟ್ಟಿಗರನ್ನು ಇಬ್ಬಾಗ ಮಾಡಿದೆ. ಈ ಕಾರ್ಯಕ್ರಮದಲ್ಲಿ ತಾನು ಔಟ್‌ಸೈಡರ್ ಎಂದು ತನ್ನನ್ನು ತಾನು ಧನುಷ್ ಬಿಂಬಿಸಿದ್ದಾರೆ. ಪೋಯೇಸ್ ಗಾರ್ಡನ್‌ನಲ್ಲಿ ಮನೆ ಖರೀದಿಸಲು ಎಷ್ಟೊಂದು ಕಠಿಣ ಪರಿಶ್ರಮ ಪಟ್ಟೆ ಎಂದು ತನ್ನ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಆದರೆ, ನೆಟ್ಟಿಗರು "ನೀವು ಸಿನಿಮಾ ಕುಟುಂಬದಿಂದ ಬಂದವರು. ಕಷ್ಟದ ಕಥೆಗಳನ್ನು ಹೇಳಬೇಡಿ" ಎಂದು ಎಚ್ಚರಿಸಿದ್ದಾರೆ. ಈ ರೀತಿ ಭಾವುಕರಾಗಿ ಜನರನ್ನು ಸೆಳೆಯುವಂತಹ ಟ್ರಿಕ್ ಅನಗತ್ಯ ಎಂದು ಹೇಳಿದ್ದಾರೆ.
ಧನುಷ್ ಹೇಳಿದ್ದೇನು?
ಪೋಯಸ್ ಗಾರ್ಡನ್‌ನಲ್ಲಿ ರಜನಿಕಾಂತ್, ಜಯಲಲಿತಾ ಮುಂತಾದವರ ಮನೆಯಿದೆ. ಈ ಪೋಯಸ್ ಗಾರ್ಡನ್‌ನಲ್ಲಿ ಮನೆ ಖದೀದಿಸಲು ಸಾಕಷ್ಟು ಕಷ್ಟಗಳನ್ನು ಅನುಭವಿಸಿದೆ ಎಂದು ಧನುಷ್ ಹೇಳಿದ್ದಾರೆ. "ನಾನು ಪೋಯಸ್ ಗಾರ್ಡನ್‌ನಲ್ಲಿ ಮನೆ ಖರೀದಿಸಿದ್ದು ದೊಡ್ಡ ವಿಷಯವಾಯ್ತು. ಅದೇ ವಿಷಯದ ಚರ್ಚೆಗಳಾದವು. ಇದರ ಬದಲು ನಾನು ಅಪಾರ್ಟ್‌ಮೆಂಟ್‌ನಲ್ಲಿ ಸಣ್ಣ ಮನೆ ಖರೀದಿಸಬೇಕಿತ್ತೇ?. ಪೋಯಸ್ ಗಾರ್ಡನ್‌ನಲ್ಲಿ ನಾನು ಮನೆ ಖರೀದಿಸಬಾರದೇ? ಬೀದಿಯಲ್ಲಿದ್ದ ನಾನು ಬೀದಿಯಲ್ಲೇ ಇರಬೇಕಿತ್ತ?" ಎಂದು ಅವರು ಪ್ರಶ್ನಿಸಿದ್ದಾರೆ.
ತಾನು 16 ವರ್ಷ ವಯಸ್ಸಿನಲ್ಲಿ ಪೋಯಸ್ ಗಾರ್ಡನ್‌ನ ಬೀದಿಗಳನ್ನು ಸುತ್ತುತ್ತಿದ್ದೆ ಎಂದು ಅವರ ಹೇಳಿದ್ದಾರೆ. "ಅಲ್ನೋಡು ರಜನಿಕಾಂತ್ ಮನೆ, ಇಲ್ನೋಡು ಜಯಲಲಿತಾರ ಮನೆ" ಎಂದು ಸ್ನೇಹಿತರ ಜತೆ ಮನೆಗಳನ್ನು ಗುರುತಿಸುತ್ತಿದ್ದೆ. ಒಂದು ಕಡೆ ರಜನಿಕಾಂತ್ ಸರ್ ಮನೆ, ಇನ್ನೊಂದು ಕಡೆ ಜಯಲಲಿತಾ ಅಮ್ಮನ ಮನೆ ಕಾಣಿಸುತ್ತಿತ್ತು. ನಾನೂ ಇಲ್ಲೊಂದು ಸಣ್ಣ ಮನೆಯಾದರೂ ಖರೀದಿಸಬೇಕು ಎಂಬ ಕನಸನ್ನು ಅಂದುಕೊಂಡೆ. ಈಗ ನಾನು ಇರುವ ಪೋಯಸ್ ಗಾರ್ಡನ್ ಮನೆಯೂ 16 ವರ್ಷದ ವೆಂಕಟೇಶ ಪ್ರಭುವಿನ (ಧನುಷ್ ಬಾಲ್ಯದ ಹೆಸರು) ಕನಸಿನ ಉಡುಗೊರೆ" ಎಂದು ಧನುಷ್ ಸ್ಮರಿಸಿದ್ದಾರೆ.
ಈ ಮಾತು ಟ್ರೋಲಾಯ್ತು ಏಕೆ?
ಧನುಷ್‌ನ ಈ ಮಾತು ಟ್ರೋಲ್ ಆಗಲು ಕಾರಣವೇನು ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ನೆಟ್ಟಿಗರು ಧನುಷ್‌ಗೆ ತಾವ್ಯಾರು ಎಂದು ನೆನಪಿಸಿದ್ದಾರೆ. ನೀವು ಬೀದಿಬದಿಯಲ್ಲಿ ಕಷ್ಟಪಟ್ಟು ಬೆಳೆದವರು ಅಲ್ಲ ಎಂದಿದ್ದಾರೆ. ನಿಮ್ಮ ತಂದೆ ಜನಪ್ರಿಯ ನಿರ್ದೇಶಕ ಕಸ್ತೂರಿ ರಾಜ ಎಂದಿದ್ದಾರೆ. "ಧನುಷ್‌ರಂತಹ ಶ್ರೀಮಂತ ಮಕ್ಕಳು ತಾವು ಶೂನ್ಯದಿಂದ ಬೆಳೆದವರು ಎಂದು ಹೇಳುವುದನ್ನು ಕೇಳಿದರೆ ಅಚ್ಚರಿಯಾಗುತ್ತದೆ. ನಿಮ್ಮ ಕುಟುಂಬವೇ ಸಿನಿಮಾ ಹಿನ್ನೆಲೆಯನ್ನು ಹೊಂದಿದೆ. ಆರಂಭದ ವರ್ಷಗಳಲ್ಲಿ ಸಿನಿಮಾಗಳಲ್ಲಿ ಅವಕಾಶ ಪಡೆಯುವುದು ನಿಮಗೆ ಕಷ್ಟವೇ ಆಗಿರಲಿಲ್ಲ. ಇದನ್ನು ಮರೆತು, ತಾನು ಬೀದಿಬದಿಯಲ್ಲಿ ಬೆಳೆದವನು ಎಂದು ಸುಳ್ಳು ಹೇಳೋದ್ಯಾಕೆ" ಎಂದು ನೆಟ್ಟಿಗರು ಟೀಕಿಸಿದ್ದಾರೆ.
"ಧನುಷ್ ತಂದೆ ತನ್ನ 18ನೇ ವಯಸ್ಸಿನಲ್ಲಿಯೇ ಸಿನಿಮಾವೊಂದಕ್ಕೆ ಫೈನಾನ್ಸ್ ಮಾಡಿದ್ದರು. ತನ್ನ 20ನೇ ವಯಸ್ಸಿನಲ್ಲಿ ರಜನಿಕಾಂತ್ ಮಗಳನ್ನು ವಿವಾಹವಾದರು" ಎಂದು ಎಕ್ಸ್‌ನಲ್ಲಿ ಇನ್ನೊಬ್ಬರು ನೆನಪಿಸಿದ್ದಾರೆ.
"ನನಗೆ ರಾಯನ್ ಸಿನಿಮಾದ ಆಡಿಯೋ ಲಾಂಚ್‌ನಲ್ಲಿ ಕಿರಿಕಿರಿಯಾದ ಅಂಶ ಏನು ಗೊತ್ತೆ? ಧನುಷ್ ಮಕ್ಕಳು ಸೆಂಟರ್ ಸ್ಟೇಜ್‌ನಲ್ಲಿದ್ದರು. ಸಿನಿಮಾದ ಕಲಾವಿದರು, ಟೆಕ್ನಿಷಿಯನ್‌ಗಳನ್ನು ಸೈಡ್‌ಲೈನ್ ಮಾಡಲಾಗಿತ್ತು. ಹೌದು, ಈತ ನೆಪೊ. ಇದೇ ರೀತಿ ಕೆಲಸ ಮಾಡುತ್ತಾನೆ" ಎಂದು ಎಕ್ಸ್‌ನಲ್ಲಿ ಮತ್ತೊಬ್ಬರು ಟೀಕಿಸಿದ್ದಾರೆ.
ಇದೇ ಸಮಯದಲ್ಲಿ ಸಾಕಷ್ಟು ಜನರು ಧನುಷ್ ಬೆಂಬಲಕ್ಕೆ ಬಂದಿದ್ದಾರೆ. "ಧನುಷ್ ಮಾತಿನಿಂದ ನಿಮಗೆ ಏನಾದರೂ ಸ್ಪೂರ್ತಿ ದೊರಕಿದರೆ ತೆಗೆದುಕೊಳ್ಳಿ. ಇಲ್ಲವಾದರೆ ಮರೆತುಬಿಡಿ. ಈ ರೀತಿ ದ್ವೇಷವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಬೇಡಿ" ಎಂದು ಒಬ್ಬರು ಹೇಳಿದ್ದಾರೆ.
ರಾಯನ್ ಸಿನಿಮಾ ಬಿಡುಗಡೆ ದಿನಾಂಕ
ಧನುಷ್ ನಟನೆಯ ರಾಯನ್ ಸಿನಿಮಾವು ಇದೇ ಶುಕ್ರವಾರ ಚಿತ್ರಮಂದರಿಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಧನುಷ್ ಜತೆಗೆ ಸಂದೀಪ್ ಕಿಶಾನ್, ಕಾಳಿದಾಸ್ ಜಯರಾಮ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಎಸ್‌ಜೆ ಸೂರ್ಯ, ಸೆಲ್ವರಾಘವನ್, ಪ್ರಕಾಶ್ ರಾಜ್, ದೂಶರ ವಿಜಯನ್, ಅಪರ್ಣಾ ಬಾಲಮುರಳಿ, ವಿಜಯಲಕ್ಷ್ಮಿ ಶರತ್ ಕುಮಾರ್ ಮುಂತಾದವರೂ ನಟಿಸಿದ್ದಾರೆ.