ಚಂದ್ರಮುಖಿ 3ರಲ್ಲಿ ನಟಿಸಲು ಸೂಪರ್‌ಸ್ಟಾರ್ ರಜನಿಕಾಂತ್ 3 ಷರತ್ತು, ಕಂಡಿಷನ್ ಈಡೇರಿದ್ರೆ ಸಿನಿಪ್ರೇಕ್ಷಕರಿಗೆ ತಲೈವಾನ ಲಕಲಕ ಗಮ್ಮತ್ತು
ಸೆಪ್ಟೆಂಬರ್ 28ರಂದು ಚಂದ್ರಮುಖಿ 2 ತೆರೆಕಾಣಲಿದೆ. ಇದೇ ಸಮಯದಲ್ಲಿ ಚಂದ್ರಮುಖಿಯ ಮುಂದಿನ ಸೀಕ್ವೆಲ್‌ನಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ನಟಿಸುವ ಕುರಿತೂ ಸುದ್ದಿಯಾಗುತ್ತಿದೆ. ಈ ಕುರಿತ ವರದಿ ಇಲ್ಲಿದೆ.
ಕನ್ನಡದ ಆಪ್ತರಕ್ಷಕ ತಮಿಳಿನಲ್ಲಿ ಚಂದ್ರಮುಖಿಯಾಗಿ ಸಾಕಷ್ಟು ಜನಪ್ರಿಯತೆ ಪಡೆದಿತ್ತು. ರಜನಿಕಾಂತ್ ಲಕಲಕ ನಟನೆಯನ್ನು ಎಲ್ಲರೂ ಇಷ್ಟಪಟ್ಟಿದ್ದರು. ಆದರೆ, ಅನಿವಾರ್ಯ ಕಾರಣಗಳಿಂದ ಚಂದ್ರಮುಖಿ 2ರಲ್ಲಿ ರಜನಿಕಾಂತ್ ನಟಿಸಿರಲಿಲ್ಲ. ರಜನಿಕಾಂತ್ ಹಿಂದೆ ಸರಿದ ಕಾರಣ ರಾಘವ ಲಾರೆನ್ಸ್ ನಾಯಕನಾಗಿ ಆಯ್ಕೆಯಾಗಿದ್ದರು. ಈ ಚಂದ್ರಮುಖಿ 2 ಸಿನಿಮಾ ಇದೇ ವಾರ ಅಂದರೆ ಸೆಪ್ಟೆಂಬರ್ 28ರಂದು ಬಿಡುಗಡೆಯಾಗಲಿದೆ. ಇದೇ ಸಮಯದಲ್ಲಿ ಚಂದ್ರಮುಖಿ 3ರ ಕುರಿತು ಚರ್ಚೆಗಳು ಉಂಟಾಗಿವೆ. ಚಂದ್ರಮುಖಿ 3ರಲ್ಲಿಯಾದರೂ ಸೂಪರ್‌ಸ್ಟಾರ್ ರಜನಿಕಾಂತ್ ನಟಿಸ್ತಾರ ಎಂಬ ಪ್ರಶ್ನೆಗಳು ಎದ್ದಿವೆ. ರಜನಿಕಾಂತ್ ನಟಿಸಿದ ಚಂದ್ರಮುಖಿ ಚಿತ್ರವು ಬ್ಲಾಕ್‌ಬಸ್ಟರ್ ಆಗಿತ್ತು. ವಿಶೇಷವಾಗಿ ತಮಿಳು ಮತ್ತು ತೆಲುಗಿನಲ್ಲಿ ಸಾಕಷ್ಟು ಹಿಟ್ ಆಗಿತ್ತು. ಕನ್ನಡಿಗರಿಗೆ ಈ ಚಿತ್ರದಲ್ಲಿ ಆಪ್ತರಕ್ಷಕನ ಛಾಯೆಯೇ ಕಾಣಿಸಿದ್ದರಿಂದ ಕರುನಾಡಿನಲ್ಲಿ ಹೇಳಿಕೊಳ್ಳುವಂತಹ ಹಿಟ್ ಆಗಿರಲಿಲ್ಲ. ಕನ್ನಡಿಗರಿಗೆ ಆಪ್ತರಕ್ಷಕನಾಗಿ ವಿಷ್ಣುದಾದನೇ ಕಾಣುತ್ತಿದ್ದರಿಂದ ಚಂದ್ರಮುಖಿಯ ಕನ್ನಡ ಅವತರಣಿಕೆಗೆ ದೊಡ್ಡಮಟ್ಟದ ಸಕ್ಸಸ್ ದೊರಕಿರಲಿಲ್ಲ. ಸದ್ಯ ಕನ್ನಡದ ಚಂದ್ರಮುಖಿಯು ಒಟಿಟಿಯಲ್ಲಿ ಲಭ್ಯವಿದೆ.
ಚಂದ್ರಮುಖಿ 2 ಎಂಬ ಸೀಕ್ವೆಲ್‌ನಲ್ಲಿ ರಾಘವ ಲಾರೆನ್ಸ್ ಮತ್ತು ಕಂಗನಾ ರಣಾವತ್ ನಟಿಸಿದ್ದಾರೆ. ಈ ಚಿತ್ರ ಬಿಡುಗಡೆಯಾಗುವ ಮುನ್ನವೇ ಚಂದ್ರಮುಖಿ 3 ನಿರ್ಮಿಸುವ ಸಾಧ್ಯತೆ ಕುರಿತು ನಿರ್ದೇಶಕ ಪಿ ವಾಸು ಅವರು ಹಿಂಟ್ ನೀಡಿದ್ದಾರೆ ಎಂದು ಗುಲ್ಟೆ.ಕಾಂ ವರದಿ ಮಾಡಿದೆ. ಮುಂದಿನ ಸೀಕ್ವೆಲ್‌ಗೆ ಚಂದ್ರಮುಖಿ 3 ಎಂದೇ ಹೆಸರಿಡುವ ಸಾಧ್ಯತೆಯಿದೆ. ಆದರೆ, ಚಂದ್ರಮುಖಿ 3ಯಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ನಟಿಸುವ ಕುರಿತು ಈಗಲೇ ಸ್ಪಷ್ಟವಾಗಿ ತಿಳಿಸಲು ಸಾಧ್ಯವಿಲ್ಲ. ಮೂಲಗಳ ಪ್ರಕಾರ ಕೆಲವೊಂದು ಷರತ್ತುಗಳ ಆಧಾರದಲ್ಲಿ ಅವರು ನಟಿಸಬಹುದು. ಚಂದ್ರಮುಖಿ 3ರಲ್ಲಿ ನಟಿಸಲು ಸೂಪರ್‌ಸ್ಟಾರ್ ರಜನಿಕಾಂತ್ ಕೆಲವೊಂದು ಕಂಡಿಷನ್‌ಗಳನ್ನು ಹಾಕಿದ್ದಾರೆ ಎನ್ನಲಾಗುತ್ತಿದೆ.
ಏನು ಕಂಡಿಷನ್?
ಮೂಲಗಳ ಪ್ರಕಾರ ಚಂದ್ರಮುಖಿ 3ರಲ್ಲಿ ರಜನಿಕಾಂತ್ ನಟಿಸಬೇಕಿದ್ದರೆ ಕೆಲವೊಂದು ಷರತ್ತುಗಳು ಇವೆ. ಚಂದ್ರಮುಖಿಯ ಮೂರನೇ ಭಾಗದ ಪಾತ್ರವು ಇವರಿಗೆ ಹೊಂದಿಕೆಯಾಗುವಂತೆ ಇರಬೇಕು. ಅದರ ಕಥೆಯು ಇವರಿಗೆ ಇಷ್ಟವಾಗಬೇಕು. ಜತೆಗೆ, ಚಂದ್ರಮುಖಿ 2ಗೆ ಸಿನಿ ಮಾರುಕಟ್ಟೆ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎನ್ನುವುದನ್ನೂ ರಜನಿಕಾಂತ್ ಗಮನಿಸಲಿದ್ದು, ಅದರ ಆಧಾರದಲ್ಲಿ ಮೂರನೇ ಭಾಗದಲ್ಲಿ ನಟಿಸಲು ಅವರು ಒಪ್ಪಿಗೆ ಸೂಚಿಸಬಹುದು ಅಥವಾ ಸೂಚಿಸದೆ ಇರಬಹುದು.
ಚಂದ್ರಮುಖಿ 2ರಲ್ಲಿ ತಾಜಾತನ, ಹೊಸತನ ಉಂಟುಮಾಡಲು ಕಠಿಣ ಪರಿಶ್ರಮ ಪಟ್ಟಿರುವುದಾಗಿ ಪಿ. ವಾಸು ಹೇಳಿದ್ದಾರೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ಕನಸಿನಲ್ಲಿ ಅವರಿದ್ದಾರೆ. ನಿರ್ದೇಶಕ ಪಿ. ವಾಸು ಅವರ ನಿರ್ದೇಶನದಲ್ಲಿ ಆಪ್ತರಕ್ಷಕ ಸಿನಿಮಾವು ಕನ್ನಡದಲ್ಲಿ 2010ರಲ್ಲಿ ಬಿಡುಗಡೆಯಾಗಿತ್ತು. ಇದು ವಿಷ್ಣುವರ್ಧನ್ ಅವರ 200ನೇ ಚಿತ್ರವಾಗಿದೆ. 2004ರಲ್ಲಿ ಬಿಡುಗಡೆಯಾದ ಆಪ್ತಮಿತ್ರದ ಮುಂದುವರೆದ ಭಾಗ ಇದಾಗಿತ್ತು. ಈ ಚಿತ್ರವು ತೆಲುಗಿನಲ್ಲಿ ನಾಗವಲ್ಲಿಯಾಗಿ ತೆರೆಕಂಡಿತ್ತು. ಹಿಂದಿಯಲ್ಲಿ ಸಬ್ ಕಾ ರಖ್ವಾಲಾ ಎಂದು ಬಿಡುಗಡೆಯಾಗಿತ್ತು. ಬಂಗಾಳಿಯಲ್ಲಿ ಅಮರ್ ರಕ್ಷಕ್ ಎಂದು ಡಬ್ ಮಾಡಲಾಗಿತ್ತು.