ಹಿಂದೂ ಯುವತಿಯಿಂದ ನಮಾಜ್, ಮಾಂಸಾಹಾರಿ ಎಂದು ಶ್ರೀರಾಮನ ಅವಹೇಳನ; ನಯನತಾರ ನಟನೆಯ ಅನ್ನಪೂರಣಿ ಸಿನಿಮಾದ ವಿರುದ್ಧ ದೂರು
ನಯನತಾರ ಮುಖ್ಯಪಾತ್ರದಲ್ಲಿ ನಟಿಸಿರುವ "ಅನ್ನಪೂರಣಿ" ಸಿನಿಮಾದ ವಿರುದ್ಧ "ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದಾಗಿ" ಶಿವಸೇನೆಯ ಮಾಜಿ ಮುಖಂಡ ರಮೇಶ್ ಸೋಲಂಕಿ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಯನತಾರ ಮುಖ್ಯಪಾತ್ರದಲ್ಲಿ ನಟಿಸಿರುವ "ಅನ್ನಪೂರಣಿ" ಸಿನಿಮಾದ ವಿರುದ್ಧ "ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದಾಗಿ" ಶಿವಸೇನೆಯ ಮಾಜಿ ಮುಖಂಡ ರಮೇಶ್ ಸೋಲಂಕಿ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅನ್ನಪೂರಣಿ ಸಿನಿಮಾವು ಶ್ರೀರಾಮ ದೇವರು ಮತ್ತು ಹಿಂದೂ ಸಮುದಾಯದ ಭಾವನೆಗಳಿಗೆ ಘಾಸಿ ಉಂಟು ಮಾಡಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ರಮೇಶ್ ಸೋಲಂಕಿ ಟ್ವೀಟ್ ಮಾಡಿದ್ದಾರೆ. "ನಾನು ಹಿಂದೂ ದ್ವೇಷಿ ಜೀ ಮತ್ತು ಹಿಂದು ದ್ವೇಷಿ ನೆಟ್‌ಫ್ಲಿಕ್ಸ್ ವಿರುದ್ಧ ದೂರು ನೀಡಿದ್ದೇನೆ. ಇಡೀ ಜಗತ್ತು ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ಕಾದಿರುವ ಸಮಯದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಅನ್ನಪೂರಣಿ ಸಿನಿಮಾ ಬಿಡುಗಡೆಯಾಗಿದೆ. ಇದು ಝೀ ಸ್ಟುಡಿಯೋ, ನಾಡ್ ಸ್ಡುಡಿಯೋ, ಟ್ರಿಡೆಂಟ್ ಆರ್ಟ್ಸ್‌ನ ಸಿನಿಮಾ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ತನ್ನ ಟ್ವೀಟ್‌ನಲ್ಲಿ ಈ ಸಿನಿಮಾದಲ್ಲಿ ರಾಮನ ಕುರಿತು ಕೆಟ್ಟದ್ದಾಗಿ ಬಿಂಬಿಸಲಾಗಿದೆ. ಜತೆಗೆ, ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗುವ ಅಂಶಗಳನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ. "ಹಿಂದು ಆರ್ಚಕನ ಮಗಳು ಬಿರಿಯಾನಿ ಸಿದ್ಧಪಡಿಸುವ ಮೊದಲು ನಮಾಜ್ ಮಾಡುತ್ತಾಳೆ. ಸಿನಿಮಾ ಲವ್ ಜಿಹಾದ್‌ಗೆ ಉತ್ತೇಜನ ನೀಡಿದೆ. ಸಿನಿಮಾ ನಟ ಫರ್ಹಾನ್ ಭಗವಂತ ರಾಮನೂ ಮಾಂಸ ತಿನ್ನುತ್ತಿದ್ದ ಎಂದು ಹೇಳಿ ನಟಿಗೆ ಮಾಂಸಾಹಾರ ತಿನ್ನಲು ಉತ್ತೇಜಿಸುವ ದೃಶ್ಯವಿದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಶ್ರೀರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿಯೇ ಈ ಸಿನಿಮಾ ಬಿಡುಗಡೆ ಮಾಡಿ ನೆಟ್‌ಫ್ಲಿಕ್ಸ್ ಇಂಡಿಯಾ ಮತ್ತು ಜೀ ಸ್ಟುಡಿಯೋ ಉದ್ದೇಶಪೂರ್ವಕವಾಗಿ ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ. ಉತ್ತರ ಪ್ರದೇಶ ಡಿಜಿಪಿ, ಮುಂಬೈ ಪೊಲೀಸ್, ಉತ್ತರ ಪ್ರದೇಶ ಗೃಹ ಸಚಿವಾಲಯ, ಮಹಾರಾಷ್ಟ್ರ ಗೃಹ ಸಚಿವಾಲಯಕ್ಕೆ ಈ ಮೂಲಕ ನಾನು ಈ ಮುಂದಿನ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಈ ಮೂಲಕ ಮನವಿ ಸಲ್ಲಿಸುತ್ತೇನೆ" ಎಂದು ಸೊಲಾಂಕಿ ಅವರು ತಿಳಿಸಿದ್ದಾರೆ.
ಈ ಕುರಿತಂತೆ ಸೋಲಂಕಿ ಅವರು ಸರಣಿ ಟ್ವೀಟ್ ಮಾಡಿದ್ದಾರೆ. "ನಟಿಯ ತಂದೆ ದೇಗುಲದ ಆರ್ಚಕರು. ಕಳೆದ ಏಳು ತಲೆಮಾರಿನಿಂದ ಭಗವಂತ ವಿಷ್ಣುವಿಗೆ ನೈವೇದ್ಯ ಮಾಡುತ್ತಿದ್ದಾರೆ. ಆದರೆ, ಅವರ ಮಗಳು ಮಾಂಸಾಹಾರ ಅಡುಗೆ ಮಾಡುವುದು, ಮುಸ್ಲಿಂ ಹುಡುಗನ ಜತೆ ಪ್ರೀತಿಗೆ ಬೀಳುವುದು, ರಂಜಾನ್ ಇಫ್ತಾರ್‌ಗೆ ಹೋಗುವುದು, ನಮಾಜ್ ಮಾಡುವುದು ಇತ್ಯಾದಿ ಮಾಡುವಂತೆ ತೋರಿಸಲಾಗಿದೆ. ಇದು ಹಿಂದೂ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಸಿನಿಮಾ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದೂರಿನಲ್ಲಿ ಉಲ್ಲೇಖಿಸಿರುವ ಹೆಸರು: ನೀಲೇಶ್ ಕೃಷ್ಣ, ನಟ ಜೈ, ನಯನತಾರ, ಜತಿನ್ ಸೇಥಿ, ಆರ್. ರವಿಂದ್ರನ್, ಪುನಿತ್ ಗೋಯೆಂಕಾ, ಶಾರಿಕ್ ಪಟೇಲ್, ಮೋನಿಕಾ ಶೇರ್ಗಿಲ್. ಇದರೊಂದಿಗೆ ಸೋಲಂಕಿ ಅವರು ಎಫ್‌ಐಆರ್ ಪ್ರತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಅಪಾಲೋಡ್ ಮಾಡಲಾಗಿದೆ.
ಇವರ ಟ್ವೀಟ್‌ಗೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. "ನಯನತಾರಾರಂತಹ ಖ್ಯಾತ ನಟಿಯು ಇಂತಹ ಪ್ರೊಪಗಾಂಡದ ಭಾಗವಾಗಿರುವುದು ಅಚ್ಚರಿ ತಂದಿದೆ. ಉಳಿದಂತೆ ನೆಟ್‌ಫ್ಲಿಕ್ಸ್ ಹಿಂದೂ ವಿರೋಧಿ ಧೋರಣೆ ಹೊಂದಿರುವ ನಾಚಿಕೆಯಿಲ್ಲದ ವೇದಿಕೆ" ಎಂದು ಡಾ. ಸೌರಭ್ ಎಸ್ ಸಚ್ಚರ್ ಪ್ರತಿಕ್ರಿಯೆ ನೀಡಿದ್ದಾರೆ. "ತಕ್ಷಣವೇ ಕ್ರಮ ಕೈಗೊಳ್ಳಿ" "ನಾನೂ ನಿನ್ನೆ ಈ ಸಿನಿಮಾ ನೋಡಿದೆ. ನನಗೂ ಹೀಗೆಯೇ ಅನಿಸಿತು. ಈ ಸಿನಿಮಾವನ್ನು ಒಟಿಟಿಯಿಂದ ತೆಗೆಯಬೇಕು ಮತ್ತು ನಿಷೇಧಿಸಬೇಕು. ಬಾಲಿವುಡ್ ಕಳೆದ 50-60 ವರ್ಷಗಳಿಂದ ಮಾಡಿರುವಂತೆ ದಕ್ಷಿಣ ಭಾರತದ ಸಿನಿಮಾಗಳು ಇದೇ ರೀತಿ ಮೃದು ಧೋರಣೆ ಹೊಂದಿವೆ" ಇತ್ಯಾದಿ ನೂರಾರು ಪ್ರತಿಕ್ರಿಯೆಗಳು ಬಂದಿವೆ.
ನಯನತಾರ ನಟನೆಯ 75ನೇ ಚಿತ್ರ
ಅನ್ನಪೂರಣಿ ತಮಿಳು ನಾಯಕಿ ಪ್ರದಾನ ಸಿನಿಮಾ. ನಯನತಾರ ನಟನೆಯ 75ನೇ ಸಿನಿಮಾ. ನಯನತಾರಾ ಅವರು 2003ರಲ್ಲಿ ಮಲಯಾಳಂ ಚಿತ್ರ ಮನಸ್ಸಿನಕ್ಕರೆಯಲ್ಲಿ ನಟಿಸಿದ್ದರು. ಬಳಿಕ ತಮಿಳಿನಲ್ಲಿ ಅಯ್ಯ, ತೆಲುಗಿನಲ್ಲಿ ಲಕ್ಷ್ಮಿ ಚಿತ್ರದಲ್ಲಿ ಕಾಣಿಸಿದ್ದರು. ಚಂದ್ರಮುಖಿ , ದುಬೈ ಸೀನು, ತುಲಿಯಾಸಿ, ಬಿಲ್ಲಾ, ಯಾರಡಿ ನೀ ಮೊಹಿನಿ, ಆಧವನ್, ಅಡರ್ಸ್ , ರಾಜಾ ರಾಣಿ, ಅರಂಬಮ್, ಥನಿ ಒರುವಾನ್, ಮಾಯಾ, ನಾನು ರೌಡಿ ಧಾನ್, ಬಾಬು ಬಂಗಾರಮ್ ಮತ್ತು ಇರು ಮುಗಾನ್ ಇತ್ಯಾದಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಉಪೇಂದ್ರ ಜತೆ ಕನ್ನಡದ ಸೂಪರ್ ಸಿನಿಮಾದಲ್ಲೂ ನಟಿಸಿದ್ದಾರೆ.
ಅನ್ನಪೂರಣಿ ತಾರಾಗಣ: ನಯನತಾರ, ಅಚ್ಯುತ್ ಕುಮಾರ್, ಸತ್ಯರಾಜ್, ಕಾರ್ತಿಕ್ ಕುಮಾರ್, ಸುರೇಶ್ ಚಕ್ರವರ್ತಿ, ಕೆಎಸ್ ರವಿಕುಮಾರ್, ರೇಣುಕಾ ಸೇರಿದಂತೆ ಪ್ರಮುಖ ತಾರಾಗಣ ಈ ಚಿತ್ರಕ್ಕಿದೆ. ನೀಲೇಶ್ ಕೃಷ್ಣ ನಿರ್ದೇಶನದ ಈ ಚಿತ್ರಕ್ಕೆ ಥಮನ್ ಎಸ್ ಅವರ ಸಂಗೀತವಿದೆ. ಸತ್ಯನ್ ಸೂರ್ಯನ್ ಛಾಯಾಗ್ರಹಣವಿದೆ.
ನಾಯಕಿ ಪ್ರಧಾನ ಚಿತ್ರ
ಅನ್ನಪೂರಣಿಯಲ್ಲಿ ನಯನತಾರ ನಾಯಕಿಯಾಗಿದ್ದಾರೆ. ಇದು ನಾಯಕಿಪ್ರಧಾನ ಚಿತ್ರ ಎನ್ನಲಾಗಿದೆ. ಇದು ನಯನತಾರಾ ಅವರ 75ನೇಯ ಸಿನಿಮಾವಾಗಿದೆ. ಮದುವೆ, ಮಕ್ಕಳಾದ ಬಳಿಕವೂ ನಯನತಾರಾ ನಟನೆಯಲ್ಲಿ ಹೆಚ್ಚು ಗಮನ ಸೆಳೆಯುತ್ತಾರೆ. ಇಲ್ಲಿಯವರೆಗೆ 74 ಚಿತ್ರಗಳಲ್ಲಿ ನಟಿಸಿ ಈಗ ನಾಯಕಿಪ್ರಧಾನ ಸಿನಿಮಾದಲ್ಲಿ ಮಿಂಚುವ ಸೂಚನೆ ನೀಡಿದ್ದಾರೆ. ಈ ಚಿತ್ರದಲ್ಲಿ ಸೆಂಟಿಮೆಂಟ್ ಜತೆಗೆ ಹಾಸ್ಯವೂ ಇರುವ ಸೂಚನೆಯಿದೆ.