Arulmani: ತಮಿಳು ನಟ, ರಾಜಕಾರಣಿ ಅರುಲ್‌ಮಣಿ ಹೃದಯಾಘಾತದಿಂದ ನಿಧನ; ತಿಂಗಳೊಳಗೆ ಕಣ್ಮರೆಯಾದ ನಾಲ್ವರು ತಮಿಳು ನಟರು
Tamil actor Arulmani dies: ತಮಿಳು ನಟ, ರಾಜಕಾರಣಿ ಅರುಲ್‌ಮಣಿ (65) ಅವರು ಹೃದಯಾಘಾತದಿಂದ ಗುರುವಾರ ನಿಧನರಾಗಿದ್ದಾರೆ. ಕಳೆದ ಹತ್ತು ದಿನಗಳಿಂದ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದರು. ಪತ್ನಿ ಮತ್ತು ಇಬ್ಬರು ಮಕ್ಕಳನ್ನು (ಮಗ ಮತ್ತು ಮಗಳು) ಅಗಲಿದ್ದಾರೆ.
ತಮಿಳು ನಟ, ರಾಜಕಾರಣಿ ಅರುಲ್‌ಮಣಿ (65) ಅವರು ಹೃದಯಾಘಾತದಿಂದ ಗುರುವಾರ ನಿಧನರಾಗಿದ್ದಾರೆ. ಕಳೆದ ಹತ್ತು ದಿನಗಳಿಂದ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ಇವರು ನಿಧನರಾಗಿದ್ದು ಅವರ ಅಪಾರ ಅಭಿಮಾನಿಗಳನ್ನು ನೋವಿನ ಕಡಲಿಗೆ ದೂಡಿದೆ. ತಮಿಳು ನಟ ಅರುಲ್‌ಮಣಿ ಅವರು ಸಿಂಗಂ, ಲಿಂಗಾ, ಅಝಾಗಿ, ತಾಂಡವಕೋಣೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಲೋಕ ಸಭಾ ಚುನಾವಣೆಗಾಗಿ ಎಐಎಡಿಎಂಕೆ ಪಕ್ಷದ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಇವರು ನಿರತರಾಗಿದ್ದರು.
ಕಳೆದ ಕೆಲವು ವರ್ಷಗಳಿಂದ ಅರುಲ್‌ಮಣಿ ಅವರು ಸಿನಿಮಾದಿಂದ ದೂರವಾಗಿ ರಾಜಕಾರಣದಲ್ಲಿ ಸಕ್ರೀಯರಾಗಿದ್ದರು. ತಮಿಳುನಾಡಿನ ವಿವಿಧ ಭಾಗಗಳಿಗೆ ಪ್ರಯಾಣ ಬೆಳೆಸುತ್ತಿದ್ದರು. ಕಳೆದ ಹತ್ತು ದಿನಗಳಲ್ಲಿ ಬಿಡುವಿಲ್ಲದೆ ರಾಜ್ಯ ಸುತ್ತಾಡಿದ್ದರು. ಚುನಾವಣಾ ಪ್ರಚಾರದ ನಡುವೆ ತುಸು ವಿಶ್ರಾಂತಿಗಾಗಿ ಗುರುವಾರ ಚೆನ್ನೈಗೆ ಆಗಮಿಸಿದ್ದರು. ಈ ಸಮಯದಲ್ಲಿ ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಚೆನ್ನೈಗೆ ಬಂದ ಬಳಿಕ ಇವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಸರಕಾರಿ ರಾಯಪೆಟ್ಟ ಹಾಸ್ಟಿಟಲ್‌ಗೆ ದಾಖಲಿಸಲಾಯಿತು. ಆಸ್ಪತ್ರೆಗೆ ತಲುಪಿದಾಗಲೇ ತಡವಾಗಿತ್ತು ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಇವರು ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ ಎಂದು ಕಾಲಿವುಡ್ ಸಿನಿ ಮೂಲಗಳು ಮಾಹಿತಿ ನೀಡಿವೆ.
ಅರುಲ್ ಮಣಿ ಅವರು ಅಡ್ಯಾರ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಸಿನಿಮಾ ನಟನಾ ತರಬೇತಿ ಪಡೆದಿದ್ದರು. ಸಿಂಗಂ 2, ಸಾಮಾನ್ಯನ್, ಸ್ಲೀಪ್‌ಲೆಸ್ ಐಸ್, ತೆಂಡ್ರಾಲ್, ತಾಂಡವಕೋಣೆಯಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೂರ್ಯ, ರಜನಿಕಾಂತ್‌ರಂತಹ ಪ್ರಮುಖ ನಟರ ಜತೆಯೂ ನಟಿಸಿದ್ದಾರೆ. ಇವರು ಕಳೆದ ಕೆಲವು ವರ್ಷಗಳಿಂದ ಸ್ವಂತ ಸಿನಿಮಾ ನಟನಾ ತರಬೇತಿ ಕೇಂದ್ರವನ್ನೂ ನಡೆಸುತ್ತಿದ್ದರು. ಇವರು ಸಮಾಜ ಸೇವೆಗೂ ಹೆಸರು ವಾಸಿಯಾಗಿದ್ದರು. ಪತ್ನಿ ಮತ್ತು ಇಬ್ಬರು ಮಕ್ಕಳನ್ನು (ಮಗ ಮತ್ತು ಮಗಳು) ಅಗಲಿದ್ದಾರೆ.
ತಮಿಳು ಚಿತ್ರರಂಗದಲ್ಲಿ ಇತ್ತೀಚಿಗೆ ಮೃತಪಟ್ಟ ನಾಲ್ಕನೇ ನಟ ಇವರು. ಮಾರ್ಚ್ 26ರಂದು ಹಾಸ್ಯ ಕಲಾವಿದ ಸೇಸು ಅವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಮಾರ್ಚ್ 29ರಂದು ಡೇನಿಯಲ್ ಬಾಲಾಜಿ ಮೃತಪಟ್ಟಿದ್ದರು. ಏಪ್ರಿಲ್ 2ರಂದು ವಿಶ್ವೇಶ್ವರ ರಾವ್ ಅವರು ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು.