ಸನ್ಯಾಸತ್ವ ಸ್ವೀಕರಿಸಲು ಹಿಮಾಲಯಕ್ಕೆ ಹೋದ ಸಹಾಯಕ ನಿರ್ದೇಶಕನಿಗೆ ರಜಿನಿಕಾಂತ್ ನೀಡಿದ ಸಲಹೆ ಏನು? ಆತ ಚೆನ್ನೈಗೆ ವಾಪಸ್ ಬಂದಿದ್ದೇಕೆ?
ರಜಿನಿಕಾಂತ್ ಮಾತನ್ನು ಗೌರವಿಸಿ ಪುಷ್ಪರಾಜ್ ಚೆನ್ನೈಗೆ ವಾಪಸಾಗಿದ್ದಾರೆ. ಈಗ ನಾನು ಚೆನ್ನಾಗಿದ್ದೇನೆ. ಸಿನಿಮಾಗಳಲ್ಲಿ ಕೂಡಾ ಅವಕಾಶ ದೊರೆಯುತ್ತಿದೆ. ರಜನಿಕಾಂತ್ ಅವರ ಮಾತು ನಿಜವಾಗುತ್ತಿದೆ. ಅವರು ದೈವಿಕ ಅಂಶವಿರುವ ವ್ಯಕ್ತಿ ಎಂದು ಮತ್ತೊಬ್ಬ ಸಾಬೀತಾಯ್ತು.
ನಟ ರಜಿನಿಕಾಂತ್ ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ಆಗಿ ಹೆಸರು ಮಾಡಿದ್ದಾರೆ. ತಮ್ಮ ಆಕ್ಟಿಂಗ್ ವಿಭಿನ್ನ ಬಗೆಯ ಮ್ಯಾನರಿಸಂನಿಂದ ತಮಿಳುನಾಡು , ಕರ್ನಾಟಕ , ಆಂಧ್ರ ಮಾತ್ರವಲ್ಲದೆ ಉತ್ತರ ಭಾರತ, ವಿದೇಶದಲ್ಲಿ ಕೂಡಾ ಕೋಟ್ಯಂತರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸದ್ಯಕ್ಕೆ ರಜಿನಿಕಾಂತ್ ಜೈಲರ್ ಸಿನಿಮಾ ಯಶಸ್ಸಿನ ಖುಷಿಯಲ್ಲಿದ್ದಾರೆ.
ಆಧ್ಯಾತ್ಮದಲ್ಲಿ ಆಸಕ್ತಿ
ರಜಿನಿಕಾಂತ್, ನಟನೆ ಹೊರತುಪಡಿಸಿ ಅವರಿಗೆ ಆಧ್ಯಾತ್ಮದಲ್ಲೂ ಬಹಳ ಆಸಕ್ತಿ, ಬಹಳ ಸರಳ ವ್ಯಕ್ತಿ. ಮೇಕಪ್ ತೆಗೆದರೆ ಅವರು ಸಾಮಾನ್ಯ ವ್ಯಕ್ತಿಯಾಗಿ ಜೀವಿಸುತ್ತಾರೆ. ಮನೆಯಲ್ಲಾದರೂ ಅಷ್ಟೇ, ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಕೂಡಾ ಮೇಕಪ್ ಇಲ್ಲದೆ, ಬಿಳಿ ಪಂಚೆ ಷರ್ಟ್‌ನಲ್ಲಿ ಸಿಂಪಲ್ ಆಗಿ ಹೋಗಿ ಬರುತ್ತಾರೆ. ತಮಗೆ ಮನಸ್ಸು ಆದಾಗಲೆಲ್ಲಾ ಹಿಮಾಲಯಕ್ಕೆ ಹೋಗಿ, ಅಲ್ಲಿ ಗುಹೆಯಲ್ಲಿ ಧ್ಯಾನ ಮಾಡಿ ಬರುತ್ತಾರೆ. ಇದಕ್ಕೆ ಸಂಬಂಧಿಸಿದ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜೈಲರ್ ಸಿನಿಮಾ ರಿಲೀಸ್ ನಂತರ ಕೂಡಾ ರಜಿನಿಕಾಂತ್ ಹಿಮಾಲಯಕ್ಕೆ ಹೋಗಿ ಬಂದಿದ್ದರು.
ತಮಿಳು ಸಹಾಯ ನಿರ್ದೇಶಕನಿಗೆ ಸಲಹೆ ನೀಡಿದ ರಜಿನಿಕಾಂತ್
ತಮ್ಮ ಹಿಮಾಲಯ ಭೇಟಿಯಲ್ಲಿ ರಜಿನಿಕಾಂತ್, ಸನ್ಯಾಸತ್ವ ಸ್ವೀಕರಿಸಲು ಬಂದಿದ್ದ ಕಾಲಿವುಡ್ ಸಹಾಯಕ ನಿರ್ದೇಶಕರೊಬ್ಬರಿಗೆ ಬುದ್ಧಿ ಹೇಳಿ ಅಲ್ಲಿಂದ ವಾಪಸ್ ಕಳಿಸಿದ್ದಾರೆ. ಈ ವಿಚಾರವನ್ನು ತಮಿಳು ಸಿನಿಮಾ ನಿರ್ಮಾಪಕ, ನಟ, ವಿತರಕ ಜಯಂ ಎಸ್‌ಕೆ ಗೋಪಿ ಎನ್ನುವವರು ತಮ್ಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
''ಇವರ ಹೆಸರು ಪುಷ್ಪರಾಜ್, ಇತ್ತೀಚೆಗೆ ಆತ ವಡಪಳನಿ ದೇವಸ್ಥಾನಕ್ಕೆ ಬಂದಿದ್ದ ವೇಳೆ ಆತನ ಭೇಟಿ ಆಯ್ತು. ತಮಿಳು ಸಿನಿಮಾ ರಂಗದಲ್ಲಿ ಸಹಾಯಕ ನಿರ್ದೇಶಕನಾಗಿ ಈತ ಕೆಲಸ ಮಾಡುತ್ತಿದ್ದರು. ಆದರೆ ಆತನಿಗೆ ಜೀವನದಲ್ಲಿ ಜಿಗುಪ್ಸೆಯುಂಟಾಗಿ ಸನ್ಯಾಸತ್ವ ಸ್ವೀಕರಿಸಲು ಹಿಮಾಲಯಕ್ಕೆ ತೆರಳಿ ಅಲ್ಲೇ ಉಳಿಯಲು ನಿರ್ಧರಿಸಿದ್ದಾರೆ. 43 ದಿನಗಳ ಕಾಲ ಶ್ರೀ ಬಾಬಾಜಿ ಗುಹೆಗೆ ಕಾಲ್ಕಡಿಗೆಯಲ್ಲಿ ತಲುಪಿದ್ದಾರೆ. ಅದೇ ವೇಳೆ ಅಲ್ಲಿಗೆ ರಜಿನಿಕಾಂತ್ ಕೂಡಾ ಬಂದಿದ್ದಾರೆ.
ಸಹಾಯ ನಿರ್ದೇಶಕನಿಗೆ ಆರ್ಥಿಕ ಸಹಾಯ
ಪುಷ್ಪರಾಜ್ ನಿರ್ಧಾರ ಕೇಳಿ ರಜಿನಿಕಾಂತ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ತಲೈವರ್ ಆತನಿಗೆ ಬುದ್ಧಿ ಹೇಳಿದ್ದಾರೆ. ಸನ್ಯಾಸತ್ವ ಸ್ವೀಕರಿಸಿದರೆ ಎಲ್ಲವೂ ಸರಿಯಾವುದಿಲ್ಲ. ಚೆನ್ನೈಗೆ ವಾಪಸ್ ಹೋಗು, ಎಲ್ಲವೂ ಸರಿ ಆಗುತ್ತದೆ, ದೇವರಲ್ಲಿ ನಂಬಿಕೆ ಇರಲಿ ಎಂದು ಹೇಳಿ, ಆತನಿಗೆ ಆರ್ಥಿಕ ಸಹಾಯ ಮಾಡುವ ಭರವಸೆಯನ್ನೂ ನೀಡಿದ್ದಾರೆ. ರಜಿನಿಕಾಂತ್ ಮಾತನ್ನು ಗೌರವಿಸಿ ಪುಷ್ಪರಾಜ್ ಚೆನ್ನೈಗೆ ವಾಪಸಾಗಿದ್ದಾರೆ. ಈಗ ನಾನು ಚೆನ್ನಾಗಿದ್ದೇನೆ. ಸಿನಿಮಾಗಳಲ್ಲಿ ಕೂಡಾ ಅವಕಾಶ ದೊರೆಯುತ್ತಿದೆ. ರಜನಿಕಾಂತ್ ಅವರ ಮಾತು ನಿಜವಾಗುತ್ತಿದೆ. ಅವರು ದೈವಿಕ ಅಂಶವಿರುವ ವ್ಯಕ್ತಿ ಎಂದು ಮತ್ತೊಬ್ಬ ಸಾಬೀತಾಯ್ತು, ರಜಿನಿಕಾಂತ್ ಹೇಳಿದಂತೆ ನನಗೆ ಮುರುಗನ ಕೃಪೆ ದೊರೆತಿದೆ'' ಎಂದು ತನ್ನೊಂದಿಗೆ ಹೇಳಿದ್ದಾಗಿ ಎಸ್‌ಕೆ ಗೋಪಿ ಬರೆದುಕೊಂಡಿದ್ದಾರೆ.
ಎಸ್‌ಕೆ ಗೋಪಿ ಪೋಸ್ಟ್‌ಗೆ ನೆಟಿಜನ್ಸ್ ಪ್ರತಿಕ್ರಿಯಿಸಿ ರಜಿನಿಕಾಂತ್ ವ್ಯಕ್ತಿತ್ವಕ್ಕೆ ಸೆಲ್ಯೂಟ್ ಹೊಡೆದಿದ್ದಾರೆ. ಪುಷ್ಪರಾಜ್‌ಗೆ ಕೂಡಾ ಧೈರ್ಯ ಹೇಳಿದ್ದಾರೆ.