ಸುಂದರ ಮಹಿಳೆಯರನ್ನೂ ಅದು ಬಿಟ್ಟಿಲ್ಲ, ನಟಿ ಐಶ್ವರ್ಯಾ ರೈ ಸೌಂದರ್ಯಕ್ಕೆ ಕುತ್ತು ತಂದಿದ್ದೇ ಅದು!; ಕಸ್ತೂರಿ ಶಂಕರ್
ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಸೌಂದರ್ಯದ ಬಗ್ಗೆ ಜಾಣ ಸಿನಿಮಾ ಖ್ಯಾತಿಯ ಬಹುಭಾಷಾ ನಟಿ ಕಸ್ತೂರಿ ಶಂಕರ್ ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

Kasthuri shankar on Aishwarya Rai: ಸ್ಯಾಂಡಲ್‌ವುಡ್ ಸೇರಿ ಸೌತ್‌ನ ಎಲ್ಲ ಭಾಷೆಗಳ ಸಿನಿಮಾಗಳಲ್ಲಿ ಮಿಂಚಿದವರು ನಟಿ ಕಸ್ತೂರಿ ಶಂಕರ್. ಮೂಲ ತಮಿಳಿನವರಾದ ಕಸ್ತೂರಿ, ಸೋಷಿಯಲ್ ಮೀಡಿಯಾದಲ್ಲಿಯೂ ಸಕ್ರಿಯರು. ಪ್ರಸ್ತುತ ಆಗುಹೋಗುಗಳ ಬಗ್ಗೆ ಟ್ವಟಿರ್‌ನಲ್ಲಿ ಒಂದಿಲ್ಲೊಂದು ವಿಚಾರವನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅನಿಸಿದ್ದು ಹೇಳಿ ವಿವಾದವನ್ನು ಮೈಮೇಲೆ ಎಳೆದುಕೊಂಡ ಉದಾಹರಣೆಗಳೂ ಇವೆ. ಅದರಲ್ಲೂ ಕಾವೇರಿ ವಿಚಾರದಲ್ಲಿಯೂ ಕನ್ನಡಿಗರನ್ನು ಕೆಣಕಿದ್ದರು ಜಾಣ ಚಿತ್ರದ ನಟಿ ಕಸ್ತೂರಿ. ಇದೀಗ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಗ್ಗೆಯೂ ಮಾತನಾಡಿದ್ದಾರೆ.
ಇತ್ತೀಚೆಗಷ್ಟೇ ಕಾನ್ ಸಿನಿಮೋತ್ಸವದ ರೆಡ್ ಕಾರ್ಪೆಟ್ ಮೇಲೆ ನಟಿ ಐಶ್ವರ್ಯಾ ರೈ, ವಿಶೇಷ ಕಾಸ್ಟ್ಯೂಮ್ ಧರಿಸಿ ವಾಕ್ ಮಾಡಿ ಮಿಂಚಿದ್ದರು. ಕೈಗೆ ಪೆಟ್ಟಾಗಿದ್ದರೂ, ನೋವಿರುವ ಕೈಗೆ ಬ್ಯಾಂಡೇಜ್ ಕಟ್ಟಿಕೊಂಡೇ ಫೋಟೋಗಳಿಗೆ ಪೋಸ್ ನೀಡಿದ್ದರು. ಹೀಗೆ ನಟಿಯ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಮೆಚ್ಚುಗೆಯ ಜತೆಗೆ ಟೀಕೆಗಳೂ ಎದುರಾಗಿದ್ದವು. ಇನ್ನು ಕೆಲವರು ಐಶ್ವರ್ಯಾ ಅವರ ಪೋಟೋಗಳನ್ನಿಟ್ಟುಕೊಂಡು ಟ್ರೋಲ್ ಮಾಡಿದ ಉದಾಹರಣೆಗಳೂ ಇವೆ.
ಮುಖದ ಅಂದ ಕೆಡಿಸಿದ ಸರ್ಜರಿ
ವಿದೇಶಿ ಫ್ಯಾಷನ್ ಮತ್ತು ಸಿನಿಮೋತ್ಸವಗಳಲ್ಲಿ ಐಶ್ವರ್ಯಾ ಭಾರತವನ್ನು ಪ್ರತಿನಿಧಿಸುತ್ತಲೇ ಬಂದಿದ್ದಾರೆ. ಅದರಲ್ಲೂ ಕಳೆದ ಹತ್ತಾರು ವರ್ಷಗಳಿಂದ ಕಾನ್ ಸಿನಿಮೋತ್ಸವದಲ್ಲಿ ಬಗೆಬಗೆಯ ಉಡುಗೆಯಲ್ಲಿ ಮಿಂಚುಹರಿಸುತ್ತಲೇ ಬಂದಿದ್ದಾರೆ. ಆದರೆ, ಈ ಸಲ ಅವರ ಮುಖದ ಅಂದ ಅದ್ಯಾಕೋ ಕೊಂಚ ಮಾಸಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು. ಅದೇ ಐಶ್ವರ್ಯಾ ಅವರ ಸೌಂದರ್ಯದ ಬಗ್ಗೆ ನಟಿ ಕಸ್ತೂರಿ ಶಂಕರ್ ಸಹ ಪ್ರತಿಕ್ರಿಯೆ ನೀಡಿದ್ದು, "ಟೈಮ್ ಎಂಬುದು ಪ್ರಪಂಚದ ಅತ್ಯಂತ ಸುಂದರ ಮಹಿಳೆಯರನ್ನು ಸಹ ಬಿಡುವುದಿಲ್ಲ" ಎಂದಿದ್ದಾರೆ.
ಏನಂದ್ರು ಕಸ್ತೂರಿ ಶಂಕರ್?
ಸೋಷಿಯಲ್ ಮೀಡಿಯಾ ಟ್ವಿಟರ್‌ನಲ್ಲಿ ಐಶ್ವರ್ಯಾ ರೈ ಅವರ ಕಾನ್ ಸಿನಿಮೋತ್ಸವದ ಫೋಟೋ ಶೇರ್ ಮಾಡಿ, "ಟೈಮ್ ಎಂಬುದು ಪ್ರಪಂಚದ ಅತ್ಯಂತ ಸುಂದರ ಮಹಿಳೆಯರನ್ನು ಸಹ ಬಿಡುವುದಿಲ್ಲ. ಐಶ್ವರ್ಯಾ ರೈ ತಮ್ಮ ಗಡಿಯಾರವನ್ನು ಹಿಂದಕ್ಕೆ ತಿರುಗಿಸುವ ಅಗತ್ಯವಿರಲಿಲ್ಲ. ಅವರು ಸುಂದರವಾಗಿ ಉಳಿಯುತ್ತಿದ್ದರು. ಆದರೆ ಪ್ಲಾಸ್ಟಿಕ್ ಅವರ ಸಾರ್ವಕಾಲಿಕ ಸೌಂದರ್ಯವನ್ನು ಹಾಳುಮಾಡಿದೆ" ಎಂದು ಬರೆದುಕೊಂಡಿದ್ದಾರೆ.
ಐಶ್ವರ್ಯಾ ರೈ ಮುಖಕ್ಕೆ ಸರ್ಜರಿ ಆಗಿದ್ಯಾ?
ನಟಿಯರ ಮುಖದಲ್ಲಿ ಚೂರು ಏರುಪೇರಾದರೂ, ಆ ಬದಲಾವಣೆ ಗಮನಿಸುವ ನೆಟ್ಟಿಗರು ಕಾಮೆಂಟ್ ಮೂಲಕವೇ ಬಗೆಬಗೆ ಪ್ರಶ್ನೆ ಹುಟ್ಟುಹಾಕುತ್ತಿರುತ್ತಾರೆ. ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರಬಹುದೇ? ಎಂದೂ ಕೇಳುತ್ತಿರುತ್ತಾರೆ. ಆದರೆ, ಈ ವರೆಗೂ ಐಶ್ವರ್ಯಾ ರೈ ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸುದ್ದಿ ಹರಿದಾಡಿವೆಯಾದರೂ, ಖಚಿತ ಮಾಹಿತಿ ಇಲ್ಲ. ಹಾಗಾಗಿ ಕಸ್ತೂರಿ ಶಂಕರ್ ಅವರ ಈ ಕಾಮೆಂಟ್‌ಗೆ ಕೆಲವು ನೆಟ್ಟಿಗರು ಈ ರೀತಿಯ ಪ್ರತಿಕ್ರಿಯೆನ್ನೂ ನೀಡುತ್ತಿದ್ದಾರೆ.
ಜಾಣ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ
1994ರಲ್ಲಿ ಜಾಣ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ನಟಿ ಕಸ್ತೂರಿ ಶಂಕರ್‌ಗೆ, ಮೊದಲ ಕನ್ನಡ ಚಿತ್ರದಲ್ಲಿಯೇ ಯಶಸ್ಸು ಸಿಕ್ಕಿತ್ತು. ಶಿವಮಣಿ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕನಾಗಿ ನಟಿಸಿದ್ದರೆ, ಅವರಿಗೆ ಕಸ್ತೂರಿ ಜೋಡಿಯಾಗಿದ್ದರು. ಅದಾದ ಬಳಿಕ ಇಬ್ಬರ ನಡುವೆ ಮುದ್ದಿನ ಆಟ, ತುತ್ತಾ ಮುತ್ತಾ, ಒನ್ ಮ್ಯಾನ್ ಆರ್ಮಿ, ಹಬ್ಬ, ಪ್ರೇಮಕ್ಕೆ ಸೈ ಸಿನಿಮಾಗಳಲ್ಲಿ ನಟಿಸಿ ಕರುನಾಡ ಪ್ರೇಕ್ಷಕರಿಗೂ ಪರಿಚಿತರಾಗಿದ್ದರು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)