Vidaamuyarchi Trailer: ಕೌತುಕಕ್ಕೆ ಕಿಚ್ಚು ಹಚ್ಚಿದ ವಿಡಾಮುಯರ್ಚಿ ಟ್ರೇಲರ್; ಫೆಬ್ರವರಿಯಲ್ಲಿ ತೆರೆಗಪ್ಪಳಿಸಲಿದೆ ತಲಾ ಅಜಿತ್ ಸಿನಿಮಾ
ತಮಿಳು ನಟ ತಲಾ ಅಜಿತ್ ನಟನೆಯ ವಿಡಾಮುಯರ್ಚಿ ಸಿನಿಮಾ ಟ್ರೇಲರ್ ಬಿಡುಗಡೆ ಆಗಿದೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಪಟ್ಟಿಯಲ್ಲಿರುವ ಈ ಸಿನಿಮಾ, ತಮಿಳು ಮಾತ್ರವಲ್ಲದೆ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫೆಬ್ರವರಿ 6ರಂದು ಈ ಸಿನಿಮಾ ತೆರೆಕಾಣಲಿದೆ.

Vidaamuyarchi Trailer: ತಮಿಳಿನ ಸ್ಟಾರ್ ನಟ ತಲಾ ಅಜಿತ್ ನಟನೆಯ ಕಾಲಿವುಡ್‌ನ 2025ರ ಬಹುನಿರೀಕ್ಷಿತ ವಿಡಾಮುಯರ್ಚಿ ಸಿನಿಮಾದ ಟ್ರೇಲರ್ ಇಂದು (ಜ. 16) ಬಿಡುಗಡೆ ಆಗಿದೆ. ಫೆಬ್ರವರಿ 6ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಬಹುಕೋಟಿ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಇದೀಗ ಟ್ರೇಲರ್ ಮೂಲಕ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ.
ಮಾಗಿಲ್ ತಿರುಮೇನಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ತಲಾ ಅಜಿತ್ ಯಂಗ್ ಲುಕ್‌ನಲ್ಲಿ ಕಂಡು, ಅವರ ಅಭಿಮಾನಿಗಳಿಗೆ ಸೂಪರ್ ಸರ್ಪ್ರೈಸ್ ನೀಡಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸುಭಾಸ್ಕರನ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. 330 ಕೋಟಿ ವೆಚ್ಚದಲ್ಲಿ ಈ ಸಿನಿಮಾ ಮೂಡಿಬಂದಿದೆ. ಮೂಲ ತಮಿಳು ಜತೆಗೆ ತೆಲುಗು, ಕನ್ನಡ, ಹಿಂದಿ, ಮಲಯಾಳಂ ಭಾಷೆಗಳಲ್ಲಿಯೂ ಈ ಸಿನಿಮಾ ಫೆ. 6ರಂದು ಬಿಡುಗಡೆ ಆಗಲಿದೆ.
ಏನಿದೆ ಟ್ರೇಲರ್‌ನಲ್ಲಿ?
ವಿಡಾಮುಯರ್ಚಿ ಟ್ರೇಲರ್ ನೋಡಿದರೆ, ಅಜಿತ್ ಹಿಂದೆಂದೂ ಕಾಣಿಸದ ಸ್ಟೈಲಿಶ್ ಅವತಾರದಲ್ಲಿ ಕಂಡಿದ್ದಾರೆ. ಖಳರೊಂದಿಗಿನ ಮೈ ನವಿರೇಳಿಸುವ ಆಕ್ಷನ್ ಈ ಸಿನಿಮಾದ ಹೈಲೈಟ್ ಎಂಬುದು ಟ್ರೇಲರ್‌ನಲ್ಲಿ ಕಾಣಿಸುತ್ತದೆ. ಅಜೆರ್ಬೈಜಾನ್‌ನಲ್ಲಿ ಚಿತ್ರೀಕರಿಸಲಾದ ಆಕ್ಷನ್ ದೃಶ್ಯಗಳು ಟ್ರೇಲರ್‌ನ ತೂಕ ಹೆಚ್ಚಿಸಿವೆ. ಹೊಡಿ ಬಡಿ ಆಟದ ನಡುವೆ ನಾಯಕಿ ತ್ರಿಷಾ ಜತೆಗಿನ ಕೆಮಿಸ್ಟ್ರಿಯೂ ಟ್ರೇಲರ್‌ನಲ್ಲಿದೆ. ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಒಂದೆಡೆ ಜೈಲಿನಲ್ಲಿ ಕೈದಿಯಾಗಿ ಕಾಣಿಸಿಕೊಂಡರೆ, ಮತ್ತೊಂದೆಡೆ ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ್ದಾರೆ. ಟ್ರೇಲರ್‌ನಲ್ಲಿ ರೆಜಿನಾ ಕ್ಯಾಸಂದ್ರ ಕಂಡಿದ್ದಾರೆ. ಇನ್ನುಳಿದಂತೆ ಆರವ್, ನಿಖಿಲ್ ನಾಯರ್ ಮತ್ತು ಇತರರು ಚಿತ್ರದಲ್ಲಿದ್ದಾರೆ.
ಹೀಗಿದೆ ತಾಂತ್ರಿಕ ವರ್ಗ
ಓಂಪ್ರಕಾಶ್ ಛಾಯಾಗ್ರಹಣ ಇರುವ ಈ ಸಿನಿಮಾಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಎನ್.ಬಿ. ಶ್ರೀಕಾಂತ್ ಸಂಕಲನ, ಮಿಲನ್ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ. ಸುಂದರ್ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದಾರೆ. ಇನ್ನು ಈ ಸಿನಿಮಾದ ಸ್ಯಾಟಲೈಟ್ ಹಕ್ಕುಗಳನ್ನು ಸನ್ ಟಿವಿ ಪಡೆದುಕೊಂಡಿದ್ದರೆ, ನೆಟ್‌ಫ್ಲಿಕ್ಸ್ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ. ಆಡಿಯೋ ಹಕ್ಕು ಸೋನಿ ಮ್ಯೂಸಿಕ್ ತೆಕ್ಕೆಗೆ ಹೋಗಿದೆ.
