ರಜನಿಕಾಂತ್ ಸಿನಿಮಾದ ಕಲೆಕ್ಷನ್ ಇಷ್ಟು ಕಡಿಮೆಯಾ? ಬಾಕ್ಸ್ ಆಫೀಸ್‌ನಲ್ಲಿ ಅಂಬೆಗಾಲಿಡುತ್ತಿರುವ ಲಾಲ್ ಸಲಾಮ್
Lal Salaam box office collection day 3: ರಜನಿಕಾಂತ್ ಅತಿಥಿ ಪಾತ್ರದಲ್ಲಿ ನಟಿಸಿರುವ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಲಾಲ್ ಸಲಾಮ್ ಸಿನಿಮಾವು ಭಾರತದ ಬಾಕ್ಸ್ ಆಫೀಸ್‌ನಲ್ಲಿ ಮೂರನೇ ದಿನ 3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
Lal Salaam box office collection day 3: ಐಶ್ವರ್ಯಾ ರಜನಿಕಾಂತ್ ನಿರ್ದೇಶನದ ಸ್ಪೋರ್ಟ್ಸ್ ಡ್ರಾಮಾ ಲಾಲ್ ಸಲಾಮ್ ಸಿನಿಮಾವು ಭಾರತದ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆಯಷ್ಟು ಕಲೆಕ್ಷನ್ ಮಾಡುತ್ತಿಲ್ಲ. ಸಚ್‌ನಿಲ್ಕ್.ಕಾಂನ ವರದಿ ಪ್ರಕಾರ ಲಾಲ್ ಸಲಾಮ್ ಬಿಡುಗಡೆಯಾದ ಮೂರನೇ ದಿನ 3 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಫೆಬ್ರವರಿ 9ರಂದು ಬಿಡುಗಡೆಯಾದ ಈ ಸಿನಿಮಾದ ಕುರಿತು ಸಕಾರಾತ್ಮಕ ವಿಮರ್ಶೆ ವ್ಯಕ್ತವಾಗಿತ್ತು. ಕ್ರೀಡೆ ಮತ್ತು ಧರ್ಮ ರಾಜಕೀಯದ ಕುರಿತು ಈ ಚಿತ್ರ ಮಾತನಾಡಿತ್ತು.
ಲಾಲ್ ಸಲಾಮ್ ಬಾಕ್ಸ್ ಆಫೀಸ್ ವರದಿ
ರಜನಿಕಾಂತ್ ನಟನೆಯ ಲಾಲ್ ಸಲಾಮ್ ಸಿನಿಮಾವು ಮೊದಲ ದಿನ 3.55 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಎರಡನೇ ದಿನ 3.25 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮೂರನೇ ದಿನ ಮೂರು ಕೋಟಿ ರೂಪಾಯಿ ಗಳಿಕೆ ಮಾಡಿದೆ. ತಮಿಳು ವರ್ಷನ್‌ಗೆ ಶೇಕಡ 29.24 ಆಕ್ಯುಪೆನ್ಸಿ ಮತ್ತು ತೆಲುಗು ಶೋಗಳಿಗೆ ಶೇಕಡ 15.24 ಆಕ್ಯುಪೆನ್ಸಿ ಇತ್ತು.
ಸುಮಾರು ಎಂಟು ವರ್ಷ ಗ್ಯಾಪ್ ಬಳಿಕ ಐಶ್ವರ್ಯಾ ರಜನಿಕಾಂತ್ ಅವರು ನಿರ್ದೇಶನಕ್ಕೆ ಇಳಿದಿದ್ದರು. ಇತ್ತೀಚೆಗೆ ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಐಶ್ವರ್ಯಾ ರಜನಿಕಾಂತ್ ಹೀಗೆ ಹೇಳಿದ್ದರು. "ಎಂಟು ವರ್ಷಗಳ ಬಳಿಕ ಹಳೆಯ ಸ್ನೇಹಿತನ ಜತೆ ವಾಪಸ್ ಬಂದಿದ್ದೇನೆ. ನಾನು ಕಳೆದ ಎಂಟು ಸುಂದರ ವರ್ಷಗಳನ್ನು ನನ್ನ ಮಕ್ಕಳ ಜತೆ ಕಳೆದೆ. ಅವರು ಬೆಳೆಯುತ್ತಿರುವ ಸಮಯದಲ್ಲಿ ಬ್ಯುಸಿಯಾಗಿರಲು ಬಯಸಲಿಲ್ಲ. ಅವರು ತುಂಬಾ ವೇಗವಾಗಿ ಬೆಳೆಯುತ್ತಿರುವುದು ಅರಿವಾಯಿತು. ಈಗ ಅವರ ರೆಕ್ಕೆಗಳು ವಿಸ್ತಾರಗೊಳ್ಳುತ್ತಿವೆ. ಈಗ ನನಗೂ ಸಮಯ ದೊರಕುತ್ತಿದೆ" ಎಂದು ಐಶ್ವರ್ಯಾ ರಜನಿಕಾಂತ್ ಹೇಳಿದ್ದರು.
ನವೆಂಬರ್ 12ರಂದು ಲಾಲ್ ಸಲಾಮ್ ಸಿನಿಮಾದ ಮೊದಲ ಟೀಸರ್ ಬಿಡುಗಡೆ ಮಾಡಲಾಗಿತ್ತು. ತಿಂಗಳಿಗೊಮ್ಮೆ ಈ ರೀತಿ ಚಿತ್ರತಂಡ ಅಪ್‌ಡೇಟ್ ನೀಡುತ್ತಿತ್ತು. ಈ ಟೀಸರ್‌ನಲ್ಲಿ ರೋಚಕ ಕ್ರಿಕೆಟ್ ಪಂದ್ಯಾಟದ ದೃಶ್ಯ ತೋರಿಸಲಾಗಿತ್ತು. ಹಿನ್ನೆಲೆಯಲ್ಲಿ "ಇದು ಕೇವಲ ಕ್ರಿಕೆಟ್ ಆಟವಲ್ಲ, ಇದು ಯುದ್ಧ" ಎಂಬ ಕಾಮೆಂಟರಿ ಕೇಳಿಸುತ್ತಿತ್ತು. ಲಾಲ್ ಸಲಾಮ್ ಸಿನಿಮಾವು ಕ್ರಿಕೆಟ್ ಮತ್ತು ಧರ್ಮದ ವಿಚಾರವನ್ನು ಒಳಗೊಂಡಿದೆ. ಈಗಾಗಲೇ ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಲಾಲ್ ಸಲಾಂ ಸಿನಿಮಾ ವಿಮರ್ಶೆ ಪ್ರಕಟವಾಗಿದೆ.
ಲೈಕಾ ಪ್ರೊಡಕ್ಷನ್ ನಿರ್ಮಾಣದ ಮತ್ತು ರಜನಿಕಾಂತ್ ನಟನೆಯ ಲಾಲ್ ಸಲಾಮ್ ಸಿನಿಮಾ ಫೆಬ್ರವರಿ 9ರಂದು ಬಿಡುಗಡೆಯಾಗಿದೆ. ಲಾಲ್ ಸಲಾಮ್‌ನಲ್ಲಿ ರಜನಿಕಾಂತ್ ಅವರರು ಮೊಯ್ದೀನ್ ಬಾವಾ ಆಗಿ ಕಾಣಿಸಿಕೊಂಡಿದ್ದಾರೆ. ಲಾಲ್ ಸಲಾಮ್ ಸಿನಿಮಾದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಐಶ್ವರ್ಯಾ ರಜನಿಕಾಂತ್ ಅವರು ಈ ಹಿಂದೆ ವೈ ರಾಜಾ ವೈ ಎಂಬ ತಮಿಳು ಸಾಹಸ ರೋಚಕ ಸಿನಿಮಾ ನಿರ್ದೇಶನ ಮಾಡಿದ್ದಾರು. ಈ ಸಿನಿಮಾದಲ್ಲಿ ಧನುಷ್ ನಾಯಕ ನಟನಾಗಿ ಪ್ರೇಕ್ಷಕರನ್ನು ರಂಜಿಸಿದ್ದರು. ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿವಾಹವಾಗಿದ್ದರು. ಸುಮಾರು ಒಂದು ವರ್ಷದ ಹಿಂದೆ ಇವರಿಬ್ಬರು ಡಿವೋರ್ಸ್ ಪಡೆದಿದ್ದಾರೆ. ಇತ್ತೀಚೆಗೆ ಲಾಲ್ ಸಲಾಂ ಸಿನಿಮಾ ಬಿಡುಗಡೆಯಾಗುವ ಸಂದರ್ಭದಲ್ಲಿ ಐಶ್ವರ್ಯಾ ರಜನಿಕಾಂತ್ ಸಿನಿಮಾಕ್ಕೆ ಧನುಷ್ “ಗುಡ್‌ಲಕ್” ಹೇಳಿದ್ದರು.