Rajinikanth: ವಿಮಾನದಲ್ಲಿ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸಿದ ಸೂಪರ್‌ಸ್ಟಾರ್ ರಜನಿಕಾಂತ್; ತಲೈವಾ ಸರಳತೆಗೆ ಜೈಹೋ ಅಂದ್ರು ನೆಟ್ಟಿಗರು
ಸೂಪರ್‌ಸ್ಟಾರ್ ರಜನಿಕಾಂತ್ ತಮ್ಮ ಸರಳತೆ ಮೂಲಕ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ರಜನಿಕಾಂತ್ ವಿಮಾನದ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುವ ಮೂಲಕ ಸುದ್ದಿಯಲ್ಲಿದ್ದಾರೆ. ರಜನಿಕಾಂತ್ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುವ ವಿಡಿಯೋವನ್ನು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸೂಪರ್‌ಸ್ಟಾರ್ ರಜನಿಕಾಂತ್ ಇತ್ತೀಚೆಗೆ ಆಂಧ್ರಪ್ರದೇಶದ ಕಡಪದಿಂದ ವಿಮಾನದಲ್ಲಿ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸಿದ್ದರು. ಇಂಡಿಗೊ ವಿಮಾನದಲ್ಲಿ ಎಕಾನಮಿ ಕ್ಲಾಸ್‌ನಲ್ಲಿ ಸಾಮಾನ್ಯ ಪ್ರಯಾಣಿಕರಂತೆ ರಜನಿಕಾಂತ್ ಪ್ರಯಾಣಿಸಿದ್ದನ್ನು ನೋಡಿ ಅಭಿಮಾನಿಗಳು ರೋಮಾಂಚನಗೊಂಡಿದ್ದಾರೆ. ನಟ ಜೀವ ಕೂಡ ವಿಮಾನ ನಿಲ್ದಾಣದಲ್ಲಿ ರಜನಿಕಾಂತ್ ಜತೆ ಇದ್ದರು. ಈ ಕುರಿತು ತಮ್ಮ ಅನುಭವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸಿದ ರಜನಿಕಾಂತ್
ರಜನಿಕಾಂತ್ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ವಿಮಾನ ಹತ್ತಿದ ಸಮಯದಲ್ಲಿ ವಿಮಾನದ ಕಿಟಕಿ ಬದಿಯ ಸೀಟಿನಲ್ಲಿ ಏರ್‌ಪಾಡ್ ಕಿವಿಗೆ ಹಾಕಿಕೊಂಡು ಕುಳಿತಿದ್ದ ರಜನಿಕಾಂತ್‌ರನ್ನು ನೋಡುತ್ತಾರೆ. ಇನ್ನೊಂದು ವಿಡಿಯೋದಲ್ಲಿ ಅಭಿಮಾನಿಯು ರಜನಿಕಾಂತ್ ಜತೆ ಮಾತನಾಡುವ ದೃಶ್ಯವಿದೆ. ಆ ವಿಡಿಯೋದಲ್ಲಿ ಆಡಿಯೋ ಮ್ಯೂಟ್ ಮಾಡಲಾಗಿದೆ.
ಈ ವಿಡಿಯೋಗೆ ರಜನಿಕಾಂತ್ ಕಡಪ ಏರ್‌ಪೋರ್ಟ್" ಎಂದು ಕ್ಯಾಪ್ಷನ್ ನೀಡಲಾಗಿದೆ. "ನಾನು ನನ್ನ ದೇವರನ್ನು ಹತ್ತಿರದಿಂದ ನೋಡಿದೆ" ಎಂದು ಅಭಿಮಾನಿ ಬರೆದಿದ್ದಾನೆ. ಕಳೆದ ವರ್ಷ ಜೈಲರ್ ಸಿನಿಮಾ ಬಿಡುಗಡೆ ಸಮಯದಲ್ಲಿ ರಜನಿಕಾಂತ್ ಅವರು ಬಿಸ್ನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುವುದನ್ನು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದರು.
ಜೀವ ಹಂಚಿಕೊಂಡ ಪೋಸ್ಟ್
ನಟ ಜೀವ ಇತ್ತೀಚೆಗೆ ಮಹಿ ವಿ ರಾಘವ್‌ರ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಬಯೋಪಿಕ್ "ಯಾತ್ರಾ 2"ನಲ್ಲಿ ಕಾಣಿಸಿಕೊಂಡಿದ್ದರು. "ಸೂಪರ್‌ಸ್ಡಾರ್ ರಜನಿಕಾಂತ್ ಜತೆ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದೇನೆ" ಎಂದು ಜೀವ ಪೋಸ್ಟ್ ಮಾಡಿದ್ದಾರೆ. ಸೂಪರ್‌ಸ್ಟಾರ್ ಜತೆಗೆ ತೆಗೆಸಿಕೊಂಡ ಫೋಟೋಗಳನ್ನೂ ಜೀವ ಹಂಚಿಕೊಂಡಿದ್ದಾರೆ.
ರಜನಿಕಾಂತ್ ಮುಂಬರುವ ಸಿನಿಮಾಗಳು
ರಜನಿಕಾಂತ್ ಇತ್ತೀಚಿಗೆ ತಮ್ಮ ಮಗಳು ಐಶ್ವರ್ಯಾ ರಜನಿಕಾಂತ್ ನಿರ್ದೇಶನದ ಲಾಲ್ ಸಲಾಮ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ವಿಷ್ಣು ವಿಶಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ರಜನಿಕಾಂತ್ ಈಗ ವೆಟ್ಟಯನ್ ಸಿನಿಮಾದ ಶೂಟಿಂಗ್‌ನಲ್ಲಿದ್ದಾರೆ. ಇತ್ತೀಚೆಗೆ ರಜನಿಕಾಂತ್ ಪೊಲೀಸ್ ಉಡುಗೆಯಲ್ಲಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಫಹದ್ ಫಾಸಿಲ್. ರಾಣಾ ದಗ್ಗುಬಾಟಿ, ಮಂಜು ವಾರಿಯರ್ ಮುಂತಾದವರೂ ಕೂಡ ಇದ್ದಾರೆ.
ರಜನಿಕಾಂತ್ ಬಗ್ಗೆ ನಿಮಗೆಷ್ಟು ಗೊತ್ತು?
ಬೆಂಗಳೂರಿನಲ್ಲಿ ಮರಾಠ ಕುಟುಂಬದಲ್ಲಿ ಜನಿಸಿದ ರಜನಿಕಾಂತ್ ಅವರ ನಿಜವಾದ ಹೆಸರು ಶಿವಾಜಿ ರಾವ್ ಗಾಯಕ್‌ವಾಡ್. ಚತ್ರಪತಿ ಶಿವಾಜಿ ಅವರ ಹೆಸರನ್ನು ಇವರಿಗೆ ಇಡಲಾಗಿತ್ತು. ನೆಯಲ್ಲಿ ಇವರು ಕನ್ನಡ ಮತ್ತು ಮರಾಠಿ ಮಾತನಾಡುತ್ತಾರೆ. ಮದ್ರಾಸ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಡಿಪ್ಲೊಮಾ ಓದುವ ಸಮಯದಲ್ಲಿ ಇವರು ತಮಿಳು ಕಲಿತರು. ರಜನಿಕಾಂತ್ ಅವರು ನಟರಾಗುವ ಮುನ್ನ ಬಸ್ ಕಂಡಕ್ಟರ್ ಆಗಿದ್ದರು. ಇದಕ್ಕೂ ಮೊದಲು ಇವರು ಕೂಲಿ ಮತ್ತು ಕಾರ್ಪೆಂಟರ್ ಆಗಿಯೂ ದುಡಿದಿದ್ದರು ಎಂಬ ಸಂಗತಿ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ರಜನಿಕಾಂತ್ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.