ರಜನಿಕಾಂತ್ ವೆಟ್ಟೈಯನ್ ಹೊಸ ಟೀಸರ್ ರಿಲೀಸ್; ಸತ್ಯದೇವ್ ಪಾತ್ರದಲ್ಲಿ ಎಂಟ್ರಿ ಕೊಟ್ಟ ಬಿಗ್ ಬಿ ಅಮಿತಾಬ್ ಬಚ್ಚನ್
ಜ್ಞಾನವೇಲು ನಿರ್ದೇಶನದಲ್ಲಿ ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ವೆಟ್ಟೈಯನ್ ಚಿತ್ರದ ಹೊಸ ಟೀಸರ್ ಬಿಡುಗಡೆ ಆಗಿದೆ. ಚಿತ್ರದಲ್ಲಿ ರಜನಿಕಾಂತ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಪೋಲೀಸರ ಎನ್‌ಕೌಂಟರನ್ನು ವಿರೋಧಿಸುವ ವ್ಯಕ್ತಿಯಾಗಿ ಅಮಿತಾಬ್ ಬಚ್ಚನ್ ಕಾಣಿಸಿಕೊಂಡಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ವೆಟ್ಟೈಯನ್ ಚಿತ್ರದ ಹೊಸ ಟೀಸರ್ ಬಿಡುಗಡೆ ಆಗಿದೆ. ಚಿತ್ರತಂಡ ಶುಕ್ರವಾರ ರಿಲೀಸ್ ಮಾಡಿರುವ ಟೀಸರ್‌ನಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಪಾತ್ರವನ್ನು ಪರಿಚಯಿಸಲಾಗಿದೆ.
ಸತ್ಯದೇವ್ ಹೆಸರಿನ ಪಾತ್ರದಲ್ಲಿ ಅಮಿತಾಬ್ ಬಚ್ಚನ್
ರಜನಿಕಾಂತ್ ಸಿನಿಮಾದಲ್ಲಿ ಅಮಿತಾಬ್ ನಟಿಸುತ್ತಿದ್ದಾರೆ ಎಂದು ತಿಳಿದಾಗಿನಿಂದ ಅವರು ಯಾವ ಪಾತ್ರದಲ್ಲಿ ನಟಿಸುತ್ತಿರಬಹುದು ಎಂಬ ಕುತೂಹಲ ಎಲ್ಲರಿಗೂ ಕಾಡಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಟೀಸರ್ ಪ್ರಕಾರ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಸತ್ಯದೇವ್ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಹುಶ: ಬಿಗ್ ಬಿ ಹಿರಿಯ ಲಾಯರ್ ಪಾತ್ರದಲ್ಲಿ ನಟಿಸುತ್ತಿರಬಹುದು ಎಂದು ಅಂದಾಜಿಸಲಾಗಿದೆ. ಚಿತ್ರದಲ್ಲಿ ರಜನಿಕಾಂತ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಈ ಸಿನಿಮಾ ವೇಟಗಾಡು ಹೆಸರಿನಲ್ಲಿ ತೆರೆ ಕಾಣುತ್ತಿದೆ. 1.5 ನಿಮಿಷಗಳ ಟೀಸರ್‌ನಲ್ಲಿ, ರಜನಿಕಾಂತ್ ಅವರು ಎನ್‌ಕೌಂಟರ್ ಸ್ಪೆಷಲಿಸ್ಟ್ ಪಾತ್ರ ಮಾಡುತ್ತಿರುವುದು ತಿಳಿದುಬರುತ್ತದೆ. ಹಾಗೇ ಪೋಲೀಸರ ಎನ್‌ಕೌಂಟರನ್ನು ವಿರೋಧಿಸುವ ವ್ಯಕ್ತಿಯಾಗಿ ಅಮಿತಾಬ್ ಕಾಣಿಸಿಕೊಂಡಿದ್ದಾರೆ.
ಜ್ಞಾನವೇಲು ನಿರ್ದೇಶನದ ಸಿನಿಮಾ
ಟೀಸರ್‌ನಲ್ಲಿ ಕನ್ನಡದ ಖ್ಯಾತ ನಟ ಕಿಶೋರ್ ಕೂಡಾ ಇದ್ದಾರೆ. ಮಲಯಾಳಂನ ಫಹಾದ್ ಫಾಸಿಲ್, ತೆಲುಗಿನ ರಾವ್ ರಮೇಶ್, ರಾಣಾ ದಗ್ಗುಬಾಟಿ ಹಾಗೂ ಇನ್ನಿತರ ನಟರನ್ನು ಕಾಣಬಹುದು. ಜೈಲರ್ ನಂತರ ರಜನಿಕಾಂತ್ ಮತ್ತೊಮ್ಮೆ ಪೊಲೀಸ್ ಪಾತ್ರದಲ್ಲಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಇತ್ತೀಚೆಗೆ ಚಿತ್ರತಂಡ ಆಡಿಯೋ ರಿಲೀಸ್ ಕಾರ್ಯಕ್ರಮ ಆಯೋಜಿಸಿತ್ತು. ವೆಟ್ಟೈಯನ್ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಸುಭಾಸ್ಕರನ್ ನಿರ್ಮಿಸಿದ್ದಾರೆ. ಜೈ ಭೀಮ್ ಖ್ಯಾತಿಯ ನಿರ್ದೇಶಕ ಟಿಜೆ ಜ್ಞಾನವೇಲು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜೈಲರ್ ನಂತಹ ಬ್ಲಾಕ್ ಬಸ್ಟರ್ ಆಲ್ಬಂ ನೀಡಿರುವ ಅನಿರುದ್ಧ ರವಿಚಂದರ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.
ಅಕ್ಟೋಬರ್ 10 ರಂದು ತೆರೆ ಕಾಣುತ್ತಿರುವ ವೆಟ್ಟೈಯನ್
ಜ್ಞಾನವೇಲು ಜೈ ಭೀಮ್ ಚಿತ್ರದಲ್ಲಿ ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸುವ ವಿಚಾರಗಳನ್ನು ಎತ್ತಿ ತೋರಿಸಿದ್ದಾರೆ. ಪೊಲೀಸ್ ಎನ್‌ಕೌಂಟರ್‌ಗಳ ಸೂಕ್ಷ್ಮ ವಿಷಯವನ್ನು ತಿಳಿಸುವ ವೆಟ್ಟೈಯನ್‌ನಲ್ಲೂ ತಮ್ಮ ಕೈ ಚಳಕ ಮುಂದುವರೆಸಿದ್ದಾರೆ. ಚಿತ್ರದಲ್ಲಿ ರಜನಿಕಾಂತ್, ಅಮಿತಾಬ್ ಬಚ್ಚನ್ ಜೊತೆಗೆ ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಕಿಶೋರ್, ರಾವ್ ರಮೇಶ್, ಮಂಜು ವಾರಿಯರ್, ರಿತಿಕಾ ಸಿಂಗ್ ನಟಿಸಿದ್ದಾರೆ. ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಕೂಡಾ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಅಕ್ಟೋಬರ್ 10 ರಂದು ತೆರೆ ಕಾಣುತ್ತಿದೆ.