Rajinikanth: ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ವೆಟೈಯಾನ್ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ
Vettaiyan release date: ರಜನಿಕಾಂತ್ ನಟನೆಯ ವೆಟ್ಟೈಯನ್ ಸಿನಿಮಾ ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಟಿ.ಎಸ್. ಜ್ಞಾನವೇಲ್ ನಿರ್ದೇಶನದ ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಸೇರಿದಂತೆ ಪ್ರಮುಖ ಕಲಾವಿದರು ನಟಿಸುತ್ತಿದ್ದಾರೆ.

ಬೆಂಗಳೂರು: ರಜನಿಕಾಂತ್ ಸಿನಿಮಾಗಳ ಕುರಿತು ಸಿನಿಮಾ ಪ್ರೇಮಿಗಳಿಗೆ ಏನೋ ಕುತೂಹಲ. ರಜನಿ ನಟನೆಯ ಮುಂದಿನ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂದು ಎಲ್ಲರೂ ಕಾಯುತ್ತ ಇರುತ್ತಾರೆ. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 170ನೇ ಸಿನಿಮಾ ವೆಟ್ಟೈಯಾನ್ ಯಾವಾಗ ಬಿಡುಗಡೆಯಾಗುತ್ತದೆ ಎಂದು ಸಿನಿಮಾ ಪ್ರೇಮಿಗಳು ಕಾಯುತ್ತಿದ್ದಾರೆ. ಟೈಟಲ್ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು ಎಲ್ಲರ ಕುತೂಹಲ ಕೆರಳಿಸಿದೆ. ಇದೀಗ ಈ ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಅಕ್ಟೋಬರ್ ತಿಂಗಳಲ್ಲಿ ವೆಟ್ಟೈಯಾನ್ ಸಿನಿಮಾ ರಿಲೀಸ್ ಆಗಲಿದೆ ಎಂಬ ವಿವರವನ್ನು ಚಿತ್ರತಂಡ ನೀಡಿದೆ.
ಸೂರ್ಯ ನಟಿಸಿದ 'ಜೈ ಭೀಮ್' ಸಿನಿಮಾ ನಿರ್ದೇಶಿಸಿದ್ದ ಟಿ.ಎಸ್. ಜ್ಞಾನವೇಲ್ 'ವೆಟ್ಟೈಯಾನ್'ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗೋದಿಕ್ಕೆ ಮತ್ತೊಂದು ಕಾರಣ ತಲೈವಾ ಹಾಗೂ ಬಿಗ್ ಬಿ ಸಂಗಮ. ಭಾರತೀಯ ಚಿತ್ರರಂಗದ ದಿಗ್ಗಜರಾದ ಅಮಿತಾಬ್ ಬಚ್ಚನ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಈ ಸಿನಿಮಾದಲ್ಲಿ ಜತೆಯಾಗಿ ನಟಿಸುತ್ತಿದ್ದಾರೆ. ಬಾಲಿವುಡ್ ಮತ್ತು ಕಾಲಿವುಡ್‌ನ ಮಹಾನ್ ನಟರ ಸಂಗಮ ಈ ಚಿತ್ರದಲ್ಲಿ ಕಾಣಿಸಲಿದೆ. ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಈ ಅಭೂತಪೂರ್ವ ಸಮಾಗಮಕ್ಕೆ ವೇದಿಕೆ ನಿರ್ಮಿಸಿದೆ.
'ವೆಟ್ಟೈಯಾನ್' ಚಿತ್ರದಲ್ಲಿ ರಜನಿಕಾಂತ್ ಅಮಿತಾಭ್ ಬಚ್ಚನ್ ಜತೆಗೆ ಇನ್ನಷ್ಟು ಪ್ರಮುಖ ಕಲಾವಿದರು ನಟಿಸುತ್ತಿದ್ದಾರೆ. ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್, ಮಂಜು ವಾರಿಯರ್, ರಿತಿಕಾ ಸಿಂಗ್, ವಿಜಯನ್, ಜಿಎಂ ಸುಂದರ್, ರೋಹಿಣಿ, ಅಭಿರಾಮಿ, ರಾವ್ ರಮೇಶ್, ರಮೇಶ್ ತಿಲಕ್, ರಕ್ಷಣ್ ಹೀಗೆ ಅನೇಕ ಪ್ರಮುಖ ನಟರು ನಟಿಯರು ನಟಿಸುತ್ತಿದ್ದಾರೆ.
ವೆಟ್ಟೈಯಾನ್ ಸಿನಿಮಾಗೆ ರಾಕ್ ಸ್ಟಾರ್ ಖ್ಯಾತಿಯ ಅನಿರುದ್ಧ್ ರವಿಚಂದರ್ ಸಂಗೀತ ಇರಲಿದೆ. ಈ ಸಿನಿಮಾಆಕ್ಕೆ ಎಸ್.ಆರ್. ಕಥಿರ್ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಎಡಿಟಿಂಗ್ ಇರಲಿದೆ. ತಿರುವನಂತಪುರಂ, ತಿರುನೆಲ್ವೇಲಿ, ಚೆನ್ನೈ, ಮುಂಬೈ, ಆಂಧ್ರಪ್ರದೇಶ ಮತ್ತು ಹೈದರಾಬಾದ್‌ನಲ್ಲಿ ಶೂಟಿಂಗ್ ನಡೆಯುತ್ತಿದೆ.
ಇಂಡಿಯನ್, ಖೈದಿ ನಂಬರ್ 150, ರೋಬೋ 2.0, ದರ್ಬಾರ್ ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಪ್ರೊಡಕ್ಷನ್ ವೆಟ್ಟೈಯಾನ್ ಸಿನಿಮಾ ನಿರ್ಮಿಸುತ್ತಿದೆ.
ತಮಿಳು ಬಲ್ಲವರಿಗೆ ವೆಟ್ಟೈಯಾನ್ ಎಂಬ ಪದದ ಅರ್ಥ ಗೊತ್ತಿರಬಹುದು. ಕನ್ನಡದಲ್ಲಿ ವೆಟ್ಟೈಯಾನ್ ಪದವನ್ನು ಬೇಟೆಗಾರ ಎಂದು ಅರ್ಥೈಸಬಹುದು. ಈ ಸಿನಿಮಾದಲ್ಲಿ ರಜನಿಕಾಂತ್ ಅವರು ಅಪರಾಧಿಗಳ ವಿರುದ್ಧ ಬೇಟೆಗಾರನಂತೆ ಕಾರ್ಯನಿರ್ವಹಿಸಲಿದ್ದಾರೆ. ರಜನಿಕಾಂತ್ ಮತ್ತು ಅಮಿತಾಬ್ ಬಚ್ಚನ್‌ಜತೆಯಾಗಿ ಸಿನಿಮಾ ಮಾಡಿ 32 ವರ್ಷಗಳು ಕಳೆದಿವೆ. ಇವರು 1991ರಲ್ಲಿ ಕೊನೆಯ ಬಾರಿ ಫ್ಯಾಮಿಲಿ ಡ್ರಾಮಾ ಹಮ್‌ನಲ್ಲಿ ನಟಿಸಿದ್ದರು. ವೆಟ್ಟೈಯಾನ್ ಸಿನಿಮಾದ ಮೂಲಕ ಇವರಿಬ್ಬರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
