ಸಾರ್ವಜನಿಕವಾಗಿ ಮಾನಹಾನಿಕರ ಹೇಳಿಕೆ ನೀಡದಂತೆ ರವಿ ಮೋಹನ್, ಆರತಿಗೆ ಮದ್ರಾಸ್ ಹೈಕೋರ್ಟ್ ನಿರ್ಬಂಧ
ತಮಿಳು ನಟ ರವಿ ಮೋಹನ್ ಮತ್ತು ಅವರ ಪತ್ನಿ ಆರತಿ ಅವರು ಸಾರ್ವಜನಿಕವಾಗಿ ಪರಸ್ಪರರ ಬಗ್ಗೆ ಯಾವುದೇ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ. ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿರುವ ಮಧ್ಯೆ ಈ ಹೈಕೋರ್ಟ್ ತೀರ್ಪು ಬಂದಿದೆ.

ಕಾಲಿವುಡ್ ನಟ ರವಿ ಮೋಹನ್ ಮತ್ತು ಅವರ ಪತ್ನಿ ಆರತಿ ಕಳೆದ ಕೆಲವು ದಿನಗಳಿಂದ ಕೌಟುಂಬಿಕ ಕಲಹದಿಂದ ಸುದ್ದಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಹೇಳಿಕೆಗಳನ್ನು ನೀಡುತ್ತ ಜನರ ಬಾಯಿಗೆ ಆಹಾರವಾಗುತ್ತಿದ್ದಾರೆ. ಇದೀಗ ನಟ ರವಿ ಮೋಹನ್ ಮತ್ತು ಅವರ ಪತ್ನಿ ಆರತಿ ಅವರು ಸಾರ್ವಜನಿಕವಾಗಿ ಪರಸ್ಪರರ ಬಗ್ಗೆ ಯಾವುದೇ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ. ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿರುವ ಮಧ್ಯೆ ಈ ಹೈಕೋರ್ಟ್ ತೀರ್ಪು ಬಂದಿದೆ.
ಇಬ್ಬರೂ ಘನತೆಯನ್ನು ಕಾಪಾಡಿಕೊಳ್ಳಬೇಕು. ಪರಸ್ಪರರ ಖ್ಯಾತಿಗೆ ಧಕ್ಕೆ ತರುವಂತಹ ಕಾಮೆಂಟ್‌ಗಳನ್ನು ಮಾಡಬಾರದು ಎಂದು ಕೋರ್ಟ್ ಒತ್ತಿ ಹೇಳಿದೆ. ಆರತಿ ಮತ್ತು ಅವರ ತಾಯಿ ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ತಡೆಯಾಜ್ಞೆ ಕೋರಿ ರವಿ ಮೋಹನ್ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಕೋರ್ಟ್ ಈ ಆದೇಶ ನೀಡಿದೆ.
ಇತ್ತೀಚೆಗೆ ರವಿ ಮೋಹನ್ ಮತ್ತು ಗಾಯಕಿ ಕೆನಿಷಾ ಮದುವೆ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದು ಊಹಾಪೋಹ ಮತ್ತು ವಿವಾದಕ್ಕೆ ಕಾರಣವಾಯಿತು. ಅಲ್ಲಿಯವರೆಗೆ ಮೌನವಾಗಿದ್ದ ಆರತಿ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಬರಹ ಹಂಚಿಕೊಂಡಿದ್ದರು. ಇದಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೆ ಮತ್ತು ಪ್ರತಿಹೇಳಿಕೆಗಳು ಹೆಚ್ಚಾದವು. ಆರತಿ ಪರೋಕ್ಷವಾಗಿ ಕೆನಿಷಾ ಅವರನ್ನು ದೂಷಿಸಿದರು. ರವಿ ಮೋಹನ್ ಅವರೊಂದಿಗಿನ ಅವರ ದಾಂಪತ್ಯ ಹಾಳಾಗಲು ಮೂರನೇ ವ್ಯಕ್ತಿ ಕಾರಣ ಎಂದರು.
ಇದಾದ ಬಳಿಕ ಸಾರ್ವಜನಿಕವಾಗಿ ಮಾನಹಾನಿಕರ ಹೇಳಿಕೆ ನೀಡದಂತೆ ರಕ್ಷಣೆ ಕೋರಿ ಮದ್ರಾಸ್ ಹೈಕೋರ್ಟ್ ಮೊರೆ ಹೋದರು. ಆರತಿ ಮತ್ತು ಅವರ ತಾಯಿಯು ನನ್ನ ಬಗ್ಗೆ ಮಾನನಷ್ಟ ಹೇಳಿಕೆ ನೀಡುವುದನ್ನು ನಿರ್ಬಂಧಿಸುವಂತೆ ಕೇಳಿದರು. ಇದೀಗ ಕೋರ್ಟ್ ಸಾರ್ವಜನಿಕವಾಗಿ ಮಾನಹಾನಿಕರ ಹೇಳಿಕೆ ನೀಡದಂತೆ ರವಿ ಮೋಹನ್, ಆರತಿಗೆ ಸೂಚಿಸಿ ಆದೇಶ ನೀಡಿದೆ.
ರವಿ ಮೋಹನ್ ಮತ್ತು ಆರತಿ ವಿವಾಹವಾಗಿ 15 ವರ್ಷಗಳಾಗಿವೆ. 2024ರಲ್ಲಿ ಇವರಿಬ್ಬರು ದೂರವಾಗುವ ನಿರ್ಧಾರ ತೆಗೆದುಕೊಂಡಿದ್ದರು. ಪರಸ್ಪರ ಹೊಂದಾಣಿಕೆಯಾಗುತ್ತಿಲ್ಲ ಎಂಬ ಕಾರಣ ನೀಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ನಿರ್ಮಾಪಕಿ ಮತ್ತು ಉದ್ಯಮಿ ಡಾ. ಇಶಾರಿ ಕೆ ಗಣೇಶ್ ಅವರ ಮಗಳ ವಿವಾಹದಲ್ಲಿ ರವಿ ಮೋಹನ್ ಜತೆಯಾಗಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಮತ್ತೆ ಇವರ ಕೌಟುಂಬಿಕ ಕಲಹ ಚರ್ಚೆಯಲ್ಲಿದೆ.
'ಮೂರನೇ ವ್ಯಕ್ತಿ' ತಮ್ಮ ಸಂಬಂಧಕ್ಕೆ ಪ್ರವೇಶಿಸಿದ್ದರಿಂದ ರವಿ ಮೋಹನ್ ನನಗೆ ಡಿವೋರ್ಸ್ ನೀಡಲು ಬಯಸಿದ್ದರು ಎಂದು ಆರತಿ ಮೋಹನ್ ಇನ್‌ಸ್ಟಾಗ್ರಾಂನಲ್ಲಿ ಮೇ 20ರಂದು ಪೋಸ್ಟ್ ಮಾಡಿದ್ದರು. ಆದರೆ, ಇವರು ಕೆನೀಶಾ ಹೆಸರನ್ನು ಹೇಳಿರಲಿಲ್ಲ. ರವಿ ಮೋಹನ್ ಅವರ ಮೂಲ ಹೆಸರು ಜೈರಾಮ್ ರವಿ. ಇವರು ತಮಿಳು ಸಿನಿಮಾದಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಇವರು ಸಿನಿಮಾ ಸಂಪಾದಕ ಎ ಮೋಹನ್ ಅವರ ಮಗ. ಆರತಿ ರವಿ ಅವರು ಸೋಷಿಯಲ್ ಮೀಡಿಯಾದಲ್ಲಿ ಇನ್‌ಫ್ಲೂಯೆನ್ಸರ್ ಆಗಿ, ಉದ್ಯಮಿಯಾಗಿ ಜನಪ್ರಿಯತೆ ಪಡೆದಿದ್ದಾರೆ.