ರೀ ರೆಕಾರ್ಡಿಂಗ್‌ಗೂ ಮುನ್ನ ಸಿನಿಮಾ ಅಷ್ಟಕಷ್ಟೇ, ಜೈಲರ್ ಗೆದ್ದದ್ದು ಸಂಗೀತದಿಂದ: ರಜನಿಕಾಂತ್
ವಧುವಿಗೆ ಮೇಕಪ್ ಮಾಡಿದಂತೆ ಸಿನಿಮಾ ಅನಿರುದ್ಧ್ ತಮ್ಮ ಮ್ಯೂಸಿಕ್‌ನಿಂದ ಒಳ್ಳೆ ಮೇಕಪ್ ಮಾಡಿದ್ದಾರೆ'' ಎಂದು ರಜನಿಕಾಂತ್ ಸಂಗೀತ ನಿರ್ದೇಶಕನನ್ನು ಹೊಗಳಿದ್ದಾರೆ. ಅಲ್ಲದೆ ಚಿತ್ರದ ಇತರ ತಂತ್ರಜ್ಞರ ಬಗ್ಗೆ ಕೂಡಾ ರಜನಿಕಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಜನಿಕಾಂತ್ ಅಭಿನಯದ 'ಜೈಲರ್' ಸಿನಿಮಾ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿದೆ. ಸಿನಿಮಾ 650 ಕೋಟಿ ರೂಪಾಯಿ ಲಾಭ ಮಾಡಿದ್ದು ಎಲ್ಲಿ ನೋಡಿದರೂ ಜೈಲರ್ ಸಿನಿಮಾದ್ದೇ ಹವಾ. ಎಲ್ಲಿ ನೋಡಿದರೂ ಆ ಸಿನಿಮಾ ಹಾಡಿನದ್ದೇ ಕಾರುಬಾರು. ಆಗಸ್ಟ್ 10 ರಂದು ತೆರೆ ಕಂಡಿದ್ದ ಸಿನಿಮಾ ಈಗ ಅಮೆಜಾನ್ ಪ್ರೈಂನಲ್ಲಿ ಕೂಡಾ ಲಭ್ಯವಿದೆ.
ಸಿನಿಮಾ ಯಶಸ್ಸು ಕಾಣುತ್ತಿದ್ದಂತೆ ನಿರ್ಮಾಪಕ ಕಲಾನಿಧಿ ಮಾರನ್, ಚಿತ್ರತಂಡದ ಎಲ್ಲರಿಗೂ ಕಾರು, ಚೆಕ್ ಗಿಫ್ಟ್ ನೀಡಿದ್ದರು. ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್, ನಿರ್ಮಾಪಕ ನೆಲ್ಸನ್ ದಿಲೀಪ್ ಇಬ್ಬರನ್ನೂ ತಮ್ಮ ಕಚೇರಿಗೆ ಕರೆಸಿ ಅವರ ಮುಂದೆ ಮೂರು ಕಾರುಗಳನ್ನು ನಿಲ್ಲಿಸಿ, ತಮಗಿಷ್ಟವಾದ ಕಾರನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳಿದ್ದರು. ರಜನಿಕಾಂತ್ ಹಾಗೂ ಚಿತ್ರತಂಡದ ಇತರರಿಗೆ ಇನ್ನಷ್ಟು ಹಣ ನೀಡಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋ ಸನ್ ಪಿಕ್ಚರ್ಸ್ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ರಜನಿಕಾಂತ್ ತಮ್ಮ ಚಿತ್ರದ ಬಗ್ಗೆ ತಾವೇ ರಿವ್ಯೂ ನೀಡಿದ್ದಾರೆ.
ಸಿನಿಮಾ ಗೆದ್ದದ್ದು ಸಂಗೀತದಿಂದ ಎಂದ ರಜನಿಕಾಂತ್
ಇತ್ತೀಚೆಗೆ ಚಿತ್ರತಂಡ ಚೆನ್ನೈನಲ್ಲಿ ಸಕ್ಸಸ್ ಮೀಟ್ ಏರ್ಪಡಿಸಿತ್ತು. ಸುದ್ದಿಗೋಷ್ಠಿಯಲ್ಲಿ ಸಿನಿಮಾ ಬಗ್ಗೆ ರಜನಿಕಾಂತ್ ಮಾತನಾಡಿದ್ದಾರೆ. ''ರೀ ರೆಕಾರ್ಡಿಂಗ್‌ಗೆ ಮುನ್ನ ಸಿನಿಮಾ ಸಾಮಾನ್ಯ ಎನಿಸಿತ್ತು. ಆದರೆ ಅನಿರುದ್ಧ್ ರವಿಚಂದರ್ ಸಂಗೀತದಿಂದ ಸಿನಿಮಾಗೆ ಕಳೆ ಬಂತು. ಅವರ ಸಂಗೀತದಿಂದಲೇ ಸಿನಿಮಾ ಗೆದ್ದಿದ್ದು. ರೀ ರೆಕಾರ್ಡಿಂಗ್‌ಗೆ ಮುನ್ನ ನಾನು ಸಿನಿಮಾ ನೋಡಿದ್ದೆ. ನಿರ್ದೇಶಕರಿಗೆ ಆಪ್ತರಾದ ಸೆಂಬಿಯನ್ ಹಾಗೂ ಕಣ್ಣನ್ ಅವರಿಗೆ ನಾನು ಸಿನಿಮಾ ಹೇಗಿದೆ ಎಂದು ಕೇಳಿದೆ. ಸಿನಿಮಾವನ್ನು ಅವರು ಹೊಗಳಿದರು. ನಿರ್ದೇಶಕ ನಿಮ್ಮ ಸ್ನೇಹಿತ, ನಾನು ಸ್ಟಾರ್ ನಟ ಎಂಬ ಕಾರಣಕ್ಕೆ ಸಿನಿಮಾವನ್ನು ಹೊಗಳಬೇಡಿ ನಿಜ ಹೇಳಿ ಎಂದಾಗ ಅವರೂ ಕೂಡಾ ಸಿನಿಮಾ ಆವರೇಜ್ ಎಂದು ಒಪ್ಪಿಕೊಂಡಿದ್ದರು. ನನಗೂ ಕೂಡಾ ಸಿನಿಮಾ ಆವರೇಜ್ ಎನ್ನಿಸಿತ್ತು. ಆದರೆ ಅನಿರುದ್ಧ್ ರವಿಚಂದರ್ ತಮ್ಮ ಸಂಗೀತದ ಮೂಲಕ ಸಿನಿಮಾಗೆ ಒಂದು ಕಳೆ ತಂದರು.''
''ವಧುವಿಗೆ ಮೇಕಪ್ ಮಾಡಿದಂತೆ ಸಿನಿಮಾಗೆ ಅವರು ತಮ್ಮ ಮ್ಯೂಸಿಕ್‌ನಿಂದ ಒಳ್ಳೆ ಮೇಕಪ್ ಮಾಡಿದ್ದಾರೆ'' ಎಂದು ರಜನಿಕಾಂತ್ ಸಂಗೀತ ನಿರ್ದೇಶಕನನ್ನು ಹೊಗಳಿದ್ದಾರೆ. ಅಲ್ಲದೆ ಚಿತ್ರದ ಇತರ ತಂತ್ರಜ್ಞರ ಬಗ್ಗೆ ಕೂಡಾ ರಜನಿಕಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಮಿಳಿನ ಗಲಟ್ಟಾ ವೆಬ್‌ಸೈಟ್ ವರದಿ ಮಾಡಿದೆ.
ತಲೈವಾ ಪ್ರಾಮಾಣಿಕತೆ ಹೊಗಳಿದ ಅಭಿಮಾನಿಗಳು
ಚಿತ್ರತಂಡ ಸಕ್ಸಸ್ ಮೀಟ್ ವಿಡಿಯೋವನ್ನು ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದೆ. ವಿಡಿಯೋಗೆ ಕಾಮೆಂಟ್ ಮಾಡಿರುವ ಅಭಿಮಾನಿಗಳು ರಜನಿಕಾಂತ್ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಜನಿಕಾಂತ್ ಮನಸ್ಸಿನಲ್ಲಿ ಅನ್ನಿಸಿದ್ದನ್ನು ಯಾವುದೇ ಅಂಜಿಕೆ ಇಲ್ಲದೆ ಹೇಳುತ್ತಾರೆ. ಅವರ ಈ ಪ್ರಾಮಾಣಿಕತೆಯೇ ಇಂದು ಅವರನ್ನು ಸೂಪರ್ ಸ್ಟಾರ್‌ನನ್ನಾಗಿ ಮಾಡಿದೆ ಎಂದು ಹೊಗಳುತ್ತಿದ್ದಾರೆ.
'ಜೈಲರ್' ಚಿತ್ರವನ್ನು ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಕಲಾನಿಧಿ ಮಾರನ್ ನಿರ್ಮಿಸಿದ್ದು ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತವಿದ್ದು ಶಿವರಾಜ್‌ಕುಮಾರ್, ರಮ್ಯಕೃಷ್ಣನ್, ಮೋಹನ್ ಲಾಲ್. ಮೋಹನ್ ಬಾಬು, ಜಾಕಿಶ್ರಾಫ್ ಹಾಗೂ ಇನ್ನಿತರು ನಟಿಸಿದ್ದಾರೆ. ತಮನ್ನಾ ಕಾಲಾಲಯ್ಯ ಹಾಡಿಗೆ ಹೆಜ್ಜೆ ಹಾಕಿದ್ದಾರೆ.